More

    ಇಂದಿನಿಂದ ಮತದಾರರ ಮಿಂಚಿನ ನೋಂದಣಿ

    ಮಂಗಳೂರು: ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭವಾಗಿದೆ. ಇದರ ಮಿಂಚಿನ ನೋಂದಣಿ ನ.22, 29, ಡಿ.6 ಮತ್ತು ಡಿ.13ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

    ಮತದಾರರ ಕರಡು ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಯನ್ನು ಜ.7ರಂದು ವಿಲೇವಾರಿ ಮಾಡಲಾಗುತ್ತದೆ. ಡೇಟಾಬೇಸ್ ಮತ್ತು ಪೂರಕ ಮುದ್ರಣವನ್ನು ಜ.14ರಂದು ನವೀಕರಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಜ.18ರಂದು ಪ್ರಕಟಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಏನೆಲ್ಲ ದಾಖಲೆ ಬೇಕು?: 2021 ಜ.1ಕ್ಕೆ ಅರ್ಹತಾ ದಿನಾಂಕದಂತೆ 18 ವರ್ಷ ವಯಸಾಗಿರಬೇಕು. ವಯಸ್ಸಿನ ದೃಢೀಕರಣಕ್ಕೆ ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿ, ಪಾನ್ ಕಾರ್ಡ್ ದಾಖಲೆಗಳನ್ನು ತರಬೇಕು. ವಾಸಸ್ಥಳದ ದಾಖಲೆಯಾಗಿ ಪಡಿತರ ಚೀಟಿ, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಸೀತಿ, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ ಪ್ರತಿ, ಬಾಡಿಗೆ ಕರಾರು ಪತ್ರ ಇತ್ಯಾದಿಗಳನ್ನು ನೀಡಬೇಕು. ಇದಲ್ಲದೆ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಬೇಕು.

    ಯಾವುದಕ್ಕೆ ಯಾವ ಅರ್ಜಿ?: 18 ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬೇಕು. ನಮೂನೆ 6ಎರಲ್ಲಿ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸಬಹುದು. ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ನಮೂನೆ 7 ಅರ್ಜಿ ಬಳಸಬಹುದು. ನಮೂನೆ 8ರಲ್ಲಿ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ತಿದ್ದುಪಡಿ ಮಾಡಬಹುದು. ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ನಮೂನೆ 8ಎ ಸಲ್ಲಿಸಬಹುದು.

    ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಮತ್ತು ಲೋಪದೋಷಗಳ ಬಗ್ಗೆ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಬಹುದು ಅಥವಾ ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು. ಅಲ್ಲದೆ ವೆಬ್‌ಪೋರ್ಟಲ್ www.ceokarnataka.kar.nic.inನಲ್ಲಿ ವಿವರಗಳನ್ನು ಪರಿಶೀಲಿಸಬಹುದು. ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

    ಹಕ್ಕು, ಆಕ್ಷೇಪಣೆ ಸಲ್ಲಿಕೆ ಅವಕಾಶ: ಮತದಾರರ ಪಟ್ಟಿಗೆ ಮಿಂಚಿನ ನೋಂದಣಿ ಪ್ರತಿ ಭಾನುವಾರ ನಡೆಯಲಿದೆ. ಬೆಳಗ್ಗೆ 10ರಿಂದ ಸಾಯಂಕಾಲ 5 ಗಂಟೆವರೆಗೆ ಪ್ರತಿ ಬೂತ್‌ಗಳಲ್ಲಿ ನಡೆಯಲಿದ್ದು, ಇದರಲ್ಲಿ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಇದಕ್ಕಾಗಿಯೇ ಎಲ್ಲ ರಾಜಕೀಯ ಪಕ್ಷಗಳು ಪ್ರತಿ ಬೂತ್ ಮಟ್ಟದಲ್ಲಿ ಬಿಎಲ್‌ಎ(ಮತಗಟ್ಟೆ ಏಜೆಂಟ್) ನೇಮಕ ಮಾಡಬೇಕು. ಇವರಲ್ಲದೆ ಮತಗಟ್ಟೆ ಅಧಿಕಾರಿಗಳೂ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದಾಗಿ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಲು ಸುಲಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts