ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ಅಮಾನತು ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಕಟ್ಟಪ್ಪಣೆ ವಿಧಿಸಿದೆ.
ಬಿಬಿಎಂಪಿ ವಿಶೇಷ ಆಯುಕ್ತ ಎಸ್.ರಂಗಪ್ಪ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ತನಿಖೆ ಹಿನ್ನೆಲೆ ತತ್ಕ್ಷಣದಿಂದ ಅಮಾನತು ಮಾಡುವಂತೆ ಸೂಚಿಸಿದೆ. ಹಾಗೂ ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಮತದಾರರಪಟ್ಟಿ ಸಮಗ್ರ ಪರಿಶೀಲನೆಗೆ ನಿರ್ದೇಶನ ನೀಡಿದೆ.
ರಂಗಪ್ಪ ಅವರು ಶಿವಾಜಿನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿದ್ದರೆ, ಶ್ರೀನಿವಾಸ್ ಅವರು ಮಹದೇವಪುರ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿದ್ದರು.
ಮೂರು ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪರಿಶೀಲನೆಗಾಗಿ ವಿಶೇಷ ಅಧಿಕಾರಿಗಳನ್ನು ನೇಮಿಸುವಂತೆ ಮೂವರು ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಶಿವಾಜಿನಗರ ಕ್ಷೇತ್ರಕ್ಕೆ ಐಎಎಸ್ ಅಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸ್, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ.ವಿಶಾಲ್, ಮಹದೇವಪುರ ಕ್ಷೇತ್ರಕ್ಕೆ ಅಜಯ್ ನಾಗಭೂಷಣ್ ಅವರನ್ನು ನೇಮಿಸಲಾಗಿದೆ. ಈ ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ಈ ಕುರತು ಪ್ರತಿಕ್ರಿಯಸಿರುವ ಸಿಎಂ, ಪ್ರಕರಣ ಸಂಬಂಧ ಮುಕ್ತ ತನಿಖೆ ಮಾಡಿಸಲು ಸರ್ಕಾರ ಮುಕ್ತವಾಗಿದೆ. ಹೀಗಾಗಿಯೇ ನಾವು ತನಿಖೆಗೆ ಕೊಟ್ಟಿರೋದು. ಹಲವರ ಬಂಧನ ಕೂಡ ಆಗಿದೆ. ಚುನಾವಣಾ ಆಯೋಗದ ತನಿಖೆಯನ್ನು ಸ್ವಾಗತಿಸುತ್ತೇವೆ ಎಂದರು.