More

    ಸೆಲೆಬ್ರಿಟಿಸ್ ಬಂದಾಕ್ಷಣ ಮತದಾರ ಬದಲಾಗಲ್ಲ

    ಶಿವಮೊಗ್ಗ: ಜನಪ್ರಿಯ ನಟರನ್ನು, ಮನರಂಜನೆ ನೀಡುವ ಕಲಾವಿದರನ್ನು ನೋಡಬೇಕೆನ್ನುವ ತವಕ ಜನರಲ್ಲಿರುವುದು ಸಾಮಾನ್ಯ. ಟಿವಿಯಲ್ಲಿ ಕಾಣುತ್ತಿದ್ದ ಕಲಾವಿದರನ್ನು ನೇರವಾಗಿ ನೋಡಲು ಸಿಕ್ಕರೆ ಜನರ ಉತ್ಸಾಹ ಹೆಚ್ಚಿರುತ್ತದೆ. ಆದರೆ ಅದೆಲ್ಲವೂ ಮತಗಳಾಗಿ ಪರಿವರ್ತನೆಯಾಗುತ್ತದೆ ಎಂಬುದು ಭ್ರಮೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

    ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕನೇ ಬಾರಿಗೆ ಬಂಗಾರಪ್ಪ ಕುಟುಂಬದವರ ಸ್ಪರ್ಧೆಯನ್ನು ನೋಡುತ್ತಿದ್ದೇವೆ. ಯಾರು ಕ್ಷೇತ್ರದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ರೀತಿ ಈ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದರು.
    ಯಾರು ವಿಜೇತರಾದರೆ ಕ್ಷೇತ್ರಕ್ಕೆ ಅನುಕೂಲ ಎಂದು ಮತದಾರರು ನಿರ್ಧರಿಸುತ್ತಾರೆ. ಚುನಾವಣೆಯಲ್ಲಿ ಗೆಲ್ಲುವ ವ್ಯಕ್ತಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿ ಯಾರು ಎಂಬುದನ್ನು ಜನ ತೀರ್ಮಾನಿಸುತ್ತಾರೆ ಎಂದು ಹೇಳಿದರು.
    ಕೆ.ಎಸ್.ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಂಡು ಎರಡು ವಾರ ಕಳೆದಿವೆ. ರಾಜ್ಯ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.
    ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣಾ ಕಚೇರಿಗಳನ್ನು ತೆರೆಯಲಾಗಿದೆ. ಎಲ್ಲ ಶಕ್ತಿ ಕೇಂದ್ರಗಳಲ್ಲಿ ಚಟುವಟಿಕೆ ಆರಂಭವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ರಾಷ್ಟ್ರೀಯತೆ, ಇದುವರೆಗಿನ ಅಭಿವೃದ್ಧಿ, ದೇಶದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
    ಹೊಂದಾಣಿಕೆ ರಾಜಕೀಯ, ಡಮ್ಮಿ ಅಭ್ಯರ್ಥಿಗಳನ್ನು ಹಾಕಿಸಿಕೊಳ್ಳುವ ಅನಿವಾರ್ಯತೆ ದೇಶದ ಯಾವ ಕ್ಷೇತ್ರದಲ್ಲೂ ಬಿಜೆಪಿಗಿಲ್ಲ. ನಮ್ಮ ಪಕ್ಷಕ್ಕೆ ಬೂತ್ ಮಟ್ಟದಲ್ಲಿ ದೇವದುರ್ಲಭ ಕಾರ್ಯಕರ್ತರ ಪಡೆ ಇದೆ. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಾದ ಕೆಲಸಗಳು ಬಿಜೆಪಿಗೆ ಶ್ರೀರಕ್ಷೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts