More

    ಯಾರಪ್ಪ ಅದು ಕಳ್ಳತನ ಮಾಡ್ತಿರೋದು? ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಕ್ಯಾಮರಾ !

    ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ವೈಟ್​ಫೀಲ್ಡ್ ಉಪ ವಿಭಾಗ ಪೊಲೀಸರು ಸಿಸಿ ಕ್ಯಾಮರಾ ಮತ್ತು ಆಡಿಯೋ ಸ್ಪೀಕರ್ ಅಳವಡಿಸಲು ಖಾಸಗಿ ಕಂಪನಿ ಜತೆ ಕೈ ಜೋಡಿಸಿದ್ದಾರೆ. ವೈಟ್​ಫೀಲ್ಡ್ ಉಪವಿಭಾಗ ವ್ಯಾಪ್ತಿಯ ಕೃಷ್ಣ ರಾಜಪುರ, ಮಹ ದೇವಪುರ, ವೈಟ್​ಫೀಲ್ಡ್, ಕಾಡುಗುಡಿ ಠಾಣೆಗಳ ವ್ಯಾಪ್ತಿ ಯಲ್ಲಿ ಮೊದಲ ಹಂತವಾಗಿ ಅಳವಡಿ ಸಲಾಗುತ್ತದೆ.

    ಹೆಬ್ಬಗೋಡಿ, ಜಿಗಣಿ, ಕನಕಪುರ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಧ್ವನಿ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದೀಗ ವೈಟ್​ಫೀಲ್ಡ್ ಉಪವಿಭಾಗದಲ್ಲಿ ಅಳವಡಿಸಲು ಎಸಿಪಿ ಎಂ.ಇ. ಮನೋಜ್ ಕುಮಾರ್ ಮುಂದಾಗಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ನಿರಂತರವಾಗಿ ಗಮನಿಸಲು 4 ಠಾಣೆಗಳಲ್ಲಿ ಕಮಾಂಡ್ ಸೆಂಟರ್ ತೆರೆಯಲಾಗಿದೆ.

    ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ವಿಡಿಯೋ ಜಾಗದಲ್ಲಿ ಆಡಿಯೋ ಕೇಳಿಸುವ ವ್ಯವಸ್ಥೆ ಇರುತ್ತದೆ. ಯಾರಾದರೂ ಕಿಡಿಗೇಡಿ ಕೃತ್ಯ ಅಥವಾ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ಗೊತ್ತಾದರೆ ಅವರನ್ನು ಎಚ್ಚರಿಸುವ ಸಂದೇಶಗಳನ್ನು ನೀಡಲಾಗುತ್ತದೆ. ನಿಗದಿತ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ತೆರಳಲು ಅನುಕೂಲವಾಗಲಿದೆ. ಸಿಸಿ ಕ್ಯಾಮರಾದ ಜತೆಗಿನ ಆಡಿಯೋ ಸ್ಪೀಕರ್​ಗಳ ನಿರ್ವಹಣೆ ಜವಾಬ್ದಾರಿಯೂ ಪೊಲೀಸರದ್ದೇ ಆಗಿದೆ.

    ಬ್ಯಾಂಕ್​ಗಳಿಗೂ ಅನುಕೂಲ: ಜನದಟ್ಟಣೆಯ ಪ್ರದೇಶಗಳಲ್ಲಿ ಸಲಹೆ ಸೂಚನೆ ನೀಡಲು ಸಂಚಾರ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಈ ವ್ಯವಸ್ಥೆ ಅಳವಡಿಸಿಕೊಳ್ಳಬಹುದು. ಸಂಚಾರ ಸಮಸ್ಯೆ ಮತ್ತು ನೋ ರ್ಪಾಂಗ್ ವಲಯದಲ್ಲಿ ವಾಹನ ನಿಲ್ಲಿಸಿದರೆ ವಿಡಿಯೋ ಕಂಟ್ರೋಲ್ ರೂಮ್ಂದಲೇ ಸಂದೇಶ ನೀಡಬಹುದು. ಶಾಲೆ-ಕಾಲೇಜು, ಮಾಲ್​ಗಳು, ಬಸ್ ನಿಲ್ದಾಣಗಳು ಸೇರಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಮತ್ತು ಆಡಿಯೋ ಸ್ಪೀಕರ್​ಗಳನ್ನು ಅಳವಡಿಸಲು ಮೊದಲ ಹಂತದಲ್ಲಿ 250ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಮನೋಜ್​ಕುಮಾರ್ ತಿಳಿಸಿದ್ದಾರೆ.

    ಕಾರ್ಪೋರೇಟ್ ಸಂಸ್ಥೆಗಳಿಂದ ಸಹಾಯ

    ಸಿಸಿ ಕ್ಯಾಮರಾ ಮತ್ತು ಆಡಿಯೋ ಸ್ಪೀಕರ್​ಗಳನ್ನು ಅಳವಡಿಸುವ ಯೋಜನೆಗೆ ಸರ್ಕಾರದ ಅನುದಾನ ಬಳಸಿಕೊಳ್ಳುವುದಿಲ್ಲ. ವೈಟ್​ಫೀಲ್ಡ್ ಉಪವಿಭಾಗ ವ್ಯಾಪ್ತಿಯ ಕಾಪೋರೇಟ್ ಕಂಪನಿಗಳ ಜತೆ ಸಭೆ ನಡೆಸಿದ್ದು, ಸಹಾಯ ಮಾಡಲು ಮುಂದಾಗಿವೆ. ಹೆಚ್ಚಿನ ಕಂಪನಿಗಳು ಧನಸಹಾಯ ಮಾಡಲು ಮುಂದಾದರೆ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಅಳವಡಿಸಿರುವ ಮುಖಚಹರೆ ಗುರುತಿಸುವ ಸಿಸಿ ಕ್ಯಾಮರಾಗಳನ್ನು ವೈಟ್​ಫೀಲ್ಡ್ ಉಪವಿಭಾಗದಲ್ಲೂ ಅಳವಡಿಸುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ಬಳಿ ಕೇಬಲ್ ಅಳವಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇನ್ನೆರಡು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     | ರಾಮಾಂಜಿನಪ್ಪ ಕೆ.ಆರ್.ಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts