More

    ವಿವೇಕ ಪಾಂಚಜನ್ಯ ಜಗದ ಇತಿಹಾಸದಲ್ಲಿ ಅನನ್ಯ

    ಭಾರತದ ದುಃಖದಾರಿದ್ರ್ಯಗಳ ಅರಿವನ್ನು ಸ್ಪಷ್ಟವಾಗಿ ಗ್ರಹಿಸಿದ್ದ ಸ್ವಾಮೀಜಿ ಸನಾತನ ಹಿಂದೂಧರ್ಮದ ಋಷಿಪರಂಪರೆಯನ್ನು, ವೇದಧರ್ಮದ ಉತ್ಕೃಷ್ಟತೆ ಜಗತ್ತಿಗೆ ಪರಿಚಯಿಸುವ ಅವಶ್ಯಕತೆಯನ್ನು ಅರಿತಿದ್ದರು. ಪಾಶ್ಚಾತ್ಯ ಜಗತ್ತಿನ ಕೆಲವು ಶತಮಾನಗಳ ನಾಗರಿಕತೆಯ ಪಯಣ ಹೊರಸೂಸುತ್ತಿದ್ದ ಸತ್ಯಸಂಗತಿಗಳನ್ನು ಸಮಾನಾಂತರವಾಗಿ ಅವಲೋಕಿಸಲೇಬೇಕಿದೆ.

    ಭಗವಾನ್ ಶ್ರೀರಾಮಕೃಷ್ಣರು ಯುವಕ ನರೇಂದ್ರನಾಥನನ್ನು ಕುರಿತು ಹೇಳಿದ್ದರು, ‘ಲೋಕಶಿಕ್ಷಣ ಕಾರ್ಯವನ್ನು ನೆರವೇರಿಸಲು ಜಗನ್ಮಾತೆ ಲೈಸೆನ್ಸ್ ನೀಡಬೇಕು. ಅವಳ ಕೃಪೆಯಿಲ್ಲದೆ ಯಾರೇ ಆಗಲಿ ಮುಗಿಲು ಮುಟ್ಟುವಷ್ಟು ಕೂಗಾಡಿದರೂ ಪ್ರಯೋಜನಕ್ಕೆ ಬಾರದು. ಹಿಂದೆ ಜಗನ್ಮಾತೆ ಶುಕದೇವನಿಗೆ, ನಾರದನಿಗೆ, ಶ್ರೀಶಂಕರಾಚಾರ್ಯರಿಗೆ ಲೋಕಶಿಕ್ಷಣಗೈಯಲು ಅನುಮತಿಸಿದ್ದಳು. ಇದೀಗ ಅವಳು ನನ್ನ ನರೇಂದ್ರನಿಗೆ ಲೈಸೆನ್ಸ್ ನೀಡಿದ್ದಾಳೆ, ನನ್ನ ನರೇನ್ ಜಗತ್ತಿಗೇ ಬೋಧನೆ ಮಾಡುತ್ತಾನೆ…’

    ವಿವೇಕ ಪಾಂಚಜನ್ಯ ಜಗದ ಇತಿಹಾಸದಲ್ಲಿ ಅನನ್ಯಶ್ರೀರಾಮಕೃಷ್ಣರು ಅದಾಗಲೇ ಶಿಷ್ಯ ನರೇಂದ್ರನಾಥನಲ್ಲಿ ಲೋಕಗುರುವಾಗಿ ಯೋಗ್ಯರೀತಿಯಲ್ಲಿ ಧರ್ಮ ಸಂಸ್ಥಾಪನಾಕಾರ್ಯವನ್ನು ನೆರವೇರಿಸುವ ಸಾಮರ್ಥ್ಯವನ್ನು ಪತ್ತೆಹಚ್ಚಿದ್ದರು. ಅವರು ಈ ಸತ್ಯವನ್ನು ಸ್ವತಃ ಜಗನ್ಮಾತೆಯೇ ತಮಗೆ ಅರುಹಿದ್ದಾಳೆಂದು ಹೇಳುತ್ತಾರೆ. ಶ್ರೀ ಗುರುದೇವನ ನಿರ್ಯಾಣದ ನಂತರ ಯುವಕ ನರೇಂದ್ರನಾಥ ಸಂನ್ಯಾಸದೀಕ್ಷೆ ಪಡೆದು, ಮಾತೃಭೂಮಿಯ ಉದ್ದಗಲಕ್ಕೂ ಆರೇಳು ವರ್ಷಗಳ ಕಾಲ ಪರಿವ್ರಾಜಕನಾಗಿ ಸಂಚರಿಸಿ ಗಳಿಸಿದ ಲೋಕಾನುಭವ ಅಷ್ಟಿಷ್ಟಲ್ಲ.

    ಮಾತೃಭೂಮಿಯಲ್ಲಿ ಮೃತಪ್ರಾಯರೋ ಎಂಬಂತೆ ತೆವಳುತ್ತ ಸಾಗುತ್ತಿದ್ದ ದೇಶಬಾಂಧವರ ಪುನರುಜ್ಜೀವನಕ್ಕಾಗಿ ಕಣ್ಣೀರ್ಗರೆದ ಸ್ವಾಮಿ ವಿವೇಕಾನಂದರು ಹತ್ತು ಹಲವು ಪ್ರಬುದ್ಧ ಪ್ರಾಜ್ಞರ ಅಣತಿಯಂತೆ ಸನಾತನಧರ್ಮ ಪ್ರಸರಣದ ಸಂಕಲ್ಪ ಹೊತ್ತು ತ್ಯಾಗಭೂಮಿಯಾದ ತಮ್ಮ ತಾಯ್ನಾಡಿನಿಂದ ಭೋಗಭೂಮಿ ಅಮೆರಿಕದೆಡೆಗೆ ಪಯಣಿಸಿದರು. ಅವರ ಈ ಸಂಕಲ್ಪದಲ್ಲಿ ಎರಡಂಶಗಳು ಗಮನೀಯ. ಮಾತೃಭೂಮಿಗಾಗಿ ತಮ್ಮನ್ನೇ ತೇಯ್ದುಕೊಳ್ಳುವ ತ್ಯಾಗ ಒಂದೆಡೆಯಾದರೆ ಭೋಗಿಗಳಿಗೆ ತ್ಯಾಗ-ಯೋಗವನ್ನು ಬೋಧಿಸುವುದೂ ಅವರ ಧ್ಯೇಯವಾಗಿತ್ತು. ನಾಗರಿಕತೆಯ ಬೆಡಗು, ವೈಯ್ಯಾರಗಳಲ್ಲಿ ಮೈಮರೆತು ಶ್ರೀಮಂತ ಸಂಸ್ಕೃತಿಯ ಭಾರತವನ್ನು ತುಚ್ಛೀಕರಿಸಿ ಮೆರೆಯುತ್ತಿದ್ದ ಪಾಶ್ಚಾತ್ಯರಿಗೆ ನೈಜ ಭಾರತವನ್ನು, ಭಾರತೀಯ ಧರ್ಮವನ್ನು ಸಾಕ್ಷಾತ್ತಾಗಿ ಪರಿಚಯಿಸಿ, ಅದನ್ನವರು ಗೌರವಿಸುವಂತೆ ಮಾಡುವುದಷ್ಟಕ್ಕೇ ಸೀಮಿತವಾಗದೆ ಭಾರತದ ಅವಶ್ಯಕತೆಗಳಿಗೆ ಮಾನವೀಯ ಅಂತಃಕರಣಪೂರ್ವಕವಾಗಿ ಸ್ಪಂದಿಸುವಂತೆ ಪ್ರೇರಣೆ ನೀಡುವಲ್ಲಿ ಯಶಸ್ವಿಯಾದರು.

    ಭಾರತದ ದುಃಖದಾರಿದ್ರ್ಯಗಳ ಅರಿವನ್ನು ಸ್ಪಷ್ಟವಾಗಿ ಗ್ರಹಿಸಿದ್ದ ಸ್ವಾಮೀಜಿ ಸನಾತನ ಹಿಂದೂಧರ್ಮದ ಋಷಿಪರಂಪರೆಯನ್ನು, ವೇದಧರ್ಮದ ಉತ್ಕೃಷ್ಟತೆಯನ್ನು ಜಗತ್ತಿಗೆ ಪರಿಚಯಿಸುವ ಅವಶ್ಯಕತೆಯನ್ನು ಅರಿತಿದ್ದವರಲ್ಲಿ ಅಗ್ರಗಣ್ಯರು. ಪಾಶ್ಚಾತ್ಯ ಜಗತ್ತಿನ ಕೆಲವು ಶತಮಾನಗಳ ನಾಗರಿಕತೆಯ ಪಯಣವು ಹೊರಸೂಸುತ್ತಿದ್ದ ಸತ್ಯಸಂಗತಿಗಳನ್ನು ನಾವು ಸಮಾನಾಂತರವಾಗಿ ಅವಲೋಕಿಸಲೇಬೇಕಿದೆ.

    ಪಾಶ್ಚಾತ್ಯಜಗತ್ತಿನಲ್ಲಿ ‘ಮಾನವೀಯತೆ’ ಪಡೆದುಕೊಂಡಿದ್ದ ಸ್ಥಾನ ವಿಚಿತ್ರವೂ, ವಿಕೃತವೂ ಆಗಿದ್ದಿತು. ಗ್ರೀಕ್ ಮತ್ತು ರೋಮನ್ನರ ಆಳ್ವಿಕೆಯ ಕಾಲಘಟ್ಟದಲ್ಲಿ ಬಂಧಿತರಾಗಿದ್ದ ಒತ್ತೆಯಾಳುಗಳನ್ನು ಕನಿಷ್ಠ ಪ್ರಮಾಣದಲ್ಲಿಯೂ ‘ಮಾನವ’ರಂತೆ ಪರಿಗಣಿಸದೆ ‘ಮೃಗ’ಗಳೆಂದೇ ವ್ಯವಹರಿಸಿದ್ದುದು ಸುಳ್ಳಲ್ಲ. ಆನಂತರ ಕ್ರೈಸ್ತಮತವೂ ತಾನು ಪ್ರತಿಪಾದಿಸಿದ ದೇವರ ಕುರಿತಾದ ತತ್ತ್ವವನ್ನು ಅನುಮೋದಿಸಿದವರನ್ನಷ್ಟೇ ‘ಮನುಷ್ಯ’ರೆಂದು ಗುರುತಿಸಿ ಅದನ್ನೊಪ್ಪದ ಕ್ರೈಸ್ತರನ್ನು ಹೊರಗಿಟ್ಟಿತ್ತು. ಜರ್ಮನಿಯಲ್ಲಿ ಸಂತ ಏಸುಕ್ರಿಸ್ತನ ಹೆಸರಿನಲ್ಲಿ ಕ್ಯಾಥೋಲಿಕ್ ಹಾಗೂ ಪೊ›ಟೆಸ್ಟೆಂಟ್ ಬಣಗಳ ಬಡಿದಾಟ ಜರ್ಮನಿಯ ಜನಸಂಖ್ಯೆಯ ಸಿಂಹಪಾಲನ್ನು ನಾಶಗೊಳಿಸಿದ್ದು ದುರಂತವೇ ಸರಿ. ನಾಜಿಗಳು ಯಹೂದ್ಯರನ್ನು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಧೆಗೈಯ್ದಿದ್ದು ವಿಕೃತ ನಾಗರಿಕತೆಯ ಕುರುಹು.

    ಕೈಗಾರಿಕಾಕ್ರಾಂತಿಯ ನಂತರ ಪಾಶ್ಚಾತ್ಯ ಜಗತ್ತಿನಲ್ಲಿ ಭೌತವಿಜ್ಞಾನ ಅಭಿವೃದ್ಧಿ ಹೊಂದುತ್ತ ಸಾಗುತ್ತಿದ್ದಂತೆ ದೈವದಲ್ಲಿ ನಂಬಿಕೆ ಕಳೆದುಕೊಂಡರಷ್ಟೆ ಅಲ್ಲದೆ ನಂಬಿಕೆ, ಶ್ರದ್ಧೆಗಳನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕು ಎಂಬುದನ್ನು ತಿಳಿಯದಾದರು. ಜೀವನಮೌಲ್ಯಗಳು ಕುಸಿದು ನೈತಿಕತೆ ನಗೆಪಾಟಲಿಗೀಡಾದಂತಾಯಿತು. ಮುಂದಿನ ದಿನಗಳಲ್ಲಿ ಕೇವಲ ಭೌತಿಕವಾದ ಅವಲಂಬಿತ ಮಾರ್ಕ್ಸಿಸ್ಟ್​ತತ್ತ್ವ ಸಿದ್ಧಾಂತಗಳು ಮಾನವೀಯತೆಯ ಸಫಲತೆಯನ್ನು ಸಾಧಿಸಲಾರದೆ ವೈಫಲ್ಯ ಕಂಡವು. ರಷ್ಯದ ಬೋಲ್ಷೆವಿಕ್ ಕ್ರಾಂತಿಯು ಶಾಂತಿ, ಸಮೃದ್ಧಿ ಸಾಧಿಸದೆ ಮಾರ್ಕ್ಸಿಸ್ಟ್ ರಾಷ್ಟ್ರಗಳೇ ಪರಸ್ಪರ ಕಚ್ಚಾಡಿ ನಗೆಪಾಟಲಿಗೆ ಗುರಿಯಾದದ್ದು ಸತ್ಯ.

    ಅಮೆರಿಕದಲ್ಲಿ ನಡೆದ ಸಂದರ್ಶನವೊಂದರಲ್ಲಿ ಸ್ವಾಮಿ ವಿವೇಕಾನಂದರೇ ಹೇಳಿದ್ದರು-‘ಪೂರ್ವರಾಷ್ಟ್ರಗಳಿಗೆ ಬುದ್ಧನ ಸಂದೇಶವಿರುವಂತೆ ಪಶ್ಚಿಮ ರಾಷ್ಟ್ರಗಳಿಗೆ ನನ್ನ ಸಂದೇಶವಿದೆ’. ಪಾಶ್ಚಾತ್ಯರ ವಿಭಿನ್ನ ಲೋಕದೃಷ್ಟಿ ಹಾಗೂ ಬೇರೊಂದು ಸಂಸ್ಕೃತಿಯವರೆಂಬ ಸತ್ಯವನ್ನರಿತ ಸ್ವಾಮೀಜಿ ಪಾಶ್ಚಾತ್ಯರ ವೈಜ್ಞಾನಿಕದೃಷ್ಟಿಗೆ ಹಾಗೂ ರ್ತಾಕ ಪ್ರತಿಪಾದನೆಗಳಿಗೆ ತಾಳೆಯಾಗವಂಥ ವೈಚಾರಿಕ ಮಾರ್ಗದಲ್ಲೇ ಅವರುಗಳಿಗೆ ಭಾರತದ ಅಧ್ಯಾತ್ಮತತ್ತ್ವವನ್ನು ಉಣಬಡಿಸಿದರು.

    ವಿಶ್ವವೇದಿಕೆಯ ಮೇಲೆ ವಿಜಯಪತಾಕೆಯನ್ನು ಹಾರಿಸಿದ ಸ್ವಾಮೀಜಿ ಒಂದು ತಿಂಗಳ ಮೊದಲು ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಗ್ರೀಕ್ ಪ್ರಾಧ್ಯಾಪಕ ಪೊ›.ಜೆ.ಹೆಚ್.ರೈಟ್​ರೊಡನೆ ಮಾತನಾಡುತ್ತ, ‘ಶತಶತಮಾನಗಳಿಂದ ಭಾರತವು ಆಕ್ರಮಣಕ್ಕೆ ಒಳಗಾಗಿ ಕೊನೆಯದಾಗಿ ನಡೆದದ್ದು ಬ್ರಿಟಿಷರ ದುರಾಕ್ರಮಣ. ನೀವು ಭಾರತದಾದ್ಯಂತ ನೋಡಿ-ಹಿಂದೂಗಳು ನಾಡಿಗಾಗಿ ಎಲ್ಲೆಲ್ಲಿಯೂ ಅಚ್ಚರಿಯ ದೇವಾಲಯಗಳನ್ನು ಬಿಟ್ಟುಹೋಗಿದ್ದಾರೆ. ಮುಸ್ಲಿಮರು ಸುಂದರ ಅರಮನೆಗಳನ್ನು ಬಿಟ್ಟುಹೋದರೆ, ಇಂಗ್ಲಿಷರು ಬಿಟ್ಟುಹೋದದ್ದು ರಾಶಿರಾಶಿ ಮದ್ಯದ ಬಾಟಲಿಗಳು! ಅಷ್ಟೇ ಹೊರತು ಇನ್ನೇನಿಲ್ಲ. ದೇವರು ಸೇಡು ತೀರಿಸಿಕೊಳ್ಳುತ್ತಾನೆಂದು ಮನುಷ್ಯನಿಗೆ ನಂಬುವುದಕ್ಕೆ ಆಗದಿದ್ದರೆ, ಇತಿಹಾಸದ ಸೇಡನ್ನು ಖಂಡಿತವಾಗಿಯೂ ಇಲ್ಲವೆನ್ನುವಂತಿಲ್ಲ! ಬ್ರಿಟಿಷರು ನಮ್ಮ ಕೊನೆಯ ಹನಿರಕ್ತವನ್ನೂ ಹೀರಿಬಿಟ್ಟರು. ನಮ್ಮ ಜನರು ಉಪವಾಸವಿದ್ದರೂ ಕೋಟಿಕೋಟಿ ಹಣವನ್ನು ತಮ್ಮೊಂದಿಗೆ ಕೊಂಡೊಯ್ದರು…’

    ಸ್ವಾಮಿ ವಿವೇಕಾನಂದರ 1893ರ ಸೆಪ್ಟೆಂಬರ್ 11ರಂದು ನೆರವೇರಿದ ವಿಶ್ವಧರ್ಮ ಸಮ್ಮೇಳನದ ಭಾಷಣವು ಆಚಂದ್ರಾರ್ಕವಾಗಿ ಉಳಿಯುವಂಥದ್ದು. ಒಂದು ವಿಧದಲ್ಲಿ ಅದು ‘ವಿವೇಕಪಾಂಚಜನ್ಯ’ವೇ ಹೌದು! ಮೊಳಗಿತು ರಣಕಹಳೆ! ಎಂದೇ ಹೇಳಬೇಕು. ಕಾರ್ಯಕ್ರಮಕ್ಕೆ ಪೂರ್ವಭಾವಿಯಲ್ಲಿ ಸಮ್ಮೇಳನ ‘ಕ್ರೈಸ್ತೇತರ ಅನಾಗರಿಕ’ನನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿತ್ತೆಂದೂ, ಕ್ಯಾಂಟರ್​ಬರಿಯ ಆರ್ಚ್​ಬಿಷಪ್, ‘ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವ ಇತರ ಧರ್ಮಪ್ರತಿನಿಧಿಗಳಿಗೆ ಕ್ರೈಸ್ತಧರ್ಮದವರೊಂದಿಗೆ ಸಮಾನ ಮನ್ನಣೆ ಕೊಡುವುದಕ್ಕೆ ನಾನು ಸಮ್ಮತಿಸಲಾರೆ’ ಎಂದೇ ಅಭಿಪ್ರಾಯಿಸಿದ್ದು ದಾಖಲೆ.

    ಸೆಪ್ಟೆಂಬರ್ 11ರ ನಂತರ ಸ್ವಾಮಿ ವಿವೇಕಾನಂದರು ಸೆಪ್ಟೆಂಬರ್ 15ರಂದು ‘ನಮ್ಮಲ್ಲೇಕೆ ಒಮ್ಮತವಿಲ್ಲ?’, ಸೆಪ್ಟೆಂಬರ್ 19ರಂದು ‘ಹಿಂದೂಧರ್ಮ’, ಸೆಪ್ಟೆಂಬರ್ 20ರಂದು ‘ಧರ್ಮಕ್ಕಿಲ್ಲ ಭರತಖಂಡದಲ್ಲಿ ಬರಗಾಲ’, ಸೆಪ್ಟೆಂಬರ್ 22ರಂದು ‘ಸಾಂಪ್ರದಾಯಿಕ ಹಿಂದೂಧರ್ಮ ಹಾಗೂ ವೇದಾಂತತತ್ತ್ವ’, ಸೆಪ್ಟೆಂಬರ್ 24ರಂದು ‘ಭಗವತ್ಪ್ರೇಮ’, ಸೆಪ್ಟೆಂಬರ್ 25ರಂದು ‘ಹಿಂದೂಧರ್ಮದ ತಿರುಳು’, ಸೆಪ್ಟೆಂಬರ್ 26ರಂದು ‘ಬೌದ್ಧಧರ್ಮಕ್ಕೆ ಬೆಂಬಲವಾಗಿ’ ಮುಂತಾದ ವಿಷಯಗಳ ಬಗ್ಗೆ ಪ್ರವಚನಗಳನ್ನು ನೀಡಿದರು. ಹದಿನೇಳು ಸುದೀರ್ಘ ದಿನಗಳ ವಿವಿಧ ಅಧಿವೇಶನಗಳಲ್ಲಿ ಸ್ವಾಮಿ ವಿವೇಕಾನಂದರು ಮುಖ್ಯ ಸಭಾವೇದಿಕೆಯಲ್ಲಷ್ಟೇ ಅಲ್ಲದೆ ವೈಜ್ಞಾನಿಕ ವಿಭಾಗದಲ್ಲೂ ಹಲವಾರು ಉಪನ್ಯಾಸಗಳನ್ನು ನೀಡಿದರು.

    ಏಳು ಸಹಸ್ರ ಸಭಿಕರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಆಸ್ವಾದಿಸಿದ್ದೊಂದು ಇತಿಹಾಸ. ನ್ಯೂಯಾರ್ಕ್​ನ ಇಜಿಠಿಜ್ಚಿ ಪತ್ರಿಕೆ ಸ್ವಾಮೀಜಿಯವರನ್ನು ‘ದೈವದತ್ತ ವಾಗ್ಮಿ’ ಎಂದು ಕೊಂಡಾಡಿದರೆ ‘ರಿವ್ಯೂ ಆಫ್ ರಿವ್ಯೂಸ್’ ಪತ್ರಿಕೆ ಸ್ವಾಮೀಜಿ ಭಾಷಣಗಳನ್ನು ‘ಶ್ರೇಷ್ಠ ಮತ್ತು ಉದಾತ್ತ’ ಎಂದು ವರ್ಣಿಸಿತು. ಅಲ್ಲದೆ ‘ಪ್ರೆಸ್ ಆಫ್ ಅಮೆರಿಕ’, ‘ಇಂಟೀರಿಯರ್ ಚಿಕಾಗೊ’, ‘ಚಿಕಾಗೊ ಟ್ರಿಬ್ಯೂನ್’, ‘ರೂದರ್ ಫೋರ್ಡ್ ಅಮೆರಿಕ’, ‘ಚಿಕಾಗೊ ಇಂಟರ್ ಓಷನ್’ ಮೊದಲಾದ ಸುಪ್ರಸಿದ್ಧ ಪತ್ರಿಕೆಗಳು ಸ್ವಾಮೀಜಿ ಚಿಂತನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದವು.

    ‘ನ್ಯೂಯಾರ್ಕ್ ಹೆರಾಲ್ಡ್’ ಎಂಬ ಪತ್ರಿಕೆ, ‘ನಿಸ್ಸಂದೇಹವಾಗಿಯೂ ಅವರು ಸಮ್ಮೇಳನದ ಅತಿ ಶ್ರೇಷ್ಠ ವ್ಯಕ್ತಿ. ಅವರ ಮಾತುಗಳನ್ನು ಕೇಳಿದ ಮೇಲೆ, ಇಂತಹ ತಿಳಿವಳಿಕಸ್ಥ ದೇಶಕ್ಕೆ ಧರ್ಮ ಪ್ರಚಾರಕರನ್ನು ಕಳಿಸುವುದು ಎಂತಹ ಮೂರ್ಖತನ! ಎಂದೆನಿಸುತ್ತದೆ’ ಎಂದು ಬರೆದಿತ್ತು.

    ಅಮೆರಿಕದ ಪ್ರಚಂಡ ಇಂಜಿನಿಯರ್-ಅನ್ವೇಷಕ ಸರ್ ಹಿರಮ್ ಮ್ಯಾಕ್ಸಿಮ್ ಹೇಳುತ್ತಾನೆ: ‘ವಿವೇಕಾನಂದರದ್ದು ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ, ಅಪರಿಮಿತ ಜ್ಞಾನ; ವೆಬ್​ಸ್ಟರ್​ನ ಪದವೀಧರನಂತೆ ಇಂಗ್ಲಿಷ್ ಮಾತನಾಡಬಲ್ಲವರಾಗಿದ್ದರು… ಯಾವಾಗ ವಿವೇಕಾನಂದರು ಮಾತನಾಡಿದರೋ, ಆಗ ಸಭೆಯಲ್ಲಿದ್ದ ಇತರ ಎಲ್ಲ ಧರ್ಮಪ್ರತಿನಿಧಿಗಳಿಗೆ ಅನ್ನಿಸಿತು-ತಾವೊಬ್ಬ ನೆಪೋಲಿಯನ್​ನನ್ನು ಎದುರಿಸಬೇಕಾಗಿದೆ’ ಎಂದು.

    ಸ್ವಾಮೀಜಿ ಹೇಳುತ್ತಾರೆ, ‘ಹೌದು! ನಾನು ಬೆಳೆಯುತ್ತ ಸಾಗಿದಂತೆ ಎಲ್ಲವೂ ಅಡಗಿರುವುದು ಪೌರುಷದಲ್ಲಿಯೇ ಎಂಬ ಸತ್ಯವು ನನಗೆ ಸ್ಪಷ್ಟವಾಗುತ್ತಿದೆ. ಇದೇ ನನ್ನ ನೂತನ ಸಂದೇಶ. ಲೋಕದಲ್ಲಿ ಸಮಾಜವಾದ ಚಿಂತನೆಗೆ ನೈತಿಕ ಹಾಗೂ ಆಧ್ಯಾತ್ಮಿಕ ತಳಹದಿ ಇಲ್ಲದಿದ್ದರೆ ಸಮಾಜವು ಸಮಾನತೆ ಸಾಧಿಸಲು ಸಾಧ್ಯವಾಗದು. ಜಗತ್ತಿನ ಧರ್ಮಗಳೆಲ್ಲವೂ ನಿಸ್ತೇಜವಾಗಿ ಕಾಣುತ್ತದೆ. ಜಗತ್ತಿಗೆ ನಿಜಕ್ಕೂ ಅವಶ್ಯಕತೆ ಇರುವುದು ಶುದ್ಧಚಾರಿತ್ರ್ಯ. ಯಾರ ಜೀವನದಲ್ಲಿ ನಿರಂತರವೂ ಪ್ರೇಮ, ತ್ಯಾಗ ಹಾಗೂ ನಿಃಸ್ವಾರ್ಥತೆ ನಂದಾದೀಪದಂತೆ ಪ್ರಜ್ವಲಿಸುತ್ತದೆಯೋ ಅಂತಹ ಪುಣ್ಯಾತ್ಮರು ಜಗತ್ತಿಗೆ ಬೇಕಾಗಿದ್ದಾರೆ. ಅಂತಹ ಪ್ರೇಮವೇ ಪ್ರತಿಯೊಂದು ಮಾತಿನಿಂದಲೂ ಸಿಡಿಲಿನಂತಹ ಪರಿಣಾಮವನ್ನು ಬೀರುತ್ತದೆ’.

    ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ವಿಜಯೋತ್ಸವದ ನಂತರ ಕೊಲಂಬೋದಲ್ಲಿ ಮಾತನಾಡುತ್ತ ಸ್ವಾಮೀಜಿ-‘ಜಗತ್ತಿನ ಹಲವಾರು ನಾಗರಿಕತೆಗಳೂ ತಮ್ಮ ಭಾವನೆಗಳನ್ನು ಜಗತ್ತಿನಲ್ಲಿ ಹರಡಿದ್ದು ಸಮರಕಹಳೆಯ ದನಿಯಿಂದ, ರಕ್ತದೋಕುಳಿಯಿಂದ…! ಆದರೆ ನಮ್ಮ ಭರತಖಂಡವು ಸಹಸ್ರಾರು ವರ್ಷಗಳಿಂದ ಶಾಂತವಾಗಿ ಬಾಳಿದೆ, ಬಾಳುತ್ತಿದೆ. ಗ್ರೀಸ್ ಇನ್ನೂ ಹುಟ್ಟದೇ ಇದ್ದಾಗ, ರೋಮ್ ದೇಶದ ಕಲ್ಪನೆಯೇ ಇರದೇ ಇದ್ದಾಗ, ಆಧುನಿಕ ಜನಾಂಗದ ಪೂರ್ವಜರು ಕಾನನಾಂತರಗಳಲ್ಲಿ ನೆಲೆಸಿ, ಕಾಡುಮನುಷ್ಯರಂತೆ ಮೈಗೆ ಬಣ್ಣ ಬಳಿದುಕೊಳ್ಳುತ್ತಿದ್ದ ಕಾಲದಲ್ಲೇ ನಮ್ಮ ನಾಡು ಪ್ರಬುದ್ಧವಾಗಿತ್ತು. ಪ್ರಾಗೈತಿಹಾಸಿಕ ಕಾಲದಿಂದಲೂ, ಸಂಪ್ರದಾಯವು ಮೂಗು ತೂರಿಸಲಾಗದಷ್ಟು ಹಿಂದಿನ ಕಾಲದ ಕತ್ತಲೆಯ ಆಳದಿಂದ, ಅಂದಿನಿಂದ ಇಂದಿನವರೆಗೂ, ಒಂದು ಮಹೋನ್ನತ ಭಾವನಾ ಪರಂಪರೆ ಈ ನಮ್ಮ ಭಾರತದೇಶದಿಂದ ಹೊರಹೊಮ್ಮುತ್ತಲೇ ಇದೆ. ಈ ದೇಶದ ಜನರು ಆಡಿದ ಪ್ರತಿಯೊಂದು ಮಾತಿನ ಹಿಂದೆಯೂ ಆಶೀರ್ವಾದದ ಬಲವಿದೆ, ಮುಂದೆ ಅಪ್ರತಿಮ ಶಾಂತಿ ಇದೆ. ಪ್ರಪಂಚವನ್ನು ನಾವು ಇತರ ಅನೇಕ ರಾಷ್ಟ್ರಗಳಂತೆ ಮತ್ತೊಬ್ಬರನ್ನು ಆಕ್ರಮಣ ಮಾಡಿ ಗೆಲ್ಲಲಿಲ್ಲ. ಈ ಶುಭ ನಡವಳಿಕೆ ನಮ್ಮ ಶಿರದ ಮೇಲಿರುವುದರಿಂದಲೇ ನಾವಿನ್ನೂ ಜೀವಿಸುತ್ತ ಸಾಗಿದ್ದೇವೆ’.

    ಆರಂಭದ ದಿನಗಳಲ್ಲಿ ಸ್ವಧರ್ಮದ ಪಕ್ಷಪಾತಿಯಾಗಿದ್ದ ಪ್ರೊ.ಮ್ಯಾಕ್ಸ್​ಮುಲ್ಲರ್ ತದನಂತರದಲ್ಲಿ ಉಪನಿಷತ್​ಗಳನ್ನು ಯಾವುದೇ ಪೂರ್ವಗ್ರಹಕ್ಕೆ ಆಸ್ಪದವೀಯದೆ ಅಧ್ಯಯನ ಮಾಡಿ ತನ್ನ ಅಭಿಪ್ರಾಯದಲ್ಲಿ, ‘ವೇದಾಂತತತ್ತ್ವ ಜಗತ್ತಿಗೆ ತಾತ್ತಿ್ವಕ ವಿವರಣೆಗಳನ್ನು ದೊರಕಿಸಿಕೊಡುವುದಲ್ಲದೆ ನೈತಿಕತೆಯನ್ನು ಅತ್ಯಂತ ಬಲಿಷ್ಠವಾದ ತಾತ್ತಿ್ವಕ ಹಾಗೂ ಧಾರ್ವಿುಕ ತಳಹದಿಯ ಮೇಲೆ ಸ್ಥಾಪಿಸುವ ಉದ್ದೇಶದಲ್ಲಿ ಸಾಫಲ್ಯ ಕಂಡಿದೆ’ ಎಂಬ ತನ್ನ ಆತ್ಮಸಾಕ್ಷಿಯ ನುಡಿಯನ್ನು ಹೊರಗೆಡವಿದ್ದಾನೆ.

    ವಿಭಿನ್ನ ಸಂಸ್ಕೃತಿಯ ಪಾಶ್ಚಾತ್ಯರಿಗೆ, ಅವರ ವೈಜ್ಞಾನಿಕ ದೃಷ್ಟಿಕೋನ ಹಾಗೂ ರ್ತಾಕ ಪ್ರತಿಪಾದನೆಗಳಿಗೆ ತಾಳೆಯಾಗುವಂಥ ವೈಚಾರಿಕ ಮಾರ್ಗದಲ್ಲೇ ಸ್ವಾಮಿ ವಿವೇಕಾನಂದರು ಅವರಿಗೆ ಭಾರತದ ಅಧ್ಯಾತ್ಮತತ್ತ್ವವನ್ನು ಉಣಬಡಿಸಿ ಮಾನವ ಸಂಕುಲಕ್ಕೆ ಮಹದುಪಕಾರ ಮಾಡಿದ್ದಾರೆ, ಜಗತ್ತಿನ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಪಾಶ್ಚಾತ್ಯರಿಗೆ ‘ಅಂತರಂಗ ಚೈತನ್ಯ’ವನ್ನು ಪರಿಚಯಿಸಿದ ಸ್ವಾಮೀಜಿ ಅವರುಗಳ ಪಾಲಿಗಂತೂ ‘ಅಧ್ಯಾತ್ಮ ವಿಜ್ಞಾನಿ’ ಆಗಿದ್ದಾರಲ್ಲವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts