More

    ವಿವೇಕಧಾರೆ| ಭಾರತ ದರ್ಶನಕ್ಕೆ ಬೇಕಿದೆ ವಿವೇಕದ ಕನ್ನಡಕ

    ಭಾರತದ ಅವಳಿ ಆದರ್ಶಗಳಾದ ತ್ಯಾಗ ಮತ್ತು ಸೇವೆಯನ್ನು ಹೆಚ್ಚು ಹೆಚ್ಚು ಸಾರ್ವತ್ರಿಕಗೊಳಿಸಬೇಕೆಂದು ಹೋರಾಡಿದ ಸ್ವಾಮಿ ವಿವೇಕಾನಂದರು, ‘ದೋಷವಿರುವುದು ಧರ್ಮದಲ್ಲಲ್ಲ, ಜನರಲ್ಲಿ; ದೂಷಿಸಬೇಕಾದ್ದು ಧರ್ಮವನ್ನಲ್ಲ ಜನರನ್ನು’ ಎಂದು ನಿಖರವಾಗಿ ಪ್ರಸ್ತಾಪಿಸಿದ್ದಾರೆ.

    ಮಾನವ ಅಭ್ಯುದಯದ ಮಹೋನ್ನತ ಆದರ್ಶದ ಪಥವನ್ನು ಆಮೂಲಾಗ್ರವಾಗಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ಭವ್ಯ ನಾಡಾದ ಭಾರತಕ್ಕೆ ಸಲ್ಲುತ್ತದೆ. ಭಾರತವನ್ನು ಪುಣ್ಯಭೂಮಿಯೆಂದು, ಮೌಲ್ಯಾದರ್ಶಗಳ ತವರು ಎಂದು ಕರೆದಾಗ ಹತ್ತಾರು ಸಾಮಾಜಿಕ ನ್ಯೂನತೆಗಳನ್ನು ಮುಂದಿರಿಸಿ ನಮ್ಮ ಮಾತೃಭೂಮಿಯನ್ನು ಕಳಪೆಯಾಗಿ ಬಿಂಬಿಸುವ ಹಾಗೂ ಜಗತ್ತಿಗೇ ಬೆಳಕನಿತ್ತ ಮಹಾನ್ ಚೇತನರನ್ನು ದುರ್ಬಲವಾಗಿ, ಕೀಳಾಗಿ ಬಿಂಬಿಸುತ್ತ ಸಾಗಿರುವ ಪರಿ ಇತ್ತೀಚಿನದ್ದೇನಲ್ಲ. ಅಂತಹ ವಕಾಲತ್ತನ್ನು ನೀಡುವವರ ಬಗ್ಗೆ ನಾವು ಮರುಕಪಡಬೇಕೇ ಹೊರತು ಮುನಿಸಿಕೊಳ್ಳಬೇಕಾದ ಅಗತ್ಯವಂತೂ ಇಲ್ಲ.

    ವಿವೇಕಧಾರೆ| ಭಾರತ ದರ್ಶನಕ್ಕೆ ಬೇಕಿದೆ ವಿವೇಕದ ಕನ್ನಡಕಜಗತ್ತಿನ ಪ್ರಾಜ್ಞರ ಪಡೆ ಭಾರತದೇಶವನ್ನು ಐತಿಹಾಸಿಕ, ಭೌಗೋಳಿಕ, ವ್ಯಾವಹಾರಿಕ, ವೈಚಾರಿಕ ಹಾಗೂ ಪಾರಮಾರ್ಥಿಕ ದೃಷ್ಟಿಕೋನಗಳಿಂದ ಅತ್ಯಂತ ಗೌರವ ಹಾಗೂ ಉನ್ನತ ಸ್ಥಾನದಲ್ಲಿ ಗುರುತಿಸಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರುಗಳಾದ ಟಿ.ಎಸ್.ಇಲಿಯೆಟ್, ನೀಲ್ ಬೋಹರ್, ಹರ್ಮನ್ ಹೆಸ್ಸೆ, ರೋಮಾ ರೋಲಾ, ಇರ್ವಿನ್ ಶ್ರೋಡಿಂಜರ್, ಬ್ರೈನ್ ಡೇವಿಡ್, ಜೋಸೆಫ್​ಸನ್, ವಿ.ಎಸ್. ನೈಪೋಲ್, ಕೌಂಟ್ ಮೌರೀಸ್ ಮೆಟರ್​ಲಿಂಕ್, ದಲೈಲಾಮಾ ಇವರುಗಳಲ್ಲದೆ ಮ್ಯಾಕ್ಸ್​ಮುಲ್ಲರ್, ಮೋನಿಯರ್ ವಿಲಿಯಮ್್ಸ, ಜೋಸೆಫ್ ಕ್ಯಾಂಪ್​ಬೆಲ್ ಇವರೇ ಮೊದಲಾದ ವಿಶ್ವವಿಖ್ಯಾತರು ಭಾರತದೇಶದ ಬಗ್ಗೆ ಆಡಿರುವ ನೈಜ ಮಾತುಗಳು ಜಗತ್ತಿನ ಜನರಿಗೊಂದು ದಿಕ್ಸೂಚಿಯೇ ಹೌದು.

    ಮನುಷ್ಯನನ್ನು ಅನಾದಿಕಾಲದಿಂದ ಎಂದೂ ‘ಪಾಪಿ’ ಎಂದು ಬ್ರಾಂಡ್ ಮಾಡದೇ ಅವನಿರುವ ಸ್ಥಾನದಿಂದಲೇ ಮಹೋನ್ನತ ಸ್ಥಾನವನ್ನು ಪಡೆಯುವ ಆದರ್ಶಯೋಗ್ಯ ಪಥವನ್ನು ಜಗತ್ತಿಗೆ ನೀಡಿದ ರಾಷ್ಟ್ರ ನಮ್ಮದು. ಈ ಮಾತನ್ನು ಸಮರ್ಥಿಸಬೇಕಾದ ಅಗತ್ಯವೂ ಇದೆ.

    ಕಠೋಪನಿಷತ್ ಪ್ರತಿಪಾದಿಸುತ್ತದೆ:

    ಏಷ ಸರ್ವೆಷು ಭೂತೇಷು ಗೂಢೋ ಆತ್ಮಾ ನ ಪ್ರಕಾಶತೇ|

    ದೃಶ್ಯತೇ ತು ಅಗ್ರ್ಯಯಾ ಬುದ್ಧಾ್ಯ ಸೂಕ್ಷ್ಮಯಾ ಸೂಕ್ಷ್ಮದರ್ಶಿಭಿಃ||

    ಅಂದರೆ ಸಮಸ್ತ ಭೂತಗಳಲ್ಲಿಯೂ ಇರುವ ಆ ಆತ್ಮನು ಸುಪ್ತವಾಗಿರುವುದರಿಂದ ಪ್ರಕಾಶಿಸುವುದಿಲ್ಲ; ಆದರೆ ಸೂಕ್ಷ್ಮಗ್ರಾಹಿಗಳಾದ ಸೂಕ್ಷ್ಮಬುದ್ಧಿಯ ಪರಿಣಿತರಿಂದ ಇದು ಗ್ರಹಿಸಲ್ಪಡುತ್ತದೆ.

    ಭಾಗವತದ ಮಾತೊಂದು ಉಲ್ಲೇಖಾರ್ಹ:

    ಅಥ ಮಾಂ ಸರ್ವಭೂತೇಷು ಭೂತಾತ್ಮಾನಂ ಕೃತಾಲಯಂ|

    ಅರ್ಹಯೇತ್ ದಾನ ಮಾನಾಭ್ಯಾಂ ಮೈತ್ರಿ ಅಭಿನ್ನೇನ ಚಕ್ಷಷಾ||

    ಅರ್ಥಾತ್ ಭಗವಂತನು ಎಲ್ಲ ಜೀವಿಗಳ ಅಂತರಂಗವನ್ನೇ ತನ್ನ ಆವಾಸಸ್ಥಾನವಾಗಿಸಿಕೊಂಡಿದ್ದಾನೆ. ಆದ್ದರಿಂದ ಪ್ರತಿಯೊಂದು ಜೀವಿಯ ಅರ್ಹತೆಯನ್ನರಿತು, ಅವುಗಳ ಆತ್ಮಗೌರವಕ್ಕೆ ಚ್ಯುತಿಯಾಗದಂತೆ, ಸ್ನೇಹಭಾವದಿಂದ, ನಿಷ್ಪಕ್ಷವಾಗಿ ದಾನವನ್ನು ನೀಡಬೇಕು.

    ‘ಆತ್ಮವತ್ ಸರ್ವಭೂತೇಷು…’ ಎಲ್ಲ ಜೀವಿಗಳಲ್ಲಿಯೂ ತನ್ನನ್ನೇ ಕಾಣಲು ಯಶಸ್ವಿಯಾದವನನ್ನು ಪ್ರಾಜ್ಞ ಎಂದಿದೆ ನಮ್ಮ ಧನ್ಯ ಪರಂಪರೆ.

    ಶ್ರೀರಾಮಕೃಷ್ಣರೆನ್ನುತ್ತಾರೆ- ‘ಕಣ್ಣು ಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಾಣುವುದು ಉನ್ನತ ಸ್ತರದ ಆಧ್ಯಾತ್ಮಿಕ ಸಾಧನೆ’. ಶ್ರೀಮಾತೆ ಶಾರದಾದೇವಿಯವರು, ‘ಜಗತ್ತನ್ನು ನಿನ್ನದಾಗಿಸಿಕೋ, ಇಲ್ಲಿ ಯಾರೂ ಪರಕೀಯರಲ್ಲ, ನಿನಗೆ ಮನಃಶ್ಯಾಂತಿ ಬೇಕಿದ್ದರೆ ಯಾರಲ್ಲೂ ಲೋಪದೋಷಗಳನ್ನೆಣಿಸದೆ ಸರ್ವರನ್ನೂ ನಿನ್ನವರೆಂದೇ ತಿಳಿದು ಸೇವೆ ಮಾಡು…’ ಎಂದಿದ್ದಾರೆ. ಸ್ವಾಮಿ ವಿವೇಕಾನಂದರಂತೂ, ‘ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ’ ಎಂಬ ಅನಾದಿಕಾಲದಿಂದಲೂ ಪ್ರತಿಪಾದಿಸಲ್ಪಟ್ಟ ಭಾರತೀಯ ಸನಾತನ ಧರ್ವದರ್ಶದ ಮುಂದುವರಿದ ಭಾಗವಾಗಿ ‘ದೀನದೇವೋಭವ, ದರಿದ್ರದೇವೋಭವ, ಅಶಕ್ತದೇವೋಭವ, ರೋಗಿದೇವೋಭವ, ಮೂರ್ಖ ದೇವೋಭವ’ ಎಂಬ ನೂತನ ವೇದಾಂತವನ್ನು ನಮ್ಮ ಮುಂದಿರಿಸಿದರು.

    ಪ್ರಿಯ ಶಿಷ್ಯ ಅಳಸಿಂಗರಿಗೆ 1893ರಲ್ಲಿ ಬರೆದ ಪತ್ರದಲ್ಲಿ ಸ್ವಾಮೀಜಿ, ‘ಮಾನವನ ಉತ್ಕೃಷ್ಟತೆಯನ್ನು, ಮಾನವನ ಮಹಿಮೆಯನ್ನು ಹಿಂದೂಧರ್ಮ ಉಚ್ಛರೀತಿಯಲ್ಲಿ ಉದ್ಘೋಷಿಸುವಂತೆ ಜಗತ್ತಿನ ಮತ್ತಾ್ಯವ ಧರ್ಮವೂ ಹೇಳುವುದಿಲ್ಲ; ಹಿಂದೂಧರ್ಮದಲ್ಲಿ ದರಿದ್ರರನ್ನು, ದೀನರನ್ನು ತುಳಿಯುವಂತೆ ಮತ್ತಾವ ಧರ್ಮದಲ್ಲೂ ತುಳಿಯುವುದಿಲ್ಲ. ಇದು ಧರ್ಮದ ತಪ್ಪಲ್ಲವೆಂದು ಭಗವಂತನು ನನಗೆ ಮನವರಿಕೆ ಮಾಡಿಕೊಟ್ಟಿದ್ದಾನೆ. ನೈಜಕಾರಣಗಳೆಂದರೆ ಸಿದ್ಧಾಂತಗಳನ್ನು ವ್ಯಾವಹಾರಿಕ ಹಾಗೂ ಪಾರಮಾರ್ಥಿಕ ಎಂದು ವಿಭಾಗಿಸಿ ಇಂತಹ ಚಮತ್ಕಾರ ತಂತ್ರಗಳನ್ನೇ ಅಸ್ತ್ರಗಳನ್ನಾಗಿ ಬಳಸಿದ ಕಪಟಿಗಳು, ಆಷಾಢಭೂತಿಗಳು ಹಾಗೂ ಧರ್ವಂಧರ ಅಟ್ಟಹಾಸದ ಕುಕೃತ್ಯಗಳು ಇವು!’

    ಶ್ರೀ ಶಂಕರ ಭಗವತ್ಪಾದರು ಪ್ರತಿಯೊಬ್ಬ ಮಾನವನ ಉದ್ಧಾರಕ್ಕೆ ಧರ್ಮದ ಅವಶ್ಯಕತೆಯನ್ನು ಪ್ರಸ್ತಾಪಿಸುತ್ತ ಅಭ್ಯುದಯದೊಂದಿಗೆ ನಿಃಶ್ರೇಯಸದೆಡೆಗೆ ಪಯಣಿಸುವುದೇ ವಿಕಾಸ, ‘ದೇಯಂ ದೀನಜನಾಯ ಚ ವಿತ್ತಮ್ ದೀನದಲಿತರಿಗೆ ಕೈ ಎತ್ತಿ ದಾನ ಮಾಡಿ ಎಂದು ನಿರ್ದೇಶಿಸಿದರೆ ಶ್ರೀಮದ್ರಾಮಾನುಜರು ಉಚ್ಚ, ನೀಚರೆನ್ನದೆ ತಾನು ನರಕಕ್ಕೆ ಹೋದರೂ ಸರಿ, ಸರ್ವರಿಗೂ ಶ್ರೀ ನಾರಾಯಣ ಮಂತ್ರೋಪದೇಶ ನೀಡಲು ಮುಂದಾದದ್ದು ಇತಿಹಾಸ. ಮಹಾತ್ಮರೀರ್ವರ ಮಾತುಗಳಿಗೆ ಕನಿಷ್ಠ ಸಾವಿರ ವರ್ಷಗಳ ಇತಿಹಾಸವಿದೆ. ಆದ್ದರಿಂದ ಹಿಂದೂಧರ್ಮದ ಬಗ್ಗೆ ಅಧ್ಯಯನದ ಕೊರತೆ ಇರುವ, ಪೂರ್ವಗ್ರಹ ಪೀಡಿತ ಮನಸ್ಸುಗಳು ಪ್ರತಿಪಾದಿಸುವ ಹುರುಳಿಲ್ಲದ ಟೀಕೆಗಳಿಗೆ ಮಾನ್ಯತೆ ನೀಡುವುದಿರಲಿ, ಅವುಗಳನ್ನು ವಿಪರೀತವಾಗಿ ವಿಶ್ಲೇಷಿಸುವುದೂ ಅನಗತ್ಯ ಸಂಗತಿ ಆಗುತ್ತದೆ.

    ಭಾರತದ ಅವಳಿ ಆದರ್ಶಗಳಾದ ತ್ಯಾಗ ಮತ್ತು ಸೇವೆಯನ್ನು ಹೆಚ್ಚು ಹೆಚ್ಚು ಸಾರ್ವತ್ರಿಕಗೊಳಿಸಬೇಕೆಂದು ಹೋರಾಡಿದ ಸ್ವಾಮಿ ವಿವೇಕಾನಂದರು, ‘ದೋಷವಿರುವುದು ಧರ್ಮದಲ್ಲಲ್ಲ, ಜನರಲ್ಲಿ; ದೂಷಿಸಬೇಕಾದ್ದು ಧರ್ಮವನ್ನಲ್ಲ ಜನರನ್ನು’ ಎಂದು ನಿಖರವಾಗಿ ಪ್ರಸ್ತಾಪಿಸುತ್ತಾರೆ. ‘ಹಸಿದ ಹೊಟ್ಟೆಗೆ ಅನ್ನ ನೀಡದ, ವಿಧವೆಯ ಕಣ್ಣೀರನ್ನು ಒರೆಸದ ದೇವರಲ್ಲಾಗಲೀ, ಧರ್ಮದಲ್ಲಾಗಲೀ ನನಗೆ ನಂಬಿಕೆ ಇಲ್ಲ… ವ್ಯಕ್ತಿಯೊಬ್ಬ ಸಂತನಾಗಲು ಅವನ ಹಿಂದಿನ ಜನ್ಮಗಳ ಸಂಸ್ಕಾರಗಳ ಬಲವು ಕಾರಣವೆಂದಾದರೆ ಪಾಪಿಯಾದವನಿಗೂ ತನ್ನ ಬದುಕನ್ನು ತಿದ್ದಿಕೊಂಡು ಮಹೋನ್ನತಿಯನ್ನು ಸಾಧಿಸಲು ಅವಕಾಶಗಳಿರಲೇಬೇಕು’ ಎಂದು ಸಾರುತ್ತ ಧರ್ಮದ ಶುದ್ಧೀಕರಣ, ಪುಷ್ಟೀಕರಣ ಹಾಗೂ ಸ್ಪಷ್ಟೀಕರಣಕ್ಕೆ ಮುಂದಾಗಿದ್ದಾರೆ.

    ಭಾರತದ ಉಳಿವಿಗೆ ವೇದಾಂತವನ್ನು ಆಶ್ರಯಿಸಿದ ಮಾನವೀಯತೆಯೇ ಕಾರಣವೆಂದು ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು, ‘ಜಗತ್ತಿನ ಇತರ ನಾಗರಿಕತೆಗಳು ಸಮರ ಕಹಳೆಗಳನ್ನು ಊದುತ್ತ, ಪ್ರಚಂಡ ಸೇನಾಶಕ್ತಿಯ ಸಹಾಯದಿಂದ ತಮ್ಮ ಸಿದ್ಧಾಂತಗಳನ್ನು ಇತರರ ರಕ್ತದೋಕುಳಿಯಲ್ಲಿ ಸ್ಥಾಪಿಸಬಯಸಿದರೆ, ನನ್ನ ದೇಶವು ಸಹಸ್ರಾರು ವರ್ಷಗಳಿಂದ ಶಾಂತವಾಗಿ ಬಾಳಿದೆ, ಬಾಳುತ್ತ ಸಾಗಿದೆ. ಗ್ರೀಸ್ ಹುಟ್ಟುವುದಕ್ಕೆ ಮೊದಲು, ರೋಮ್ ದೇಶದ ಕಲ್ಪನೆಯೇ ಇಲ್ಲದಿದ್ದಾಗ, ಆಧುನಿಕ ಜನಾಂಗದ ಪೂರ್ವಜರು ಅರಣ್ಯಗಳಲ್ಲಿ ನೆಲೆಸಿ, ಕಾಡು ಮಾನವರಂತೆ ತಮ್ಮ ಶರೀರಕ್ಕೆ ಬಣ್ಣ ಲೇಪಿಸಿಕೊಳ್ಳುತ್ತಿದ್ದ ಕಾಲಘಟ್ಟದಲ್ಲೇ ಭಾರತ ಪ್ರಬುದ್ಧ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು…’ ಎಂದು ಸಮರ್ಥಿಸುತ್ತಾರೆ.

    ಸ್ವಾಮೀಜಿಯವರ ಮಾನವೀಯ ಅನುಕಂಪ ಅಗಾಧ. ಸೇವಾತತ್ತ್ವ ಕುರಿತಾದ ಅವರ ನಿಲುವು ಇಡೀ ವಿಶ್ವದ ಕಣ್ಣು ತೆರೆಸಿದೆ. ಅಮೆರಿಕಾದ ಶ್ರೀಮಂತ ಜಾನ್.ಡಿ. ರಾಕ್​ಫೆಲ್ಲರನಿಗೆ ಹೇಳುತ್ತಾರೆ: ‘ಸಮಾಜವಿರುವುದು, ಸಂಪತ್ತಿರುವುದು ಸ್ವಕೇಂದ್ರಿತ ಸುಖಕ್ಕಾಗಿ ಎಂಬ ಭ್ರಮೆಯಿಂದ ಮೊದಲು ಹೊರಗೆ ಬಾ. ಭಗವಂತನ ಆಸ್ತಿಗೆ ನೀನು ಧರ್ಮದರ್ಶಿಯೇ ಹೊರತು ನಿನ್ನ ಆಸ್ತಿಯು ನಿನ್ನದಷ್ಟೇ ಅಲ್ಲ. ಸೇವೆ ಎಂಬುದು ಭಾವುಕತೆಯಲ್ಲ, ಜೀವನದ ದೃಷ್ಟಿಕೋನ. ಸೇವೆ ಮಾಡುವವನು ಸೇವೆ ಪಡೆಯುವವನಿಗೆ ಋಣಿಯಾಗಿರಬೇಕೆಂಬ ಆದರ್ಶ ಎಂದೂ ನಿನ್ನ ನೆನಪಿನಲ್ಲಿರಲಿ…’

    ಅಮೆರಿಕದ ಶಿಷ್ಯೆ ಮೇರಿ ಹೇಲ್​ರವರಿಗೆ ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಸ್ವಾಮೀಜಿಯವರ ಪತ್ರಗಳಿಂದ ಅವರ ಆಂತರ್ಯದಲ್ಲಿ ಅಮೆರಿಕ ಹಾಗೂ ಭಾರತದ ಅಭ್ಯುದಯವು ಒಂದೇ ನಾಣ್ಯದ ಎರಡು ಮುಖಗಳಾಗಿದ್ದ ಸ್ಪಷ್ಟತೆಯ ಅರಿವಾಗುತ್ತದೆ.

    ಮೊದಲ ಪತ್ರದಲ್ಲಿ ಸ್ವಾಮೀಜಿ,”I had to work till I am at death’s door and had to spend nearly the whole of that energy in America, so that Americans may learn to be more broader and more spiritual’ ಎಂದಿದ್ದಾರೆ.

    ಎರಡನೇ ಪತ್ರದಲ್ಲಿ ಸ್ವಾಮೀಜಿ, ‘ಸೋದರಿ, ನಾನು ಬಂದ ಕೆಲಸ ನೆರವೇರಿತೆಂದು ತಿಳಿದಿದ್ದೇನೆ. ನಾನು ಹೆಚ್ಚೆಂದರೆ ಇನ್ನು ಮೂರ್ನಾಲ್ಕು ವರ್ಷಗಳು ಮಾತ್ರ ಬದುಕಿರಬಹುದೆಂದೆನಿಸುತ್ತದೆ. ಆತ್ಮಮುಕ್ತಿಯ ಅಪೇಕ್ಷೆಯೂ ಈಗ ನನ್ನಲ್ಲಿ ಉಳಿದಿಲ್ಲ. ನಾನು ಎಂದೂ ಸಹಾ ಐಹಿಕ ಸುಖಗಳ ಆಸೆಬುರುಕನಾಗಿರಲಿಲ್ಲ. ಮಾನವರೆಲ್ಲರ ಒಳಿತಿಗಾಗಿ ಕೆಲಸ ಮಾಡಲು ಯೋಗ್ಯನಾಗುವಂತೆ ನನ್ನ ದೈಹಿಕ ಆರೋಗ್ಯದ ಕಡೆಗೆ ಗಮನ ಹರಿಸುತ್ತಿದ್ದೇನೆ. ವಿಶ್ವದ ಶ್ರೇಯಸ್ಸಿಗಾಗಿ, ಕೊನೆಯ ಪಕ್ಷ ನನ್ನ ಭಾರತದಲ್ಲಿ ಯಾವ ಶಕ್ತಿಯೂ ಹಿಮ್ಮೆಟ್ಟಿಸಲು ಅಸಾಧ್ಯವಾಗಬಹುದಾದ ಕಾರ್ಯವನ್ನು ಸಾಧಿಸಿ, ಮುಂದೇನಾಗುವುದೆಂದು ಲೆಕ್ಕಿಸದೆ ವಿಶ್ರಮಿಸಬಯಸುತ್ತೇನೆ. ಅಲ್ಲದೆ ಅಸ್ತಿತ್ವದಲ್ಲಿರುವ ಏಕಮಾತ್ರ ದೇವರಾದ, ನಾನು ನಂಬುವ ಏಕೈಕ ದೈವ, ಸಮಸ್ತ ಜನರ ಆತ್ಮಗಳ ಸಮಷ್ಟಿ ಎಂದೆನಿಸಿರುವ ದೇವರನ್ನು ಪೂಜಿಸಲು ಸೂಕ್ತವಾಗುವಂತೆ, ದುಷ್ಟರಲ್ಲಿ, ದುಃಖಿತರಲ್ಲಿ, ಬಡವರಲ್ಲಿ, ಸಮಸ್ತ ಜೀವಜಂತುಗಳಲ್ಲಿನ ನನ್ನ ವಿಶಿಷ್ಟ ದೇವರನ್ನು ಪೂಜಿಸುವುದಕ್ಕಾಗಿ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ, ಸಾವಿರ ವಿಧದ ಯಾತನೆಗಳನ್ನು ಅನುಭವಿಸಲು ಸಿದ್ಧನಿದ್ದೇನೆ…’

    ಸ್ವಾಮಿ ವಿವೇಕಾನಂದರ ಅಭಿಪ್ರಾಯಗಳಲ್ಲಿ ಸಮಷ್ಟಿ ಪ್ರಜ್ಞೆ ಎದ್ದು ಕಾಣುತ್ತದೆ. ‘Everyone should be alive towards the need of the society’ ಎಂದು ಸಾರಿ ಹೇಳಿದ ಅವರು ಸಂಕುಚಿತ ಜೀವನ ಮೃತಪ್ರಾಯವಾಗಿದ್ದು ಐಷಾರಾಮಿ ಜೀವನವೇ ಸಂಕುಚಿತತೆಯ ಉಗಮಕ್ಕೆ ಕಾರಣ ಎನ್ನುತ್ತಾರೆ. ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಕಣ್ಮರೆಯಾದಾಗ ಸಾರ್ವಜನಿಕ ಜೀವನ ದುರ್ಬಲವಾಗುತ್ತದೆಯೆಂದು ಎಚ್ಚರಿಸುತ್ತಾರೆ. ಗಾಜಿನ ಪೆಟ್ಟಿಗೆಯೊಳಗಿನ ಸತ್ಯ ಎಷ್ಟೇ ಸುರಕ್ಷಿತವಾದರೂ ಅಲ್ಲಿ ಸ್ವತಂತ್ರ ಬೆಳವಣಿಗೆ ಹಾಗೂ ವಿಕಸನ ಕನಸಿನ ಮಾತು ಎಂದು ಅಭಿಪ್ರಾಯಿಸುತ್ತಾರೆ. ಮಾನವ ನಿರ್ಮಾಣ ಮೌಲ್ಯವನ್ನು ನಾವು ಸಾಧಿಸಿದಾಗ ಅದು ಸಮಾಜನಿರ್ವಣದತ್ತ ನಮ್ಮನ್ನು ಯಶಸ್ವಿಯಾಗಿ ಕೊಂಡೊಯ್ಯುತ್ತದೆ ಎಂದು ತಿಳಿಹೇಳುತ್ತಾರೆ.

    ಜಗತ್ತಿನಲ್ಲಿ ಸಮಾಜವಾದದ ಪ್ರತಿಪಾದನೆ ಕಳೆದ ಕೆಲವು ಶತಮಾನಗಳಿಂದ ಫ್ಯಾಷನ್ ಆಗಿದೆ. ಸಮಾಜವಾದ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲು ನಾವು ಹಲವಾರು ಕ್ರಾಂತಿಗಳನ್ನು ಕಂಡಿದ್ದೇವಷ್ಟೇ. ಆದರೆ ಬಹಳಷ್ಟು ಕ್ರಾಂತಿಗಳು ಹಿಂಸೆ, ರಕ್ತಪಾತ ಮತ್ತು ಮಾರಣಹೋಮಗಳಿಗೆ ಎಡೆಮಾಡಿಕೊಟ್ಟಿವೆ. ವೇದಾಂತವನ್ನು ಆಧರಿಸಿದ ಸಮಾಜವಾದತತ್ತ್ವವು ಎಂದಿಗೂ ಹಿಂಸಾತ್ಮಕ ಕ್ರಾಂತಿಗಳಿಗೆ ಪ್ರಾಶಸ್ತ್ಯ ನೀಡದೆ ಶಾಂತಿಯುತವಾದ ‘ಶೀಲಕ್ರಾಂತಿ’ಗೆ ದಾರಿಮಾಡಿಕೊಟ್ಟಿದೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ‘ಆತ್ಮಜಾಗೃತಿಯನ್ನು ಸಾಧಿಸುವ ಮಾನಸಿಕ ಕ್ರಾಂತಿಯೇ ನಿಜಾರ್ಥದಲ್ಲಿ ಕ್ರಾಂತಿ’ ಎಂದಿದ್ದಾರೆ. ಮಾನವೀಯ ಸಂಬಂಧ, ಮಾನವೀಯ ಸಂಸ್ಥೆಗಳನ್ನು ನಿಯಂತ್ರಿಸುವ ನೈತಿಕ-ಆಧ್ಯಾತ್ಮಿಕ ಕ್ರಾಂತಿ ಇದಾಗಿದ್ದು ಇದನ್ನು ಅದ್ವೈತ ತತ್ತಾ್ವನುಷ್ಠಾನದಿಂದ ಸಾಧಿಸಬಹುದೆಂದು ಸ್ವಾಮೀಜಿ ತಿಳಿಸಿದ್ದಾರೆ.

    ನಿಜ! ನೈತಿಕತೆ ಹಾಗೂ ಅನೈತಿಕತೆಗಳನ್ನು ನಿರ್ಧರಿಸುವ ಅಳತೆಗೋಲೇ

    ನಿಃಸ್ವಾರ್ಥತೆ. ಬದುಕಿನಲ್ಲಿ ಹಣದ ಅವಶ್ಯಕತೆ ಅದೆಷ್ಟೇ ಇದ್ದರೂ ಬದುಕಿನ ಯಾವುದೇ ಹಂತದಲ್ಲೂ ವ್ಯಾವಹಾರಿಕ ಮೌಲ್ಯ ಪಾರಮಾರ್ಥಿಕವಾದ ಮಾನವೀಯ ಮೌಲ್ಯಗಳನ್ನು ಹಿಂದಿಕ್ಕಿ ಮುನ್ನಡೆದಾಗ ಅಪಾಯ ಕಟ್ಟಿಟ್ಟ ಬುತ್ತಿ, ಅಲ್ಲವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts