More

    ವಿಟ್ಲಕ್ಕೆ ಬೇಕು ಮೂಲಸೌಕರ್ಯ

    ವಿಟ್ಲ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಐದು ವರ್ಷಗಳಾದರೂ ವಿಟ್ಲದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ರಸ್ತೆ ಸೇರಿ ಅತೀ ಅಗತ್ಯವಾದ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
    ಗ್ರಾಮ ಪಂಚಾಯಿತಿಯಾಗಿದ್ದ ವಿಟ್ಲವನ್ನು 2015 ಏಪ್ರಿಲ್‌ನಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಗ್ರಾಮ ಪಂಚಾಯಿತಿಗಿಂತ ಅಧಿಕ ಅನುದಾನಗಳು ಪಟ್ಟಣಕ್ಕೆ ಬರುತ್ತದೆ. ಕಟ್ಟಕಡೆಯ ವ್ಯಕ್ತಿಗೂ ಇದರ ಪ್ರಯೋಜನಗಳು ಲಭಿಸಲಿವೆ. ಬಡವನ ಮನೆವರೆಗೂ ಮೂಲಸೌಕರ್ಯಗಳು ಸಿಗಲಿದೆ ಎಂಬ ಆಶಾಭಾವನೆ ಪ್ರತಿಯೊಬ್ಬರಲ್ಲಿ ಮೂಡಿತ್ತು.

    ಅಪ್ಪರಿಪಾದೆಯಿಂದ ಕಾಶಿಮಠ ಸಂಪರ್ಕ ಕಲ್ಪಿಸುವ ರಸ್ತೆಯ ಫಲಾನುಭವಿಗಳು ತೀರಾ ಬಡವರಾಗಿದ್ದು, ರಸ್ತೆ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುವಷ್ಟು ಶಕ್ತರಾಗಿಲ್ಲ. ಇದೇ ರಸ್ತೆ ಉಕ್ಕುಡ ಆಲಂಗಾರು ಭಾಗಕ್ಕೂ ಸಂಪರ್ಕ ಕಲ್ಪಿಸುವಂತಿದ್ದು, ಅಭಿವೃದ್ಧಿಯಾದರೆ ಆ ಭಾಗದ ಜನರಿಗೂ ಪೇಟೆಯ ಸಂಪರ್ಕ ಸುಲಭವಾಗುತ್ತದೆ. ವಿಟ್ಲ ಕಾಸರಗೋಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಪ್ಪೆರಿಪಾದೆಯಿಂದ ಒಳ ಸಾಗುವ ಕಾಶಿಮಠ ಅಪ್ಪೆರಿಪಾದೆ ರಸ್ತೆಯ 25ಕ್ಕೂ ಅಧಿಕ ಮನೆ ಮಂದಿ 1 ಕಿ.ಮೀ. ದೂರದವರೆಗೆ ನಡೆದು ಸಾಗುವ ಪರಿಸ್ಥಿತಿ ಇದೆ. 10 ವರ್ಷಗಳಿಂದ ಈ ಭಾಗಕ್ಕೆ ಸೂಕ್ತ ರಸ್ತೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದ್ದು, ಭರವಸೆಯಾಗಿಯೇ ಉಳಿದುಕೊಂಡಿದೆ.

    ಮಾಜಿ ಉಪಾಧ್ಯಕ್ಷರ ವಾರ್ಡ್!: ಸ್ಥಳೀಯ ಪಂಚಾಯಿತಿ ಸದಸ್ಯರು ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿದ್ದರೂ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸುಮಾರು ಎರಡೂವರೆ ವರ್ಷಗಳ ಕಾಲ ವಾರ್ಡ್ ಸದಸ್ಯರು ಉಪಾಧ್ಯಕ್ಷರಾಗಿದ್ದಾಗಲೂ ಈ ರಸ್ತೆ ಕ್ರಿಯಾಯೋಜನೆಗೆ ಸೇರ್ಪಡೆಯಾಗಿಲ್ಲ.

    ವಾಹನ ಸಂಚಾರಕ್ಕೆ ಸಮಸ್ಯೆ: ರಸ್ತೆಯ ಮಧ್ಯದಲ್ಲಿ ಕಲ್ಲುಗಳು ಎದ್ದು ನಿಂತಿದ್ದು, ವಾಹನಗಳ ಚಕ್ರ ಹೋಗುವ ಸಮಯದಲ್ಲಿ ಜಾರುವುದು ಹಾಗೂ ಅಡಿ ತಾಗಿ ಹಾನಿಗೊಳಗಾಗುತ್ತಿದೆ. ದ್ವಿಚಕ್ರ ವಾಹನಗಳು ಕಷ್ಟದಲ್ಲಿ ಹೋಗುವುದು ಬಿಟ್ಟರೆ, ತುರ್ತು ಸಂದರ್ಭದಲ್ಲೂ ವಾಹನ ಸಾಗಲಾಗದಷ್ಟು ರಸ್ತೆ ಹದೆಗೆಟ್ಟು ಹೋಗಿದೆ.

    ಕಾಂಕ್ರೀಟ್ ಬಿರುಕು!: ಕೆಲವು ವರ್ಷಗಳ ಹಿಂದೆ ತೀರಾ ಕಡಿದಾಗಿದ್ದ ರಸ್ತೆಗೆ ಕೆಲವು ಮೀಟರ್ ದೂರಕ್ಕೆ ಕಾಂಕ್ರೀಟ್ ಅಳವಡಿಸಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಕೆಲವೇ ಸಮಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈಗ ಕಾಂಕ್ರೀಟ್ ಆಗಿದ್ದೂ ಪ್ರಯೋಜನಕ್ಕೆ ಇಲ್ಲದ ಹಾಗಾಗಿದೆ.

    10 ಲಕ್ಷ ರೂ. ಅನುದಾನ ಇದೆ?: ಸ್ಥಳೀಯ ಸದಸ್ಯರು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ 10 ಲಕ್ಷ ರೂ. ಅನುದಾನವಿದೆ. ಕೆಲವೇ ದಿನದಲ್ಲಿ ರಸ್ತೆ ಕಾಂಕ್ರೀಟ್‌ಗೊಳ್ಳಲಿದೆ ಎಂದು ರಸ್ತೆಯ ಬಗ್ಗೆ ಪ್ರಶ್ನಿಸುವ ಸ್ಥಳೀಯ ಜನರಿಗೆ ಭರವಸೆ ನೀಡುತ್ತಿದ್ದಾರೆನ್ನಲಾಗಿದೆ. ಆದರೆ ಅಧಿಕಾರಿಗಳ ಪ್ರಕಾರ ಈ ರಸ್ತೆಗೆ ಯಾವುದೇ ಅನುದಾನಗಳೂ ಕ್ರಿಯಾಯೋಜನೆಯಲ್ಲಿ ನೀಡಿಲ್ಲ.

    ಊರಿನವರ ನೆರವಿನಲ್ಲಿ ಕಲ್ಲು ಮಣ್ಣು: ಮುಖ್ಯ ರಸ್ತೆಯಿಂದ ಇಳಿಜಾರಾಗಿರುವ ರಸ್ತೆಯಲ್ಲಿ ಸಣ್ಣ ತೊರೆಯೊಂದು ಇದ್ದು, ಇದಕ್ಕೆ ಸ್ಥಳೀಯರ ನೆರವಿನಲ್ಲಿ ಕಟ್ಟ ನಿರ್ಮಾಣ ಮಾಡಲಾಗಿತ್ತು. ಸ್ಥಳೀಯರೇ ಹಣ ಸಂಗ್ರಹಿಸುವ ಮೂಲಕ ರಸ್ತೆಯ ಇಕ್ಕೆಲಗಳಿಗೆ ಮಣ್ಣು ತುಂಬಿಸಲಾಗಿತ್ತು. ಆ ಬಳಿಕ ಒಂದು ಮೋರಿಯನ್ನು ಈ ಭಾಗದಲ್ಲಿ 2 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ್ದು ಬಿಟ್ಟರೆ ಬೇರಾವ ಕಾರ್ಯವೂ ಮಾಡಿಲ್ಲ.

    ಪಟ್ಟಣ ಪಂಚಾಯಿತಿ ಭಾಗದಲ್ಲಿ ಪ್ರತಿ ರಸ್ತೆಯೂ 6 ಮೀಟರ್ ಅಗಲವಿರಬೇಕಾಗಿದೆ. ಅಪ್ಪೆರಿಪಾದೆ ಭಾಗಕ್ಕೆ 2 ಲಕ್ಷ ರೂ. ವೆಚ್ಚದಲ್ಲಿ ಮೋರಿ ನಿರ್ಮಾಣವಾಗಿದ್ದು ಬಿಟ್ಟರೆ ಬೇರಾವ ಅನುದಾನವೂ ಈ ಭಾಗಕ್ಕೆ ಲಭ್ಯವಿಲ್ಲ. ಸ್ಥಳೀಯ ಸದಸ್ಯರಿಂದ ಬೇಡಿಕೆ ಇದ್ದರೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
    – ಮಾಲಿನಿ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts