More

    ಮುರುವ ಓಟೆಪಡ್ಪು ರಸ್ತೆ ಅಭಿವೃದ್ಧಿ ಶೂನ್ಯ: ತಿರುವುಗಳಲ್ಲಿ ಕಾಂಕ್ರೀಟ್ ಇಲ್ಲ, ತಡೆಗೋಡೆಗಳೂ ಇಲ್ಲ

    ನಿಶಾಂತ್ ಬಿಲ್ಲಂಪದವು ವಿಟ್ಲ
    ಕರ್ನಾಟಕದಿಂದ ಕೇರಳವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಒಂದಾಗಿರುವ ಮುರುವ ಓಟೆಪಡ್ಪು ಕೊಮ್ಮುಂಜೆ ರಸ್ತೆ ಅಭಿವೃದ್ಧಿ ಶೂನ್ಯವಾಗಿದೆ. ಅಲ್ಲಲ್ಲಿ ಕಾಮಗಾರಿ ನಡೆಸಿದರೂ ಅಗತ್ಯ ಇರುವ ತಿರುವು ಮುರುವುಗಳಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಕೆಲಸ ನಡೆದ ಸ್ಥಳದಲ್ಲಿ ತಡೆಗೋಡೆಗಳಿಲ್ಲ.

    ಕರ್ನಾಟಕದ ಕೊನೆಯ ಭಾಗ ಮಾಣಿಲ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬ ನಿಟ್ಟಿನಲ್ಲಿ ಪೆರುವಾಯಿಯ ಭಾಗವಾಗಿದ್ದ ಮಾಣಿಲವನ್ನು ಪ್ರತ್ಯೇಕ ಪಂಚಾಯಿತಿಯಾಗಿ ಘೋಷಣೆ ಮಾಡಲಾಯಿತು. ಪ್ರತ್ಯೇಕ ಮಾಣಿಲ ಪಂಚಾಯಿತಿಯ ಕೆಲವು ಭಾಗದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ವೇಗ ಪಡೆದಿಲ್ಲ. ಪೆರುವಾಯಿ- ಪಕಳಕುಂಜ ರಸ್ತೆಯ ಮುರುವದಿಂದ ಓಟೆಪಡ್ಪು ಮೂಲಕ ಕೇರಳದ ಕನಿಯಾಲ ಹಾಗೂ ಕಡೆಂಗೋಡ್ಲು ಮೂಲಕ ಬಳ್ಳೂರು ಭಾಗವನ್ನು ಅತಿ ಶೀಘ್ರದಲ್ಲಿ ಸಂಪರ್ಕಿಸಬಹುದು. ತೀರಾ ಹಿಂದುಳಿದ ಭಾಗವಾಗಿರುವುದರಿಂದ ಶಾಸಕರ ವಿಶೇಷ ಅನುದಾನಗಳ ಮೂಲಕ ಕೆಲವು ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿದ್ದರೂ ರಸ್ತೆ ಬದಿಗಳಲ್ಲಿ ತಡೆಗೋಡೆ ಇಲ್ಲದೆ ಅಪಾಯ ಆಹ್ವಾನಿಸುತ್ತಿದೆ.

    ವರ್ಷದ ಹಿಂದಿನ ಕಾಂಕ್ರೀಟ್ ಬಿರುಕು: ಸಮಾಜ ಕಲ್ಯಾಣ ಇಲಾಖೆಯ ಅನುದಾನದ ಮೂಲಕ ವರ್ಷದ ಹಿಂದೆ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿ ಪರಿಣಾಮ ಹಲವೆಡೆ ಬಿರುಕು ಕಾಣಿಸಿಕೊಂಡಿವೆ. ಅದನ್ನು ಸರಿಪಡಿಸುವ ಗೋಜಿಗೆ ಸ್ಥಳೀಯಾಡಳಿತ ಹೋಗಿಲ್ಲ ಎಂಬುದು ನಾಗರಿಕರ ಆಕ್ರೋಶ.

    ನೆಕ್ಕರೆಯಲ್ಲಿ ಸಮಸ್ಯೆಗಳ ಸರಮಾಲೆ: ಮುರುವ ಇಳಿಜಾರು ಪ್ರದೇಶ ಮುಗಿಯುತ್ತಿದ್ದಂತೆ ಮೋರಿ ಅಳವಡಿಸುವ ನಿಟ್ಟಿನಲ್ಲಿ ರಸ್ತೆಯನ್ನು ಇಬ್ಭಾಗ ಮಾಡಲಾಗಿದ್ದು, ಮೋರಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಮುಂದೆ ತೋಟವೊಂದರ ಭಾಗದಲ್ಲಿ ತಡೆಗೋಡೆ ಇಲ್ಲದೆ ರಸ್ತೆ ನಿರ್ಮಿಸಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೀಡಾಗುವ ಸಾಧ್ಯತೆ ಇದೆ.

    ಹಿಮ್ಮುಖ ತಿರುವಿಗೆ ಕಾಯಕಲ್ಪವಿಲ್ಲ: ಹಿರಿಯ ಹೋರಾಟಗಾರ ಮುರುವ ಮಹಾಬಲ ಭಟ್ ಅವರ ಮನೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಎರಡು ಅಪಾಯಕಾರಿ ತಿರುವುಗಳಿದ್ದು, ಡಾಂಬರು ಕಿತ್ತುಹೋಗಿ ಗುಂಡಿಗಳು ನಿರ್ಮಾಣವಾಗಿವೆ. ಡಾಂಬರು ಹಾಕದೆ ಜಲ್ಲಿಯ ಮೇಲೆ ಮಣ್ಣು ಹಾಕಿದ್ದರಿಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲದಿನಗಳ ಹಿಂದೆ ಇಲ್ಲಿ ಲಾರಿಯೊಂದು ಬಾಕಿಯಾಗಿ ಇತರ ವಾಹನಗಳ ಓಡಾಟಕ್ಕೂ ಸಮಸ್ಯೆಯಾಗಿತ್ತು.

    ಮುರುವ ಓಟೆಪಡ್ಪು ರಸ್ತೆ ಜಿಲ್ಲಾ ಪಂಚಾಯಿತಿ ರಸ್ತೆಯಾಗಿದ್ದು, ತಡೆಗೋಡೆ ಇಲ್ಲದೆ ಅಪಾಯ ಆಹ್ವಾನಿಸುತ್ತಿರುವ ವಿಚಾರ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಹಿಂದಿನ ಯೋಜನೆಯಲ್ಲಿ ಅನುದಾನಗಳು ಇಲ್ಲದೆ ಹೋದಲ್ಲಿ ಪಂಚಾಯಿತಿ ಅನುದಾನದಲ್ಲಿ ಕಾಮಗಾರಿ ನಡೆಸಲಾಗುವುದು.
    -ಅಶೋಕ್ ಮಾಣಿಲ ಪಿಡಿಒ 

    ರಸ್ತೆ ಕಾಂಕ್ರೀಟ್ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ನಡೆಸಿದ್ದು, ಕಾಗದ ಪತ್ರಗಳ ಸಮಸ್ಯೆಯಿಂದ ತಡೆಗೋಡೆ ಕಾಮಗಾರಿ ಬಾಕಿಯಾಗಿದೆ. ಸ್ಥಳೀಯ ಜಾಗದ ಮಾಲೀಕರಲ್ಲಿ ಮಾತುಕತೆ ನಡೆಸಿ ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
    -ಜಗದೀಶ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts