More

    ವಿಶ್ವೇಶ್ವರಯ್ಯ ನಾಲೆಗೆ ತಡೆಗೋಡೆ ನಿರ್ಮಾಣ

    ಪಾಂಡವಪುರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಭದ್ರಪಡಿಸಿದರಂತೆ’ ಎಂಬ ಗಾದೆ ಮಾತಿನಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಬಿದ್ದು ಐವರು ಪ್ರಾಣ ಕಳೆದುಕೊಂಡ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ.

    ಪಾಂಡವಪುರ ತಾಲೂಕಿನ ಬನ್ನಘಟ್ಟ ಸಮೀಪದ ತಿರುವಿನಲ್ಲಿರುವ ವಿಶ್ವೇಶ್ವರಯ್ಯ ನಾಲೆ ಸೇತುವೆ ಬಳಿ ಅಪಘಾತ ಸಂಭವಿಸಿರುವುದು ಇದೇ ಮೊದಲೇನಲ್ಲ. ಈ ಸ್ಥಳದಲ್ಲಿ ಅನೇಕ ಅಪಘಾತಗಳು ಸಂಭವಿಸಿ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಾರು ನಾಲೆಗೆ ಉರುಳಿ ಬಿದ್ದು ಐವರು ಜಲ ಸಮಾಧಿಯಾಗುವ ಮೂರ‌್ನಾಲ್ಕು ದಿನಗಳ ಹಿಂದೆ ಇದೇ ಜಾಗದಲ್ಲಿ ಟ್ಯಾಂಕರ್ ಉರುಳಿ ಬಿದ್ದಿತ್ತು. ಅದೃಷ್ಟವಶಾತ್ ನಾಲೆಯಲ್ಲಿ ನೀರಿಲ್ಲದ ಕಾರಣ ಟ್ಯಾಂಕರ್ ಚಾಲಕ ಬದುಕುಳಿದಿದ್ದ. ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಸೇತುವೆಯ ಕೆಲವು ಮೀಟರ್‌ಗಳಷ್ಟು ತಡೆಗೋಡೆ ಕುಸಿದಿತ್ತು. ಟ್ಯಾಂಕರನ್ನು ಕ್ರೇನ್ ಮೂಲಕ ಕಾಲುವೆಯಿಂದ ಮೇಲೆತ್ತುವ ಸಂದರ್ಭದಲ್ಲಿ ಅವಘಡ ಸಂಭವಿಸದಂತೆ ನಾಲೆಗೆ ಅಡ್ಡಲಾಗಿ ಸುರಿದಿದ್ದ ಮಣ್ಣನ್ನು ಹಿಂದಕ್ಕೆ ಸರಿಸಲಾಗಿತ್ತು. ಈ ಘಟನೆ ನಡೆದ ಮರುದಿನವೇ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತು ಅಂದೇ ಅಗತ್ಯ ಕ್ರಮಗಳನ್ನು ಕೈಗೊಂಡು ತಡೆಗೋಡೆ ನಿರ್ಮಿಸಿ ಟ್ಯಾಂಕರ್ ಉರುಳಿ ಬಿದ್ದಿದ್ದ ಸ್ಥಳದಲ್ಲಿ ನಾಲೆ ಏರಿಗೆ ಮಣ್ಣು ಸುರಿದು ಎತ್ತರಗೊಳಿಸಿದ್ದರೆ ಕಾರು ನಾಲೆಗೆ ಉರುಳುವ ಪ್ರಮೇಯವೇ ಬರುತ್ತಿರಲಿಲ್ಲ.

    ಶಾಸಕರ ಎಚ್ಚರಿಕೆ: ಕಾಲುವೆಗೆ ಕಾರು ಉರುಳಿ ಐವರು ಜಲಸಮಾಧಿಯಾಗಲು ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವೂ ಒಂದು ಕಾರಣ ಎಂಬುದು ಅವಘಡ ಸಂಭವಿಸಿದ ದಿನ ಘಟನಾ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರ ಆರೋಪವಾಗಿತ್ತು. ಘಟನೆ ನಡೆದ ಮರುದಿನವೇ ಅಧಿಕಾರಿಗಳ ಸಭೆ ನಡೆಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಇದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಒಂದೇ ದಿನದಲ್ಲಿ ಘಟನಾ ಸ್ಥಳದ ರಸ್ತೆಯಲ್ಲಿ ಹಂಪ್, ಕ್ರಾಸ್ ಬ್ಯಾರಿಯರ್ ಹಾಗೂ ಸೇತುವೆಗೆ ತಡೆಗೋಡೆ ನಿರ್ಮಿಸುವ ಜತೆಗೆ ನಾಲಾ ಏರಿಗೆ ಮಣ್ಣು ಸುರಿದು ಎತ್ತರಗೊಳಿಸಿದ್ದಾರೆ.

    ಶಾಶ್ವತ ಪರಿಹಾರ ಸಿಕ್ಕಿಲ್ಲ: ಕೆಆರ್‌ಎಸ್ ಅಣೆಕಟ್ಟೆಯ ಅಚ್ಚುಕಟ್ಟಿಗೆ ನೀರೊದಗಿಸುವ ವಿಶ್ವೇಶ್ವರಯ್ಯ ನಾಲೆ, ಸಿಡಿಎಸ್, ವಿರಿಜಾ ಹಾಗೂ ಇದರ ಉಪನಾಲೆಗಳಿಗೆ ಸಾಕಷ್ಟು ಕಡೆ ತಡೆಗೋಡೆ ನಿರ್ಮಾಣವಾಗಿಲ್ಲ. ಅಪಘಡಗಳು ಸಂಭವಿಸಿದಾಗ ಘಟನೆ ನಡೆದ ಸ್ಥಳದಲ್ಲಿ ಒಂದಷ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸಿ ಕೈತೊಳೆದುಕೊಳ್ಳುವ ಕೆಲಸ ಅಧಿಕಾರಿಗಳಿಂದ ಆಗುತ್ತಿದೆ. ಆದರೆ ಈವರೆಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದರಿಂದ ಅಪಘಾತಗಳು ಮರುಕಳಿಸುತ್ತಲೇ ಇರುತ್ತದೆ. 2010ರಲ್ಲಿ ನಡೆದ ಉಂಡಬತ್ತಿ ಕೆರೆ ದುರಂತ, 2018ರ ನ.24ರಂದು ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿ ಬಿದ್ದು 30 ಜನ ಪ್ರಾಣ ಕಳೆದುಕೊಂಡ ನಂತರವೂ ನಾಲೆಗಳು ಮತ್ತು ಕೆರೆ ಏರಿಗಳ ಮೇಲೆ ವಾಹನ ಸಂಚಾರ ಇರುವ ಕಡೆಗಳಲ್ಲಿ ತಡೆಗೋಡೆ ನಿರ್ಮಿಸುವ ಕೆಲಸವಾಗಿಲ್ಲ.

    ಕೆಆರ್‌ಎಸ್‌ನಿಂದ ಪಾಂಡವಪುರ ಮೂಲಕ ಮಂಡ್ಯ, ಮದ್ದೂರು ತಲುಪುವ ವಿಶ್ವೇಶ್ವರಯ್ಯ ನಾಲೆಯ ಪ್ರಮುಖ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸುವ ಕೆಲಸವಾಗಬೇಕಿದೆ. ಹುಲಿಕೆರೆ ಸುರಂಗ ನಾಲೆಯ ಇಕ್ಕೆಲಗಳಲ್ಲಿಯೂ ತಡೆಗೋಡೆ ನಿರ್ಮಾಣವಾಗಬೇಕು. ಅದೇ ರೀತಿ ಸಿಡಿಎಸ್ ನಾಲೆಯ ಏರಿಗಳಲ್ಲಿ ಅಗತ್ಯವಿರುವ ಎಲ್ಲೆಡೆ ತಡೆಗೋಡೆ ನಿರ್ಮಿಸುವ ಬಹು ದೊಡ್ಡ ಯೋಜನೆಯನ್ನು ಸರ್ಕಾರ ಕೈಗೊಳ್ಳಬೇಕಿದೆ. ಇಲ್ಲವಾದರೆ ಇಂತಹ ದುರಂತಗಳಿಗೆ ಅಮಾಯಕ ಜನರು ಬಲಿಯಾಗಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts