More

    ಬೀದಿಗೆ ಬಿದ್ದ ಕ್ವಾರಿ ಕಾರ್ಮಿಕರ ಬದುಕು

    ಪಾಂಡವಪುರ: ಕೆಆರ್‌ಎಸ್ ಅಣೆಕಟ್ಟೆ ಸಮೀಪವಿರುವ ಬೇಬಿ ಬೆಟ್ಟ ಕಾವಲ್ ಪ್ರದೇಶದ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ಗಣಿಗಾರಿಕೆ ಮೇಲೆಯೇ ಅವಲಂಬಿತರಾಗಿ ಜೀವನ ಕಟ್ಟಿಕೊಂಡಿದ್ದ ಸಾವಿರಾರು ಕ್ವಾರಿ ಕಾರ್ಮಿಕರ ಬದುಕು ಇದೀಗ ಬೀದಿಗೆ ಬಿದ್ದಿದೆ.

    ಕೆಆರ್‌ಎಸ್ ಅಣೆಕಟ್ಟೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಲಕ್ಷಾಂತರ ಎಕರೆಗೆ ನೀರೊದಗಿಸುವ ಜತೆಗೆ ಬೆಂಗಳೂರು, ಮೈಸೂರು ನಗರಗಳಿಗೆ ಕುಡಿಯುವ ನೀರು ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿರುವ ಅಣೆಕಟ್ಟೆ ಶತಾಯುಷ್ಯದ ಕಡೆ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ ಅಣೆಕಟ್ಟೆಗೆ ಕಿಂಚಿತ್ತು ಅಪಾಯ ಸಂಭವಿಸದಂತೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕಿದೆ. 2018ರ ಸೆ.25ರಲ್ಲಿ ಭೂಕಂಪನದ ಅನುಭವವಾಗಿತ್ತು. ಇದರ ತೀವ್ರತೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಅಳವಡಿಸಿದ್ದ ರಿಕ್ಟರ್ ಮಾಪನದಲ್ಲಿ ದಾಖಲಾಗಿತ್ತು.

    ಇದರಿಂದ ಎಚ್ಚೆತ್ತ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಭಾರಿ ಸ್ಫೋಟಕಗಳನ್ನು ಬಳಸಿ ರಿಗ್ ಬೋರ್ ಕೊರೆದು, ಮೆಗ್ಗರ್ ಬ್ಲಾಸ್ಟ್ ಮೂಲಕ ದೊಡ್ಡ ಮಟ್ಟದಲ್ಲಿ ಕಲ್ಲು ಸಿಡಿಸುತ್ತಿದ್ದ ಗಣಿ ಮಾಲೀಕರ ವಿರುದ್ಧ ಹೋರಾಟ ನಡೆಸಿ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಯಶಸ್ವಿಯಾಗಿದ್ದರು.

    ಆದರೀಗ ಗಣಿಗಾರಿಕೆ ನಿಷೇಧದಿಂದಾಗಿ ಸಣ್ಣ ಪ್ರಮಾಣದಲ್ಲಿ ಕೈಕುಳಿ ಮೂಲಕ ಸೈಜು, ಚಪ್ಪಡಿ ಒಡೆದುಕೊಂಡು ಬದುಕುತ್ತಿದ್ದ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಾರ್ಮಿಕರಿಗೆ ಕೆಲಸವಿಲ್ಲದೇ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಆದರೆ ಗಣಿಗಾರಿಕೆ ನಿಷೇಧದ ನಂತರ ಕ್ವಾರಿ ಕಾರ್ಮಿಕರ ಸಹಾಯಕ್ಕೆ ಸರ್ಕಾರ ಧಾವಿಸದಿರುವುದು ವಿಪರ್ಯಾಸ.

    ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ ಕಾಲದಲ್ಲಿ ಪಾಂಡವಪುರ ತಾಲೂಕಿನ ಕಾವೇರಿಪುರ, ಚಿನಕುರಳಿ, ಅಲ್ಪಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಂದು ನೆಲೆಸಿದ ಕ್ವಾರಿ ಕಾರ್ಮಿಕರು ಅಣೆಕಟ್ಟೆ ನಿರ್ಮಾಣಕ್ಕೆ ಅಗತ್ಯವಿದ್ದ ಸೈಜು, ಜಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದರು. ನಂತರದಲ್ಲಿ ಕಲ್ಲು ಒಡೆಯುವುದನ್ನೇ ವೃತ್ತಿಯಾಗಿಸಿಕೊಂಡು ಕೈಕುಳಿ ಮೂಲಕ ಮನೆಗಳು, ಸರ್ಕಾರಿ ಕಚೇರಿ, ಚರಂಡಿ ಹಾಗೂ ಇತರ ಕಟ್ಟಡ ಕಾಮಗಾರಿಗಳಿಗೆ ಕಲ್ಲು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹಲವಾರು ವರ್ಷಗಳ ಕಾಲ ಇದೇ ರೀತಿ ಜೀವನ ನಡೆಸುತ್ತಿದ್ದ ಕ್ವಾರಿ ಕಾರ್ಮಿಕರಿಗೆ ಬಂಡವಾಳಶಾಹಿಗಳು ಕಲ್ಲು ಗಣಿಗಾರಿಕೆಗೆ ಇಳಿದಿದ್ದೆ ಮುಳುವಾಯಿತು.

    2001ರವರೆಗೂ ಬೇಬಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ರಷರ್‌ಗಳ ಹಾವಳಿ ಇರಲಿಲ್ಲ. ಕ್ವಾರಿ ಕಾರ್ಮಿಕರಷ್ಟೇ ಕಲ್ಲು ಒಡೆಯುತ್ತಿದ್ದರು. ನಂತರದಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎಂಬುದನ್ನು ಅರಿತ ಬಂಡವಾಳ ಶಾಹಿಗಳು ಒಂದರ ಹಿಂದೆ ಒಂದರಂತೆ ಸುಮಾರು 48ಕ್ಕೂ ಹೆಚ್ಚು ಬೃಹತ್ ಕ್ರಷರ್‌ಗಳನ್ನು ಸ್ಥಾಪಿಸಿ ಜೆಸಿಬಿ, ಹಿಟಾಚಿ, ಬ್ರೇಕರ್‌ಗಳಂತಹ ಯಂತ್ರೋಪಕರಣಗಳನ್ನು ಬಳಸಿಕೊಂಡು ನೂರಾರು ಅಶ್ವ ಶಕ್ತಿ (ಎಚ್‌ಪಿ) ಇರುವ ಮೋಟಾರುಗಳೊಂದಿಗೆ ಕಲ್ಲು ಕ್ರಷಿಂಗ್ ಯಂತ್ರಗಳನ್ನು ಅಳವಡಿಸಿಕೊಂಡು ಭಾರಿ ಪ್ರಮಾಣದಲ್ಲಿ ಬ್ಲಾಸ್ಟ್ ನಡೆಸಿದ್ದರಿಂದ ಗಣಿಗಾರಿಕೆ ವಿರುದ್ಧ ರೈತಸಂಘ ಸೇರಿದಂತೆ ಹಲವು ಸಂಘಟನೆಗಳು ಹೋರಾಟ ನಡೆಸಲು ಕಾರಣವಾಯಿತು.

    ಟ್ರಯಲ್ ಬ್ಲಾಸ್ಟ್‌ಗೆ ರೈತಸಂಘ ವಿರೋಧ
    ಬೇಬಿ ಬೆಟ್ಟ ಕಾವಲ್ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಅಧ್ಯಯನ ನಡೆಸಲು ಜಾರ್ಖಂಡ್ ಮತ್ತು ಪುಣೆಯಿಂದ ಆಗಮಿಸಿದ್ದ ಭೂಗರ್ಭ ವಿಜ್ಞಾನಿಗಳ ತಂಡವನ್ನು ಟ್ರಯಲ್ ಬ್ಲಾಸ್ಟ್ ನಡೆಸದಂತೆ ತಡೆದು ಕೆಆರ್‌ಎಸ್‌ನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿದ್ದ ರೈತ ಸಂಘದ ಕಾರ್ಯಕರ್ತರು, ಗೋ ಬ್ಯಾಕ್ ಚಳವಳಿ ಮೂಲಕ ಟ್ರಯಲ್ ಬ್ಲಾಸ್ಟ್ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಟ್ರಯಲ್ ಬ್ಲಾಸ್ಟ್ ನಡೆದರೆ ಗಣಿ ಮಾಲೀಕರು ಲಾಬಿ ನಡೆಸಿ ತಮ್ಮ ಪರವಾಗಿ ವರದಿ ಪಡೆಯುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಹೋರಾಟ ತೀವ್ರ ಸ್ವರೂಪ ಕಂಡು ಯಶಸ್ವಿಯಾಗಿತ್ತು.

    ರೈತಸಂಘ ಮುಖಂಡರಿಗೆ ಬಿಸಿ ತುಪ್ಪ
    ಗಣಿಗಾರಿಕೆ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿ ಯಶಸ್ಸು ದೊರಕಿದ್ದು, ರಾಜ್ಯ ಉಚ್ಚ ನ್ಯಾಯಾಲಯ ಕೂಡ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿರುವ ನಡುವೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕ್ವಾರಿ ಕಾರ್ಮಿಕರ ಬದುಕಿನ ಹಿನ್ನೆಲೆಯಲ್ಲಿ ಮತ್ತೆ ಟ್ರಯಲ್ ಬ್ಲಾಸ್ಟ್‌ಗೆ ಒಲವು ತೋರಿಸಿರುವುದು ರೈತಸಂಘ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
    ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆ ಎಂಬ ಆತಂಕ ಒಂದೆಡೆಯಾದರೆ, ಗಣಿಗಾರಿಕೆ ಶಾಶ್ವತವಾಗಿ ನಿಷೇಧವಾದರೆ ತಮ್ಮ ಪೂರ್ವಿಕರ ಕಾಲದಿಂದಲೂ ಗಣಿಗಾರಿಕೆ ಮೇಲೆಯೇ ಅವಲಂಬಿತರಾಗಿ ಜೀವನ ಕಟ್ಟಿಕೊಂಡಿರುವ ಸಾವಿರಾರು ಕ್ವಾರಿ ಕಾರ್ಮಿಕರ ಮುಂದಿನ ಬದುಕು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

    ಕೈಕುಳಿ ಮೂಲಕ ಗಣಿಗಾರಿಕೆ ಮೇಲೆ ಅವಲಂಬಿತರಾಗಿರುವವರ ವಿರುದ್ಧ ನಾವು ಹೋರಾಟ ಮಾಡುತ್ತಿಲ್ಲ. ಬದಲಾಗಿ ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯ 20 ಕಿಮೀ ಆಚೆಗೆ ಸರ್ಕಾರ ಗಣಿಗಾರಿಕೆಗೆ ಅವಕಾಶ ಮಾಡಿ ಕೊಡಲಿ. ಬೇಬಿ ಬೆಟ್ಟ ಸುತ್ತಲಿನ ಪ್ರದೇಶದಲ್ಲೇ ಕೊಡಬೇಕು ಎಂಬ ಕಾನೂನು ಇಲ್ಲ. ಹಿಂದಿನಿಂದಲೂ ರೈತಸಂಘ ಗಣಿಗಾರಿಕೆಯನ್ನು ವಿರೋಧಿಸಿಕೊಂಡು ಬಂದಿದೆ. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಲು ಅವಕಾಶ ಕೊಡುವುದಿಲ್ಲ. ಶಾಸಕರು ಯಾರದೋ ಒತ್ತಡಕ್ಕೆ ಟ್ರಯಲ್ ಬ್ಲಾಸ್ಟ್‌ಗೆ ಒಲವು ತೋರಿರಬಹುದು.
    ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷ, ರೈತಸಂಘ

    ಗಣಿಗಾರಿಕೆ ಮೇಲೆ ಅವಲಂಬಿತರಾಗಿದ್ದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಲಾರಿ ಚಾಲಕರು, ಲೋಡರ್ಸ್‌ಗಳಿಗೂ ಕೆಲಸ ಇಲ್ಲದಂತಾಗಿದೆ. ಅಣೆಕಟ್ಟೆಗೆ ಅಪಾಯವಿದೆ ಎನ್ನುವುದಾದರೆ ಗಣಿಗಾರಿಕೆ ನಿಷೇಧಿಸುವುದೇ ಸೂಕ್ತ. ಆದರೆ ಗಣಿಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ನಮ್ಮ ಕುಟುಂಬಗಳಿಗೆ ಜೀವನ ನಡೆಸಲು ಸರ್ಕಾರ ಅನ್ಯ ಮಾರ್ಗ ತೋರಿಸಬೇಕು. ಮಕ್ಕಳ ವಿದ್ಯಾಭ್ಯಾಸ, ಸಂಸಾರ ನಿರ್ವಹಣೆ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಲ್ಲಿ ತೆಗೆದುಕೊಂಡಿರುವ ಸಾಲ ಇತ್ಯಾದಿಗಳಿಗೆ ನಮಗೆ ಹಣದ ಅವಶ್ಯಕತೆ ಇದೆ. ಕೆಲಸವೇ ಇಲ್ಲವಾದರೆ ಎಲ್ಲವನ್ನೂ ನಿಭಾಯಿಸುವುದು ಹೇಗೆ? ಸರ್ಕಾರ ನಮಗೂ ಬದುಕಲು ಅವಕಾಶ ಮಾಡಿಕೊಡಬೇಕು.
    ಶರವಣ, ಕ್ವಾರಿ ಕಾರ್ಮಿಕ

    ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಸಹಿತ ರೈತ ಸಂಘಟನೆ ಗಣಿಗಾರಿಕೆಯನ್ನು ಬಹಳ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದೆ. ನಾವು ರಿಗ್ ಬೋರ್, ಮೆಗ್ಗರ್ ಬ್ಲಾಸ್ಟ್ ನಡೆಸಿ ಕ್ರಷರ್‌ಗಳನ್ನು ನಡೆಸುವುದನ್ನು ವಿರೋಧಿಸುತ್ತೇವೆ. ಆದರೆ ಆ ಭಾಗದ ಏಳೆಂಟು ಪಂಚಾಯಿತಿಯ ಬಹುತೇಕ ಜನರು ಗಣಿಗಾರಿಕೆ ಮೇಲೆ ಅವಲಂಬಿತರಾಗಿ ಜೀವನ ಕಟ್ಟಿಕೊಂಡಿದ್ದಾರೆ. ಅವರ ಬದುಕನ್ನು ಸಹ ನಾವು ನೋಡಬೇಕು. ಇಲ್ಲಿ ಕೈಕುಳಿ ಮಾಡುವ ಕ್ವಾರಿ ಕಾರ್ಮಿಕರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಟ್ರಯಲ್ ಬ್ಲಾಸ್ಟ್‌ಗೆ ಒಲುವು ತೋರಿಸಿದ್ದೇನೆ. ಒಂದು ವೇಳೆ ಕೈಕುಳಿಗೆ ಅವಕಾಶ ಸಿಕ್ಕಿದ್ದನ್ನು ದುರುಪಯೋಗಪಡಿಸಿಕೊಂಡರೆ ಕಠಿಣ ಕಾನೂನು ಕ್ರಮ ಮುಂದಾಗಬೇಕಾಗುತ್ತದೆ. ಇಲ್ಲಿನ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲೂ ಆಲೋಚಿಸುತ್ತಿದ್ದು, ಗಾರ್ಮೆಂಟ್ಸ್ ಸೇರಿದಂತೆ ಇತರ ಕಾರ್ಖಾನೆ ತೆರೆದು ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ.
    ದರ್ಶನ್ ಪುಟ್ಟಣ್ಣಯ್ಯ ಶಾಸಕ, ಮೇಲುಕೋಟೆ ವಿಧಾನಸಭಾ ಕ್ಷೇತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts