More

    ಕಲೆ ಆರಾಧಕರಿಗೆ ಸ್ಪೂರ್ತಿಯ ಸೆಲೆ

    ಮಂಜುನಾಥ ರಾಠೋಡ ಗಜೇಂದ್ರಗಡ

    ಫೆ. 14ರಿಂದ ಮೂರು ದಿನಗಳ ಕಾಲ ಕೋಟೆನಾಡು ಗಜೇಂದ್ರಗಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳಕ್ಕೆ ಆಗಮಿಸುವ ಕಲಾ ಆರಾಧಕರು ಗಜೇಂದ್ರಗಡ ಪಟ್ಟಣ ಮತ್ತು ಸುತ್ತಮುತ್ತಲಿನ ಕೋಟೆ, ಕಾಲಕಾಲೇಶ್ವರ ದೇವಸ್ಥಾನ, ದೇವಾಲಯಗಳ ತೊಟ್ಟಿಲು ಎಂಬ ಹೆಗ್ಗಳಿಕೆಯ ಸೂಡಿ ಮತ್ತು ಸುಕ್ಷೇತ್ರ ಶ್ರೀ ಭೀಮಾಂಬಿಕಾ ದೇವಸ್ಥಾನಗಳನ್ನು ವೀಕ್ಷಿಸಲು ಮರೆಯಬಾರದು.

    ಐತಿಹಾಸಿಕ ಗಜೇಂದ್ರಗಡ ಮರಾಠರು, ಪೇಶ್ವೆಗಳು ಮತ್ತು ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಪಟ್ಟಿತ್ತು. ನಂತರದ ದಿನಗಳಲ್ಲಿ ಮಹಾರಾಷ್ಟ್ರದಿಂದ ಬಂದ ಘೊರ್ಪಡೆ ಮನೆತನದವರು ಇಲ್ಲಿ ಆಡಳಿತ ನಡೆಸಿದ್ದಾರೆ. ಪಟ್ಟಣದ ಉತ್ತರ ಭಾಗಕ್ಕೆ ವಿಶೇಷವಾಗಿ ಹರಡಿರುವ ಸುಂದರ ಕೋಟೆ ಇದೆ. ನಿಸರ್ಗದ ಸೌಂದರ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಗಜೇಂದ್ರಗಡ ಬೆಟ್ಟದ ಕೋಟೆಗೆ ಹೋಗಬೇಕಾದರೆ 200 ಮೆಟ್ಟಿಲುಗಳನ್ನು ಹತ್ತಿ ಸಾಗಬೇಕು.

    ದಕ್ಷಿಣ ಕಾಶಿ ಕಾಲಕಾಲೇಶ್ವರ: ಭಕ್ತರ ಪಾಲಿನ ಆರಾಧ್ಯ ದೈವ. ದ್ವಾದಶ ಜ್ಯೋತಿರ್ಲಿಂಗ, ಪುಷ್ಕರಣಿ, ಕಲ್ಲು ಗುಂಡು, ಗುಹೆ ಎಲ್ಲವೂ ಇಲ್ಲಿ ಶಿವಮಯ. ಹತ್ತು ಹಲವು ವಿಶೇಷತೆ ಹೊಂದಿರುವ ದಕ್ಷಿಣ ಕಾಶಿ ಎಂದೇ ಹೆಸರಾದ ಶ್ರೀ ಕಾಲಕಾಲೇಶ್ವರನ ಸನ್ನಿಧಿ ಭಕ್ತರ ಕಣ್ಮನ ಸೆಳೆಯುತ್ತಿದೆ. ಗಜೇಂದ್ರಗಡದಿಂದ ಉತ್ತರಾಭಿಮುಖವಾಗಿ ಮೂರು ಕಿಮೀ ಸಾಗಿದರೆ ಸಾಕು ಆನೆಯ ಆಕಾರದ ಬೆಟ್ಟದ ತಪ್ಪಲಿನಲ್ಲಿರುವ ನಿಸರ್ಗ ವೈಭವದ ರಮಣೀಯ ತಾಣದಲ್ಲಿ ಶ್ರೀ ಕಾಲಕಾಲೇಶ್ವರ ಸನ್ನಿಧಿ ಗೋಚರಿಸುತ್ತದೆ. ಸಾಕ್ಷಾತ್ ಶಿವನು ಮರ್ತ್ಯಕ್ಕೆ ಬರಬೇಕೆಂದುಕೊಂಡಾಗ ಆತನ ಕಿಂಕರನಾದ ವೃಷಭನು ಕಳಿಂಗ ಪರ್ವತದ ಗುಹೆಯನ್ನು ಗುರುತಿಸಿದ ತಾಣವೇ ಈ ಕಾಲಕಾಲೇಶ್ವರ ತಾಣವಾಗಿದೆ. ಇಲ್ಲಿ ಶಿವನು ಕಾಲಭೈರವನಾಗಿ ಕಾಣಿಸಿಕೊಂಡಿದ್ದಾನೆ ಎನ್ನುವ ಪ್ರತೀತಿ ಇದೆ.

    ಪೌರಾಣಿಕ ಹಿನ್ನೆಲೆ: ಕಾಲಕಾಲೇಶ್ವರನ ಲಿಂಗ ದರ್ಶನ ಮಾಡಿದರೆ, ಕಾಶಿಯ ವಿಶ್ವೇಶ್ವರನ ದರ್ಶನ ಮಾಡಿದಂತೆ ಎನ್ನುವ ನಂಬಿಕೆ ಇದೆ. ಗಜಾಸುರನ ಸಂಹಾರಕ್ಕಾಗಿ ಕಾಶಿಯಿಂದ ಇಲ್ಲಿಗೆ ಬಂದು ನೆಲೆಸಿದ ಶಿವನ ಕ್ಷೇತ್ರವೇ ದಕ್ಷಿಣ ಕಾಶಿ ಎಂಬುದು ಭಕ್ತರ ನಂಬಿಕೆ. ಭಕ್ತರ ಇಷ್ಟಾರ್ಥದಂತೆ ಗಜಾಸುರನನ್ನು ಸಂಹರಿಸಿ ಸ್ವಯಂಭೂ ಲಿಂಗವಾಗಿ ನೆಲೆಸಿದ ಈಶ್ವರನೇ ಶಿವ ಕಾಲಕಾಲೇಶ್ವರ. ಪುಟ್ಟ ಗರ್ಭಗುಡಿಯ ಈ ದೇವಾಲಯದ ಗೋಪುರ ಹದಿನೈದು ಅಡಿ ಎತ್ತರ, ಹತ್ತು ಅಡಿ ಅಗಲದ ವಿಸ್ತೀರ್ಣ ಹೊಂದಿದೆ.

    ಭವಿಷ್ಯ ಹೇಳುವ ಗುಂಡು: ಕಾಲಕಾಲೇಶ್ವರನ ಸನ್ನಿಧಿಯಲ್ಲಿ ಇರುವ ವಿಶೇಷವಾದ ಗುಂಡು ಭವಿಷ್ಯ ನುಡಿಯುತ್ತದೆ ಎಂಬುದು ಭಕ್ತರ ನಂಬಿಕೆ. ಗುಂಡು ಭಾರವೆನಿಸಿದರೆ ಅಂದುಕೊಂಡ ಕಾರ್ಯ ವಿಫಲವಾಗುತ್ತದೆ. ಹಗುರವಾಗಿದ್ದರೆ ಕಾರ್ಯ ಸಫಲ ಎಂಬ ಪ್ರತೀತಿ ಇದೆ. ಇಲ್ಲಿಗೆ ಬಂದ ಭಕ್ತರು ಈ ಪ್ರಯೋಗ ಮಾಡಿ ಮುಂದೆ ಸಾಗುತ್ತಾರೆ.

    ಗಗನಾವತಿ ಗವಿ: ದೇವಸ್ಥಾನದ ಪಕ್ಕದಲ್ಲಿರುವ ಗಗನಾವತಿ ಗವಿ ಗಗನದೆತ್ತರಕ್ಕೆ ಬೆಳದಿರುವುದರಿಂದಲೇ ಇದಕ್ಕೆ ಗಗನಾವತಿ ಗವಿ ಎಂಬ ಹೆಸರು ಬಂದಿದೆ. ಇದರೊಳಗೆ ಏಳು ಹೊಂಡಗಳಿವೆ ಎನ್ನಲಾಗುತ್ತದೆ. ಆದರೆ, ಅವುಗಳನ್ನು ಕಂಡವರು ಇಂದಿಲ್ಲ. ಪ್ರಸ್ತುತ ಒಂದು ಹೊಂಡ ಮಾತ್ರ ಕಾಣಬಹುದು. ನೋಡಬೇಕೆಂಬ ಇಚ್ಚೆಯುಳ್ಳವರು ಎಂಭತ್ತು ಅಡಿ ದೂರ ಸಾಗಬೇಕು. ಸ್ವಾಭಾವಿಕವಾಗಿ ಮುರ್ನಾಲ್ಕೂ ಅಡಿ ಅಗಲವಾಗಿರುವ ಹೊಂಡಗಳು ಸದಾ ತುಂಬಿಕೊಂಡಿರುತ್ತವೆ. ಬಿರು ಬೇಸಿಗೆಯಲ್ಲೂ ಶಿವಪೂಜೆಗೆ ಈ ಹೊಂಡದಿಂದಲೇ ನೀರನ್ನು ಬಳಸಲಾಗುತ್ತದೆ. ಸಪ್ತ ಋಷಿಗಳ ತಪೋ ಶಕ್ತಿಯಿಂದ ನಿರ್ವಣಗೊಂಡ ಹೊಂಡಗಳ ದರ್ಶನ ಪಡೆದರೆ ಏಳೇಳು ಜನ್ಮದಲ್ಲಿ ಮಾಡಿದ ಪಾಪ-ಕರ್ಮಗಳು ನಶಿಸಿ ಪುಣ್ಯ ಲಭಿಸುತ್ತದೆ ಎನ್ನುವ ಪ್ರತೀತಿ ಇದೆ. ದೇವಸ್ಥಾನದಲ್ಲಿರುವ ತೊಟ್ಟಿಲು ತೂಗಿದರೆ, ಮಕ್ಕಳಿಲ್ಲದ ದಂಪತಿ ಭಕ್ತಿಯಿಂದ ಇಲ್ಲಿರುವ ತೊಟ್ಟಿಲುವರ್ಷ ತುಂಬುವುದರಲ್ಲಿ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿಯೇ ತೊಟ್ಟಿಲು ತೂಗಿ ಹರಕೆ ಹೊತ್ತು ಮಕ್ಕಳನ್ನು ಪಡೆದವರು ಹಾಗೂ ಭಕ್ತರು ತಮ್ಮ ಮಕ್ಕಳಿಗೆ ಕಳಕಪ್ಪ, ಕಳಕವ್ವ, ಕಳಕಯ್ಯ, ಕಳಕ, ಕಳಕ ಮಲ್ಲಯ್ಯ, ಕಳಕೇಶ, ಮಲ್ಲವ್ವ, ಮಲ್ಲಪ್ಪ ಎಂಬುದಾಗಿ ನಾಮಕರಣ ಮಾಡುವುದು ಈ ಭಾಗದಲ್ಲಿ ಸಾಮಾನ್ಯವಾಗಿದೆ.

    ಕಾಲಕಾಲೇಶ್ವರ ದೇಗುಲದಿಂದ ಸುಮಾರು 20 ಕಿಮೀ ದೂರ ಸಾಗಿದರೆ ಇಟಗಿ ಭೀಮಾಂಬಿಕಾ ದೇವಸ್ಥಾನ ಹಾಗೂ ಐತಿಹಾಸಿಕ ಮಹಾದೇವಿ ದೇವಸ್ಥಾನಗಳು ಸಿಗುತ್ತವೆ. ಪ್ರತಿ ತಿಂಗಳು ಅಮವಾಸ್ಯೆಯಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ಪಕ್ಕದಲ್ಲಿರುವ ವಿಶಾಲ ಕರೆಯಲ್ಲಿ ಮಿಂದು ಪೂಜೆ ಸಲ್ಲಿಸುತ್ತಾರೆ. ಹೀಗೆ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಇರುವ ಹಲವು ಪ್ರವಾಸಿ ತಾಣಗಳು ಗಜೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಂಡು ಬರುತ್ತವೆ. ಯುವಜನ ಮೇಳಕ್ಕೆ ಆಗಮಿಸುವ ಜನತೆ ಇವುಗಳನ್ನು ವೀಕ್ಷಿಸಿ ಆನಂದಿಸಬಹುದಾಗಿದೆ.

    ಯುವಜನ ಮೇಳ ಇಂದಿನಿಂದ: ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ರೋಣ ತಾಪಂ, ಪುರಸಭೆ ಗಜೇಂದ್ರಗಡ, ರಾಜ್ಯ ಯುವ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಗಜೇಂದ್ರಗಡದಲ್ಲಿ ಫೆ. 14ರಿಂದ 3 ದಿನದ ರಾಜ್ಯ ಮಟ್ಟದ ಯುವಜನ ಮೇಳ ನಡೆಯಲಿದೆ. ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಉದ್ಘಾಟಿಸುವರು. ಸಚಿವರಾದ ಸಿ.ಟಿ. ರವಿ, ಬಸವರಾಜ ಬೊಮ್ಮಾಯಿ ಭಾಗವಹಿಸುವರು. ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಇತರರು ಭಾಗವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts