More

    ನಾಗರಿಕ ಸಮಾಜ ನಿರ್ಮಾಣಕ್ಕೆ ವಿಶ್ವಕರ್ಮ ಕೊಡುಗೆ ಅಪಾರ

    ಕೆ.ಆರ್.ಪೇಟೆ: ವಿಶ್ವಕರ್ಮ ಎನ್ನುವುದು ಜಾತಿಯಲ್ಲ. ಬದಲಾಗಿ ಅದು ನಮ್ಮ ನೆಲದ ಸಂಸ್ಕೃತಿಯ ಸಂಕೇತ ಎಂದು ವಿಧಾನ ಪರಿಷತ್ ಸದಸ್ಯರೂ ಆದ ರಾಜ್ಯ ವಿಶ್ವಕರ್ಮ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

    ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವಕರ್ಮ ಮಹೋತ್ಸವದಲ್ಲಿ ಮಾತನಾಡಿದರು. ಹಾಲಿಗೆ ಸಕ್ಕರೆ ಬೆರೆತರೆ ರುಚಿ ಹೆಚ್ಚಾಗುವಂತೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಮೋಘ ಕಾಣಿಕೆ ನೀಡುತ್ತಿರುವ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

    ನಾಗರಿಕ ಸಮಾಜ ನಿರ್ಮಾಣಕ್ಕೆ ಅವಶ್ಯವಿರುವ ಪಂಚ ಕಸುಬುಗಳೊಂದಿಗೆ ಎಲ್ಲ ಜಾತಿ ಮತ್ತು ವರ್ಗಗಳ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಮೂಲಕ ತಮ್ಮದೇ ಕೊಡುಗೆ ನೀಡುತ್ತಿರುವ ವಿಶ್ವಕರ್ಮರು ಸಂಘಟಿತರಾಗಬೇಕಿದೆ. ಸಂವಿಧಾನ ಬದ್ಧವಾಗಿ ದೊರೆಯಲೇ ಬೇಕಾಗಿರುವ ಸೌಲಭ್ಯಗಳನ್ನು ಕೇಳಿ ಪಡೆದು ಆರ್ಥಿಕವಾಗಿ ಸಬಲೀಕರಣ ಸಾಧಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಸಲಹೆ ನೀಡಿದರು.

    ನಮ್ಮ ಕುಲ ಕಸುಬು ಉಳಿಯಬೇಕಾದರೆ ಎಲ್ಲರೂ ಸಂಘಟಿತ ಹೋರಾಟ ಮಾಡುವುದು ಅಗತ್ಯ. ನಮ್ಮ ಮಕ್ಕಳೂ ಕುಲ ಕಸುಬನ್ನು ಕಲಿತು ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳುವ ಜತೆಗೆ ಕಡ್ಡಾಯವಾಗಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ಮನವಿ ಮಾಡಿದರು.

    ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮೀಸಲಾತಿ ಅಗತ್ಯ. ಹಿಂದುಳಿದ ಪ್ರವರ್ಗ ಎರಡಕ್ಕೆ ವಿಶ್ವಕರ್ಮ ಜನಾಂಗವನ್ನು ಸೇರಿಸಿರುವುದು ಸರಿಯಾದ ಕ್ರಮವಲ್ಲ. ಹಿಂದುಳಿದ ಪ್ರವರ್ಗ ಎರಡರಲ್ಲಿ ಹಾಲುಮತ ಕುರುಬ, ನೇಕಾರ ಸೇರಿದಂತೆ ಹಲವಾರು ಪ್ರಮುಖ ಜಾತಿಗಳಿವೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ವಿಶ್ವಕರ್ಮ ಸಮಾಜವನ್ನು ಕುಲಶಾಸ್ತ್ರ ಅಧ್ಯಯನದ ಪ್ರಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದ ಅವರು, ಸಮಾಜಕ್ಕೆ ದೊರೆಯಬೇಕಾದ ಸೌಲಭ್ಯ ಪಡೆದುಕೊಳ್ಳಲು ಹೋರಾಟ ಪ್ರಬಲವಾದ ಅಸ್ತ್ರ. ಈ ದಿಕ್ಕಿನಲ್ಲಿ ಸಮಾಜದವರು ಎಚ್ಚರಗೊಳ್ಳಬೇಕು ಎಂದು ತಿಳಿಸಿದರು.

    ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಣಗೌಡ ಮಾತನಾಡಿದರು. ಅರಕಲಗೂಡಿನ ಶ್ರೀ ವಿಶ್ವಕರ್ಮ ಮಹಾಸಂಸ್ಥಾನ ಮಠದ ಗುರುಶಿವ ಸುಜ್ಞಾನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜಸೇವಕ ಮಲ್ಲಿಕಾರ್ಜುನ, ಮಾಜಿ ಶಾಸಕ ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಮನ್‌ಮುಲ್ ನಿರ್ದೇಶಕ ಡಾಲು ರವಿ, ಪುರಸಭೆ ಸದಸ್ಯ ಬಸ್ ಸಂತೋಷ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts