More

    ವಿಶ್ವಕರ್ಮ ಸಮುದಾಯಕ್ಕಿದೆ ವಿಶಿಷ್ಟ ಪರಂಪರೆ

    ಅರಕಲಗೂಡು : ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಹಾಗೂ ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿರುವ ವಿಶ್ವಕರ್ಮ ಸಮುದಾಯ ಅತ್ಯಂತ ವಿಶಿಷ್ಟ ಪರಂಪರೆಯನ್ನು ಹೊಂದಿದೆ ಎಂದು ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಹೇಳಿದರು.

    ಪಟ್ಟಣದ ಉಮಾಮಹೇಶ್ವರಿ ದೇವಾಲಯದ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜದಿಂದ ಭಾನುವಾರ ಆಯೋಜಿಸಿದ್ದ ತಾಲೂಕು ವಿಶ್ವಕರ್ಮ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ವೇದಗಳಲ್ಲೂ ವಿಶ್ವಕರ್ಮರನ್ನು ಪ್ರಧಾನವಾಗಿ ಉಲ್ಲೇಖ ಮಾಡಲಾಗಿದೆ. ಜಗತ್ತಿನ ಸೃಷ್ಟಿಯಲ್ಲಿ ದೇವ ಶಿಲ್ಪಿ ವಿಶ್ವಕರ್ಮನ ಪಾತ್ರವೂ ಮಹತ್ತರವಾದುದು ಎಂದು ತಿಳಿಸಿದರು. ಪಟ್ಟಣಕ್ಕೆ ಸೀಮಿತವಾಗಿದ್ದ ವಿಶ್ವಕರ್ಮ ಸಂಘಟನೆಯನ್ನು ಸಮಾಜದ ಯುವಕರು ತಾಲೂಕು ಮಟ್ಟಕ್ಕೆ ವಿಸ್ತರಿಸಿ ಸಂಘಟನೆ ಮಾಡಿರುವುದು ಸಮಾಜಕ್ಕೆ ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ ಎಂದು ಶ್ಲಾಘಿಸಿದರು.
    ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ವಿಶ್ವಕರ್ಮ ಸಮುದಾಯ ಸಮಾಜಕ್ಕೆ ನೀಡಿರುವ ಕೊಡುಗೆ ಅತ್ಯಂತ ಮಹತ್ತರವಾಗಿದೆ. ಪುರಾತನ ದೇವಾಲಯಗಳಲ್ಲಿರುವ ಶಿಲ್ಪಕಲಾ ವೈಭವ ನೋಡಲೆಂದೆ ದೇಶ-ವಿದೇಶಗಳಿಂದ ಜನರು ಬರುತ್ತಿರುವುದು ಇವರ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

    ಸಮಾಜ ಸೇವಕ ಸಿ.ಡಿ.ದಿವಾಕರಗೌಡ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಉದ್ಯಮಿ ದಿವಾಕರ್, ಸುರೇಶ್ ಮಾತನಾಡಿದರು. ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಆಚಾರ್, ಹಾಸನದ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಆರ್.ನಾಗೇಶ್, ಹೊಳೆನರಸೀಪುರ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಗಂಗಾಧರಾಚಾರ್, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಂತೋಷ್‌ಚಾರ್, ಉಪಾಧ್ಯಕ್ಷರಾದ ಹೇಮಂತ್, ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಯೋಗೇಶ್, ಸಹಕಾರ್ಯದರ್ಶಿ ಪ್ರವೀಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಎಂ.ಸಿ.ಮಂಜುನಾಥ್, ಖಜಾಂಚಿ ಚರಣ್ ಇತರರು ಇದ್ದರು.

    ಸಮುದಾಯದ ಸಾಧಕರಿಗೆ ಸನ್ಮಾನ: ವಿಶ್ವಕರ್ಮ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಾದ ಆಯುರ್ವೇದ ವೈದ್ಯೆ ಡಾ.ಧನಲಕ್ಷ್ಮೀ, ಪೊಲೀಸ್ ಇಲಾಖೆಯ ಧರ್ಮ, ಲೋಕೇಶ್, ಗೋಪುರ ಶಿಲ್ಪಿ ವಿಶ್ವೇಶ್ವರಯ್ಯ, ವಿಗ್ರಹ ಶಿಲ್ಪಿ ಮೋಹನ್, ಅರ್ಚಕ ವಿಶ್ವೇಶ್ವರ ಶರ್ಮ, ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಗೌರವ ಅಧ್ಯಕ್ಷ ರಾಜಾ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕೊತ್ತಲು ಗಣಪತಿ ಉದ್ಯಾನದಿಂದ ಶಿವಸುಜ್ಞಾನತೀರ್ಥ ಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆಯಲ್ಲಿ ಕಾರ್ಯಕ್ರಮಕ್ಕೆ ಕರೆತರಲಾಯಿತು. ದೇವಾಲಯದಲ್ಲಿ ವಿವಿಧ ಪೂಜೆ, ಹೋಮ, ಪೂರ್ಣಾಹುತಿ ನೆರವೇರಿಸಲಾಯಿತು. ಅನ್ನ ದಾಸೋಹ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts