More

    ಅರ್ನಬ್ ಗೋಸ್ವಾಮಿಗೇ ಈ ಗತಿಯಾದರೆ…!

    ಅರ್ನಬ್ ಗೋಸ್ವಾಮಿ ಕಳೆದ ಕೆಲವಾರು ತಿಂಗಳುಗಳಿಂದ ಇಡಿಯ ಭಾರತದಲ್ಲಿ ಕೇಳಿಬರುತ್ತಿರುವ ಏಕೈಕ ಪತ್ರಕರ್ತನ ಹೆಸರು. ಅದರಲ್ಲೂ ಮಹಾರಾಷ್ಟ್ರ ಸರ್ಕಾರ ವಿನಾಕಾರಣ ಗೂಂಡಾಗಳಂತೆ ಅವರನ್ನು ಬಂಧಿಸಿದ ಮೇಲಂತೂ ಅರ್ನಬ್ ರಾಷ್ಟ್ರದ ಹೀರೋ ಆಗಿ ಕಂಡುಬರುತ್ತಿದ್ದಾರೆ. ಎನ್​ಕೌಂಟರ್ ಸ್ಪೆಷಲಿಸ್ಟ್ ವಝೆ ಇತ್ತೀಚೆಗೆ ಅರ್ನಬ್ ಮನೆಗೆ ಅರ್ನಬ್ ಗೋಸ್ವಾಮಿಗೇ ಈ ಗತಿಯಾದರೆ...!ನುಗ್ಗಿ ಬಂಧಿಸುವುದರೊಂದಿಗೆ ಒಟ್ಟಾರೆ ಚಿತ್ರಣ ಕೆಟ್ಟ ಸ್ವರೂಪ ಪಡೆದುಕೊಂಡಿತು. ತನ್ನ ಪೌರುಷವನ್ನು ತೋರಿಸಲು ಮಹಾರಾಷ್ಟ್ರ ಸರ್ಕಾರ 40 ಪೊಲೀಸರನ್ನು ಮತ್ತು ಎಕೆ 47 ಹಿಡಿದ ವಿಶೇಷ ಪೊಲೀಸರನ್ನೂ ಬಳಸಿಕೊಂಡಿತು. ಮನೆಗೆ ನುಗ್ಗಿ ಅರ್ನಬ್​ರನ್ನು ಎಳೆದಾಡಿದ್ದಲ್ಲದೆ ಅವರ ಮಗನ ಮೇಲೆ ಕೈಮಾಡಿ ಕ್ಯಾಮೆರಾಗಳ ಮುಂದೆಯೇ ಎಳೆದೊಯ್ದು ಪೊಲೀಸ್ ವ್ಯಾನ್ ಹತ್ತಿಸಲಾಯ್ತು. ಪತ್ರಕರ್ತರೊಂದಿಗೆ ಮಾತನಾಡಲೂ ಅವಕಾಶ ಕೊಡಲಿಲ್ಲ. ಇಷ್ಟಕ್ಕೂ ಬಂಧಿಸುವ ವಿಶೇಷವಾದ ವಾರೆಂಟ್ ಕೂಡ ಅವರು ತಂದಿರಲಿಲ್ಲ. ಅರ್ನಬ್​ರನ್ನು ಹೀಗೆ ಎಳೆದೊಯ್ಯಲು ಪೊಲೀಸರು ಕೊಟ್ಟ ಕಾರಣ ಕಳೆದ ವರ್ಷ ಮುಚ್ಚಿಹೋದ ಅನ್ವಯ್ ನಾಯ್್ಕ ಆತ್ಮಹತ್ಯಾ ಪ್ರಕರಣದ ಹಿನ್ನೆಲೆ. ವಾಸ್ತವವಾಗಿ ಮೇ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಅನ್ವಯ್ ನಾಯ್್ಕ ‘ಕಾನ್​ಕಾರ್ಡ್’ ಎಂಬ ಕಂಪನಿ ನಡೆಸುತ್ತಿದ್ದು, ಅದು ಒಳಾಂಗಣ ವಿನ್ಯಾಸದ ಕೆಲಸ ನಿರ್ವಹಿಸುತ್ತಿತ್ತು. ಅರ್ನಬ್ ರಿಪಬ್ಲಿಕ್ ಟಿವಿಯ ಸ್ಟುಡಿಯೋ ವಿನ್ಯಾಸಕ್ಕೆ ಈ ಕಂಪನಿಯನ್ನು ಕೇಳಿಕೊಂಡಿದ್ದರು ಎನ್ನಲಾಗುತ್ತದೆ. ಒಟ್ಟಾರೆ 83 ಲಕ್ಷದಷ್ಟು ಹಣವನ್ನು ಅರ್ನಬ್ ಬಾಕಿ ಕೊಡಬೇಕಿತ್ತಂತೆ. ಹೀಗಾಗಿಯೇ ತನ್ನ ಮೇಲೆ ಸಾಲವಾಯಿತೆಂದು ಬರೆದುಕೊಂಡ ಅನ್ವಯ್ ತನ್ನ ತಾಯಿಯೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಸಾಯುವಾಗ ಬರೆದಿಟ್ಟ ಪತ್ರದಲ್ಲಿ ಅರ್ನಬ್ ಹೆಸರು ಬರೆದಿದ್ದಲ್ಲದೆ ನಾಲ್ಕು ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಫಿರೋಜ್ ಶೇಖ್ ಮತ್ತು 55 ಲಕ್ಷ ರೂ.ಗೂ ಹೆಚ್ಚು ಬಾಕಿ ಉಳಿಸಿಕೊಂಡಿದ್ದ ನಿತೇಶ್ ಶಾರದಾನ ಹೆಸರೂ ಸೇರಿಸಿದ್ದ. ಈ ಮೂವರಿಗೂ ಸಂಪರ್ಕ ಬಲವಾಗಿತ್ತೆಂದೂ ಮೂವರೂ ಮಾತನಾಡಿಕೊಂಡೇ ತನ್ನ ತಂದೆಗೆ ಮೋಸ ಮಾಡಿದ್ದಾರೆಂದೂ ಅನ್ವಯ್ನ ಮಗಳು ಆರೋಪ ಮಾಡಿದ್ದಳು. ಮುಂದೆ ವಿಚಾರಣೆಯನ್ನು ತೀವ್ರಗತಿಯಲ್ಲಿ ನಡೆಸಿದ ರಾಯ್ಗಢದ ಪೊಲೀಸರು ಮೂರೂ ವ್ಯಕ್ತಿಗಳಿಗೆ ಪರಿಚಯವಿರುವುದರ ಬಗ್ಗೆ ಯಾವ ಸಾಕ್ಷಿಯೂ ಲಭ್ಯವಿಲ್ಲವೆಂದು ಹೇಳಿದರಲ್ಲದೆ ಅನ್ವಯ್ ಕಂಪನಿಯ ಬಗ್ಗೆ ವಿಶೇಷವಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದರ ಪ್ರಕಾರ ಕಂಪನಿ ಕಳೆದ ಆರೇಳು ವರ್ಷಗಳಿಂದ 26.5 ಕೋಟಿಯಷ್ಟು ಸಾಲ ಉಳಿಸಿಕೊಂಡಿತ್ತಲ್ಲದೆ ಅನೇಕ ಗ್ರಾಹಕರ ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೋಗುತ್ತಿದ್ದರು. ಈ ಕಾರಣಕ್ಕಾಗಿಯೇ ಅನೇಕರು ಅವರಿಗೆ ಹಣ ಕೊಡಲು ಸತಾಯಿಸುತ್ತಿದ್ದುದೂ ಇದೆ. ಹೀಗಾಗಿ ಈ ಸಾವಿಗೆ ಅರ್ನಬ್ ಗೋಸ್ವಾಮಿಯಾಗಲೀ ಇತರರಾಗಲೀ ಕಾರಣವಲ್ಲವೆಂದು ವರದಿ ಸ್ಪಷ್ಟವಾಗಿ ಹೇಳಿತ್ತು. ಮತ್ತು ಇಡಿಯ ಪ್ರಕರಣವನ್ನು ಕಳೆದ ವರ್ಷವೇ ಕ್ಲೋಸ್ ಮಾಡಿ, ಎಲ್ಲರಿಗೂ ನೆಮ್ಮದಿ ಕೊಟ್ಟಿತ್ತು. ಹೀಗೆ ಪೊಲೀಸರಿಂದಲೇ ಕ್ಲೋಸ್ ಮಾಡಲ್ಪಟ್ಟ, ಕೋರ್ಟಿನ ಪಡಸಾಲೆಗಳಲ್ಲಿ ಇನ್ನು ಚರ್ಚೆಯ ಅಗತ್ಯವಿಲ್ಲವೆಂದು ಪಕ್ಕಕ್ಕಿಟ್ಟ ಕಡತವನ್ನು ಅದೇ ಕೋರ್ಟಿನ ಅನುಮತಿಯನ್ನೂ ಪಡೆಯದೆ ರಾಯ್ಗಢ ಪೊಲೀಸರು ಮತ್ತೆ ತೆರೆದು ಅರ್ನಬ್​ರನ್ನು ಎಳಕೊಂಡು ಹೋಗಿದ್ದಾರೆ. ಏಕಿರಬಹುದು?

    ಉತ್ತರ ಹುಡುಕುವುದು ಬಲು ಕಷ್ಟವಲ್ಲ. ತನ್ನ ನೇರ ನಿಷ್ಠುರತೆಯ ಕಾರಣಕ್ಕೋಸ್ಕರವೇ ಮೊದಲಿದ್ದ ಚಾನೆಲ್​ನಿಂದ ಹೊರದೂಡಲ್ಪಟ್ಟಿದ್ದ ಅರ್ನಬ್ ಬೇರೆಯವರಂತೆ ಕೆಲಸ ಅರಸಿಕೊಂಡು ಮತ್ತೊಂದು ಕಂಪನಿಗೆ ಹೋಗಲಿಲ್ಲ. ತಾವೇ ರಿಪಬ್ಲಿಕ್ ಎನ್ನುವ ಸೌಧವನ್ನು ಕಟ್ಟಿದ್ದಲ್ಲದೆ ಬಲುಬೇಗ ಅದನ್ನು ನಂಬರ್ ಒನ್ ಕೂಡ ಆಗಿಸಿಬಿಟ್ಟರು. ವ್ಯಕ್ತಿಯೊಬ್ಬನಿಗೆ ತನ್ನ ಮೇಲಿರುವ ವಿಶ್ವಾಸ ಎಂತಹ ಅದ್ಭುತವಾದ ಕೆಲಸವನ್ನು ಮಾಡಬಲ್ಲದು ಎಂಬುದಕ್ಕೆ ಅರ್ನಬ್​ಗಿಂತ ಸಮರ್ಥವಾದ ಉದಾಹರಣೆ ಮತ್ತೊಂದಿರಲಾರದು. ಅವರನ್ನು ಕಂಡರಾಗದು ಎನ್ನುವವರೂ ಅರ್ನಬ್ ನಡೆಸುವ ಚರ್ಚೆಯನ್ನು ಬಾಯ್ಮುಚ್ಚಿಕೊಂಡೇ ನೋಡುತ್ತಿದ್ದರು. ಆ ಬಗೆಯ ವಾದ-ವಿವಾದಗಳು ಇಷ್ಟವಾಗದಿದ್ದರೂ ಅರ್ನಬ್ ವಿಚಾರಕ್ಕೆ ಬದ್ಧವಾಗಿರುವಂತಹ ಶೈಲಿ ಎಂಥವನಿಗೂ ಖುಷಿ ಕೊಡುತ್ತಿತ್ತು. ಅದರಲ್ಲೂ ಬಲಪಂಥೀಯ ವಿಚಾರಗಳಿಗೆ ತೆರೆದುಕೊಂಡು ಎಡಪಂಥೀಯರಿಗೆ ಕೊಡುತ್ತಿದ್ದ ಹೊಡೆತಗಳು ಅಸಾಮಾನ್ಯವಾಗಿರುತ್ತಿದ್ದವು. ಅರ್ನಬ್ ಓಟ, ಖ್ಯಾತಿಯ ಎದುರು ಅನೇಕ ಚಾನೆಲ್​ಗಳು ಪತರಗುಟ್ಟಿದ್ದಂತೂ ನಿಜ. ಇಂಗ್ಲಿಷ್ ಚಾನೆಲ್ ಅನ್ನೇ ನೋಡುವ, ಜನಾಭಿಪ್ರಾಯವನ್ನು ರೂಪಿಸಬಲ್ಲ ಒಂದಷ್ಟು ಪೇಜ್3 ಜನರಿದ್ದಾರಲ್ಲ, ಅವರೆಲ್ಲರನ್ನೂ ಅರ್ನಬ್ ತನ್ನ ಹಿಡಿತಕ್ಕೆ ತೆಗೆದುಕೊಂಡಾಗಿತ್ತು. ಇದು 70 ವರ್ಷಗಳ ಕಾಲ ಎಡಪಂಥೀಯರು, ಕಾಂಗ್ರೆಸ್ಸಿಗರು ಕಟ್ಟಿದ ಬಲುದೊಡ್ಡ ಸೌಧದ ಒಂದೊಂದೇ ಗೋಡೆಯನ್ನು ಉರುಳಿಸಲಾರಂಭಿಸಿತ್ತು.

    ಭೀಮಾ ಕೋರೆಂಗಾವ್ ಗಲಾಟೆಯಲ್ಲಿ ದಲಿತರು ಮರಾಠರನ್ನು ಕದನಕ್ಕೆ ಹಚ್ಚಿ ಸಮಾಜದ ಸ್ವಾಸ್ಥ್ಯ ಕೆಡಿಸಲೆತ್ನಿಸಿದವರನ್ನು ಸರ್ಕಾರವೇ ಬಿಟ್ಟುಬಿಟ್ಟಿತ್ತು, ಅರ್ನಬ್ ಬಿಡಲಿಲ್ಲ! ಸಾಕ್ಷಿಗಳ ಮೇಲೆ ಸಾಕ್ಷಿಗಳನ್ನು ತೆರೆದಿಡುತ್ತ ಅವರೆಲ್ಲ ಜೈಲಿನಲ್ಲಿ ಕೊಳೆಯುವಂತೆ ಮಾಡಿದರು. ಇಷ್ಟೇ ಆಗಿದ್ದರೆ ರಾಜಕೀಯ ಧುರೀಣರು ಸುಮ್ಮನಿರುತ್ತಿದ್ದರೇನೋ, ಅರ್ನಬ್ ಜೇನುಗೂಡಿಗೇ ಕೈಹಾಕಿಬಿಟ್ಟರು. ಪಾಲ್ಘರ್​ನಲ್ಲಿ ಸಾಧುಗಳನ್ನು ಬರ್ಬರವಾಗಿ ಹತ್ಯೆ ಮಾಡಿದರಲ್ಲ, ಉದ್ಧವ್ ಠಾಕ್ರೆ ಸರ್ಕಾರ ಅದನ್ನು ನೋಡಿಕೊಂಡು ಸುಮ್ಮನಾಗಿಬಿಟ್ಟಿತು, ಅರ್ನಬ್ ಬಿಡಲಿಲ್ಲ. ಪ್ರತಿದಿನವೂ ಉದ್ಧವ್ ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಇಷ್ಟಕ್ಕೂ ಅರ್ನಬ್ ಮತ್ತು ಕಾಂಗ್ರೆಸ್​ನ ದ್ವೇಷ ಹೊಸತೇನಲ್ಲ. ಈಗಂತೂ ಪಾಲ್ಘರ್​ನ ಗಲಾಟೆ ನಂತರ ಕಾಂಗ್ರೆಸ್ ಧಗಧಗ ಉರಿಯುತ್ತಿದೆ. ಏಕೆಂದರೆ ಸೋನಿಯಾರನ್ನು ರಾಜ್​ದೀಪ್ ಸರದೇಸಾಯಿಯಂಥ ಪತ್ರಕರ್ತರು ಹೆಸರು ಹಿಡಿದು ಕರೆಯುವುದಕ್ಕೆ ಹೆದರಿ ಗೌರವ ಕೊಟ್ಟು ಸಂಬೋಧಿಸುವುದಲ್ಲದೆ ಸಂದರ್ಶನದಲ್ಲಿ ‘ಅಡುಗೆ ಏನು ಮಾಡುತ್ತಿದ್ದೀರಿ?’ ಎಂಬಂಥ ಕ್ಷುಲ್ಲಕ ಪ್ರಶ್ನೆಗಳನ್ನು ಕೇಳುವಾಗ, ಅರ್ನಬ್ ಸೋನಿಯಾರನ್ನು ಆಂಟೋನಿಯೋ ಮಾಯ್ನೋ ಎಂಬ ಹಳೆಯ ಹೆಸರಿನಿಂದಲೇ ಸಂಬೋಧಿಸಿದರು. ಮತ್ತೆ ಮತ್ತೆ ಅದೇ ಹೆಸರಿನಿಂದ ಕರೆದರು. ಪರಿಣಾಮ ಪ್ರತಿಯೊಬ್ಬರೂ ಅವರನ್ನು ಅದೇ ಹೆಸರಿನಿಂದ ಕರೆಯುವ ಧೈರ್ಯ ತೋರಲಾರಂಭಿಸಿದರು. ಇದು ಕಾಂಗ್ರೆಸ್ಸಿನ ಸೌಧ ಉರುಳುವ ಮೊದಲ ಲಕ್ಷಣವಾಗಿತ್ತು. ಪಾಲ್ಘರ್ ಸಾಧುಗಳ ಕೊಲೆಗೆ ಉತ್ತರಿಸುವಂತೆ ಸೋನಿಯಾರನ್ನು ಅರ್ನಬ್ ಆಗ್ರಹಿಸುತ್ತಲೇ ಬಂದರು. ಕುದಿಯುತ್ತಿದ್ದ ಕಾಂಗ್ರೆಸ್ಸಿಗೆ ಕಾರಣವೊಂದು ಬೇಕಿತ್ತು. ದೇಶದ ಎಲ್ಲರೂ ಈ ವಿಚಾರವನ್ನು ಮರೆತೇ ಹೋಗಿದ್ದಾಗಲೂ ಅರ್ನಬ್ ಪಾಲ್ಘರ್ ಅನ್ನು ಪದೇ-ಪದೇ ನೆನಪಿಸಿಕೊಟ್ಟರು. ಇಷ್ಟೂ ಸಾಲದೆಂಬಂತೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಎಲ್ಲರೂ ಕೈಚೆಲ್ಲಿ ಕುಳಿತಿದ್ದಾಗ ಅದನ್ನು ಕೊಲೆ ಎಂದು ಮೊದಲು ದನಿ ಎತ್ತಿದವರೇ ಅರ್ನಬ್. ಮತ್ತು ಪೊಲೀಸರಿಗಿಂತ ಚುರುಕಾಗಿ ಈ ಕೇಸಿನಲ್ಲಿ ಪ್ರಗತಿ ಸಾಧಿಸುತ್ತ ಮುನ್ನುಗ್ಗಿದರು. ಇದು ಪೊಲೀಸರ ಕಣ್ಣು ಕೆಂಪಗಾಗಿಸಿತು. ಬಿಹಾರದ ಪೊಲೀಸರು ಈ ಕೇಸಿನ ವಿಚಾರಣೆಗೆಂದು ಬಂದಾಗ ಎರಡೂ ರಾಜ್ಯದ ಪೊಲೀಸರು ಕಿತ್ತಾಡುವಂತೆ ಆಗಿದ್ದೂ ಅರ್ನಬ್ ಕಾರಣಕ್ಕೆ ಎಂಬುದು ಸರ್ವವಿದಿತ. ಇಷ್ಟೇ ಆಗಿದ್ದರೂ ಸುಮ್ಮನಿರಬಹುದಿತ್ತೇನೋ. ಅವರು ಒಂದು ಹೆಜ್ಜೆ ಮುಂದೆ ಹೋಗಿ ಬಾಲಿವುಡ್​ನ ಡ್ರಗ್ ಮಾಫಿಯಾವನ್ನು ಕೆಣಕಿದರು. ದೀಪಿಕಾ ಪಡುಕೋಣೆಯಂಥ ನಟಿಯರು ಈ ಸುಳಿಯಲ್ಲಿ ಸಿಲುಕಿದರು. ಇದು ಇಲ್ಲಿಗೇ ನಿಲ್ಲದೆ ಶಾರುಖ್, ಸಲ್ಮಾನ್​ರಂಥ ದೊಡ್ಡ-ದೊಡ್ಡವರ ಅಂಗಳಕ್ಕೆ ತಲುಪಿಬಿಡುತ್ತಿತ್ತು. ಈ ಹೊತ್ತಿನಲ್ಲಿ ಆತಂಕಕ್ಕೊಳಗಾಗಿದ್ದು ದಾವೂದ್ ಪೋಷಿತ ಮುಂಬೈನ ಅಂಡರ್​ವರ್ಲ್ಡ್. ಹೇಗಾದರೂ ಮಾಡಿ ಅರ್ನಬ್ ಗೋಸ್ವಾಮಿ ಮತ್ತವರ ‘ರಿಪಬ್ಲಿಕ್’ ಅನ್ನು ಮುಗಿಸಿಬಿಡಬೇಕೆಂದು ಅವರು ಹೊಂಚು ಹಾಕುತ್ತಲೇ ಇದ್ದರು. ಅರ್ನಬ್ ಹಿಂದಿ ಚಾನೆಲ್​ಗೂ ಕೈ ಹಾಕಿ ‘ರಿಪಬ್ಲಿಕ್ ಭಾರತ’ವನ್ನು ಕೆಲವೇ ತಿಂಗಳಲ್ಲಿ ಭಾರತದ ಅತ್ಯಂತ ಹೆಚ್ಚು ಟಿಆರ್​ಪಿಯುಳ್ಳ ಹಿಂದಿ ಚಾನೆಲ್ ಆಗಿ ಮಾರ್ಪಡಿಸಿಬಿಟ್ಟರು. ಒಂದೆಡೆ ನಿರ್ಣಯ ಕೈಗೊಳ್ಳಬಲ್ಲ ಜನರ ನಡುವೆ ಅವರು ನಂಬರ್ ಒನ್ ಆಗಿ ಹೊರಹೊಮ್ಮಿದರೆ ಮತ್ತೊಂದೆಡೆ ಸಾಮಾನ್ಯ ಜನರ ನಡುವೆಯೂ ಅವರ ಸುದ್ದಿ ಸುಲಭವಾಗಿ ತಲುಪುವಂತಾಗಿತ್ತು. ಉರಿಸಿಕೊಳ್ಳದಿರುತ್ತಾರೇನು?! ಮೀಡಿಯಾಗಳು ಅರ್ನಬ್ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದವು. ಅವರಿಗೀಗ ವಿರೋಧಿಗಳು ಒಬ್ಬಿಬ್ಬರಲ್ಲ. ದಾವೂದ್ ಮತ್ತವನ ಗ್ಯಾಂಗು, ಇಡಿಯ ಬಾಲಿವುಡ್, ಹೆಚ್ಚು-ಕಡಿಮೆ ಬಿಜೆಪಿಯನ್ನುಳಿದು ಇತರೆಲ್ಲ ಪಕ್ಷಗಳು, ಸ್ವತಃ ಮಾಧ್ಯಮದ ಗೆಳೆಯರೂ ಕೂಡ ಅವರನ್ನು ಮಟ್ಟಹಾಕಲು ಕಾದು ನಿಂತಿದ್ದರು. ಆ ವೇಳೆಗೆ ಬಿಎಆರ್​ಸಿಯ ಟಿಆರ್​ಪಿ ಹಗರಣ ಹೊರಬಂತು. ಮುಂಬೈನ ಪೊಲೀಸ್ ಕಮೀಷನರ್ ಪರಮ್ೕರ್ ರಿಪಬ್ಲಿಕ್​ನ ವಿರುದ್ಧ ತಮ್ಮೆಲ್ಲ ಆಕ್ರೋಶವನ್ನು ಹೊರಹಾಕುವ ಅವಕಾಶವಾಗಿ ಈ ಘಟನೆಯನ್ನು ಬಳಸಿಕೊಂಡು ಬೇರೆ ಚಾನೆಲ್ ಉಲ್ಲೇಖಿಸುವ ಬದಲು ಸ್ವತಃ ರಿಪಬ್ಲಿಕ್ ಈ ಹಗರಣದಲ್ಲಿ ಸಿಲುಕಿಕೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲೇ ಹೇಳಿಬಿಟ್ಟರು. ಉಳಿದ ಎಲ್ಲ ಚಾನೆಲ್​ಗಳು ಇದನ್ನು ಹಬ್ಬದೂಟವೆಂಬಂತೆ ವರದಿ ಮಾಡಿದವು. ಅಂದು ರಾತ್ರಿಯೇ ತಿರುಗಿಬಿದ್ದ ಅರ್ನಬ್ ಬಾರ್ಕ್​ನ ಕಡತಗಳನ್ನೇ ಮುಂದಿರಿಸಿ ಈ ಹಗರಣದಲ್ಲಿ ನಿಜವಾದ ಪಾಲುದಾರರು ಯಾವ ಚಾನೆಲ್ ಎಂಬುದನ್ನು ಹೊರಹಾಕಿದರು! ಇದು ಇಡಿಯ ಮುಂಬೈ ಪೊಲೀಸರ ಮೇಲಿನ ವಿಶ್ವಾಸವನ್ನು ಧರಾಶಾಯಿಗೊಳಿಸಿತು. ಗೆಲುವಿನ ಕುದುರೆಯನ್ನೇರಿ ಕುಳಿತಿದ್ದ ಅರ್ನಬ್ ಪರಮವೀರ್​ಸಿಂಗರನ್ನು ಕೆಣಕುತ್ತಲೇ ಹೋದರು. ಸಹಿಸಲಾಗದ ಪರಮವೀರ್ ಹಳೆಯ ಈ ಕಡತವನ್ನು ತೆರೆಸಿ ಅರ್ನಬ್​ರನ್ನು ಜೈಲಿನೊಳಗೆ ಕೂಡಿಹಾಕಿಯೇಬಿಟ್ಟರು.

    ಅಚ್ಚರಿಯೇನು ಗೊತ್ತೇ? ಇತರ ಪತ್ರಕರ್ತರ್ಯಾರೂ ಈ ಬಂಧನದ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡುವುದಿರಲಿ ನಿಜವಾದ ಕಾಳಜಿಯನ್ನೂ ವ್ಯಕ್ತಪಡಿಸಲಿಲ್ಲ. ಪತ್ರಕರ್ತರ ಮೇಲಿನ ಈ ಬಗೆಯ ದೌರ್ಜನ್ಯ ಖಂಡಿಸಬೇಕಾಗಿರುವ ಎಡಿಟರ್ಸ್ ಗಿಲ್ಡ್ 348 ಪದಗಳ ಪತ್ರವೊಂದನ್ನು ಬಿಡುಗಡೆ ಮಾಡಿ ಬಂಧನವನ್ನು ಖಂಡಿಸಿತಾದರೂ ಪತ್ರದ ಮುಕ್ಕಾಲುಭಾಗವನ್ನು ರಿಪಬ್ಲಿಕ್ ಟಿವಿಯ ಪತ್ರಿಕೋದ್ಯಮದ ಶೈಲಿ ಸೂಕ್ತವಲ್ಲವೆಂಬುದನ್ನೇ ಹೇಳಿತು. ನ್ಯೂಸ್ ಬ್ರಾಡ್​ಕಾಸ್ಟರ್ಸ್ ಅಸೋಸಿಯೇಷನ್ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಂಶೋಧನಾತ್ಮಕ ಪತ್ರಿಕೋದ್ಯಮದ ಬಗ್ಗೆಯೇ ಪ್ರಶ್ನೆ ಕೇಳಿ ತಮ್ಮ ಜೊತೆಗಾರರನ್ನು ಸಂಕಟಕ್ಕೆ ದೂಡುವ ಇಂತಹ ಪ್ರಯತ್ನಕ್ಕೆ ಕೈ ಹಾಕಬಾರದು ಎಂದುಬಿಟ್ಟಿತ್ತು. ಅಂದರೆ ಡ್ರಗ್ ಮಾಫಿಯಾದ ವಿರುದ್ಧ ಪತ್ರಕರ್ತರು ಮಾತೇ ಆಡಬಾರದು ಎಂದರ್ಥ! ಕೆಲವು ಪತ್ರಕರ್ತರಂತೂ ಅರ್ನಬ್​ರನ್ನು ನೇರವಾಗಿಯೇ ನಿಂದಿಸಿ, ಆದರೂ ಬಂಧಿಸಿದ್ದು ತಪು್ಪ ಎಂದು ಹೇಳುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಲೆತ್ನಿಸಿದರು. ಇವರಿಗೆಲ್ಲ ಇರುವುದು ಒಂದೇ ಆಕ್ರೋಶ. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಅರ್ನಬ್ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ನಡೆದಿದ್ದಾರೆ. ಅವರ ವಿರುದ್ಧ ಇವರು ಮಾಡಲೆತ್ನಿಸಿದ ಆರೋಪಗಳೆಲ್ಲವೂ ನಿರಾಧಾರವೆಂದು ಸಾಬೀತಾಗುತ್ತಲೇ ಇದೆ. ಅವರನ್ನು ತಡೆಯಲು ಅಥವಾ ಅವರ ವಿರುದ್ಧ ಗೆಲ್ಲಲು ಇವರುಗಳಿಗಿದ್ದ ಉಪಾಯ ಇದೊಂದೇ. ಹೀಗಾಗಿ ಬಂಧಿಸಿಬಿಟ್ಟಿತು. ಆದರೆ ಪ್ರಶ್ನೆ ಇರುವುದು ಬಿಜೆಪಿಯ ಪ್ರತಿಕ್ರಿಯೆಯಲ್ಲಿ. ಅರ್ನಬ್ ಬಂಧನಕ್ಕೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರವನ್ನು ಕಾಂಗ್ರೆಸ್ಸು ಬಳಸಬಹುದಾದರೆ, ಅವರ ಬಿಡುಗಡೆಗೆ ನ್ಯಾಯವಾದ ಮಾರ್ಗದಲ್ಲೂ ಗೆಲುವು ಪಡೆಯಲು ಯತ್ನಿಸದಿರುವ ಬಿಜೆಪಿಯ ಕುರಿತಂತೆ ಏನೆಂದು ಹೇಳುವುದು?! ಒಬ್ಬರ ಬೆನ್ನನ್ನು ಮತ್ತೊಬ್ಬರು ಕೆರೆದು ಎಡಪಂಥೀಯರು ತಮ್ಮದ್ದೇ ಆದ ಪರಿಸರವೊಂದನ್ನು ಸೃಷ್ಟಿಸಿಕೊಂಡುಬಿಟ್ಟಿದ್ದಾರಲ್ಲವೇ, ಅಂಥದ್ದರಲ್ಲಿ ರಾಷ್ಟ್ರೀಯತೆಗಾಗಿ ಒಂದು ವಾತಾವರಣ ರೂಪಿಸುತ್ತಿರುವ ಅರ್ನಬ್​ರಂಥವರನ್ನು ಬೆಂಬಲಿಸದ ಕೇಂದ್ರ ಸರ್ಕಾರಕ್ಕೆ ಏನೆಂದು ಹೇಳಬೇಕು. ಆದರೆ ಒಂದಂತೂ ನೆನಪಿನಲ್ಲಿಟ್ಟುಕೊಳ್ಳಿ. ಒಮ್ಮೆ ಜೈಲಿನಿಂದ ಮರಳಿ ಬಂದವರು ಹಿಂದಿಗಿಂತಲೂ ಹೆಚ್ಚು ದೃಢರಾಗುತ್ತಾರೆ, ಸಮರ್ಥರಾಗುತ್ತಾರೆ. ಗಾಂಧಿ ವಿಚಾರದಲ್ಲೂ ಹೀಗೆಯೇ ಆಗಿದ್ದು. ಯಡಿಯೂರಪ್ಪ ಜೈಲಿನಿಂದ ಮರಳಿಬಂದ ಮೇಲೆ ಮುಖ್ಯಮಂತ್ರಿಯೂ ಆದರು. ಜೈಲಿನಿಂದ ವಾಪಸಾದ ದಿನವೇ ಡಿಕೆಶಿಯನ್ನು ಹಾರ-ತುರಾಯಿಗಳಿಂದ ಸ್ವಾಗತಿಸಲಾಗಿತ್ತು. ಆನಂತರ ಅವರು ಕಾಂಗ್ರೆಸ್ಸಿನ ಅಧ್ಯಕ್ಷರೂ ಆಗಿಬಿಟ್ಟರು. ಇನ್ನೀಗ ಅರ್ನಬ್ ಜೈಲಿನಿಂದ ಹೊರಗೆ ಬರುತ್ತಾರೆ. ಕಾಂಗ್ರೆಸ್ಸಿನ ನಿದ್ದೆಯನ್ನು ನಿಶ್ಚಯವಾಗಿ ಹಾಳುಮಾಡಲಿದ್ದಾರೆ. ಶಿವಸೇನೆಗೆ ಅವರನ್ನು ಎದುರಿಸುವುದು ಸುಲಭವಾಗಲಾರದು. ಇರುವ ಒಂದೇ ಆತಂಕವೇನೆಂದರೆ ಅರ್ನಬ್​ರನ್ನು ನ್ಯಾಯಾಂಗ ಬಂಧನದ ನಡುವೆಯೂ ದಾವೂದ್​ನ ಸಹಚರರೇ ತುಂಬಿರುವ ಮತ್ತೊಂದು ಜೈಲಿಗೆ ಒಯ್ಯಲಾಗುತ್ತಿದೆ. ಶಾಶ್ವತವಾಗಿ ಅವರ ದನಿಯನ್ನು ಅಡಗಿಸಿಬಿಡುತ್ತಾರಾ? ಭಯವಾಗುತ್ತಿರುವುದಂತೂ ನಿಜ. ಅರ್ನಬ್​ಗೆ ರಕ್ಷಣೆ ಕೊಡದ ಈ ದೆಹಲಿಯ ಮಂದಿ ಇತರ ಸಾಮಾನ್ಯ ಬಲಪಂಥೀಯರ ಕುರಿತಂತೆ ಯೋಚಿಸುವಷ್ಟು ಪುರಸೊತ್ತಿಟ್ಟುಕೊಂಡಿದ್ದಾರಾ? ಗೊತ್ತಿಲ್ಲ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts