More

    ಹುಟ್ಟಿನ ಮೂಲ ಮರೆಯದ ವಿಷ್ಣು ನಾಯ್ಕ

    ಅಂಕೋಲಾ: ನಾವು ಬೆಳೆದಂತೆ, ಸುಸ್ಥಿತಿಗೆ ಬಂದಂತೆ ಹುಟ್ಟಿನ ಮೂಲವನ್ನು ಮರೆಯುತ್ತೇವೆ. ಆದರೆ, ಸಾಹಿತಿ ವಿಷ್ಣು ನಾಯ್ಕ ಅವರು ಹುಟ್ಟು ಮತ್ತು ಹಸಿವಿನ ಸ್ಥಿತಿಯನ್ನು ಮರೆಯದೇ ಜೀವನದುದ್ದಕ್ಕೂ ಬರಹ ಮತ್ತು ಹೋರಾಟಕ್ಕೆ ಸ್ಪೂರ್ತಿಯನ್ನಾಗಿಸಿಕೊಂಡವರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿಯ ಜಿ.ಸಿ. ಕಾಲೇಜಿನ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಹಿತಿ, ಪ್ರಕಾಶಕ ದಿ. ವಿಷ್ಣು ನಾಯ್ಕ ಅವರ ಬದುಕು ಬರಹದ ವಿಚಾರ ಸಂಕಿರಣ ಅಮರ ಅಂಬಾರವನ್ನು ಉದ್ಘಾಟಿಸಿ ಮಾತನಾಡಿದರು. ವಿಷ್ಣು ನಾಯ್ಕ ಅವರ ಸಾಹಿತ್ಯದಲ್ಲಿ ನಮಗೆ ಗಾಢವಾಗಿ ತಟ್ಟುವುದು ಹಸಿವು. ಹಸಿವಿನ ಲೋಕದಿಂದ ಬಂದಿದ್ದ, ತಮ್ಮ ಪರಿಸರದಲ್ಲಿ ಹಸಿವಿನ ಸಂಕಟ ಕಂಡಿದ್ದ ಅವರು ಇದನ್ನು ಜೀವನದುದ್ದಕ್ಕೂ ಮರೆಯಲಿಲ್ಲ. ನವೋದಯ, ನವ್ಯ, ಬಂಡಾಯ ಹೀಗೆ ಎಲ್ಲ ಪ್ರಕಾರದ ಚಳವಳಿಗಳನ್ನು ಹತ್ತಿರದಿಂದ ಕಂಡಿದ್ದ ಅವರು ಇದರೊಳಗೆ ಧುಮುಕದೇ ದೂರದಲ್ಲಿ ನಿಂತು ಅರಗಿಸಿಕೊಂಡು ಬೆಳೆದವರು. ಬಡತನ, ಅನಕ್ಷರತೆ, ಹಸಿವಿಗಿಂತ ದೊಡ್ಡದಾದ ತತ್ವಗಳಿಲ್ಲ ಎಂದು ನಂಬಿದವರು ಎಂದು ಪ್ರೊ. ಸಿದ್ದರಾಮಯ್ಯ ಹೇಳಿದರು.

    ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ಉ.ಕ. ಜಿಲ್ಲೆಯ ಸಾಂಸ್ಕೃತಿಕ ನಾಯಕರಾಗಿರುವ ವಿಷ್ಣು ನಾಯ್ಕ ವ್ಯಕ್ತಿಯಾಗಿರದೇ ಶಕ್ತಿಯಾಗಿದ್ದರು ಎಂದರು.

    ಹಿರಿಯ ಸಾಹಿತಿ ರೋಹಿದಾಸ ನಾಯಕ, ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿದರು.

    ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾನಸ ವಾಸರೆ ಆಶಯ ಗೀತೆ ಹಾಡಿದರು. ಅಮಿತಾ ನಾಯ್ಕ ವಿಷ್ಣು ನಾಯ್ಕರ ಗೀತೆ ಹಾಡಿದರು. ಕಸಾಪ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಮುರ್ತಜಾ ಹುಸೇನ್ ಪರಿಚಯಿಸಿದರು.

    ಅಂಕೋಲಾ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಪತ್ರಕರ್ತ ಸುಭಾಸ ಕಾರೇಬೈಲ್ ನಿರ್ವಹಿಸಿದರು. ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ, ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಉಪಸ್ಥಿತರಿದ್ದರು. ತಾಲೂಕು ಕಸಾಪ, ಜಿ.ಸಿ.ಕಾಲೇಜು, ದಿನಕರ ಪ್ರತಿಷ್ಠಾನ, ದಿನಕರ ವೇದಿಕೆ, ಕರ್ನಾಟಕ ಸಂಘ, ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts