More

    ವಿರಾಟ್ ಕೊಹ್ಲಿಗೆ ಸೆಂಚುರಿ ಟ್ರಬಲ್! 24 ಇನಿಂಗ್ಸ್‌ಗಳಿಂದ ಸಿಡಿದಿಲ್ಲ ಶತಕ

    ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಶತಕಗಳ ಸರದಾರ ಎಂದೇ ಪರಿಚಿತರು. ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಶತ ಶತಕಗಳ ದಾಖಲೆಯನ್ನೂ ಮುರಿಯಬಲ್ಲ ನೆಚ್ಚಿನ ಅಭ್ಯರ್ಥಿ. ಮೊದಲ ಇನಿಂಗ್ಸ್ ಇರಲಿ, ಚೇಸಿಂಗ್ ಇರಲಿ ವಿರಾಟ್ ಕೊಹ್ಲಿ ಅವರಿಂದ ಶತಕದ ನಿರೀಕ್ಷೆ ಇಡಲಾಗುತ್ತದೆ. ಆದರೆ ಅವರೀಗ ಕಳೆದೊಂದು ವರ್ಷದಿಂದ ಶತಕ ಸಿಡಿಸುವುದನ್ನೇ ಮರೆತಿದ್ದಾರೆ. ಭಾನುವಾರವೂ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶತಕದ ಸನಿಹ ಬಂದರೂ, 11 ರನ್ ದೂರವಿದ್ದಾಗ ಅವರು ಎಡವಿದರು. ಇದರಿಂದ ಈಗ ಅವರು ವೃತ್ತಿಜೀವನದಲ್ಲಿ ಸುದೀರ್ಘ ಕಾಲ ಶತಕ ಬರ ಎದುರಿಸುವ ಭೀತಿಯಲ್ಲಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ 24 ಇನಿಂಗ್ಸ್‌ಗಳಿಂದ ಕೊಹ್ಲಿ ಶತಕ ಸಿಡಿಸಿಲ್ಲ. 89 ರನ್‌ಗಳೇ ಅವರ ಗರಿಷ್ಠ ಗಳಿಕೆ. ಆದರೆ ಈ ಪೈಕಿ ಹೆಚ್ಚಿನ ರನ್‌ಬರ ಎದುರಿಸಿಲ್ಲ. 39.95ರ ಸರಾಸರಿಯಲ್ಲಿ 839 ರನ್ ಬಾರಿಸಿದ್ದಾರೆ. 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಶತಕ ಮಾತ್ರ ಮಿಸ್ ಆಗುತ್ತ ಬಂದಿದೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಮೊದಲ 438 ಇನಿಂಗ್ಸ್‌ಗಳಲ್ಲಿ 70 ಶತಕ ಅಂದರೆ ಪ್ರತಿ 6.25 ಇನಿಂಗ್ಸ್‌ಗೆ ಒಂದು ಶತಕ ಸಿಡಿಸುತ್ತ ಬಂದಿದ್ದ ಕೊಹ್ಲಿ ಇದೀಗ ಸತತ 24 ಇನಿಂಗ್ಸ್‌ಗಳಿಂದ ಶತಕದ ಬರ ಕಾಡುತ್ತಿದೆ. ಕಳೆದ 4 ಸರಣಿಗಳಲ್ಲಿ (ನ್ಯೂಜಿಲೆಂಡ್ ಪ್ರವಾಸ, ತವರಿನಲ್ಲಿ ಆಸೀಸ್, ವೆಸ್ಟ್ ಇಂಡೀಸ್ ವಿರುದ್ಧ) ಕೊಹ್ಲಿ ಶತಕ ಬಾರಿಸಲು ವಿಫಲರಾಗಿದ್ದಾರೆ. ಈ ಮುನ್ನ ಅವರು 3 ಬಾರಿ ಸತತ 3 ಸರಣಿಗಳ್ಲಲಿ ಶತಕ ಬಾರಿಸಲು ವಿಫಲರಾಗಿದ್ದೇ ಗರಿಷ್ಠವಾಗಿತ್ತು.

    ಏಕದಿನ ಮಾತ್ರವಲ್ಲ, ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲೂ ಕೊಹ್ಲಿ ಕಳೆದೊಂದು ವರ್ಷದಿಂದ ಹೆಚ್ಚಿನ ಯಶ ಕಂಡಿಲ್ಲ. 2020ರಲ್ಲಿ ಆಡಿದ 6 ಟಿ20 ಪಂದ್ಯಗಳಲ್ಲಿ ಅವರು ಒಂದೂ ಅರ್ಧಶತಕ ಬಾರಿಸಿಲ್ಲ. ವರ್ಷಾರಂಭದಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಆಡಿದ ಟೆಸ್ಟ್ ಸರಣಿಯ 4 ಇನಿಂಗ್ಸ್‌ಗಳಲ್ಲಿ ಒಟ್ಟು 38 ರನ್‌ಗಳನ್ನಷ್ಟೇ ಗಳಿಸಿದ್ದರು.

    12 ವರ್ಷಗಳ ವೃತ್ತಿಜೀವನದಲ್ಲಿ ಕೊಹ್ಲಿ ಈ ಹಿಂದೆ 2 ಬಾರಿ ಇಂಥದ್ದೇ ಶತಕದ ಬರ ಎದುರಿಸಿದ್ದರು. 2011ರ ಫೆಬ್ರವರಿಯಿಂದ 2011ರ ಸೆಪ್ಟೆಂಬರ್‌ವರೆಗೆ ಸತತ 24 ಇನಿಂಗ್ಸ್‌ಗಳ ಕಾಲ ಅವರು ಶತಕ ಬಾರಿಸಿರಲಿಲ್ಲ. ಬಳಿಕ 2014ರ ಫೆಬ್ರವರಿಯಿಂದ 2014ರ ಅಕ್ಟೋಬರ್‌ವರೆಗೆ ಸತತ 25 ಇನಿಂಗ್ಸ್‌ಗಳ ಕಾಲ ಅವರ ಶತಕ ಬಾರಿಸಿರಲಿಲ್ಲ. ಇವೆರಡೂ ಸಂದರ್ಭಗಳಲ್ಲಿ ಅವರು ಶತಕದ ಲಯಕ್ಕೆ ಮರಳಿದ ಬಳಿಕ ಭರ್ಜರಿ ನಿರ್ವಹಣೆಯನ್ನೇ ತೋರಿದ್ದರು. ಈ ಬಾರಿಯೂ ಅವರು ಅದೇ ರೀತಿ ಪುಟಿದೇಳುವ ನಿರೀಕ್ಷೆ ಇಡಲಾಗಿದೆ.

    ಪಿಂಕ್ ಟೆಸ್ಟ್‌ನಲ್ಲಿ ಕಡೇ ಶತಕ!
    ವಿರಾಟ್ ಕೊಹ್ಲಿ ಅವರ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕ ದಾಖಲಾಗಿರುವುದು ಕಳೆದ ವರ್ಷದ ಐತಿಹಾಸಿಕ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ. ಬಾಂಗ್ಲಾದೇಶ ವಿರುದ್ಧದ ಕೋಲ್ಕತದಲ್ಲಿ ನಡೆದ ಪಂದ್ಯದ 2ನೇ ದಿನವಾದ ನವೆಂಬರ್ 23ರಂದು ಕೊಹ್ಲಿ (136) ಕೊನೆಯ ಶತಕ ದಾಖಲಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅವರ ಕೊನೆಯ ಶತಕ ಕಳೆದ ವರ್ಷದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಗಸ್ಟ್ 14ರಂದು ಪೋರ್ಟ್ ಆಫ್​ ಸ್ಪೇನ್‌ನಲ್ಲಿ ದಾಖಲಾಗಿತ್ತು. ಕೊನೇ ಶತಕದ ಬಳಿಕ 3 ಬಾರಿ 80ಕ್ಕಿಂತ ಹೆಚ್ಚು ರನ್ ಬಾರಿಸಿರುವ ಕೊಹ್ಲಿ, 90ರ ಗಡಿ ದಾಟಲು ಸಫಲರಾಗಿಲ್ಲ.

    472: ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ 472 ದಿನಗಳು ಕಳೆದಿವೆ. ಈ ಮುನ್ನ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆಯಿಂದ 493 ದಿನಗಳ ಬಳಿಕ ಚೊಚ್ಚಲ ಶತಕ ಸಿಡಿಸಿದ್ದೇ ಗರಿಷ್ಠ ಅಂತರ.

    *ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಯಾವುದೇ ಕಳವಳದ ಅಗತ್ಯವಿಲ್ಲ. 2020ರಲ್ಲಿ ಅವರಿನ್ನೂ ಶತಕ ಸಿಡಿಸಿಲ್ಲ. ಆದರೆ ಒಮ್ಮೆ ಅವರು ಶತಕ ಸಿಡಿಸಿದರೆ, 3-4 ಶತಕಗಳು ಬೆನ್ನುಬೆನ್ನಿಗೆ ಬರಲಿವೆ. ಕಳೆದ ಪಂದ್ಯದಲ್ಲಿ ಅವರು ಅದ್ಭುತ ಕ್ಯಾಚ್‌ಗೆ ಔಟಾಗಿದ್ದರು. ಕಳೆದ 24 ಇನಿಂಗ್ಸ್‌ಗಳಲ್ಲೂ ಅವರು ಲಯ ಕಳೆದುಕೊಂಡಂತೆ ಎಲ್ಲೂ ಕಂಡಿಲ್ಲ.
    ಮೈಕೆಲ್ ವಾನ್, ಇಂಗ್ಲೆಂಡ್ ಮಾಜಿ ನಾಯಕ

    5 ವರ್ಷಗಳ ಬಳಿಕ ಸತತ 2 ಸರಣಿ ಸೋಲು
    ವರ್ಷಾರಂಭದ ನ್ಯೂಜಿಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲಿ 0-3ರಿಂದ ವೈಟ್‌ವಾಷ್ ಎದುರಿಸಿದ್ದ ಭಾರತ ತಂಡ, ಇದೀಗ ಆಸೀಸ್‌ನಲ್ಲೂ ಏಕದಿನ ಸರಣಿ ಸೋತು, ವೈಟ್‌ವಾಷ್ ಭೀತಿಯಲ್ಲಿದೆ. ಇದರಿಂದ ಭಾರತ ತಂಡ ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಸತತ 2 ಏಕದಿನ ಸರಣಿ ಸೋತಂತಾಗಿದೆ. ಈ ಮುನ್ನ 2015ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು 2016ರ ಜನವರಿಯಲ್ಲಿ ಆಸೀಸ್ ವಿರುದ್ಧ ಸತತ 2 ಏಕದಿನ ಸರಣಿ ಸೋತಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕಿದು ಮೊದಲ ಸತತ 2 ಸರಣಿ ಸೋಲು ಕೂಡ ಆಗಿದೆ. ಇನ್ನು ಭಾರತ ತಂಡ 2015-16ರ ಬಳಿಕ ಮೊದಲ ಬಾರಿಗೆ ಸತತ 5 ಏಕದಿನ ಪಂದ್ಯಗಳನ್ನು ಸೋತಿದೆ.

    ಫುಟ್‌ಬಾಲ್ ದಿಗ್ಗಜ ಮರಡೋನಾಗೆ ಐದಲ್ಲ, 11 ಮಕ್ಕಳಂತೆ! ಆಸ್ತಿಗಾಗಿ ಜಗಳದ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts