More

    VIDEO| 9 ವರ್ಷದ ಬಳಿಕ ವಿಕೆಟ್​ ಪಡೆದ ವಿರಾಟ್​ ಕೊಹ್ಲಿ: ಅನುಷ್ಕಾ ಶರ್ಮಾ ಪ್ರತಿಕ್ರಿಯೆ ವೈರಲ್​

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ನ.12) ನಡೆದ ವಿಶ್ವಕಪ್​ ಪಂದ್ಯದಲ್ಲಿ ಆತಿಥೇಯ ಭಾರತ, ಎದುರಾಳಿ ನೆದರ್ಲೆಂಡ್ಸ್​ ವಿರುದ್ಧ 160 ರನ್​ಗಳ ಭಾರೀ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಅಜೇಯ ಓಟವನ್ನು ಮುಂದುವರಿಸಿದೆ. ಇಂದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸಂಘಟಿತ ಪ್ರದರ್ಶನವನ್ನು ನೀಡಿತು. ಅಲ್ಲದೆ, ಇಂದಿನ ಪಂದ್ಯ ಸ್ಮರಣೀಯ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.

    ಇಂದು ವಿರಾಟ್​ ಕೊಹ್ಲಿ (51) ಅರ್ಧಶತಕ ಬಾರಿಸಿ ಮಿಂಚಿದ್ದಲ್ಲದೆ, ಒಂದು ವಿಕೆಟ್ ಸಹ ಗಳಿಸಿದರು. ಗಮನಾರ್ಹ ಸಂಗತಿ ಏನೆಂದರೆ, ಬರೋಬ್ಬರಿ 9 ವರ್ಷಗಳ ಬಳಿಕ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್​ ಪಡೆದರು. ನಾಯಕ ರೋಹಿತ್​ ಶರ್ಮ, ಕೊಹ್ಲಿಯನ್ನು ಕರೆದು ಬೌಲ್​ ಮಾಡುವಂತೆ ಹೇಳಿದರು. ಪಂದ್ಯದ ಎರಡನೇ ಇನಿಂಗ್ಸ್​ನ 24ನೇ ಓವರ್ ಎಸೆದ​ ಕೊಹ್ಲಿ ಮೂರನೇ ಎಸತದಲ್ಲಿ ನೆದರ್ಲೆಂಡ್ಸ್​ ತಂಡ ಸ್ಕಾಟ್​ ಎಡ್ವರ್ಡ್​ ವಿಕೆಟ್​ ಕಬಳಿಸಿದರು. ಚೆಂಡು ಲೆಗ್ ಸ್ಟಂಪ್ ಕೆಳಗೆ ಉರುಳಿತು ಮತ್ತು ಎಡ್ವರ್ಡ್ಸ್ ಬ್ಯಾಟ್​ನಿಂದ ಔಟ್​ಸೈಟ್​ ಎಡ್ಜ್​ ಆದ ಬಾಲನ್ನು ಕೆಎಲ್ ರಾಹುಲ್ ಮಿಂಚಿನಂತೆ ಹಿಡಿದುಕೊಂಡರು.

    ವಿಕೆಟ್​ ಬೀಳುತ್ತಿದ್ದಂತೆ ಕೊಹ್ಲಿ, ರಾಹುಲ್​ ಮತ್ತು ರೋಹಿತ್​ ಶರ್ಮ ಸಂಭ್ರಮಿಸಿದರು. ಆದರೆ, ಇದೆಲ್ಲದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಕೊಹ್ಲಿ ಅವರು ಮುದ್ದಿನ ಮಡದಿ ಅನುಷ್ಕಾ ಶರ್ಮ ಸಂಭ್ರಮಾಚರಣೆ. ವಿಕೆಟ್​ ಬೀಳುತ್ತಿದ್ದಂತೆ ಸ್ಟೇಡಿಯಂನಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ಎದ್ದು ನಿಂತು ಸಂಭ್ರಮಿಸಿದರು. ಅನುಷ್ಕಾ ಅವರು ಮುಖಭಾವ ಕೊಹ್ಲಿ ಅವರಿಗೂ ವಿಕೆಟ್​ ಬೀಳುತ್ತಾ ಎನ್ನುವಂತಿತ್ತು. ಒಂದು ರೀತಿಯಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಆ ವಿಡಿಯೋವನ್ನು ಕೆಳಗಿನ ಐಸಿಸಿ ಇನ್​ಸ್ಟಾಗ್ರಾಂ ಖಾತೆಯಲ್ಲಿ ನೋಡಬಹುದು.

    View this post on Instagram

    A post shared by ICC (@icc)

    ಪಂದ್ಯದ ವಿಚಾರಕ್ಕೆ ಬರುವುದಾದರೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 411ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್​ ಪಡೆ 47.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 250 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್​ ಇಂಡಿಯಾ 160 ರನ್​ಗಳ ಭಾರೀ ಅಂತರದಿಂದ ಗೆಲುವಿನ ಕೇಕೆ ಹಾಕಿತು. ತಂಡದ ಪರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (45), ತೇಜ ನಿಡಮನೂರು (54), ಕಾಲಿನ್ ಅಕರ್ಮನ್ (35) ಹೊರತುಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.

    ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 50 ಓವರ್​ಗಳಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 410 ರನ್​ ಕಲೆ ಹಾಕಿತು. ಬ್ಯಾಟ್​ ಹಿಡಿದು ಕ್ರೀಡಾಂಗಣಕ್ಕಿಳಿದ ಟೀಮ್​ ಇಂಡಿಯಾದ ಪ್ರತಿ ಬ್ಯಾಟರ್​ಗಳು ಸಹ ರನ್​ ಮಾರುತವನ್ನೇ ಸೃಷ್ಟಿಸಿದರು. ರೋಹಿತ್​ ಶರ್ಮ (61 ರನ್​, 54 ಎಸೆತ, 8 ಬೌಂಡರಿ, 2 ಸಿಕ್ಸರ್​) ಮತ್ತು ಶುಭಮಾನ್​ ಗಿಲ್​ (51 ರನ್​, 32 ಎಸೆತ, 3 ಬೌಂಡರಿ, 4 ಸಿಕ್ಟರ್​) 100 ರನ್​ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ವಿರಾಟ್​ ಕೊಹ್ಲಿ ಸಹ ನೆದರ್ಲೆಂಡ್ಸ್​ ಬೌಲರ್​ಗಳನ್ನು ಕಾಡಿದರು. 56 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ 1 ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದ ಶ್ರೇಯಸ್​ ಅಯ್ಯರ್ ( ಅಜೇಯ 128 ರನ್​, 94 ಎಸೆತ, 10 ಬೌಂಡರಿ, 5 ಸಿಕ್ಸರ್​)​ ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಕೆ.ಎಲ್​. ರಾಹುಲ್​ (102 ರನ್​, 64 ಎಸೆತ, 11 ಬೌಂಡರಿ, 4 ಸಿಕ್ಸರ್​) ದ್ವಿಶತಕ ಜತೆಯಾಟದೊಂದಿಗೆ ಉತ್ತಮ ಇನಿಂಗ್ಸ್​ ಆಡಿದರು. ನೆದರ್ಲೆಂಡ್ಸ್​ ಬೌಲರ್​ಗಳನ್ನು ಅಕ್ಷರಶಃ ಬೆಂಡತ್ತಿದ ಈ ಜೋಡಿ ಎರಡು ವೈಯಕ್ತಿಕ ಶತಕಗಳೊಂದಿಗೆ ಭಾರತ ತಂಡ 410 ರನ್​ಗಳ ಬೃಹತ್​ ಗುರಿಯನ್ನು ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಸೂರ್ಯಕುಮಾರ್​ ಯಾದವ್​ 2 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಸೆಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts