ಹೌರಾ: ಪಶ್ಚಿಮ ಬಂಗಾಳದ ಹೌರಾದಲ್ಲಿ ಗುರುವಾರ ಸಂಜೆ ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ಘರ್ಷಣೆಯಿಂದ ಸಂಭವಿಸಿದ್ದ ಹಿಂಸಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಶಿಬಿಪುರ್ದಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ 10ಕ್ಕೂ ಹೆಚ್ಚು ಗಾಯಗೊಂಡಿದ್ದು 36 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಹೌರಾದ ಶಿಬಿಪುರ್ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕ ಕ್ರಮಗಳನ್ನು ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀ ರಾಮನ ತೊಡೆ ಏರಿ ಹೂಮಾಲೆ ಹಾಕಿದ್ದಕ್ಕೆ ಕ್ಷಮೆಯಾಚಿಸಿದ ಬಿಜೆಪಿ ಶಾಸಕ
ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳ ರಾಜ್ಯಪಾಲರಾದ ಸಿ.ವಿ.ಆನಂದ ಬೋಸ್ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುಕಂತಾ ಮಜುಂದಾರ್ ಅವರಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ವರದಿ ಕೇಳಿದ್ಧಾರೆ ಎಂದು ತಿಳಿದು ಬಂದಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ ಬಂಗಾಳದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೊಂದು ಬಿಜೆಪಿ ಪ್ರಾಯೋಜಿತ ಹಿಂಸಾಚಾರವಾಗಿದ್ದು ತಪ್ಪಿತಸ್ಥರು ಯಾರು ಆದರು ಬಿಡುವ ಮಾತಿಲ್ಲ ಎಂದು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ NIA ತನಿಖೆ ಹಾಗೂ ಗಲಭೆ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಶಶಸ್ತ್ರ ಮೀಸಲು ಪಡೆಗಳನ್ನು ನಿಯೋಜಿಸುವಂತೆ ಕೋರಿ ಕಲ್ಕತ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.