More

    ತಾಯಿಯ ಗುರುತೇ ಹಿಡಿಯುತ್ತಿಲ್ಲ ನಿರ್ಭಯಾ ಪ್ರಕರಣದ ಅಪರಾಧಿ ವಿನಯ್​ ಶರ್ಮಾ: ಹೆಚ್ಚಿನ ಚಿಕಿತ್ಸೆಗೆ ಅವಕಾಶ ಕೋರಿದ ಅಪರಾಧಿ ಪರ ವಕೀಲ

    ನವದೆಹಲಿ: ನಿರ್ಭಯಾ ಪ್ರಕರಣದಡಿಯಲ್ಲಿ ತಿಹಾರ್​ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್​ ಶರ್ಮಾ ಭಾನುವಾರದಂದು ಜೈಲಿನ ಗೋಡೆಗೆ ತನ್ನ ತಲೆಯನ್ನು ಚಚ್ಚಿಕೊಂಡಿದ್ದಾನೆ. ಇದರಿಂದಾಗಿ ಆತ ತನ್ನ ತಾಯಿಯನ್ನೂ ಗುರುತಿಸಲಾಗದಂತಹ ಸ್ಥಿತಿ ತಲುಪಿದ್ದು ಆತನಿಗೆ ಹೆಚ್ಚಿನ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು ಎಂದು ಆರೋಪಿ ಪರ ವಕೀಲರು ಕೇಳಿಕೊಂಡಿದ್ದಾರೆ.

    ನಿರ್ಭಯಾ ಪ್ರಕರಣದ ಅಪರಾಧಿಗಳಾಗಿರುವ ವಿನಯ್​ ಶರ್ಮಾ, ಅಕ್ಷಯ್​ ಕುಮಾರ್​, ಪವನ್​ ಗುಪ್ತಾ ಮತ್ತು ಮುಖೇಶ್​ ಸಿಂಗ್​ನ್ನು ಮಾರ್ಚ್​ 3ರಂದು ಗಲ್ಲಿಗೇರಿಸುವಂತೆ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಗಲ್ಲು ಶಿಕ್ಷೆಗೆ ಒಂದು ವಾರ ಬಾಕಿ ಇರುವಾಗಲೇ ಫೆ.26ರಂದು ಅಪರಾಧಿ ವಿನಯ್​ ಶರ್ಮಾ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾನೆ. ಸೆಲ್​ನಲ್ಲಿ ಇದ್ದ ಅಧಿಕಾರಿಗಳು ಆತ ತಲೆ ಚಚ್ಚಿಕೊಳ್ಳುತ್ತಿರುವುದನ್ನು ಗಮನಿಸಿ ತಡೆದಿದ್ದಾರೆ. ಆತನ ಆ ನಡವಳಿಕೆಯಿಂದ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.

    ಈ ಕುರಿತಾಗಿ ಮಾತನಾಡಿರುವ ಅಪರಾಧಿ ಪರ ವಕೀಲ, “ವಿನಯ್​ ಶರ್ಮಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ. ತಲೆ ಚಚ್ಚಿಕೊಂಡಿರುವುದರಿಂದ ಅವನಿಗೆ ಎಲ್ಲರ ಗುರುತು ಮರೆತುಹೋಗಿದೆ. ತಾಯಿಯನ್ನೇ ಗುರುತಿಸದ ಸ್ಥಿತಿ ತಲುಪಿದ್ದಾನೆ” ಎಂದು ಹೇಳಿದ್ದಾರೆ.

    ಅಪರಾಧಿಯನ್ನು ಇನ್​ಸ್ಟಿಟ್ಯೂಟ್​ ಆಫ್ ಹ್ಯೂಮನ್​ ಬಿಹೇವಿಯರ್​ ಮತ್ತು ಅಲೈಡ್​ ಸೈನ್ಸ್​ಗೆ ದಾಖಲಿಸಲು ಅವಕಾಶ ಮಾಡಿಕೊಡಬೇಕು ಎಂದು ವಕೀಲ ಕೇಳಿಕೊಂಡಿದ್ದಾರೆ. ಕಳೆದ ವಾರ, ಅಪರಾಧಿಯು ಉಪವಾಸ ಸತ್ಯಾಗ್ರಹ ಮಾಡುತ್ತಿರುವುದಾಗಿ ತಿಳಿಸಿದ್ದ ವಕೀಲರು, ಆತನ ಮಾನಸಿಕ ಸ್ಥಿತಿ ಸರಿಯಾಗಿಲ್ಲ ಎಂದು ಹೇಳಿದ್ದರು.

    ನಾಲ್ವರು ಅಪರಾಧಿಗಳ ಪೈಕಿ ವಿನಯ್​ ಶರ್ಮಾ ಎಲ್ಲರಿಗಿಂತ ಭಿನ್ನವಾಗಿದ್ದು, ಆಗಾಗ ವಿಚಿತ್ರವಾಗಿ ವರ್ತಿಸುತ್ತಿರುತ್ತಾನೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts