More

    ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

    ಹನೂರು: ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ನ ಗೇಟ್ ತೆರೆಯದ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟದ ತಪ್ಪಲಿನ ಇಂಡಿಗನತ್ತ, ಮೆಂದಾರೆ, ಪಡಸಲನತ್ತ ಹಾಗೂ ತೊಳಸಿಕರೆಯ ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಜನರು ಬುಧವಾರ ಹಳೆಯೂರು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದರು.

    ಮ.ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಮಂಗಳವಾರ ಸುತ್ತಮುತ್ತಲ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಜನರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ಜೀಪ್ ಮೂಲಕ ಚಾ.ನಗರಕ್ಕೆ ತೆರಳಿದ್ದೆವು. ಊರಿಗೆ ಹಿಂದಿರುಗುವಷ್ಟರಲ್ಲಿ ಹಳೆಯೂರು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿ ರಾತ್ರಿ 10 ಗಂಟೆಯಾಗಿತ್ತು. ಆದರೆ ಗೇಟ್ ತೆಗೆಯಲು ಇಲ್ಲಿ ಯಾವೊಬ್ಬ ನೌಕರನೂ ಇರಲಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಡುರಾತ್ರಿ 1 ಗಂಟೆಗೆ ಗೇಟ್ ಬೀಗ ತೆಗೆಸಲಾಯಿತು. ಇದರಿಂದ 3 ಗಂಟೆಗಳ ಕಾಲ ಚೆಕ್‌ಪೋಸ್ಟ್ ಬಳಿ ಕಾದು ನಿಂತು ತೊಂದರೆ ಅನುಭವಿಸಬೇಕಾಯಿತು ಎಂದು ಗ್ರಾಪಂ ಮಾಜಿ ಸದಸ್ಯ ಮಹದೇವಪ್ಪ ಆರೋಪಿಸಿದರು.

    ಇಂಡಿಗನತ್ತ, ಪಡಸಲನತ್ತ, ತೊಳಸಿಕೆರೆ, ಮೆಂದಾರೆ ಈ ಗ್ರಾಮಗಳು ಸಮರ್ಪಕ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈ ಹಿಂದೆ ಇಲ್ಲಿನ ಜನರು ಮ.ಬೆಟ್ಟಕ್ಕೆ ತೆರಳುವ ಸಲುವಾಗಿ ಜೀಪ್ ಸಂಚರಿಸಲು ಸರ್ಕಾರದ ಕೂಲಿಗಾಗಿ ಕಾಳು ಯೋಜನೆಯಡಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಕಚ್ಚಾ ರಸ್ತೆಯನ್ನು ನಿರ್ಮಿಸಿಕೊಂಡಿದ್ದೆವು. ಆದರೆ ಇದೀಗ ಅರಣ್ಯ ಇಲಾಖೆ ಈ ರಸ್ತೆಗೆ ಗೇಟ್ ಹಾಕಿದ್ದು, ನಿರ್ಬಂಧ ವಿಧಿಸಿದೆ. ಇದರಿಂದ ಜನರ ಸಂಚಾರಕ್ಕೆ ತೊಡಕನ್ನು ಉಂಟು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ರಾತ್ರಿ ವೇಳೆ ಹೆರಿಗೆ ಹಾಗೂ ಇನ್ನಿತರ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕಾದರೆ ತುಂಬ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಗೇಟ್ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಬಾಂಬ್ ಹಾಕಿ ಸಾಯಿಸಿಬಿಡಿ: ಈ ಗ್ರಾಮಗಳಲ್ಲಿ ಸುಮಾರು 1,500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಮೂಲ ಸೌಕರ್ಯವಿಲ್ಲದ ಪರಿಣಾಮ ಬಾವಿ ನೀರನ್ನು ಕುಡಿದುಕೊಂಡು ದೀಪದ ಬೆಳಕಿನಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವಂತೆ ಸಚಿವರಿಗೆ, ಮುಖ್ಯಮಂತ್ರಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಹಳ್ಳಿಗಳು ನತದೃಷ್ಟ ಹಳ್ಳಿಗಳಾಗಿವೆ. ಆದ್ದರಿಂದ ಮುಂದಿನ ದಿನಗಳಲ್ಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಸಮೀಪದ 3 ಕಿ.ಮೀ ಅಂತರದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಮೂಲಕ ಈ ಗ್ರಾಮಗಳಿಗೆ ಬಾಂಬ್ ಹಾಕಿಬಿಡಿ. ಇದರಿಂದ ಎಲ್ಲರೂ ಸಾಯುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಇನ್‌ಸ್ಪೆಕ್ಟರ್ ಜಗದೀಶ್ ಮಾತನಾಡಿ, ಪ್ರತಿಭಟನೆ ನಡೆಸಬೇಕಾದರೆ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಬೇಕು. ದಿಢೀರ್ ಪ್ರತಿಭಟನೆ ನಡೆಸುವಂತಿಲ್ಲ ಎಂದು ತಿಳಿಸಿದಾಗ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು. ವಿವಿಧ ಗ್ರಾಮದ ಮುಖಂಡರಾದ ಪುಟ್ಟತಂಬಡಿ, ಪುಟ್ಟಪ್ಪ, ಚಿನ್ನಮುತ್ತು, ಮಾದೇಶ, ದುಂಡ ತಂಬಡಿ, ನಾಗತಂಬಡಿ, ಬಲರಾಮ ರವಿ, ಚಂದ್ರ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts