More

    ಹಳ್ಳಿ ಪರಿಸರದಲ್ಲಿನ್ನು ‘ಪವಿತ್ರವನ’ ಪರ್ವ

    ಬೆಳಗಾವಿ: ನಗರಗಳಿಗೆ ಸೀಮಿತವಾಗಿದ್ದ ಉದ್ಯಾನದ ಪರಿಕಲ್ಪನೆ ಈಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗುತ್ತಿದೆ. ನಗರಗಳ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿಯೂ ಉದ್ಯಾನ ನಿರ್ಮಿಸಲು ಇಲಾಖೆ ಅಧಿಕಾರಿಗಳು ನರೇಗಾ ಯೋಜನೆಯಡಿ ‘ಪವಿತ್ರವನ’ ಯೋಜನೆ ರೂಪಿಸಿದ್ದಾರೆ.

    ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ‘ಪವಿತ್ರವನ’ ನಿರ್ಮಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಅಧಿಕಾರಿಗಳಿಗೆ ನಿರ್ದೇಶನ ಬಂದಿದೆ. ಸದ್ಯ ಮೊದಲ ಹಂತದಲ್ಲಿ ಬೆಳಗಾವಿ ಜಿಲ್ಲೆಯ 14 ತಾಲೂಕುಗಳಲ್ಲಿ ತಲಾ ಒಂದರಂತೆ ಉದ್ಯಾನವನ ನಿರ್ಮಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

    5 ಲಕ್ಷ ರೂ.ವರೆಗೆ ವೆಚ್ಚ: ಯೋಜನೆ ಮೂಲಕ ಅಂತರ್ಜಲಮಟ್ಟ ಹೆಚ್ಚಿಸುವುದು, ಸರ್ಕಾರಿ ಆಸ್ತಿ ರಕ್ಷಣೆ, ಒತ್ತುವರಿ ತಡೆಯುವ ಉದ್ದೇಶ ಹೊಂದ ಲಾಗಿದೆ. ನಗರ ಪ್ರದೇಶದ ಮಕ್ಕಳಿಗೆ ಉದ್ಯಾನದ ಸೌಲಭ್ಯವಿದೆ. ಅದೇ ರೀತಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಸೌಲಭ್ಯ ದೊರಕಿಸಿಕೊಡಬೇಕು ಎನ್ನುವುದೂ ಯೋಜನೆ ಉದ್ದೇಶವಾಗಿದೆ. ತಾಪಂ ಇಒಗಳು ಇದರ ಮೇಲುಸ್ತುವಾರಿಯಾಗಿದ್ದಾರೆ. ಪಿಡಿಒಗಳು ಯೋಜನೆ ಅನುಷ್ಠಾನಾಧಿಕಾರಿ ಯಾಗಿದ್ದಾರೆ. ಪ್ರತಿ ಪವಿತ್ರ ಉದ್ಯಾನಕ್ಕೆ 2.5 ರಿಂದ 5 ಲಕ್ಷ ರೂ. ವರೆಗೆ ವೆಚ್ಚವಾಗಲಿದೆ. ಗ್ರಾಪಂ ಬಳಿ ಅನುದಾನ ಉಳಿದಿದ್ದರೆ, ಉದ್ಯಾನಕ್ಕೆ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳು ಗ್ರಾಪಂಗೆ ತಿಳಿಸಿದ್ದಾರೆ.

    ಸ್ಥಳ ಗುರುತಿಸಲು ಸೂಚನೆ: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಾಗದ ಲಭ್ಯತೆ ಇದ್ದರೆ ಅಂತಹ ಹಳ್ಳಿಗಳಲ್ಲಿ ‘ಪವಿತ್ರವನ’ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಸ್ಥಳ ಗುರುತಿಸಲು ಈಗಾಗಲೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಜಿಪಂ ಸಿಇಒ ಸೂಚಿಸಿದ್ದಾರೆ. ಯೋಜನೆ ಶೀಘ್ರ ಅನುಷ್ಠಾನ ಮಾಡುವಂತೆ ತಿಳಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿ, ಗಾವಠಾಣಾ ಸೇರಿ ವಿವಿಧ ಉದ್ದೇಶಗಳಿಗೆ ಬೆಳಗಾವಿ ಜಿಲ್ಲೆಯ 100 ಹಳ್ಳಿಗಳಿಗೆ ಜಿಲ್ಲಾಧಿಕಾರಿ ಅವರು 1ರಿಂದ 5 ಎಕರೆ ಜಾಗ ನೀಡಿದ್ದಾರೆ. ಬಳಕೆಯಾಗಿ ಬಾಕಿ ಉಳಿದ ಈ ಪ್ರದೇಶದಲ್ಲಿ ‘ಪವಿತ್ರವನ’ ನಿರ್ಮಾಣವಾಗಲಿವೆ.

    ಉದ್ಯಾನದಲ್ಲಿ ಏನೇನಿರಲಿದೆ..?: ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಹಣ್ಣು ಬಿಡುವ ಸಸಿ ಸೇರಿ ಎಲ್ಲ ಬಗೆಯ ಸಸಿ ನೆಡಲು ಸಿದ್ಧತೆ ಕೈಗೊಳ್ಳಲಾಗಿದೆ. ಮಕ್ಕಳ ಆಟಿಕೆ ಪರಿಕರಗಳ ಅಳವಡಿಕೆ ಹಾಗೂ ವಾಕಿಂಗ್ ಪಾತ್, ಹುಲ್ಲಿನ ಹಾಸು ಹಾಗೂ ಆಸನ ವ್ಯವಸ್ಥೆ ಇರಲಿದೆ. ಉದ್ಯಾನದ ಸುತ್ತ ಕಲ್ಲುಗಳ ಪಿಚ್ಚಿಂಗ್ ಮಾಡಲಾಗುವುದು. ಯೋಜನೆಯ ಭಾಗವಾಗಿ ಖಾನಾಪುರ ತಾಲೂಕಿನ ನಂದಗಡದಲ್ಲಿ ಪ್ರಾಯೋಗಿಕವಾಗಿ ‘ಪವಿತ್ರವನ’ ನಿರ್ಮಿಸಲಾಗಿದೆ. ಈ ಉದ್ಯಾನದಲ್ಲಿ ಜೋಕಾಲಿ, ಈಜುಕೊಳ ಸೇರಿದಂತೆ ಮಕ್ಕಳಿಗೆ ರಂಜನೆ ನೀಡುವ ಆಟಿಕೆ ಸಾಮಗ್ರಿ ಅಳವಡಿಸಲಾಗಿದೆ. ಮಹಿಳೆಯರು ಮತ್ತು ಹಿರಿಯರಿಗೆ ಓಪನ್ ಜಿಮ್ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಶೌಚಗೃಹದ ವ್ಯವಸ್ಥೆ ಇದೆ.

    ಭೂವಿಜ್ಞಾನಿಗಳ ಸಲಹೆ ಮೇರೆಗೆ ಮಳೆ ನೀರು ಇಂಗಿಸಲು ಅಥವಾ ಜಲ ಮರುಪೂರಣಕ್ಕೆ ಅನುಕೂಲವಾಗುವ ಸ್ಥಳ ಗುರುತಿಸಿ ‘ಪವಿತ್ರವನ’ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸುವುದೂ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
    | ಎಚ್.ವಿ. ದರ್ಶನ ಜಿಪಂ ಸಿಇಒ, ಬೆಳಗಾವಿ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts