More

  ನಾಲ್ಕು ದಶಕಗಳಿಂದ ಸಮಸ್ಯೆಗಳಲ್ಲಿ ಆರ್.ಎಚ್.ನಂ.3

  ಅಶೋಕ ಬೆನ್ನೂರು ಸಿಂಧನೂರು

  ತಾಲೂಕಿನ ಆರ್.ಎಚ್.ನಂ.3 (ಪುನರ್ವಸತಿ ಕ್ಯಾಂಪ್) ರಲ್ಲಿ ಬಾಂಗ್ಲಾ ವಲಸಿಗರು ವಾಸವಾಗಿದ್ದು, ಭಾರತದ ಪೌರತ್ವ ಹಾಗೂ ಜಾತಿ ಪ್ರಮಾಣಪತ್ರ ಸಿಗದೆ ಪರದಾಡುತ್ತಿದ್ದಾರೆ. ಕ್ಯಾಂಪ್‌ನಲ್ಲಿ ಮೂಲ ಸೌಕರ್ಯ ಸಮಸ್ಯೆ ಕೂಡ ಎದುರಿಸುತ್ತಿದ್ದಾರೆ.

  ಈ ಕ್ಯಾಂಪ್ ತಾಲೂಕು ಕೇಂದ್ರದಿಂದ 6 ಕಿಮೀ ದೂರವಿದ್ದು, ಸಿಂಧನೂರು ಗ್ರಾಮೀಣ (ಆರ್.ಎಚ್.ನಂ.1) ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವ ಆರ್.ಎಚ್.ನಂ.3ರಲ್ಲಿ 5 ಸಾವಿರ ಜನಸಂಖ್ಯೆ ಇದೆ. 1971ರಲ್ಲಿ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಪ್ರಧಾನಿ ಇಂದಿರಾಗಾಂಧಿ ಭಾರತಕ್ಕೆ ವಲಸೆ ಬಂದ ಬಾಂಗ್ಲಾ ವಲಸಿಗರಿಗೆ ತಾಲೂಕಿನಲ್ಲಿ ಪುನರ್ವಸತಿ ಕ್ಯಾಂಪ್ ಆರಂಭಿಸಲು ಕ್ರಮಕೈಗೊಂಡಿದ್ದರು. ಬಾಂಗ್ಲಾ ವಲಸಿಗರಿಗೆ ಕೇಂದ್ರ ಸರ್ಕಾರ ಕೃಷಿಗಾಗಿ 5 ಎಕರೆ ಜಮೀನು ನೀಡಿತ್ತು. ಆದರೆ, ಈ ಬಾಂಗ್ಲಾ ವಲಸಿಗರ ಉಪನಾಮ ಸರ್ಕಾರ್ ಎಂಬುದು ಜಮೀನಿನ ದಾಖಲೆಗಳಲ್ಲಿ ಕಂಟಕವಾಗಿ ಪರಿಣಮಿಸಿದೆ.

  ಇಲ್ಲಿನ ನಿವಾಸಿಗಳು ಪೌರತ್ವ ಪಡೆಯಲು ಮೂರು ದಶಕದಿಂದ ಸಾಕಷ್ಟು ಹೋರಾಟ ಮಾಡಿದ್ದಿದೆ. ಆದರೂ, ಇದುವರೆಗೆ ಪೌರತ್ವ ಸಿಕ್ಕಿಲ್ಲ. ಇದರ ಜತೆಗೆ ನಾಮ್‌ಸೂದ್ರ ಜಾತಿಪಟ್ಟಿಗೆ ಸೇರಿಸಲು ಕೂಡ ಸಾಧ್ಯವಾಗಿಲ್ಲ. ಇದರಿಂದ ಉದ್ಯೋಗ, ಮಕ್ಕಳ ಶಿಕ್ಷಣಕ್ಕಾಗಿ ಪರದಾಡುವುದು ತಪ್ಪಿಲ್ಲ. ಪೌರತ್ವ ಇಲ್ಲದಿರುವುದರಿಂದ ಅಗತ್ಯ ದಾಖಲಾತಿ ಪಡೆಯುವಲ್ಲಿಯೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪೌರತ್ವ, ಜಾತಿ ಪ್ರಮಾಣಪತ್ರ, ಬಸ್ ಸೌಕರ್ಯ ಸೇರಿ ಮೂಲ ಸೌಲಭ್ಯಗಳ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದಾರೆ.

  ನಾಲ್ಕು ದಶಕಗಳಿಂದ ಸಮಸ್ಯೆಗಳಲ್ಲಿ ಆರ್.ಎಚ್.ನಂ.3
  ಆರ್.ಎಚ್.ನಂ.3 ರಲ್ಲಿ ಚರಂಡಿಯಲ್ಲಿ ಗಿಡ-ಗಂಟಿ ಬೆಳೆದಿರುವುದು.

  ಸರ್ಕಾರ್ ಸರ್‌ನೇಮ್‌ನಿಂದ ಸಮಸ್ಯೆ

  ಆರ್.ಎಚ್.ನಂ.3 ರಲ್ಲಿ ವಾಸುತ್ತಿರುವ ಬಹುತೇಕರ ಹೆಸರುಗಳ ಮುಂದೆ ಸರ್ಕಾರ್ ಎಂಬ ಸರ್‌ನೇಮ್ ಇದೆ. ಜನ್ಮ ದಾಖಲೆಯಲ್ಲಿಯೂ ಸರ್ಕಾರ್ ಸರ್‌ನೇಮ್ ಇರುವುದರಿಂದ ಕೃಷಿ ಮಾಡುತ್ತಿರುವ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸರ್ಕಾರ್ ಎಂಬ ಸರ್‌ನೇಮ್‌ನಿಂದಾಗಿ ವಲಸಿಗರ ಸ್ವಾಧೀನದಲ್ಲಿದ್ದ ಭೂಮಿ ನೋಂದಣಿ ಸಂದರ್ಭದಲ್ಲಿ ಸರ್ಕಾರ ಎಂದು ಆಗಿರುವುದು ನಿವಾಸಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಈ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸ್ಥಳೀಯ, ತಾಲೂಕು ಆಡಳಿತ ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಜಿಲ್ಲಾಧಿಕಾರಿ ಜತೆ ಮಾತನಾಡಿ, ಪುನರ್ವಸತಿ ಯೋಜನೆಯಡಿ ನೀಡಿರುವ ಭೂಮಿ ಸರ್ಕಾರದ್ದಲ್ಲ. ಇದರಿಂದಾಗಿ ಪಹಣಿಯಲ್ಲಿ ತಿದ್ದುಪಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಕೋರಿದ್ದಾರೆ. ಸಮಸ್ಯೆ ಪರಿಹರಿಸುವ ಭರವಸೆ ನಿವಾಸಿಗಳಿಗೆ ಸಿಕ್ಕಿದೆ.

  See also  40 ಕಾಟನ್ ಮಿಲ್‌ಗಳು ಬಂದ್

  ಕುಡಿವ ನೀರಿಗೆ ಹಾಹಾಕಾರ

  ಆರ್.ಎಚ್.ನಂ 3ರಲ್ಲಿ ಕೆರೆ ಇದ್ದರೂ ಕುಡಿಯುವ ನೀರಿಗಾಗಿ ಬಳಕೆ ಆಗುತ್ತಿಲ್ಲ. ಕೆರೆ ಖಾಲಿ ಮಾಡಿಸಿ ಕುಡಿವ ನೀರು ತುಂಬಿಸುವ ಕೆಲಸವಾಗಿಲ್ಲ. ಜವಳಗೇರಾದ ಹತ್ತಿರದ ಬಹುಗ್ರಾಮ ಕುಡಿವ ನೀರಿನ ಯೋಜನೆ ಕೆರೆಯಿಂದ ನೀರು ಪೂರೈಕೆಯಾಗುತ್ತಿದ್ದು, ಜನರು ನೀರಿಗಾಗಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಿತ್ಯ ಬಂಡಿಗಳನ್ನು ತಳ್ಳಿಕೊಂಡು ಖಾಸಗಿ ಕೆರೆಗಳನ್ನು ತಡಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಂಪ್‌ನಲ್ಲಿ ಹಾದು ಹೋಗಿರುವ 54/9 ಉಪಕಾಲುವೆಗೂ ನೀರು ಪೂರೈಕೆ ಸ್ಥಗಿತವಾಗಿರುವುದರಿಂದ ಕ್ಯಾಂಪ್‌ನ ಜನತೆ ಮುಂದಿನ ಮೂರು ತಿಂಗಳು ಕುಡಿವ ನೀರಿಗೆ ಇನ್ನಿಲ್ಲದ ಕಸರತ್ತು ನಡೆಸಬೇಕಿದೆ.

  ನಾಲ್ಕು ದಶಕಗಳಿಂದ ಸಮಸ್ಯೆಗಳಲ್ಲಿ ಆರ್.ಎಚ್.ನಂ.3
  ಆರ್.ಎಚ್.ನಂ.3ರಲ್ಲಿ ರಸ್ತೆ ಡಾಂಬರೀಕರಣ ಅಸಮರ್ಪಕ ಕೈಗೊಂಡಿರುವುದು.

  ಹೂಳು ತುಂಬಿದೆ ಚರಂಡಿ

  ಆರ್.ಎಚ್.ನಂ.3 ರಲ್ಲಿ 20 ಕ್ಕೂ ಹೆಚ್ಚು ಬೀದಿಗಳಿವೆ. ಸಿಸಿ ರಸ್ತೆಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಆದರೆ, ರಸ್ತೆಗೆ ಹೊಂದಿಕೊಂಡಂತೆ ಚರಂಡಿಗಳ ನಿರ್ಮಾಣ ಮಾಡಿಲ್ಲ. ಇದರಿಂದ ಸಮಸ್ಯೆ ಹೆಚ್ಚಿದೆ. ಜನರು ಬಳಸುವ ನೀರೆಲ್ಲ ರಸ್ತೆ ಪಕ್ಕದಲ್ಲಿ ಹರಿಯುತ್ತಿದ್ದು, ಒಂದೆಡೆ ಶೇಖರಣೆಗೊಂಡು ಗಬ್ಬುನಾತ ಬೀರುತ್ತಿದೆ. ರಸ್ತೆಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದ್ದು, ಚರಂಡಿ ನಿರ್ಮಾಣಕ್ಕೆ ಅನುದಾನ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಈಗಿರುವ ಚರಂಡಿ ಸ್ವಚ್ಛಗೊಳಿಸುವ ಕೆಲಸವಾಗಿಲ್ಲ. ಇನ್ನು ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಯೂ ಬೃಹತ್ ಚರಂಡಿ ಇದ್ದು, ಸ್ವಚ್ಛತೆ ಇಲ್ಲ. ಚರಂಡಿ ಮುಚ್ಚಲು ಕ್ರಮ ವಹಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಭಯದಲ್ಲೇ ಶಾಲೆಗೆ ಬರುವಂತಾಗಿದೆ. ಮಳೆಗಾಲದಲ್ಲಿ ಇಡೀ ಕ್ಯಾಂಪ್ ಸುತ್ತಲೂ ನೀರು ಇರುತ್ತದೆ. ಇದು ಕೂಡ ಕ್ಯಾಂಪ್ ನಿವಾಸಿಗಳ ಸಮಸ್ಯೆಗೆ ಕಾರಣವಾಗಿದೆ. ಪ್ರತಿ ಬೇಸಿಗೆ ಹಾಗೂ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಇಲ್ಲಿ ಸಾಮಾನ್ಯವಾಗಿದೆ.

  ಚಿಕಿತ್ಸೆಗಾಗಿ ಪರದಾಟ

  ಆರ್.ಎಚ್.ನಂ. 3 ರಲ್ಲಿ 5 ಸಾವಿರ ಜನಸಂಖ್ಯೆ ಇದ್ದರೂ, ಆರೋಗ್ಯ ಕೇಂದ್ರವಿಲ್ಲ. ಸಣ್ಣ ರೋಗಕ್ಕೂ ತಾಲೂಕು ಆರೋಗ್ಯ ಕೇಂದ್ರ ಅವಲಂಭಿಸಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಶಾಸಕ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ. ಚುನಾವಣೆಯಲ್ಲಿ ನೀಡುವ ಭರವಸೆಗಳು ಈಡೇರಿಲ್ಲ. ಆಗಾಗ ಕ್ಯಾಂಪ್‌ನಲ್ಲಿ ಸಾಂಕ್ರಾಮಿಕ ರೋಗ ಹರಡುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕಿದೆ. ಆಸ್ಪತ್ರೆಗೆ ಕ್ಯಾಂಪ್‌ನಲ್ಲಿ ಜಾಗದ ಕೊರತೆಯೂ ಇಲ್ಲ.

  See also  ಅಶ್ಲೀಲ ವಿಡಿಯೋ ವೈರಲ್ ಆಗಲು ಡಿಕೆಶಿ ಕಾರಣ
  ಆಸರೆ ಮನೆಗಾಗಿ ಅಲೆದಾಟ

  ಕ್ಯಾಂಪ್‌ನಲ್ಲಿರುವ ಶೇ.80 ಜನರು ಆರ್ಥಿಕ ಸ್ಥಿತಿವಂತರಲ್ಲ. ಬಹುತೇಕರು ತಾವೇ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆಸರೆ ಮನೆ ನೀಡುವಲ್ಲಿಯೂ ತಾರತಮ್ಯ ಅನುಸರಿಸಲಾಗಿದೆ. ಗ್ರಾಪಂನಿಂದ ಬೆರಳೆಣಿಕೆಯಷ್ಟು ಕುಟುಂಬಗಳಿಗೆ ಆಸರೆ ಮನೆ ನೀಡಿದ್ದು, ಇನ್ನುಳಿದ ಕುಟುಂಬದ ಜನರು ಗುಡಿಸಲು ವಾಸಿಗಳಾಗಿದ್ದಾರೆ. ಮನೆ ನೀಡುವಂತೆ ಸಲ್ಲಿಸಿದ ಅರ್ಜಿಗಳೆಲ್ಲ ಮೂಲೆ ಸೇರಿವೆ.

  ನಾಲ್ಕು ದಶಕಗಳಿಂದ ಸಮಸ್ಯೆಗಳಲ್ಲಿ ಆರ್.ಎಚ್.ನಂ.3
  ಆರ್.ಎಚ್.ನಂ.3 ರಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
  ಮೀನು ಸಾಕಾಣಿಕೆ ಮೂಲ ಉದ್ಯೋಗ

  ಕ್ಯಾಂಪ್‌ನ ನಿವಾಸಿಗಳು ಸರ್ಕಾರ ನೀಡಿರುವ ಐದು ಎಕರೆ ಭೂಮಿಯಲ್ಲಿ ಕೃಷಿ ಕೈಗೊಳ್ಳುವುದಕ್ಕಿಂತ ಮೀನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದರೆ ಸಮರ್ಪಕ ಸಬ್ಸಿಡಿ ಸಿಗುತ್ತಿಲ್ಲ. ಮೀನು ಕೃಷಿಗೆ ಪ್ರೋತ್ಸಾಹ ಇಲ್ಲ. ಆರ್.ಎಚ್.ನಂ.2 ರಲ್ಲಿ ಮೀನು ಮಾರುಕಟ್ಟೆ ಇದ್ದರೂ ಅಷ್ಟಾಗಿ ಉಪಯೋಗವಾಗಿಲ್ಲ. ಮೀನು ಮಾರಾಟ ಮೂಲ ಕಸಬು ಆಗಿದೆ. ಆದರೆ ಪುರುಷರು ಅನಿವಾರ್ಯವಾಗಿ ಮನೆಗಳ ಸೆಂಟ್ರಿಂಗ್ ಹೊಡೆಯುವುದು, ಕಬ್ಬಿಣದ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ. ಮಹಿಳೆಯರು ಬುಟ್ಟಿ ಹೆಣೆಯುವುದು ಸೇರಿ ಇತರ ಕಸೂತಿ ಕೆಲಸದ ಮೂಲಕ ಜೀವನ ಸಾಗಿಸುತ್ತಿದ್ದಾರೆ.

  ಬಸ್ ಸೌಕರ್ಯವೇ ಇಲ್ಲ

  ಮೂರು ಕಿಮೀ ಅಂತರದಲ್ಲಿರುವ ಆರ್.ಎಚ್.ನಂ.2ಗೆ ಬಸ್ ಸೌಕರ್ಯ ಇದ್ದು, ಆರ್.ಎಚ್.ನಂ.3ಗೆ ಇದುವರೆಗೆ ಬಸ್ ಬಂದಿಲ್ಲ. ರಾಯಚೂರು ಸಂಪರ್ಕ ರಸ್ತೆಯಿಂದ ಮೂರು ಕಿಮೀ ರಸ್ತೆ ಇದ್ದು ಸಣ್ಣ ವಾಹನಗಳು ಮಾತ್ರ ಓಡಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ ಬಸ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಮೂರು ಕಿಮೀ ರಸ್ತೆಗೆ ಇತ್ತೀಚೆಗೆ ಅನುದಾನ ಬಿಡುಗಡೆಯಾಗಿದ್ದರೂ ರಸ್ತೆ ಕಾಮಗಾರಿ ಸಮರ್ಪಕವಾಗಿ ಕೈಗೊಂಡಿಲ್ಲ. ರಸ್ತೆಗೆ ಜಲ್ಲಿಕಲ್ಲು ಹಾಕಿ ಸಂಚಾರಕ್ಕೆ ವ್ಯತ್ಯಯ ಉಂಟು ಮಾಡಿದ್ದು, ಗ್ರಾಮಸ್ಥರ ಒತ್ತಡದ ಮೇರೆಗೆ ಬೇಕಾಬಿಟ್ಟಿಯಾಗಿ ಡಾಂಬರ್ ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈಗ ಆ ಡಾಂಬರ್ ರಸ್ತೆಯೂ ಅಲ್ಲಲ್ಲಿ ಕಿತ್ತಿ ಬರುತ್ತಿದೆ. ಕಳಪೆ ಕಾಮಗಾರಿ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

  See also  ಹುಲಗುಂಚಿಯಲ್ಲಿತಿಂಥಿಣಿ ಮೊನಪ್ಪಯ್ಯ ಕುರಿತ ಮೊದಲ ಶಾಸನ ಪತ್ತೆ
  ನಾಲ್ಕು ದಶಕಗಳಿಂದ ಸಮಸ್ಯೆಗಳಲ್ಲಿ ಆರ್.ಎಚ್.ನಂ.3
  ಉಪಕಾಲುವೆಯಲ್ಲಿ ತ್ಯಾಜ್ಯ ಇರುವುದು.

  ಆರ್.ಎಚ್.ನಂ.2ರಲ್ಲಿ ಮುಖ್ಯವಾಗಿ ಕುಡಿವ ನೀರಿನ ಸೌಲಭ್ಯ ಇಲ್ಲ. ಕುಡಿವ ನೀರಿಗಾಗಿ ಸಾಕಷ್ಟು ಸಮಸ್ಯೆ ಎದುರಿಸಲಾಗುತ್ತಿದೆ. ಕುಡಿವ ನೀರಿನ ಕೆರೆ ಇದ್ದೂ ಇಲ್ಲದಂತಾಗಿದೆ. ರಸ್ತೆ ಅಗಲೀಕರಣ ಮಾಡಿ, ಬಸ್ ಸೌಕರ್ಯ ಒದಗಿಸಬೇಕಿದೆ. ಪೌರತ್ವ, ಜಾತಿ ಪ್ರಮಾಣ ಪತ್ರ ನೀಡಬೇಕು. ಸರ್ಕಾರ್ ಪದದ ಗೊಂದಲ ಸರಿಪಡಿಸಬೇಕು.
  ರವಿಕುಮಾರ ಮಂಡಲ್, ಆರ್.ಎಚ್.ನಂ.3 ನಿವಾಸಿ

  ಆರ್.ಎಚ್.ನಂ.3 ಸೇರಿ ಇಲ್ಲಿನ ಐದು ಕ್ಯಾಂಪ್‌ಗಳಲ್ಲಿ ಸರ್ಕಾರ್ ಎನ್ನುವ ಪದ ಹಲವು ಗೊಂದಲ ಉಂಟು ಮಾಡಿದೆ. ಸರ್ಕಾರ್ ಎಂಬುದು ಸ್ಥಳೀಯರಿಗೆ ಮೊದಲಿನಿಂದಲೂ ಇರುವ ಹೆಸರಾಗಿದೆ. ಆದರೆ, ಜನರು ಮೂಲಭೂತ ಹಕ್ಕು ಪಡೆಯಲು ತೊಂದರೆಯಾಗುತ್ತಿದೆ. ಈಗಾಗಲೇ ಸಂಬಂಧಪಟ್ಟ ಎಲ್ಲರ ಗಮನಕ್ಕೂ ತಂದರೂ ಸಮಸ್ಯೆ ಪರಿಹಾರವಾಗಿಲ್ಲ. ಪೌರತ್ವ, ಜಾತಿ ಪ್ರಮಾಣಪತ್ರವೂ ಇಲ್ಲದಂತಾಗಿದೆ.
  ಪ್ರಸೇನ್ ರಫ್ತಾನ್, ಕಾರ್ಯದರ್ಶಿ, ಜನಕಲ್ಯಾಣ ಸಂಸ್ಥೆ

  ಆರ್.ಎಚ್.ನಂ.3 ರಲ್ಲಿ ಹಂತ ಹಂತವಾಗಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಜನರು ಬೋರವೆಲ್‌ನಿಂದ ನೀರು ಪಡೆಯುತ್ತಿದ್ದಾರೆ. ಕೆರೆಯನ್ನು ತಾತ್ಕಾಲಿಕವಾಗಿ ತುಂಬಿಸಲಾಗಿದ್ದು, ಅದರಲ್ಲಿನ ನೀರನ್ನು ಜನರು ಬಳಕೆ ಮಾಡುತ್ತಿಲ್ಲ. ಚರಂಡಿ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು. ಪೌರತ್ವ ಮತ್ತು ಜಾತಿ ಪ್ರಮಾಣ ಪತ್ರ ವಿಚಾರ ಸರ್ಕಾರದ ಮಟ್ಟದಲ್ಲಿ ಬಗೆಹರಿಯಬೇಕಿದೆ.
  ಪೂರ್ಣಿಮಾ, ಪಿಡಿಒ, ಆರ್.ಎಚ್.ನಂ.1 (ಸಿಂಧನೂರು ಗ್ರಾಮೀಣ) ಗ್ರಾಪಂ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts