More

    ಹಳ್ಳಿ ಸಾಧಕಿಗೆ ಒಲಿದ ಏಳು ಸರ್ಕಾರಿ ಹುದ್ದೆ!

    ಬೈಲಹೊಂಗಲ: ಇದು ಸ್ಪರ್ಧಾತ್ಮಕ ಜಗತ್ತು. ಎಲ್ಲ ರಂಗಗಳಲ್ಲಿ ಸ್ಪರ್ಧೆ ಸಾಮಾನ್ಯ. ಆದರೆ, ಸ್ಪರ್ಧೆಯಲ್ಲಿ ಗೆಲ್ಲಲು ಶ್ರದ್ಧೆ ಹಾಗೂ ಆಸಕ್ತಿ ಅತೀ ಅವಶ್ಯ. ಈ ಅಂಶಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ತಾಲೂಕಿನ ಉಡಕೇರಿ ಗ್ರಾಮದ ರೈತ ಕುಟುಂಬದ ಜ್ಯೋತಿ ಮಹಾಬಲೇಶ್ವರ ಗೂಳಪ್ಪನವರ, ಯಾವುದೇ ತರಬೇತಿ ಪಡೆಯದೆ ಶ್ರಮವಹಿಸಿ ಓದಿ ಏಳು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾಳೆ.

    25 ವರ್ಷದ ಜ್ಯೋತಿ, ಅಪ್ಪಟ ರೈತಾಪಿ ಕುಟುಂಬದಲ್ಲಿ ಜನಿಸಿದ್ದು, ತಂದೆ ಮಹಾಬಲೇಶ್ವರ ಪ್ರಗತಿಪರ ರೈತ. ತಾಯಿ ಶಾರದಾ, ಕೃಷಿ ಕಾಯಕದಲ್ಲಿ ನೆರವಾಗುತ್ತಾರೆ. ಮಹಾಬಲೇಶ್ವರ ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದಾರೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಓದಿರುವ ಜ್ಯೋತಿ, ಉಡಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಧಾರವಾಡದ ಜೆಎಸ್‌ಎಸ್ ಕಾಲೇಜ್‌ನಲ್ಲಿ ಪಿಯು ಶಿಕ್ಷಣ ಪೂರೈಸಿ, ಬೆಳಗಾವಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಸಿಎಸ್‌ನಲ್ಲಿ ಬಿಇ ಪದವಿ ಪೂರೈಸಿದ್ದಾಳೆ. ಶಾಲಾ ಹಂತದಲ್ಲೇ ಓದು, ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಈಕೆ, ಸ್ಪರ್ಧೆಗಳಲ್ಲಿ ವಿಜೇತೆಯಾಗಿದ್ದಾಳೆ. ಇದೀಗ ಏಳು ಸರ್ಕಾರಿ ಹುದ್ದೆಯೂ ಬಂದಿದ್ದು, ಅದರಲ್ಲಿ ಪಿಎಸ್‌ಐ
    ಹುದ್ದೆಯನ್ನು ಆಯ್ದುಕೊಂಡಿದ್ದಾಳೆ.

    ಏಳು ಹುದ್ದೆಗೆ ಆಯ್ಕೆ: ಗ್ರಾಮೀಣ ಭಾಗದಲ್ಲಿದ್ದರೂ ಸಹ ಐಪಿಎಸ್, ಐಎಎಸ್ ಆಗುವ ಕನಸು ಹೊಂದಿದ್ದ ಜ್ಯೋತಿ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಪೊಲೀಸ್ ಇಲಾಖೆಯಲ್ಲಿ ಹಿರಿಯ, ಕಿರಿಯ ಬೋಧಕ (ಇನ್‌ಸ್ಪೆಕ್ಟರ್) ಹುದ್ದೆ ಸೇರಿ ಸರ್ಕಾರ ನಡೆಸುವ ಬಿಸಿಡಬ್ಲುೃಡಿ ಇಲಾಖೆಯಲ್ಲಿ ನೀಡುವ ಐಎಎಸ್, ಕೆಎಎಸ್ ಉಚಿತ ತರಬೇತಿಗೂ ಆಯ್ಕೆಯಾಗಿದ್ದಳು. ಜ್ಯೋತಿ, ಈ ಎಲ್ಲ ಹುದ್ದೆಗಳಿಗೆ ಬಂದ ಆದೇಶ ಪತ್ರವನ್ನು ಮರಳಿ ಇಲಾಖೆಗಳಿಗೆ ಕಳುಹಿಸಿದ್ದಾರೆ.

    ಪಾಲಕರ ಮೆಚ್ಚುಗೆ: ಜ್ಯೋತಿ 2019-20ರಲ್ಲಿ ನಡೆದ ಪಿಎಸ್‌ಐ ಪರೀಕ್ಷೆಯಲ್ಲೂ ಪಾಸಾಗಿದ್ದು, ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಸೇರ್ಪಡೆಯಾಗಲಿದ್ದಾಳೆ. ಸೇವೆಯಲ್ಲಿ ಇದ್ದುಕೊಂಡೇ ಐಎಎಸ್, ಐಪಿಎಸ್ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾಳೆ. ಜ್ಯೋತಿ ಸಾಧನೆಗೆ ಪಾಲಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಯಶಸ್ಸಿಗೆ ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು. ಇದು ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮಾತು ನನಗೆ ಪ್ರೇರಣಾ ಶಕ್ತಿಯಾಗಿದೆ. ದಿನಕ್ಕೆ 7-8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಭವಿಷ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಯಾಗುವ ಕನಸಿದೆ.
    | ಜ್ಯೋತಿ ಗೂಳಪ್ಪನವರ

    | ಬಸವರಾಜ ಕಲಾದಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts