More

    ಕೆರೆಗಳ ಸಂರಕ್ಷಣೆಗೆ ಸಮಿತಿ ರಚನೆ

    ಬೆಳಗಾವಿ: ಕೈಗಾರಿಕೀಕರಣ, ಒತ್ತುವರಿ ಮತ್ತು ಅಸಮರ್ಪಕ ನಿರ್ವಹಣೆಯಿಂದ ನಶಿಸುತ್ತಿರುವ ಕೆರೆಗಳ ಸಂರಕ್ಷಣೆ, ಮರು ನಿರ್ಮಾಣ ಮತ್ತು ಮುಂದಿನ ಪೀಳಿಗೆಗೂ ಕೆರೆಗಳನ್ನು ಉಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ರಚನೆಗೆ ಮುಂದಾಗಿದೆ. ಅವಸಾನದ ಹಾದಿ ಹಿಡಿದಿರುವ ಜಲಮೂಲಗಳ ರಕ್ಷಣೆಗೆ ಈ ಸಮಿತಿ ಶ್ರಮಿಸಲಿದೆ.

    ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಶ್ರಯವಾಗಿರುವ ಕೆರೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಮುಚ್ಚಿ ಅಲ್ಲಿ ಬಹುಮಹಡಿ ಕಟ್ಟಡ, ಬಸ್ ನಿಲ್ದಾಣ, ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಕೆಲವೆಡೆ ಕೆರೆಗಳು ಖಾಸಗಿ ವ್ಯಕ್ತಿಗಳ ಸ್ವತ್ತಾಗುತ್ತಿವೆ. ಕೆಲವೆಡೆ ಅಕ್ಕಪಕ್ಕದ ಜಮೀನಿನವರು ಕೆರೆ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಪರಿಣಾಮ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಂತರ್ಜಲ ಮಟ್ಟ ಪಾತಾಳ ತಲುಪಿದ್ದು, ಕೊಳವೆ ಬಾವಿಗಳು ಬರಿದಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೆರೆಗಳ ಸಂರಕ್ಷಣೆಗಾಗಿ ಗ್ರಾಪಂ ಮಟ್ಟದಲ್ಲಿ ಸಮಿತಿ ರಚಿಸಲು ನಿರ್ಧರಿಸಿದೆ.

    ಆರಂಭವಾಗದ ಹೂಳೆತ್ತುವ ಕಾರ್ಯ: ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಒಡೆತನಕ್ಕೆ ಒಳಪಟ್ಟಿರುವ 972 ಕೆರೆಗಳಲ್ಲಿ ನೀರಿಗಿಂತ ಮಣ್ಣಿನ ಪ್ರಮಾಣ ಹೆಚ್ಚಾಗಿರುವುದರಿಂದ ಮಳೆ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಸಮರ್ಪಕ ನಿರ್ವಹಣೆಯಿಲ್ಲದೆ, ಹೂಳು ತುಂಬಿರುವ ಕೆರೆಗಳು ಅಂದಗೆಟ್ಟಿವೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಜಟಿಲಗೊಳ್ಳಬಾರದೆಂಬ ಉದ್ದೇಶದಿಂದ ಕೆರೆ ಸಂಜೀವಿನಿ-1 ಮತ್ತು 2 ಯೋಜನೆಯಡಿ ಕೆರೆಗಳ ಹೂಳೆತ್ತಲು ಸರ್ಕಾರ ಕ್ರಮ ಕೈಗೊಂಡಿದೆ.

    ಹೂಳೆತ್ತಲು ಪ್ರತಿ ತಾಲೂಕಿಗೆ 50 ಲಕ್ಷ ರೂ.ನಂತೆ 4.75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ವಾಸ್ತವದಲ್ಲಿ ಕೆರೆಗಳ ಹೂಳೆತ್ತುವ ಕೆಲಸ ವಿವಿಧ ಕಾರಣಗಳಿಂದ ಆರಂಭವಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯರು ದೂರಿದ್ದಾರೆ.

    ಸಮಿತಿಯು ಯಾರ‌್ಯಾರನ್ನು ಒಳಗೊಂಡಿರುತ್ತದೆ?: ಜಿಲ್ಲೆಯಲ್ಲಿ ಆಯಾ ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ಇಬ್ಬರು ಗ್ರಾಪಂ ಸದಸ್ಯರು, ಜಲಾನಯನ ಪ್ರದೇಶ, ಅಚ್ಚುಕಟ್ಟು ಪ್ರದೇಶದ ಇಬ್ಬರು ರೈತರು, ಕೂಲಿ ಕಾರ್ಮಿಕರು ಒಬ್ಬರು, ಕುಶಲ ಕರ್ಮಿಗಳು ಒಬ್ಬರು, ಪರೋಕ್ಷವಾಗಿ ಉಪಯೋಗ ಪಡೆಯುವವರು ಒಬ್ಬರು, ಸ್ಥಳೀಯ ಸ್ವಯಂ ಸೇವಾ ಸಂಘದ ಪದಾಧಿಕಾರಿ ಅಥವಾ ತಜ್ಞರು, ಕೆರೆ ಅಭಿವೃದ್ಧಿಗೆ 1 ಲಕ್ಷ ರೂ. ನೀಡಿರುವ ದಾನಿಗಳು ಸದಸ್ಯರಾಗಿರುತ್ತಾರೆ. ಗ್ರಾಪಂ ಕಾರ್ಯದರ್ಶಿಗಳೇ ಸಮಿತಿ ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಸೇರಿ ಕನಿಷ್ಠ 9 ರಿಂದ 14 ಜನ ಇರಲಿದ್ದಾರೆ. ಕೆರೆ ಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಮಿತಿ ಹೊಂದಿರುತ್ತದೆ.

    ಬೆಳಗಾವಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಪಂ ವ್ಯಾಪ್ತಿಯಲ್ಲಿ ದೊಡ್ಡ, ಸಣ್ಣ ಮತ್ತು ಅತೀ ಸಣ್ಣ ಸೇರಿ ಮೂರು ಹಂತದ ಕೆರೆಗಳಿವೆ. ಈಗಾಗಲೇ ಜಿಯೋ ಟ್ಯಾಗ್ ಮಾಡಿ ಕೆರೆಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಎಲ್ಲ ಕಡೆ ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳು ರಚನೆಯಾಗಲಿವೆ.
    | ಡಾ. ಕೆ.ವಿ. ರಾಜೇಂದ್ರ ಜಿಪಂ ಸಿಇಒ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts