More

    ಕರೊನಾ ಭೀತಿ ಮಧ್ಯೆಯೇ ಹಳ್ಳಿ ಫೈಟು

    ಹಾವೇರಿ: ಕರೊನಾ ಮಹಾಮಾರಿ ಆತಂಕದ ನಡುವೆಯೇ ಗ್ರಾಪಂಗಳಿಗೆ ಚುನಾವಣೆ ಘೊಷಣೆಯಾಗಿರುವುದರಿಂದ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿವೆ.

    ಹಳ್ಳಿಗಳಲ್ಲಿ ಈವರೆಗೂ ವ್ಯಾಪಕ ಪ್ರಮಾಣದಲ್ಲಿ ಕರೊನಾ ಸೋಂಕು ಕಂಡುಬರದೇ ಇದ್ದರೂ ಚುನಾವಣೆಯ ವೇಳೆಯಲ್ಲಿ ಸೋಂಕು ಹೆಚ್ಚಾಗುವುದೋ ಎಂಬ ಭೀತಿಯೂ ಮೂಡಿದೆ. ಅಖಾಡದಲ್ಲಿ ಸ್ಥಳೀಯರೇ ಕಣಕ್ಕಿಳಿಯುವುದರಿಂದ ಚುನಾವಣೆಗಳು ತುರುಸು ಪಡೆದುಕೊಳ್ಳುವುದು ಸಾಮಾನ್ಯ. ಗೆಲುವಿಗಾಗಿ ಅಭ್ಯರ್ಥಿಗಳು ಬಾಡೂಟ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಜನರನ್ನು ಗುಂಪುಗೂಡಿಸುವುದು ಅನಿವಾರ್ಯ. ಈ ಸಮಯದಲ್ಲಿ ಕರೊನಾ ಮಾರ್ಗಸೂಚಿಗಳ ಪಾಲನೆಯೂ ಅಷ್ಟಾಗಿ ನಡೆಯುವುದಿಲ್ಲ. ಇದೆಲ್ಲ ಗೊತ್ತಿರುವ ಅನೇಕರು ಈ ಸಮಯದಲ್ಲಿ ಯಾಕಾದರೂ ಚುನಾವಣೆ ಘೊಷಣೆಯಾಯಿತೊ ಎಂಬ ಆತಂಕದಲ್ಲಿದ್ದಾರೆ. ಅಲ್ಲದೆ, ಡಿಸೆಂಬರ್​ನಲ್ಲಿ ಪೂರ್ಣ ಪ್ರಮಾಣದಲ್ಲಿ ಚಳಿಗಾಲವಿರುವುದರಿಂದ ಕರೊನಾ 2ನೇ ಅಲೆಯ ಭೀತಿ ಗ್ರಾಮೀಣ ಜನರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ.

    ಗ್ರಾಮೀಣ ಭಾಗದಲ್ಲಿ ಇಲ್ಲಿಯವರೆಗೆ ತಟಸ್ಥವಾಗಿದ್ದ ರಾಜಕೀಯ ಚಟುವಟಿಕೆಗಳು ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಚುರುಕುಗೊಂಡಿವೆ. ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ವಾರ್ಡ್ ವ್ಯಾಪ್ತಿಯ ಮನೆಗಳಿಗೆ ಪ್ರತಿದಿನವೂ ಭೇಟಿ ನೀಡಲು ಆರಂಭಿಸಿದ್ದಾರೆ. ‘ಈ ಬಾರಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ. ನಿಮ್ಮ ಸಹಕಾರ ಬೇಕು’ ಎಂದು ಮನೆಮನೆಗೆ ಸಂಚಾರ ಆರಂಭಿಸಿ ಸಲಹೆ ಸೂಚನೆ ಪಡೆಯುತ್ತಿದ್ದಾರೆ. ಅಲ್ಲದೆ, ವಾಟ್ಸ್​ಆಪ್, ಫೇಸ್​ಬುಕ್ ಜಾಲತಾಣಗಳಲ್ಲಿಯೂ ಕೆಲವರು ಅಭಿಪ್ರಾಯ, ಸಲಹೆ ಕೇಳುತ್ತಿದ್ದಾರೆ.

    ಸಭೆಗಳು ಆರಂಭ: ಕೆಲವು ಗ್ರಾಮಗಳಲ್ಲಿ ರಾಜಕೀಯ ನಾಯಕರು ಗುಪ್ತ ಸಭೆಗಳನ್ನು ಆರಂಭಿಸಿದ್ದಾರೆ. ಯಾವ ವಾರ್ಡ್​ನಿಂದ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು. ಅವರನ್ನು ಅಭ್ಯರ್ಥಿ ಎಂದು ಘೊಷಿಸಿದರೆ ಯಾರು ವಿರೋಧ ಮಾಡುತ್ತಾರೆ. ಯಾರು ಸಹಮತ ವ್ಯಕ್ತಪಡಿಸುತ್ತಾರೆ. ವಿರೋಧಿಸುವವರನ್ನು ಯಾವ ರೀತಿ ಮನವೊಲಿಸಬೇಕು ಎಂಬ ಚರ್ಚೆಗಳನ್ನು ನಡೆಸುತ್ತಿದ್ದಾರೆ.

    ಹಳಬರಿಗೆ ಕೈ ತಪ್ಪಿದ ಅವಕಾಶ: ಹಿಂದಿನ ಕಾಂಗ್ರೆಸ್ ಸರ್ಕಾರ 2015ರಲ್ಲಿ ಗ್ರಾಪಂಗಳಿಗೆ 10 ವರ್ಷಗಳ ಅವಧಿಗೆಂದು ಘೊಷಿಸಿದ್ದ ಮೀಸಲಾತಿಯನ್ನು ಬಿಜೆಪಿ ಸರ್ಕಾರ 5 ವರ್ಷಕ್ಕೆ ಸೀಮಿತಗೊಳಿಸಿತು. ಇದರ ಪರಿಣಾಮ ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಹುತೇಕ ಸದಸ್ಯರಿಗೆ ಮರಳಿ ಅದೇ ವಾರ್ಡ್​ನಿಂದ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿದೆ. ಆದರೂ ಅಕ್ಕಪಕ್ಕದ ವಾರ್ಡ್​ಗಳಲ್ಲಿ ಆ ಮೀಸಲಾತಿ ಬಂದಿರುವುದರಿಂದ ಅಲ್ಲಿಂದ ಸ್ಪರ್ಧಿಸಲು ಕೆಲವರು ಸಿದ್ಧತೆ ನಡೆಸಿದ್ದಾರೆ. ಇನ್ನು ಕೆಲವರು ಮೀಸಲಾತಿ ಬದಲಾವಣೆಯಿಂದ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ.

    ಗುಂಪಿಗಾಗಿ ತಡಕಾಟ: ಗ್ರಾಪಂ ಚುನಾವಣೆಯಲ್ಲಿ ವಿಧಾನಸಭೆ, ಲೋಕಸಭೆ, ಜಿಪಂ, ತಾಪಂನಂತೆ ಒಂಟಿಯಾಗಿ ಸ್ಪರ್ಧಿಸಲು ಅವಕಾಶವಿದ್ದರೂ ದ್ವಿಸದಸ್ಯ, ತ್ರಿಸದಸ್ಯ, ನಾಲ್ಕು ಸದಸ್ಯರ ಆಯ್ಕೆಯ ವಾರ್ಡ್​ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಗುಂಪು ಕಟ್ಟಿಕೊಂಡು ಅಖಾಡಕ್ಕಿಳಿಯಲು ಬಹುತೇಕರು ಬಯಸುತ್ತಾರೆ. ಇದರಿಂದ ಚುನಾವಣೆ ವೆಚ್ಚ ಎಲ್ಲರಿಗೂ ಹಂಚಿಕೆಯಾಗಿ ಹಣದ ಉಳಿತಾಯವಾಗುವ ಜೊತೆಗೆ ಗುಂಪಿನವರ ಜಾತಿ, ಸಂಬಂಧಿಕರು, ಸ್ನೇಹಿತರ ಮತಗಳನ್ನು ಸುಲಭವಾಗಿ ಪಡೆಯಬಹುದು ಎಂಬ ಲೆಕ್ಕಾಚಾರವಿರುತ್ತದೆ. ಹೀಗಾಗಿ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಗುಂಪು ಮಾಡಿಕೊಳ್ಳಲು ಮೊದಲ ಆದ್ಯತೆ ನೀಡುತ್ತವೆ. ಹೀಗಾಗಿ, ಮೀಸಲಾತಿ ಪ್ರಕಾರ ತಮ್ಮ ಗುಂಪಿನಲ್ಲಿ ಯಾರ್ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಹುಡುಕಾಟವನ್ನು ಈಗಿನಿಂದಲೇ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts