More

    ಹಳ್ಳಿಯಲ್ಲಿ ‘ದುಡಿಯೋಣ ಬಾ’ ಗುಳೆ ತಡೆಗಟ್ಟಲು ವಿನೂತನ ಯೋಜನೆ ಗ್ರಾಮೀಣಾಭಿವೃದ್ಧಿಗೂ ಪೂರಕ

    ನಾಗರಮುನ್ನೋಳಿ: ಗ್ರಾಮೀಣ ಪ್ರದೇಶದ ಜನರು ಕೆಲಸಕ್ಕಾಗಿ ನಗರ, ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ‘ದುಡಿಯೋಣ ಬಾ’ ಎಂಬ ವಿನೂತನ ಅಭಿಯಾನ ಆರಂಭಿಸಿದೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೆಲಸ ಕೊಡುವುದರ ಜತೆಗೆ ಗ್ರಾಮೀಣಾಭಿವೃದ್ಧಿಗೂ ಈ ಅಭಿಯಾನ ಶಕ್ತಿ ತುಂಬಲಿದ್ದು, ಹಳ್ಳಿಗಳ ಸೌಂದರ್ಯವೂ ಇಮ್ಮಡಿಗೊಳ್ಳಲಿದೆ.

    ಗ್ರಾಮೀಣರಿಗೆ ಆಸರೆ: ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ಗುಳೆ ಹೋಗುವುದು ಸಾಮಾನ್ಯ. ಈ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯ ಜನರಿಗೆ ಕೆಲಸ ನೀಡುವುದೇ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ ಮಾ.15ರಿಂದ ಜೂ. 15ರ ವರೆಗೆ ಮೂರು ತಿಂಗಳ ಕಾಲ ಜಾರಿಯಲ್ಲಿರಲಿದೆ. ದುಡಿಯೋಣ ಬಾ ಅಭಿಯಾನವನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದ್ದು, ಕನಿಷ್ಠ ಕೂಲಿ ನಂಬಿ ಜೀವನ ಮಾಡುವ ಹಳ್ಳಿ ಕೂಲಿ ಕಾರ್ಮಿಕರಿಗೆ ವರದಾನವಾದಂತಾಗಿದೆ.

    ಹಲವು ಅಭಿವೃದ್ಧಿ ಕಾಮಗಾರಿ: ಲಾಕ್‌ಡೌನ್ ಸಮಯದಲ್ಲಿ ದೂರದ ಊರುಗಳಿಂದ ಸ್ವಂತ ಊರುಗಳಿಗೆ ಮರಳಿರುವ ಜನರಿಗೆ ಈ ಅಭಿಯಾನ ಸಹಕಾರಿಯಾಗಿದೆ. ಕೆಲಸ ಇಲ್ಲದೆ ಕಂಗಾಲಾಗಿರುವ ಜನರಿಗೆ ಇದರಿಂದ ಕೂಲಿ ಸಿಕ್ಕಿದೆ. ಯೋಜನೆ ಮೂಲಕ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಹೊಲದಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ತೆರದ ಬಾವಿ, ಸಮಗ್ರ ಕೆರೆ ನಿರ್ಮಾಣ, ರಸ್ತೆ ಬದಿ
    ನಡುತೋಪು, ಕೃಷಿ ಅರಣ್ಯೀಕರಣ, ಬ್ಲಾಕ್ ಪ್ಲಾಂಟೇಶನ್ ಸೇರಿ ವಿವಿಧ ಕಾಮಗಾರಿಗಳನ್ನು ಈ ಮೂರು ತಿಂಗಳ ಅವಧಿಯಲ್ಲಿ ಕೈಗೊಳ್ಳಬಹುದಾಗಿದೆ.

    ಸರ್ಕಾರದ ಆದೇಶ: ಜನರು ಕೂಲಿ ಕೆಲಸವಿಲ್ಲ ಎಂದು ಭಾವಿಸಿ ಗುಳೆ ಹೋಗದಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳು ಕೆಲಸ ಕೇಳಿ ಬರುವ ಎಲ್ಲರಿಗೂ ಕಡ್ಡಾಯವಾಗಿ ನರೇಗಾದಡಿ ಕೆಲಸ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬಿಎಫ್‌ಟಿ ಮತ್ತು ತಾಂತ್ರಿಕ ಸಹಾಯಕ ಅಭಿಯಂತರು, ಐಇಸಿ ಸಂಯೋಜಕರು ವಿಆರ್‌ಪಿಗಳು ಗ್ರಾಮಗಳಲ್ಲಿ ‘ದುಡಿಯೋಣ ಬಾ’ ಯೋಜನೆ ಬಗ್ಗೆ ಅರಿವು ಮೂಡಿಸಲಿದ್ದಾರೆ. ಒಟ್ಟಿನಲ್ಲಿ ಗುಳೆ ಹೋಗುವುದನ್ನು ತಡೆಯಲು ಈ ಯೋಜನೆ ಬಳಕೆಯಾಗಲಿದೆ.

    ಅರ್ಜಿ ಸಲ್ಲಿಸಿದ ಎಲ್ಲರಿಗೂ ಜಾಬ್ ಕಾರ್ಡ್: ಮಾ.15ರಿಂದ ಮಾ.22ರವರೆಗೆ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಪಂಚಾಯಿತಿ ಹಂತದ ಎಲ್ಲ ಸಿಬ್ಬಂದಿ, ಯುವಕ ಸಂಘ,ರೈತ ಸಂಘಗಳ ಸದಸ್ಯರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾ.23ರಿಂದ 31ರವರೆಗೆ ಉದ್ಯೋಗ ಚೀಟಿಗಾಗಿ ಅರ್ಜಿ ಸಲ್ಲಿಸಿದ ಎಲ್ಲ ಕುಟುಂಬಗಳಿಗೆ ಕಡ್ಡಾಯವಾಗಿ ಜಾಬ್ ಕಾರ್ಡ್ ನೀಡಬೇಕು.
    ಏ.1ರಿಂದ ಜೂ.15ರವರೆಗೆ ನರೇಗಾ ಕಾಮಗಾರಿಗೆ ಚಾಲನೆ ಸಿಗಬೇಕು. ಕೆಲಸಕ್ಕೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡಲೇ ಕೆಲಸ ನೀಡುವಂತೆ ಸರ್ಕಾರವು ಆದೇಶ ಮಾಡಿದೆ.

    ಬೇಸಿಗೆಯಲ್ಲಿ 60 ದಿನ ಕೆಲಸ ಮಾಡಿದಲ್ಲಿ ಒಂದು ಕುಟಂಬಕ್ಕೆ 16 ಸಾವಿರಕ್ಕಿಂತ ಹೆಚ್ಚು ಹಣ ಸಂದಾಯವಾಗಲಿದೆ. ಮುಂದಿನ ಮುಂಗಾರು ಹಂಗಾಮಿನ ಅವಧಿಯಲ್ಲಿ ಬೀಜ ಹಾಗೂ ರಸಗೊಬ್ಬರ ಅಥವಾ ಶಾಲಾ ಮಕ್ಕಳ ಶುಲ್ಕ ಹಾಗೂ ಅವರ ಖರ್ಚು ಭರಿಸಲು ಇದರಿಂದ ಸಹಕಾರಿಯಾಗಲಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗಳು ಕರಪತ್ರ ಹಾಗೂ ಪೋಸ್ಟರ್ ಮೂಲಕ ಹೆಚ್ಚಿನ ಪ್ರಚಾರ ನೀಡುವಂತೆ ಆದೇಶದಲ್ಲಿ ಸರ್ಕಾರ ಸೂಚನೆ ನೀಡಿದೆ. ಒಟ್ಟಿನಲ್ಲಿ ಕೂಲಿ ಕೆಲಸವಿಲ್ಲ ಎಂದು ಹೊಟ್ಟೆಪಾಡಿಗಾಗಿ ಗುಳೆ ಹೋಗುವುದನ್ನು ತಡೆಯಲು ದುಡಿಯೋಣ ಬಾ ಕಾರ್ಯಕ್ರಮ ಒತ್ತಾಸೆಯಾಗಲಿದೆ.

    ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದುಡಿಯೋಣ ಬಾ ಎಂಬ ವಿಶೇಷ ಅಭಿಯಾನ ಜಾರಿಗೆ ತಂದಿದೆ. ಈ ಅಭಿಯಾನವನ್ನು ಚಿಕ್ಕೋಡಿ ತಾಲೂಕಿನಲ್ಲಿಯೂ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.ದುಡಿಯೋಣ ಬಾ ಕಾರ್ಯಕ್ರಮ ಅನುಷ್ಠಾನಕ್ಕೆ ಹಿಂದೇಟು ಹಾಕುವ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
    | ಸಮೀರ ಮುಲ್ಲಾ ತಾಪಂ ಇಒ, ಚಿಕ್ಕೋಡಿ

    | ಲಾಲಸಾಬ ತಟಗಾರ ನಾಗರಮುನ್ನೋಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts