More

    ವಿಕ್ರಾಂತ್ ರೋಣ: ಅದೇ ಕಮರೊಟ್ಟು ಹೊಸ ಕಥೆ

    |ಚೇತನ್​ ನಾಡಿಗೇರ್​ ಬೆಂಗಳೂರು
    ಅದೊಂದು ವಿಚಿತ್ರವಾದ ಊರು. ಕೆಲವೇ ವರ್ಷಗಳ ಅಂತರದಲ್ಲಿ ಆ ಊರಿನಲ್ಲಿ 14 ಮಕ್ಕಳು ನಿಗೂಢವಾಗಿ ಕಿಡ್ನಾಪ್ ಆಗಿರುತ್ತಾರೆ. ಕಿಡ್ನಾಪ್ ಆದವರು ಎಲ್ಲಿಗೆ ಹೋಗುತ್ತಾರೆ, ಗೊತ್ತಿಲ್ಲ. ಯಾರು ಕಿಡ್ನಾಪ್ ಮಾಡಿದ್ದು, ಗೊತ್ತಿಲ್ಲ. ಯಾರು, ಯಾಕೆ ಮಾಡಿದ್ದು ಎಂದು ಹುಡುಕಿ ಹೊರಟ ಪೊಲೀಸ್ ಅಧಿಕಾರಿ ಸಹ ಶವವಾಗಿರುತ್ತಾರೆ. ಹೀಗೆ ಭಯದಲ್ಲೇ ಬದುಕುತ್ತಿದ್ದ ಊರಿಗೆ, ಭಯ ಎಂದರೇನು ಎಂದು ಗೊತ್ತಿಲ್ಲದ ಪೊಲೀಸ್ ಅಧಿಕಾರಿಯೊಬ್ಬ ಬರುತ್ತಾನೆ. ಅವನೇ ವಿಕ್ರಾಂತ್ ರೋಣ. ನಿಗೂಢ ಪ್ರಕರಣವನ್ನು ಭೇದಿಸಿ, ಭಯದಲ್ಲಿದ್ದ ಊರಿನವರಿಗೆ ಹೇಗೆ ಅಭಯ ನೀಡುತ್ತಾನೆ ಎನ್ನುವುದೇ ಚಿತ್ರದ ಕಥೆ.

    ‘ವಿಕ್ರಾಂತ್ ರೋಣ’ ಚಿತ್ರದ ಕಥೆ ಕೇಳುವುದಕ್ಕೇನೋ ಬಹಳ ಸರಳವಾಗಿದೆ. ಆದರೆ, ಅಷ್ಟು ಸರಳವಲ್ಲ ಎಂಬುದು ಚಿತ್ರ ನೋಡುತ್ತಾ ನೋಡುತ್ತಾ ಗೊತ್ತಾಗುತ್ತದೆ. ಏಕೆಂದರೆ, ಇಲ್ಲಿ ಹಲವು ಪದರಗಳನ್ನು ತಂದಿದ್ದಾರೆ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿರುವ ನಿರ್ದೇಶಕ ಅನೂಪ್ ಭಂಡಾರಿ. ಚಿತ್ರದ ಕಥೆ ನಡೆಯುವುದು ಕಮರೊಟ್ಟು ಎಂಬ ಗ್ರಾಮದಲ್ಲಿ. ಅದೂ ಒಂದು ಲೀಟರ್ ಪೆಟ್ರೋಲ್​ಗೆ ಆರು ರೂ. ಇದ್ದ ಕಾಲದಲ್ಲಿ. ಒಂದು ಕಡೆ ಗಂಭೀರ್ ಕುಟುಂಬದ ಕಥೆಯೊಂದು ನಡೆಯುತ್ತಿರುತ್ತದೆ. ಇನ್ನೊಂದು ಕಡೆ ಕಿಡ್ನಾಪ್ ಪ್ರಕರಣದ ತನಿಖೆಯಾಗುತ್ತಿರುತ್ತದೆ. ಮತ್ತೊಂದು ಕಡೆ 28 ವರ್ಷಗಳ ಹಿಂದೆ ಒಂದು ಘಟನೆಯಿಂದ ಒಂದು ಕುಟುಂಬ ಸರ್ವನಾಶವಾದ ಉಲ್ಲೇಖವಾಗುತ್ತಿರುತ್ತದೆ. ಈ ಮೂರೂ ಕಥೆಗಳು ಒಂದಕ್ಕೊಂದು ಹೆಣೆದುಕೊಳ್ಳುತ್ತಾ ಮುನ್ನಡೆಯುತ್ತದೆ.

    ವಿಕ್ರಾಂತ್ ರೋಣ: ಅದೇ ಕಮರೊಟ್ಟು ಹೊಸ ಕಥೆಕಥೆಯ ಚೌಕಟ್ಟು ದೊಡ್ಡದಾಗಿರುವುದರಿಂದ ಪಾತ್ರಗಳು, ಘಟನೆಗಳು, ಟ್ವಿಸ್ಟ್​ಗಳು ಎಲ್ಲವೂ ಜಾಸ್ತಿಯೇ ಇವೆ. ಚಿತ್ರದ ಮೊದಲಾರ್ಧ ಪರಿಸರ ಮತ್ತು ಪಾತ್ರಧಾರಿಗಳನ್ನು ವಿವರಿಸುವುದಕ್ಕೆ ಮೀಸಲಿಟ್ಟಿದ್ದಾರೆ ಅನೂಪ್. ಚಿತ್ರ ಮುಂದುವರೆಯುತ್ತಿದ್ದಂತೆಯೇ ಇದೊಂದು ಹಾರರ್ ಚಿತ್ರವಾ? ಥ್ರಿಲ್ಲರ್ ಚಿತ್ರವಾ? ಮರ್ಡರ್ ಮಿಸ್ಟ್ರಿಯಾ? ಸೆಂಟಿಮೆಂಟ್ ಕಥೆಯಾ? ಎಂದು ಗೊಂದಲಗೊಳಿಸುತ್ತಲೇ ಇರುತ್ತಾರೆ. ಏನೇ ಹೆದರಿಸಿದರೂ, ಎಷ್ಟೇ ಟ್ವಿಸ್ಟ್ ಕೊಟ್ಟರೂ ಪ್ರೇಕ್ಷಕ ಅಷ್ಟೇನೂ ಕದಲುವುದಿಲ್ಲ. ಕಾರಣ, ಚಿತ್ರದಲ್ಲೇನಾಗುತ್ತಿದೆ ಎಂಬ ಸ್ಪಷ್ಟತೆಯೇ ಸಿಗುವುದಿಲ್ಲ. ಆ ಸ್ಪಷ್ಟತೆ ಸಿಗುವುದು ಕೊನೆಯ 20 ನಿಮಿಷಗಳಲ್ಲಿ ಮಾತ್ರ. ಕ್ಲೈಮ್ಯಾಕ್ಸ್ ನಲ್ಲಿ ಚಿತ್ರದ ಕಥೆ ಏನಿರಬಹುದು ಎಂದು ಅರ್ಥವಾಗುತ್ತದೆ. ಚಿತ್ರ ಮುಗಿಯುವ ಹೊತ್ತಿಗೆ ಇದು ಅನೂಪ್ ನಿರ್ದೇಶನದ ‘ರಂಗಿತರಂಗ’ ಚಿತ್ರದ ಅಪ್​ಡೇಟೆಡ್ ಆವೃತ್ತಿ ಎಂದನಿಸುತ್ತದೆ.

    ಬೇರೆ ವಿಷಯಗಳಲ್ಲಿ ಏನಾದರೂ ಇರಲಿ, ತಾಂತ್ರಿಕ ವಿಷಯಗಳಲ್ಲಿ ‘ವಿಕ್ರಾಂತ್ ರೋಣ’ ಬಹಳ ಅಪ್​ಡೇಟ್ ಆಗಿರುವ ಸಿನಿಮಾ. ಛಾಯಾಗ್ರಹಣ, ಗ್ರಾಫಿಕ್ಸ್, ಕಲಾ ನಿರ್ದೇಶನ, ಹಿನ್ನೆಲೆ ಸಂಗೀತ … ಹೀಗೆ ಹಲವು ವಿಭಾಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿವೆ. ಕಾಡು ಮತ್ತು ಹಳೆಯ ದೇವಸ್ಥಾನವನ್ನು ಶಿವಕುಮಾರ್ ಕಟ್ಟಿರುವ ರೀತಿ, ಅದನ್ನು ಮಂದಬೆಳಕಿನಲ್ಲಿ ವಿಲಿಯಮ್ ಡೇವಿಡ್ ತೋರಿಸುವ ರೀತಿ ಎಲ್ಲವೂ ಅದ್ಭುತವಾಗಿದೆ. ಇನ್ನು, ಒಂದೇ ಶಾಟ್​ನಲ್ಲಿ ಮೂಡಿಬಂದಿರುವ ಕ್ಲೈಮ್ಯಾಕ್ಸ್ ಫೈಟ್ ಚಿತ್ರದ ಇನ್ನೊಂದು ಹೈಲೈಟ್ ಎಂದರೆ ತಪ್ಪಲ್ಲ. ಇಡೀ ಚಿತ್ರದಲ್ಲಿ ಹಲವು ತಂತ್ರಜ್ಞರ ಶ್ರಮ ಎದ್ದು ಕಾಣುತ್ತದೆ. ಅವರೆಲ್ಲರ ಜತೆಗೆ ಕಥೆ ಕಟ್ಟಿಕೊಡುವಲ್ಲಿ ಅನೂಪ್ ಸಹ ಇನ್ನಷ್ಟು ಶ್ರಮ ವಹಿಸಿದ್ದರೆ, ‘ವಿಕ್ರಾಂತ್ ರೋಣ’ ನಿಜಕ್ಕೂ ಪ್ಯಾನ್ ವರ್ಲ್ಡ್ ಸಿನಿಮಾ ಆಗುತ್ತಿತ್ತು. ‘ವಿಕ್ರಾಂತ್ ರೋಣ’, ಸುದೀಪ್ ಪಾಲಿಗೆ ವಿಶೇಷವಾದ ಸಿನಿಮಾ. ಈ ತರಹದ ಬೇರೆ ಪರಿಸರದ ಒಂದು ಚಿತ್ರದಲ್ಲಿ ಅವರು ಈ ಹಿಂದೆ ನಟಿಸಿರಲಿಲ್ಲ. ಹಾಗಾಗಿ, ಇದು ಅವರಿಗೆ ವಿಭಿನ್ನ. ಜಾಕ್​ಲೀನ್​ಗೆ ಹಾಡು ಬಿಟ್ಟರೆ ಹೆಚ್ಚು ಕೆಲಸವಿಲ್ಲ. ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಮಧುಸೂಧನ್ ರಾವ್ ಸೇರಿದಂತೆ ಹಲವು ಪಾತ್ರಗಳಿದ್ದರೂ, ಯಾರೂ ಹೆಚ್ಚು ಗಮನದಲ್ಲಿ ಉಳಿಯುವುದಿಲ್ಲ.
    (ಚಿತ್ರ: ವಿಕ್ರಾಂತ್ ರೋಣ, ನಿರ್ದೇಶನ: ಅನೂಪ್ ಭಂಡಾರಿ, ನಿರ್ಮಾಣ: ಜಾಕ್ ಮಂಜುನಾಥ್, ತಾರಾಗಣ: ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್​ಲೀನ್ ಫರ್ನಾಂಡಿಸ್, ಮಧುಸೂಧನ್ ರಾವ್ ಮುಂತಾದವರು.)

    ರಾಜ್ಯದಲ್ಲಿ ಮತ್ತೆ ಮಳೆ ಬಿರುಸು, ನಾಳೆ 9 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

    ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ವ್ಯಾಕ್ಸಿನ್​! ಕೋವಿಡ್​​ ಲಸಿಕೆ ಅಭಿಯಾನದಲ್ಲಿ ಮಹಾ ಪ್ರಮಾದ, ಆರೋಪಿ ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts