More

  ಸಂಪಾದಕೀಯ| ಆಧಾರ್ ಕುರಿತು ಸುಪ್ರೀಂ ಸ್ಪಷ್ಟನೆ, ಬಗೆಹರಿದ ಗೊಂದಲ

  ಸಂಪಾದಕೀಯ| ಆಧಾರ್ ಕುರಿತು ಸುಪ್ರೀಂ ಸ್ಪಷ್ಟನೆ, ಬಗೆಹರಿದ ಗೊಂದಲಎಲ್ಲ ಸವಲತ್ತುಗಳನ್ನು ಮತ್ತು ಸೇವೆಗಳನ್ನು ಪಡೆಯಲು ಒಂದೇ ಕಾರ್ಡ್ ಇರಬೇಕೆಂಬ ಚಿಂತನೆಯ ಹಿನ್ನೆಲೆಯಲ್ಲಿ ಮೂಡಿಬಂದಿದ್ದು ಆಧಾರ್ ಕಾರ್ಡ್ ಯೋಜನೆ. ಆರಂಭದಲ್ಲಿ ಕುಂಟುತ್ತ ನಡೆದ ಈ ಯೋಜನೆ ನಂತರದಲ್ಲಿ ವೇಗ ಪಡೆಯಿತು. ಆ ಬಳಿಕ ವಿವಿಧ ವಿಚಾರವಾಗಿ ತಕರಾರುಗಳೂ ಉಂಟಾಗಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಒಂದಷ್ಟು ಗೊಂದಲವೂ ಉಂಟಾಗಿತ್ತು. ಇದೀಗ, ಸವೋಚ್ಚ ನ್ಯಾಯಾಲಯ ಆಧಾರ್ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದಿದ್ದ 2018ರ ತನ್ನ ತೀರ್ಪನ್ನು ಮರುಪರಿಶೀಲಿಸಲು ನಿರಾಕರಿಸುವ ಮೂಲಕ ಎಲ್ಲ ಗೊಂದಲ, ಪ್ರಶ್ನೆಗಳನ್ನು ಬಗೆಹರಿಸಿದೆ ಎನ್ನಬಹುದು. ಸವೋಚ್ಚ ನ್ಯಾಯಾಲಯ ಅಂದಿನ ತೀರ್ಪಿನಲ್ಲಿ ಆಧಾರ್ ಯೋಜನೆಯ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಆದರೆ, ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಶಾಲಾ ಸೇರ್ಪಡೆಗೆ ಆಧಾರ್ ಸಂಖ್ಯೆ ಜೋಡಿಸಬೇಕೆಂಬ ನಿಯಮಗಳಿಗೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಆ ತೀರ್ಪನ್ನು ಮರುಪರಿಶೀಲಿಸುವಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಆಧಾರ್ ಮಸೂದೆಯನ್ನು ಹಣಕಾಸು ಮಸೂದೆ ಎಂದು ಉಲ್ಲೇಖಿಸಿದ್ದು ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ವಿಪಕ್ಷಗಳು ಈ ಅಂಶವನ್ನು ವಿರೋಧಿಸಿದ್ದವು. ಭಾರತದಂತಹ ಬೃಹತ್ ದೇಶದಲ್ಲಿ ಹೀಗೆ ಒಂದು ಕಾರ್ಡನ್ನು ಸಾಕಾರಗೊಳಿಸುವ ಯೋಜನೆ ಜಾರಿ ಅಷ್ಟು ಸುಲಭವಲ್ಲ ಎಂಬುದು ನಿಜವಾದರೂ, ಈಗ ಕಾರ್ಡ್ ನೀಡಿಕೆ ಶೇ.90ಕ್ಕಿಂತ ಅಧಿಕವಿದೆ ಎಂಬುದು ಕಡೆಗಣಿಸುವಂತಹ ವಿಷಯವಲ್ಲ. ಆಧಾರ್ ಕಾರ್ಡಿಗೆ ವ್ಯಕ್ತಿಯ ಬೆರಳಚ್ಚು ಇತ್ಯಾದಿ ದೈಹಿಕ ಗುರುತಿನ ಜತೆಗೆ ವಿಳಾಸ ಇತ್ಯಾದಿ ಎಲ್ಲ ಮಾಹಿತಿಗಳು ಅಗತ್ಯವಾದುದರಿಂದ ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ಉಂಟಾಗಬಹುದು, ಆಧಾರ್​ನಲ್ಲಿರುವ ಮಾಹಿತಿಗಳನ್ನು ಅನ್ಯ ಉದ್ದೇಶಕ್ಕೆ ಬಳಸಬಹುದು. ಇದಲ್ಲದೆ ಸರ್ಕಾರವೇ ಜನರ ಮೇಲೆ ಕಣ್ಗಾವಲು ಇಟ್ಟಂತಾಗುತ್ತದೆ ಎಂಬೆಲ್ಲ ಆಕ್ಷೇಪ, ಅನುಮಾನಗಳು ವ್ಯಕ್ತವಾಗಿದ್ದವು. ಈ ವಿಷಯಗಳನ್ನು ಸಹ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಈ ನಡುವೆ, ಖಾಸಗಿ ಕಂಪನಿಗಳು ಮೊಬೈಲ್ ನಂಬರ್ ನೀಡುವುದಕ್ಕು ಸಹ ಆಧಾರ್ ಕಾರ್ಡನ್ನು ಕೇಳತೊಡಗಿದ್ದರಿಂದ ಮತ್ತಷ್ಟು ಗೊಂದಲ, ವಿವಾದ ಉಂಟಾಗಿತ್ತು. ಯಾವುದಕ್ಕೆ ಆಧಾರ್ ಬೇಕು, ಯಾವುದಕ್ಕೆ ಬೇಡ ಎಂದು ಜನ ತಲೆಕೆಡಿಸಿಕೊಳ್ಳುವಂತಾಗಿತ್ತು. ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಶಾಲಾ ಸೇರ್ಪಡೆಗೆ ಆಧಾರ್ ಲಿಂಕ್ ಬೇಡವೆಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮಾಜಿಕ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯವೆಂದು ಹೇಳಿತ್ತು. ಈಗ ನ್ಯಾಯಾಲಯ ನೀಡಿರುವ ತೀರ್ಪು ಆಧಾರ್ ವಿಷಯವಾಗಿ ಇದ್ದ ಎಲ್ಲ ಗೊಂದಲ, ಅನುಮಾನಗಳನ್ನು ಬಗೆಹರಿಸಿದೆ ಎನ್ನಬಹುದು. ಸರ್ಕಾರಗಳು ಈಗ ಯೋಜನೆಗಳ ಸಬ್ಸಿಡಿ ಹಣ ಅಥವಾ ನೆರವಿನ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿದೆ ಎಂದು ವರದಿಗಳು ಹೇಳುತ್ತವೆ. ಇಷ್ಟಿದ್ದರೂ, ಈಗ ಸೈಬರ್ ವಂಚನೆಯ ಜಾಲ ಎಲ್ಲೆಲ್ಲೂ ಕಾಣತೊಡಗಿದ್ದು, ಜನರ ಆಧಾರ್ ಮಾಹಿತಿಯನ್ನು ಪಡೆದುಕೊಂಡು ಯಾಮಾರಿಸಲು ಯತ್ನಿಸುವುದು ನಡೆಯುತ್ತಿದೆ. ಹೀಗಾಗಿ ಜನರು ಎಚ್ಚರದಿಂದಿರಬೇಕು.

  See also  ಕಾಂಟ್ಯಾಕ್ಟ್​​ ಲೆನ್ಸ್​ನಿಂದ ಕಾರ್ನಿಯಾಗೆ ಡ್ಯಾಮೇಜ್​​; ಕಣ್ಣಿನ ಸ್ಥಿತಿ ಬಗ್ಗೆ ನಟಿ ಹೇಳಿಕೊಂಡಿದ್ದು ಹೀಗೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts