More

    ಸಚಿನ್ ತೆಂಡುಲ್ಕರ್ ಚಾಲೆಂಜ್ ಸ್ವೀಕರಿಸಿದ ಬಾಲಕ

    ವಿಜಯಪುರ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಎಡ್ಜ್​ನಿಂದ ಚೆಂಡು ಪುಟಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಎಸೆದಿರುವ ಸವಾಲನ್ನು ಬಾಲಕನೊಬ್ಬ ಸ್ವೀಕರಿಸಿದ್ದಾನೆ. ಜಲನಗರದ ನಿವಾಸಿ 10 ವರ್ಷದ ಬಾಲಕ ವಿಷ್ಣುವರ್ಧನ ಸುರೇಶ ಪುಕಾಳೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಚಿನ್ ತೆಂಡುಲ್ಕರ್ ಸವಾಲು ಸ್ವೀಕರಿಸಿ ಸೈ ಎನಿಸಿಕೊಂಡಿದ್ದಾನೆ. ಸ್ಥಳೀಯ ಸಿಕ್ಯಾಬ್ ಕಾಲೇಜಿನಲ್ಲಿ 5ನೇ ತರಗತಿ ಓದುತ್ತಿರುವ ವಿಷ್ಣುವರ್ಧನ ತರಬೇತುದಾರ ಸಲೀಂ ತಾಜಿಮತರಕ ಗರಡಿಯಲ್ಲಿ ಇಂಥದ್ದೊಂದು ಜಾದೂ ಮಾಡಿದ್ದಾನೆ.

    ಏನಿದು ಸವಾಲು?: ಮಾಜಿ ಕ್ರಿಕೆಟಿಗ ಯುವರಾಜ ಸಿಂಗ್ ಇತ್ತೀಚೆಗೆ ಬ್ಯಾಟ್ ಎಡ್ಜ್​ನಿಂದ ಸತತವಾಗಿ ಚೆಂಡನ್ನು ಪುಟಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರಿಗೆ ಸವಾಲೆಸೆದಿದ್ದರು. ಪ್ರತಿಯಾಗಿ ಸಚಿನ್ ತೆಂಡುಲ್ಕರ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚೆಂಡು ಪುಟಿಸುವ ಮೂಲಕ ಯುವರಾಜ ಸಿಂಗ್​ಗೆ ಮರು ಸವಾಲು ಎಸೆದಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಜುಗಲ್ ಬಂದಿ ಕಂಡ ವಿಷ್ನುವರ್ಧನ ಸಚಿನ್ ಸವಾಲು ಸ್ವೀಕರಿಸಿ ಅವರಂತೆಯೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಎಡ್ಜ್​ನಿಂದ 200ಕ್ಕೂ ಅಧಿಕ ಬಾರಿ ಚೆಂಡು ಪುಟಿಸಿದ್ದಾನೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ವಿಷ್ಣುವಿನ ಕ್ರಿಕೆಟ್ ಪ್ರೇಮ ತಂದೆ ಸುರೇಶ ಅವರ ಕ್ರಿಕೆಟ್ ಪ್ರೇಮವನ್ನೇ ಮೈಗೂಡಿಸಿಕೊಂಡಿರುವ ವಿಷ್ಣುವರ್ಧನ ನಿತ್ಯ ನಾಲ್ಕು ಗಂಟೆ ಕ್ರಿಕೆಟ್ ಅಭ್ಯಾಸ ಮಾಡುತ್ತಾನೆ. ಕೋಚ್ ಸಲೀಂ ಅವರ ಗರಡಿಯಲ್ಲಿ ಕಠಿಣ ತರಬೇತಿ ಪಡೆಯುವ ವಿಷ್ಣುವರ್ಧನಗೆ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡುಲ್ಕರ್ ನೆಚ್ಚಿನ ಕ್ರಿಕೆಟ್ ತಾರೆಯರು. ಅವರಂತೆಯೇ ಆಗಬೇಕೆಂಬ ಕನಸು ಹೊತ್ತು ನಿತ್ಯ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದು, ಸಚಿನ್ ನೀಡಿದ ಸವಾಲಿಗೆ ಪ್ರತಿಯಾಗಿ ಅವರಿಗಿಂತ ಹೆಚ್ಚಿನ ಬಾರಿ ಚೆಂಡು ಪುಟಿಸಿದ್ದಾನೆ. ಕಣ್ಣಿಗೆ ತೆಳುವಾದ ಕಪ್ಪು ಬಟ್ಟೆ ಕಟ್ಟಿಕೊಂಡು ಚೆಂಡು ಪುಟಿಸುತ್ತಾ ನಿಂತರೆ ನೋಡುಗರು ನಿಬ್ಬೆರಗಾಗುವಂತೆ ಮಾಡುತ್ತಾನೆ. ಒಟ್ಟಿನಲ್ಲಿ ಈತನ ಏಕಾಗ್ರತೆ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಂತೂ ನಿಜ.

    ಫೇಸ್​ಬುಕ್​ನಲ್ಲಿ ತೆಂಡುಲ್ಕರ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಎಡ್ಜ್ ನಿಂದ ಚೆಂಡು ಪುಟಿಸಿದ ವಿಡಿಯೋ ನೋಡಿದೆ. ನಾನೂ ಹಾಗೆ ಮಾಡಬೇಕೆಂದು ಪ್ರಯತ್ನಿಸಿದೆ. ಮೊದಲ ಬಾರಿಯೇ ನೂರಕ್ಕೂ ಅಧಿಕ ಬಾರಿ ಅಂಥದ್ದೊಂದು ಸಾಹಸ ಮಾಡಿದೆ. ಖುಷಿಯಾಯಿತು. ಮತ್ತೆ ಮತ್ತೆ ಪ್ರಯತ್ನಿಸಿದೆ ಈಗ 500ರ ತನಕ ಚೆಂಡು ಪುಟಿಸಬಲ್ಲೆ.

    | ವಿಷ್ಣುವರ್ಧನ ಪುಕಾಳೆ ಜಲನಗರದ ಬಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts