More

    Web Exclusive| ಕೊಟ್ಟ ಪರಿಹಾರ ಕಸಿದುಕೊಳ್ಳುವುದೇ ಸರ್ಕಾರ? ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಶಾಕ್​

    | ಪರಶುರಾಮ ಕೆರಿ ಹಾವೇರಿ
    2019ರ ಆಗಸ್ಟ್​ ಹಾಗೂ ಅಕ್ಟೋಬರ್​ನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ದೇವಗಿರಿ ಗ್ರಾಮದ 236 ಮನೆಗಳು ಕೊಚ್ಚಿ ಹೋಗಿದ್ದವು. ಆಗ ಸರ್ಕಾರ ಮನೆ ನಿರ್ಮಿಸಿಕೊಳ್ಳಲು ತುರ್ತಾಗಿ 1 ಲಕ್ಷ ರೂ. ಪರಿಹಾರ ನೀಡಿತ್ತು. ಫಲಾನುಭವಿಗಳು ಇದೀಗ ಮುಂದಿನ ಕಂತಿನ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇಂಥ ಸಮಯದಲ್ಲಿ, 74 ಫಲಾನುಭವಿಗಳಿಗೆ ಇದೀಗ ಅನರ್ಹರು ಎಂಬ ಹಣೆಪಟ್ಟಿ ಕಟ್ಟಿ, ಹಣ ಮರು ಪಾವತಿ ಮಾಡುವಂತೆ ಜಿಲ್ಲಾಡಳಿತ ಫರ್ಮಾನು ಹೊರಡಿಸಿದೆ.

    ಜಿಲ್ಲಾಡಳಿತ ಹಣ ಮರಳಿಸುವಂತೆ ನೋಟಿಸ್​ ನೀಡಲು ಮುಂದಾಗಿರುವ ಸುದ್ದಿ ಕೇಳಿ ಮನೆ ಕಳೆದುಕೊಂಡವರು ಅಕ್ಷರಶಃ ಗರ ಬಡಿದಂತಾಗಿದ್ದಾರೆ. ಅತಿವೃಷ್ಟಿಯಾಗಿ ಒಂದೂವರೆ ವರ್ಷದ ನಂತರ ತಾಲೂಕಿನ ದೇವಗಿರಿ ಗ್ರಾಮದ 74 ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಿದ್ದು ಅಚ್ಚರಿ ಮೂಡಿಸಿದೆ. ಇಷ್ಟು ಸಾಲದು ಎಂಬಂತೆ ಸರ್ಕಾರದಿಂದ ಅವರು ಪರಿಹಾರವಾಗಿ ಪಡೆದಿರುವ 1.03 ಕೋಟಿ ರೂ. ಗಳನ್ನು ಮರಳಿಸುವಂತೆ ನೋಟಿಸ್​ ನೀಡಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಪಂ ಇಒ ಅವರು ಪಿಡಿಒಗಳಿಗೆ ಆದೇಶಿಸಿದ್ದಾರೆ.

    ಅತಂತ್ರ ಸ್ಥಿತಿಯಲ್ಲಿ ಫಲಾನುಭವಿಗಳು: ದೇವಗಿರಿ ಗ್ರಾಮದಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ 236 ಫಲಾನುಭವಿಗಳನ್ನು ಪ್ರಾಥಮಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿತ್ತು. ಜಿಲ್ಲಾಡಳಿತ ನೇಮಿಸಿದ ಅಧಿಕಾರಿಗಳ ತಂಡವೇ ಪರಿಶೀಲಿಸಿ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರಕ್ಕೆ ನೀಡಿತ್ತು. ಅದರಂತೆ ಫಲಾನುಭವಿಗಳಲ್ಲಿ ಕೆಲವರಿಗೆ ಮೊದಲು, ಇನ್ನೂ ಕೆಲವರಿಗೆ ಎರಡನೇ ಕಂತು 1 ಲಕ್ಷ ರೂ. ಬಿಡುಗಡೆಯಾಗಿದೆ. ಸರ್ಕಾರದ ಒಟ್ಟು 4 ಲಕ್ಷ ರೂ. ಪರಿಹಾರಕ್ಕೆ ಕಾಯದೆ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಮಾಡಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ 74 ಫಲಾನುಭವಿಗಳು ಅನರ್ಹರೆಂದು ಯಾವ ಮಾನದಂಡದ ಮೇಲೆ ಹೇಳುತ್ತಿದ್ದಾರೆ? ಒಂದೊಮ್ಮೆ ನಾವು ಅನರ್ಹರಾಗಿದ್ದರೆ ಅಧಿಕಾರಿಗಳೇಕೆ ನಮ್ಮನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿದರು? ಈಗ ಹಣ ಮರುಪಾವತಿ ಮಾಡಿ ಎಂದರೆ ಎಲ್ಲಿಂದ ತಂದು ಕೊಡಬೇಕು ಎಂದು ನೋಟಿಸ್​ ಪಡೆದವರು ಪ್ರಶ್ನಿಸುತ್ತಿದ್ದಾರೆ.

    ಅಧಿಕಾರಿಗಳ ಮೇಲೆ ಇಲ್ಲ ಕ್ರಮ: ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ಪರಿಹಾರ ನೀಡಲು ಆಯಾ ಗ್ರಾಮ ಲೆಕ್ಕಾಧಿಕಾರಿ, ವಿವಿಧ ಇಲಾಖೆಯ ಒಬ್ಬ ಇಂಜಿನಿಯರ್​, ಪಿಡಿಒ ಸೇರಿ ನಾಲ್ಕೈದು ಜನರ ತಂಡವನ್ನು ಜಿಲ್ಲಾಡಳಿತ ನೇಮಿಸಿತ್ತು. ಈ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಿದ್ದ ಮನೆಯ ಜಿಪಿಎಸ್​ ಫೋಟೋ ತೆಗೆದು ಅದನ್ನು ವಸತಿ ನಿಗಮದ ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿದ ನಂತರವೇ ಫಲಾನುಭವಿಗಳ ಖಾತೆಗೆ ಪರಿಹಾರ ಜಮೆ ಆಗಿದೆ. ಹಾಗೊಂದು ವೇಳೆ ತಪ್ಪಾಗಿ ಪರಿಹಾರ ಬಿಡುಗಡೆ ಆಗಿದ್ದೇ ಆದಲ್ಲಿ ಇದರಲ್ಲಿ ಮೊದಲ ತಪ್ಪಿತಸ್ಥರು ಅಧಿಕಾರಿಗಳೆ.

    ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರು ಈಗಾಗಲೇ ಬೀದಿಗೆ ಬಂದಿದ್ದಾರೆ. ಸರ್ಕಾರ ನೀಡಿದ ಅಲ್ಪಸ್ವಲ್ಪ ಪರಿಹಾರದಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅವರನ್ನು ಅನರ್ಹರೆಂದು ಗುರುತಿಸಿದ್ದು ಅಚ್ಚರಿ ತಂದಿದೆ. ಒಂದೊಮ್ಮೆ ಅವರು ಅನರ್ಹರಾಗಿದ್ದರೆ ಪರಿಹಾರ ನೀಡುವ ಮುನ್ನವೇ ಗುರುತಿಸಬೇಕಿತ್ತು. ಮನೆ ಕಳೆದುಕೊಂಡವರ ಪಟ್ಟಿಯಲ್ಲಿ ಅವರನ್ನು ಸೇರಿಸಿದ್ದು ಅಧಿಕಾರಿಗಳು. ಆಗ ಅನರ್ಹರೆಂದು ಅವರಿಗೆ ಗೊತ್ತಿಗಾಗಲಿಲ್ಲವೇ? ಪ್ರತಿಯೊಂದು ಮನೆಯನ್ನು ಜಿಪಿಎಸ್​ ಮಾಡಿಯೇ ಪಟ್ಟಿ ಮಾಡಲಾಗಿದೆ. ಈಗ ಏಕಾಏಕಿ ಅನರ್ಹರೆಂದು ಹಣ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ನ್ಯಾಯಾಲಯಕ್ಕೆ ಮೊರೆ ಹೋಗುತ್ತೇವೆ.
    | ವಿರೂಪಾಕ್ಷಪ್ಪ ಕಡ್ಲಿ ಜಿಪಂ ಸದಸ್ಯ ದೇವಗಿರಿ

    ತಾಲೂಕಿನ ವಿವಿಧ ಗ್ರಾಪಂಗಳಲ್ಲಿ 74 ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರು ಈವರೆಗೆ ಪಡೆದ ಹಣವನ್ನು ಡಿಡಿ ಮೂಲಕ ಸರ್ಕಾರಕ್ಕೆ ಮರಳಿಸಲು ನೋಟಿಸ್​ ಕೊಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ.
    | ಡಾ. ಡಿ.ಸಿ. ಬಸವರಾಜ ತಾಪಂ ಇಒ ಹಾವೇರಿ

    74 ಅನರ್ಹ ಫಲಾನುಭವಿಗಳಿಂದ ಹಣ ವಸೂಲಿಗೆ ನೋಟಿಸ್​ ನೀಡುವಂತೆ ತಾಪಂ ಇಒ ಅವರು ಆದೇಶಿಸಿದ್ದಾರೆ. ಈವರೆಗೆ ಯಾವುದೇ ಫಲಾನುಭವಿಗಳಿಗೆ ನೋಟಿಸ್​ ಕೊಟ್ಟಿಲ್ಲ. ಇನ್ಮುಂದೆ ಕೊಡುತ್ತೇವೆ.
    | ಸುನಿತಾ ಗರಡಿ ಪಿಡಿಒ ದೇವಗಿರಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts