More

    ವಿವೇಕಧಾರೆ ಅಂಕಣ: ವಿಶ್ವವಿದ್ಯಾಲಯ ವಿದ್ಯೆಯ ಆಲಯವೋ? ಲಯವೋ?

    ಸನಾತನ ಭಾರತೀಯ ಪರಂಪರೆಯ ಉಳಿವು ಹಾಗೂ ಮುಂದುವರಿಕೆಗೆ ಸಾರ್ವಕಾಲಿಕವಾಗಿ ಪ್ರಸ್ಥಾನತ್ರಯಗಳು ಶಕ್ತಿ, ಸ್ಪೂರ್ತಿ ಮತ್ತು ಧ್ಯೇಯೋದ್ದೇಶಗಳ ಬೆಳಕನ್ನಿತ್ತು ಹರಸುತ್ತ ಸಾಗಿವೆ. ತೈತ್ತರೀಯ ಉಪನಿಷತ್ತಿನ ‘ಆಚಾರ್ಯೂೕಪದೇಶ’ದ ಭಾಗವು ಜಗತ್ತಿನ ಮಾನವ ಸಂಕುಲದಲ್ಲಿ ಮೊಳಗಿದ ಚೊಚ್ಚಲ ಸ್ನಾತಕೋಪದೇಶ ಅರ್ಥಾತ್ ವಿವೇಕಧಾರೆ ಅಂಕಣ: ವಿಶ್ವವಿದ್ಯಾಲಯ ವಿದ್ಯೆಯ ಆಲಯವೋ? ಲಯವೋ?ಘಟಿಕೋತ್ಸವ ಭಾಷಣ! ಈ ವಿಚಾರ ಎಷ್ಟು ಹಳೆಯದು? ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಹೇಳಬೇಕೆಂದರೆ ‘ಭಾರತೀಯ ನಾಗರಿಕತೆ ಉಚ್ಛ್ರಾಯ ಸ್ಥಿತಿ ತಲುಪಿದ್ದಾಗ ಪಾಶ್ಚಾತ್ಯ ನಾಗರಿಕತೆ ಇನ್ನೂ ಅಂಬೆಗಾಲಿಡುತ್ತಿದ್ದ, ಶೈಶವದ ಹಂತದಲ್ಲಿತ್ತು’ ಎಂಬ ವಿಷಯವನ್ನು ‘ಸನಾತನ’ ಎಂಬ ಶಬ್ದ ಕೇಳಿದೊಡನೆ ಉಗ್ರ, ವ್ಯಗ್ರರಾಗುವ ಮತ್ತು ವಿಚಾರವು ಯೋಗ್ಯವಾಗಿ ವಿಶ್ಲೇಷಿಸಲ್ಪಟ್ಟಾಗ ಇಂಗು ತಿಂದ ಮಂಗನಂತೆ ವ್ಯವಹರಿಸುವ ಸತ್ಯವಿಧ್ವಂಸಕರು ಅರಿಯಬೇಕಿದೆ. ಇಲ್ಲಿ ಇತಿಹಾಸಪ್ರಜ್ಞೆ ಮತ್ತು ಸತ್ಯನಿಷ್ಠೆಗಳು ಪೂರ್ವಗ್ರಹಪೀಡಿತರಿಗೆ ಎಟಕುವುದು ಅದೆಷ್ಟು ದುಸ್ತರ ಎಂದು ಅರಿವಾಗುತ್ತದೆ.

    ಹಲವು ವರ್ಷಗಳ ವಿದ್ಯಾಭ್ಯಾಸಗೈದು ಸ್ವಗೃಹಗಳಿಗೆ ಮರಳುತ್ತಿರುವ ಯುವಕರಿಗೆ ಗುರು ಬೋಧಿಸುವ ಜೀವನಶಿಕ್ಷಣ ಕುರಿತಾದ ಮೌಲ್ಯಗಳು ಇಂತಿವೆ: ‘ಪ್ರಿಯ ಶಿಷ್ಯನೇ, ಸತ್ಯವನ್ನು ಹೇಳು, ಧರ್ಮವನ್ನಾಚರಿಸು, ಸತ್ಯಪೂರ್ಣವಾದ ಮನಸ್ಥಿತಿಯ ಕರ್ಮರೂಪವೇ ಧರ್ಮ. ಸತ್ಯವಾದುದನ್ನು ಹೇಳು, ಪ್ರಿಯವಾದುದನ್ನು ಹೇಳು, ಆದರೆ ಸತ್ಯವನ್ನು ಅಪ್ರಿಯವಾಗಿಯೋ ಅಥವಾ ಅಸತ್ಯವನ್ನು ಪ್ರಿಯವಾಗಿಯೋ ಹೇಳಬೇಡ. ಇಲ್ಲಿಂದ ನಿರ್ಗಮಿಸಿದ ನಂತರವೂ ನಿನ್ನ ಗೃಹದಲ್ಲಿ ಅಧ್ಯಯನ ಮಾಡುವುದನ್ನು ಬಿಡಬೇಡ. ಸತ್ಯದಿಂದಾಗಲಿ, ಧರ್ಮದಿಂದಾಗಲಿ ಕದಲಕೂಡದು. ಶ್ರೇಯಸ್ಕರವಾದ ಕೆಲಸಗಳನ್ನು ಮಾಡುವುದರಿಂದ ಕದಲಬಾರದು. ಸ್ವಂತ ತಿಳಿವಳಿಕೆಗೆ ಮತ್ತು ಇತರರಲ್ಲಿ ಅರಿವು ಮೂಡಿಸುವ ಸಲುವಾಗಿ ಅಧ್ಯಯನ ಮಾಡಲೇಬೇಕು. ಹೆತ್ತ ತಾಯಿ, ಸಲಹಿದ ತಂದೆ, ಬೋಧಿಸಿದ ಗುರು ಮತ್ತು ಹಸಿದು ಬಂದ ಅತಿಥಿಯನ್ನು ಸಾಕ್ಷಾತ್ ದೇವರೆಂದೆಣಿಸಿ ಆದರಿಸು. ದೇವಕಾರ್ಯ ಮತ್ತು ಪಿತೃಕಾರ್ಯಗಳನ್ನು ನಿರ್ಲಕ್ಷಿಸಬೇಡ. ನಿಂದನೀಯ ಕಾರ್ಯಗಳನ್ನು ಮಾಡಬಾರದು. ನಿನಗಿಂತ ಉತ್ತಮರಾದ ಹಿರಿಯರನ್ನು ಆದರಿಸು. ದಾನಾದಿ ಕಾರ್ಯಗಳನ್ನು ಮಾಡುವಾಗ ಶ್ರದ್ಧೆಯಿಂದ ಕೊಡು, ಅಶ್ರದ್ಧೆಯಿಂದ ಕೊಡಬೇಡ, ನಿನ್ನ ಐಶ್ವರ್ಯಕ್ಕೆ ತಕ್ಕಂತೆ ಕೊಡು, ವಿನಯದಿಂದ ಕೊಡು, ಸೌಜನ್ಯಪೂರ್ವಕ ಭಯದಿಂದ ಕೊಡು, ಮಿತ್ರಭಾವದಿಂದ ಕೊಡು…’

    ಎಂಥ ಅದ್ಭುತ ಪರಿಕಲ್ಪನೆ! ಮಹತ್ತಾದ ಉದ್ದೇಶ ಸಿದ್ಧಿಗೆ ಬೃಹತ್ತಾದ ಪ್ರಯತ್ನವೇ ಬೇಕಲ್ಲವೇ? ಮಿಲ್ಟನ್ ಹೇಳುವಂತೆ, ‘ಎಲ್ಲ ಶಿಕ್ಷಣದ ಗುರಿಯೂ ಅಂತಿಮವಾಗಿ ಭಗವಂತನನ್ನು ಅರಿಯುವುದೇ ಆಗಿದೆ’ ಎಂದಾದರೂ ರಸ್ಕಿನ್ ಹೇಳಿರುವಂತೆ, ‘ಮಕ್ಕಳನ್ನು ಪ್ರಾಮಾಣಿಕರನ್ನಾಗಿ ರೂಪಿಸುವುದೇ ನಿಜಶಿಕ್ಷಣದ ಪ್ರಾರಂಭ’ ಎಂಬುದು ಗಹನ ಸಂಗತಿ. ನಿಜ! ಜಗದ ರೀತಿ ವಿಚಿತ್ರವೇ. ಜಗತ್ತು ಸದ್ಗುಣಿಯಲ್ಲ, ಅದು ಬದಲಾವಣೆಗಳನ್ನು ದ್ವೇಷಿಸುತ್ತದೆ! ಆದರೆ ಸದ್ಗುಣಗಳನ್ನು ಗೌರವಿಸದೆ ಅದಕ್ಕೆ ಅನ್ಯ ಮಾರ್ಗವಿಲ್ಲ. ಅಲ್ಲದೆ ಬದಲಾವಣೆಗಳಿಂದಷ್ಟೇ ಜಗದೋದ್ಧಾರ, ಅಲ್ಲವೇ? ಪ್ರಾಮಾಣಿಕತೆಗಿಂತ ಶ್ರೇಷ್ಠ ನೀತಿ ಮತ್ತೊಂದು ಇದೆಯೇ?

    ವಿಶ್ವವಿದ್ಯಾಲಯಗಳು ಕೇವಲ ಕಾಲೇಜುಗಳಂತೆ ಕಾರ್ಯನಿರ್ವಹಿಸಿದರೆ ಸಾಲದು. ಏಕೆಂದರೆ ಅವು ನಿರ್ವಹಿಸುವುದು ಸಮಾಜದ ಯುವಸಮಯದಾಯ ವನ್ನು. ಪಂಚತಂತ್ರದ ಕರ್ತ ವಿಷ್ಣುಶರ್ಮನು ಯೌವನದ ಅನರ್ಥವನ್ನು ಹೀಗೆ ವಿವರಿಸುತ್ತಾನೆ:

    ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತಾ|

    ಏಕೈಕಮಪ್ಯನರ್ಥಾಯ ಕಿಮು ಯುತ್ರ ಚತುಷ್ಟಯಮ್ ||

    ಯೌವನ, ಐಶ್ವರ್ಯ, ಅಧಿಕಾರ ಮತ್ತು ಅವಿವೇಕ- ಇವು ಒಂದೊಂದೂ ಅನರ್ಥಕ್ಕೆ ಮೂಲವಾಗಿರುವುದರಿಂದ ಎಚ್ಚರದಿಂದ ನಿರ್ವಹಿಸಬೇಕು. ಎಚ್ಚರ ತಪ್ಪಿದರೆ ಒಂದೇ ಅನರ್ಥಗೈಯುವುದಾದರೆ ಇನ್ನು ಈ ನಾಲ್ಕೂ ಒಟ್ಟಿಗೆ ಸೇರಿದರೆ… ಅನರ್ಥವಾಗುತ್ತದೆಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!

    ಯುವ ಸಮುದಾಯವನ್ನು ಸಮರ್ಥ ಹಾಗೂ ಸಮರ್ಪಕವಾಗಿ ನಿರ್ವಹಿಸುವ ಸಾಹಸಕ್ಕೆ ಇಂದಿನ ವಿಶ್ವವಿದ್ಯಾಲಯಗಳು ಶಕ್ತವಾಗಿವೆಯೇ? ಪಾಠ ಮಾಡಲು ಪಠ್ಯಜ್ಞಾನವಿದ್ದರೆ ಸಾಕು, ಆದರೆ ಶೀಲ ಕಲಿಸಲು ಶೀಲವಂತರೇ ಬೇಕಲ್ಲವೇ? ಇಂದಿನ ವಿಶ್ವವಿದ್ಯಾಲಯಗಳು ಯೋಗ್ಯತಾಪತ್ರಗಳನ್ನು ವಿತರಿಸುವುದರಲ್ಲಿ ತಲ್ಲೀನವಾಗಿವೆ, ಯೋಗ್ಯತೆಯನ್ನಲ್ಲ! ಹೀಗಾಗಿ ಯುವಕರು ಗಾಂಪರ ಗುಂಪಾಗಿ ಬಿಂಬಿತವಾಗುತ್ತಿದ್ದು, ಇಲ್ಲಿ ಅಲ್ಪಮತಿಯೇ ಬೃಹಸ್ಪತಿಯಂತೆ ಬೆಳಗುತ್ತಿರುವುದು ಸುಳ್ಳಲ್ಲ.

    ಇತ್ತೀಚಿನ ವರ್ಷಗಳಲ್ಲಿ ಆರ್ಟೆಗಾ ವೈ ಗ್ಯಾಸೆಟ್ ತಮ್ಮ ‘ಮಿಷನ್ ಆಫ್ ಯೂನಿವರ್ಸಿಟಿ’ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: ‘ವಿಶ್ವವಿದ್ಯಾಲಯದಿಂದ ಯಾವುದೇ ಐಚ್ಛಿಕ ವಿಷಯದ ಪದವಿಯನ್ನು ಪಡೆದರೂ ಪ್ರತಿಯೊಬ್ಬ ಪದವೀಧರನಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ತತ್ತ್ವಶಾಸ್ತ್ರ, ಸಂಸ್ಕೃತಿ ಹಾಗೂ ಧರ್ಮ, ಅಧ್ಯಾತ್ಮಗಳ ಬಗ್ಗೆ ಕನಿಷ್ಠ ತಿಳಿವಳಿಕೆ ಇರಲೇಬೇಕು’.

    ಸುಖಸ್ಯ ದುಃಖಸ್ಯ ನ ಕೋಠಪಿ ದಾತಾ|

    ಪರೋ ದದಾತಿ ಇತಿ ಕುಬುದ್ಧಿರೇಷಾ||

    ‘ಸುಖವನ್ನಾಗಲೀ, ದುಃಖವನ್ನಾಗಲಿ ಬೇರ್ಯಾರೂ ನಮಗೆ ನೀಡುವುದಿಲ್ಲ. ಬೇರೆಯವರು ನೀಡುತ್ತಾರೆಂಬುದು ಕ್ಷುದ್ರಬುದ್ಧಿ’ ಎಂದಿದೆ ಆರ್ಷವಾಣಿ. ನಿನ್ನೆಯ ಪಶ್ಚಾತ್ತಾಪ ಇಲ್ಲದೆ, ನಾಳೆಯ ಭಯವೂ ಇಲ್ಲದೆ ಈ ದಿನವನ್ನು ನಿರ್ವಹಿಸುವವನೇ ನಿಜಸುಖಿ!

    ಆಧುನಿಕ ಮೈಸೂರಿನ ರೂವಾರಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಅದ್ಭುತ ವ್ಯಕ್ತಿತ್ವವನ್ನು ನಮ್ಮ ಯುವಕರಿಂದು ಅಧ್ಯಯನ ಮಾಡಬೇಕಿದೆ. ಅವರ ಅಸಾಧಾರಣ ವ್ಯಕ್ತಿತ್ವಕ್ಕೆ ಜಗತ್ತೇ ತಲೆಬಾಗಿದೆ. ಅವರ ಶೈಕ್ಷಣಿಕ ಸೇವೆ ಕುರಿತಾದ ಒಂದೆರಡು ಮಾತುಗಳು. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸ್ವಲ್ಪ ಸಮಯ ಮೊದಲು ಮೈಸೂರಿನ ಮಹಾರಾಜ ಕಾಲೇಜಿನ ಸಮಾರಂಭವೊಂದರಲ್ಲಿ ಸರ್ ಎಂ.ವಿ. ಹೇಳುತ್ತಾರೆ: ‘ಸದ್ಯದಲ್ಲೇ ನಮ್ಮ ಸ್ವಂತ ವಿಶ್ವವಿದ್ಯಾಲಯ ಸ್ಥಾಪನೆ ಆಗುವುದಿದೆ. ವಿದ್ಯಾರ್ಥಿಗಳೇ, ನೀವೆಲ್ಲ ಈಗ ಇಂಟರ್​ವಿುೕಡಿಯೆಟ್ ತರಗತಿಯಲ್ಲಿದ್ದೀರಿ. ಮುಂದೆ ನೀವೆಲ್ಲರೂ ಮೈಸೂರು ವಿಶ್ವವಿದ್ಯಾಲಯದ ಪದವೀಧರರಾಗುತ್ತೀರಿ. ನಮ್ಮ ವಿಶ್ವವಿದ್ಯಾಲಯವನ್ನು ಶೀಲವಂತರು, ಮೇಧಾವಿಗಳು, ಯಂತ್ರಕಲಾನಿಪುಣರು, ದೇಶಸೇವಾಸಕ್ತರು ಆದ ವಿದ್ಯಾರ್ಥಿಗಳನ್ನು ರೂಪಿಸಲು ಆದರ್ಶಯುತವಾದ ಶಿಕ್ಷಣ ಸಂಸ್ಥೆಯನ್ನಾಗಿ ಮಾಡೋಣ. ನೀವೆಲ್ಲರೂ, ಬುದ್ಧಿವಂತ, ಶಿಸ್ತುಬದ್ಧ ಹಾಗೂ ಚಾರಿತ್ರ್ಯವಂತ ವ್ಯಕ್ತಿಗಳಾಗಿ’.

    1916ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನೆ ಆಯಿತು. ಮೊದಲ ಘಟಿಕೋತ್ಸವದಲ್ಲಿ ನಮ್ಮ ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತನಾಡುತ್ತ, ‘ದೇಶೀಯ ಸಂಸ್ಥಾನಗಳಲ್ಲಿ ಮೈಸೂರು ವಿಶ್ವವಿದ್ಯಾಲಯವೇ ಮೊದಲನೆಯದು. ಮೊದಲ ಘಟಿಕೋತ್ಸವದಲ್ಲಿ ನಾನು ಹೃತಪೂರ್ವಕವಾಗಿ ತಿಳಿಸಬಯಸುವುದೇನೆಂದರೆ ಸಂಸ್ಥಾನದ ದಿವಾನರಾದ ಸರ್.ಎಂ. ವಿಶ್ವೇಶ್ವರಯ್ಯನವರಿಗೆ ಈ ಸಾರ್ವಜನಿಕ ಸನ್ನಿವೇಶದಲ್ಲಿ ನಾವು, ನಮ್ಮ ಪ್ರಜೆಗಳು ಕೃತಜ್ಞತಾ ಋಣವನ್ನು ಅರ್ಪಿಸಲೇಬೇಕು. ಮುಖ್ಯವಾಗಿ ಅವರ ದೇಶಭಕ್ತಿ, ಉತ್ಸಾಹ, ಕರ್ತವ್ಯಪಥದಿಂದ ಹಿಮ್ಮೆಟ್ಟದ ಅವರ ನ್ಯಾಯವಾದ ಈ ಗುಣಗಳಿಂದ ಭವಿಷ್ಯವು ಕೇವಲ ಸಣ್ಣ ಕನಸಿನಂತಿದ್ದು ಸಜೀವ ಸೃಷ್ಟಿಯಾಗಿ ಪರಿಣಮಿಸಿತು. ಎಲ್ಲರ ಹೆಸರುಗಳಿಗಿಂತಲೂ ಮಿಗಿಲಾಗಿ ಅವರ ಹೆಸರು ನಮ್ಮ ವಿಶ್ವವಿದ್ಯಾಲಯದ ಕಾರಣಕರ್ತರೆಂದು ಸದಾ ಸ್ಮರಿಸಲ್ಪಡುತ್ತದೆ’.

    ಅಂದಿನ ರಾಜರ ಆಡಳಿತದಲ್ಲಿ ಬುದ್ಧಿವಂತರಷ್ಟೇ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಈಗಿನ ಹಾಗೆ ಯಾರೆಂದರವರಲ್ಲ! ಸ್ವಾತಂತ್ರ್ಯ ನಂತರದ ದಿನಗಳಲ್ಲಿ, ‘ವಿದ್ಯಾವಂತರು ನಮಗೆ ಮತ ಹಾಕದಿದ್ದರೂ ಚುನಾವಣೆ ಗೆಲ್ಲುವ ಉಪಾಯಗಳು ನಮಗೆ ಗೊತ್ತಿದೆ’ ಎಂದು ಗರ್ಜಿಸಿದ ರಾಜಕೀಯ ಪ್ರತಿನಿಧಿಗಳಿಗೆ ಕೊರತೆಯಿಲ್ಲ. ‘ಕುವೆಂಪು’ ಎಂದು ಉಚ್ಚರಿಸುವ ಬದಲು ‘ಕುಯೆಂಪು’ ಎಂದ ಸಂಸ್ಕೃತಿ ಮಂತ್ರಿಗಳೂ ನಮ್ಮಲ್ಲಿ ಆಗಿಹೋಗಿದ್ದಾರೆ. ‘ಸ್ವಾತಂತ್ರ ಉಸ್ತವವನ್ನ ಕರ್ನಾಟಕದಲ್ಲಷ್ಟೇ ಅಲ್ಲ ಭಾರತದಲ್ಲೆಲ್ಲ ಆಚರಿಸುತ್ತಿದ್ದೇವೆ’ ಎಂಬ ಮಂತ್ರಿಗಳನ್ನು ಕರ್ನಾಟಕ ದಾಖಲಿಸಿದೆ! ತೊಂಬತ್ತರ ದಶಕದಲ್ಲಿ ಮಂತ್ರಿಗಳೊಬ್ಬರು ‘ದ.ರಾ.ಬೇಂದ್ರೆಯವರನ್ನು ಅವರ ಮನೆಗೇ ಹೋಗಿ ಸನ್ಮಾನಿಸಬೇಕೆಂದಿದ್ದೇನೆ’ ಎಂದರು. ಬೇಂದ್ರೆಯವರಿಗೆ ಅದೃಷ್ಟ ಇರಲಿಲ್ಲ! ಏಕೆಂದರೆ ಅದಾಗಲೇ ಅವರು ನಿಧನರಾಗಿ ಕೆಲವು ವರ್ಷಗಳಾಗಿದ್ದವು!

    ವಿಶ್ವವಿದ್ಯಾಲಯಗಳಿಂದು ಎರಡು ಕಾರ್ಯಗಳನ್ನು ಮುಖ್ಯವಾಗಿ ಮಾಡುತ್ತಿವೆ. 1. ಓದಬಲ್ಲ ಅಕ್ಷರಸ್ಥರನ್ನು ಉತ್ಪಾದಿಸುತ್ತಿವೆಯೇ ಹೊರತು ಯೋಗ್ಯವಾದು ದನ್ನು ಗುರ್ತಿಸಿ ಓದುವ ಸಾಮರ್ಥ್ಯವಂತರನ್ನಲ್ಲ! 2. ಇಂದಿನ ಪದವೀಧರರು ಸ್ವಲ್ಪವನ್ನೇ ಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಅತಿಯಾಗಿ ಅಪಾರ್ಥ ಮಾಡಿಕೊಳ್ಳುತ್ತಿದ್ದಾರೆ. ಯುವಜನತೆ ತಮ್ಮೆಲ್ಲ ಅವಶ್ಯಕತೆಗಳಿಗೂ ಮಾನ-ಮರ್ಯಾದೆಯಿಲ್ಲದೆ ಕೈಚಾಚುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ‘ಬೇಡುವಿಕೆಯೇ ದೈನ್ಯತೆಯ ಹೆಬ್ಬಾಗಿಲು, ಅಧರ್ಮದಲ್ಲಿ ನಮ್ಮ ಯಾಚನೆ ಸಫಲವಾಗುವುದಕ್ಕಿಂತ ಸಜ್ಜನರಲ್ಲಿ ನಾವು ಯಾಚಿಸಿದ್ದು ವ್ಯರ್ಥವಾದರೂ ಶ್ರೇಯಸ್ಕರ. ಯಶೋವಧೆ ಎಂಬುದು ಪ್ರಾಣವಧೆಗಿಂತಲೂ ಹಿರಿದಾದದ್ದು. ಯೌವನದಲ್ಲೇ ಮನುಷ್ಯನು ಧರ್ಮಶೀಲನಾಗಿರಬೇಕು’ ಇವೇ ಮೊದಲಾದ ವಿಚಾರಗಳು ನಮ್ಮ ವಿಶ್ವವಿದ್ಯಾಲಯಗಳಲ್ಲಿ Out of syllabus ಆಗಿವೆ.

    91ನೇ ಜನ್ಮದಿನದಂದು ಮುಂಬೈನಲ್ಲಿ ಸರ್ ಎಂ.ವಿ. ಆಡಿದ ಮಾತುಗಳನ್ನು ಗಮನಿಸೋಣ: ‘ನನ್ನ 91ನೇ ವರ್ಷಕ್ಕೆ ಪ್ರವೇಶಿಸುತ್ತಿದ್ದೇನೆ. ಆರೋಗ್ಯ ಮತ್ತು ಶಕ್ತಿ ಚೆನ್ನಾಗಿದೆ. ಕನ್ನಡಕ ಇಲ್ಲದೆ ಓದಬಲ್ಲೆ, ದಿನಂಪ್ರತಿ ಎರಡು-ಮೂರು ಮೈಲುಗಳಷ್ಟು ಆಯಾಸವಿಲ್ಲದೆ ನಡೆಯುತ್ತೇನೆ. ಅರಳು-ಮರಳು ಇನ್ನೂ ನನ್ನನ್ನು ವ್ಯಾಪಿಸಿಲ್ಲ. ವೃದ್ಧಾಪ್ಯ ಬಹಳ ಕಾಲದ ಹಿಂದೆಯೇ ನನ್ನನ್ನು ಸಂಧಿಸಲು visiting card ಕಳುಹಿಸಿತ್ತು; ‘ನಾನು ಮನೆಯಲ್ಲಿಲ್ಲ’ ಎಂದು ಹೇಳಿ ಕಳುಹಿಸಿದೆ. ಇದಕ್ಕೆ ಕಾರಣ ನನ್ನ ಸುವ್ಯವಸ್ಥಿತವಾದ ಜೀವನ. ಅಲ್ಲದೆ ಅದೃಷ್ಟವೂ ಸಹಕರಿಸಿದೆ. ಒಟ್ಟಾರೆ ಭಗವಂತನ ಕೃಪೆ’. ಶಿಕ್ಷಿತರಲ್ಲಿ ‘ಚಾರಿತ್ರ್ಯ’ದ ಅಂಶ ನಿರ್ಲಕ್ಷ್ಯವಾಗಿದೆ. ಇದು ಎಲ್ಲ ದುರಂತಗಳಿಗೂ ಕಾರಣವಾಗಿದೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಕೇವಲ ಧನದಿಂದಾಗಲಿ, ಹೆಸರು-ಕೀರ್ತಿಗಳಿಂದಾಗಲೀ, ಓದು-ಬರಹದಿಂದಾಗಲಿ ಪ್ರಯೋಜನವಿಲ್ಲ; ಕಷ್ಟಕೋಟಲೆಗಳ ದುರ್ಭೆದ್ಯ ಕೋಟೆಗಳನ್ನು ಭೇದಿಸಿ ನಮ್ಮನ್ನು ಪಾರುಗಾಣಿಸಬಲ್ಲದ್ದು ಸಚ್ಚಾರಿತ್ರ್ಯವೊಂದೇ!’

    ಸರ್ ಅರ್ಥರ್ ಕ್ವಿಲ್ಲರ್ ಕೌಚ್ ಹೇಳುತ್ತಾನೆ: ‘ನಮ್ಮ ಯುವಜನಾಂಗ ಮುಂಚೂಣಿಯಲ್ಲಿ ನಿಂತು ಅನ್ಯಾಯ ಹಾಗೂ ದುಷ್ಟಶಕ್ತಿಗಳನ್ನು ಎದುರಿಸಲೇಬೇಕು. ಸ್ವದೇಶವಿತ್ತ ಬೆಲೆಕಟ್ಟಲಾರದ ಅದ್ಭುತ ಹಿರಿಮೆಗರಿಮೆಗೆ ಒತ್ತುಕೊಟ್ಟು ರಾಷ್ಟ್ರಕ್ಕೆ ವಿಧೇಯರಾಗಿರಬೇಕು ಮತ್ತು ಧೈರ್ಯವೇ ಶ್ರೇಷ್ಠ ಮೌಲ್ಯವೆಂದರಿತು ಅದರ ಆರಾಧಕರಾಗಬೇಕು. ಏಕೆಂದರೆ ಕುಟುಂಬ, ಸಮಾಜ, ದೇಶ ಅಷ್ಟೇಕೆ ವಿಶ್ವದಲ್ಲೇ ಧೈರ್ಯಶಾಲಿಗಳದ್ದೇ ಅಪೂರ್ವ ಕುಟುಂಬ.’

    ವಿಶ್ವವಿದ್ಯಾಲಯಗಳು ಉತ್ತರಿಸಬೇಕಿವೆ: ‘Brave may fall but not fail’ ಅಲ್ಲವೇ? ನೀವು ರೂಪಿಸುವ ಮಕ್ಕಳು ಬಾಯಾರಿಕೆಯನ್ನು ತಣಿಸುವ ತಮ್ಮದೇ ಬಾವಿಗೆ ಹೇಸಿಗೆಯನ್ನು ಹಾಕಬಾರದಲ್ಲವೇ? ನಮ್ಮ ಮಕ್ಕಳು ಇತರರಿಗೆ ಹಂಚಬೇಕಾದ್ದು ತಮ್ಮ ಭಯದ, ಪುಕ್ಕಲುತನದ ವಿಚಾರಗಳನ್ನೋ ಅಥವಾ ಧೈರ್ಯದ ಯಶೋಗಾಥೆಯನ್ನೋ? ಮಕ್ಕಳಿಗೆ ‘ಧೈರ್ಯವೆಂಬ ಏಣಿಯ ಮೇಲೆ ಸದ್ಗುಣಗಳು ಹತ್ತುತ್ತವೆ!’ ಎಂಬುದನ್ನು ತಿಳಿಸಿಕೊಡುತ್ತಿದ್ದಿರಾ?

    ರಾಷ್ಟ್ರಾಭಿಮಾನವಿಲ್ಲದ, ರಾಷ್ಟ್ರ ಹಿತದೃಷ್ಟಿ ಒಲ್ಲದ, ರಾಷ್ಟ್ರಧ್ವಜದ ಮಹತ್ವ ಮನಗಾಣದ, ರಾಷ್ಟ್ರವನ್ನೇ ಛಿದ್ರಛಿದ್ರಗೊಳಿಸುವ ಜಾತೀಯತೆಯಂತಹ ಪಿಡುಗುಗಳನ್ನು ಬೆಂಬಲಿಸುವ, ಮೋಸ-ಕಪಟ, ಲಂಚ-ವಂಚನೆಗಳ ಅರಾಧಕರನ್ನು ನಾವು ವಿದ್ಯಾವಂತರೆನ್ನಲಾದೀತೆ? ಅಪರಾಧಿಗಳನ್ನು ಶಿಕ್ಷಿಸದೇ ಇರುವುದು ನಿರಪರಾಧಿಗಳಿಗೆ ಹಿಂಸೆ ನೀಡಿದಂತಲ್ಲವೇ?

    ಶಿಕ್ಷಣ ಆರಾಧಕರೇ, ತಜ್ಞರೇ, ಯೋಚಿಸಿ ನೋಡಿ, ವಿಶ್ವವಿದ್ಯಾಲಯಗಳು ವಿದ್ಯೆಯ ಆಲಯವಾಗಬೇಕೇ? ವಿದ್ಯೆಯ ಲಯಕ್ಕೆ ಪಾಪಕೂಪಗಳಾಗಬೇಕೇ? ನಮ್ಮ ಮಕ್ಕಳು ತಾಯಿಯಿಂದ ಹೃದಯಸಂಪನ್ನತೆ, ತಂದೆಯಿಂದ ವಿವೇಕಸಂಪನ್ನತೆ ಮತ್ತು ಗುರುಹಿರಿಯರಿಂದ ಜ್ಞಾನಸಂಪನ್ನತೆ ಗಳಿಸಿ ವ್ಯಕ್ತಿರತ್ನಗಳಾಗ.

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts