More

    ‘ಸಪ್ತಪದಿ’ ತುಳಿಯದೆ ಮುಗಿದ ಮದುವೆ! – ನೋಂದಾಣಿದಾರರ ಸಂಸಾರ ಶುರು ಆದರೂ ಸಾಮೂಹಿಕ ವಿವಾಹಕ್ಕೆ ಕೂಡದ ಮುಹೂರ್ತ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

    ರಾಜ್ಯ ಸರ್ಕಾರದ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆಯಡಿ ಹೆಸರು ನೋಂದಾಯಿಸಿದ್ದವರ ಪೈಕಿ ಸಾವಿರಾರು ಜೋಡಿಗಳು ಸರ್ಕಾರದ ಮುಹೂರ್ತಕ್ಕೆ ಕಾದುಕಾದು ಬೇಸತ್ತು, ಕೊನೆಗೆ ತಾವೇ ವಿವಾಹ ಮಾಡಿಕೊಂಡು ಸಂಸಾರ ಶುರು ಮಾಡಿದ್ದಾರೆ. ಕರೊನಾ ಕಾರಣದಿಂದಾಗಿ ಸರ್ಕಾರ ಯೋಜನೆಯನ್ನು ಮುಂದೂಡುತ್ತಲೇ ಇರುವುದು ಈ ಅವಾಂತರಕ್ಕೆ ಕಾರಣ.

    ಯೋಜನೆಯಡಿ ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ 84 ಪ್ರಮುಖ ದೇವಾಲಯಗಳಲ್ಲಿ ಸಾವಿರಾರು ಜೋಡಿಗಳು ವಿವಾಹವಾಗಲು ಮುಂದೆ ಬಂದಿದ್ದವು. 3,500ಕ್ಕೂ ಹೆಚ್ಚು ಜೋಡಿಗಳು ನೋಂದಾಯಿಸಿಕೊಂಡಿದ್ದರು. ಆದರೆ, ಕರೊನಾ ಸೋಂಕಿನಿಂದ ಸಾಮೂಹಿಕ ವಿವಾಹ ನಡೆಸುವುದು ಕಷ್ಟವಾದ ಕಾರಣ ಸರ್ಕಾರ ಯೋಜನೆ ಅನುಷ್ಠಾನವನ್ನು ಮುಂದೂಡುತ್ತ ಬಂದಿದೆ.

    ಏಪ್ರಿಲ್ 26, ಮೇ 24ರಂದು ಸಾಮೂಹಿಕ ವಿವಾಹ ಏರ್ಪಡಿಸಲು ಉದ್ದೇಶಿಸಲಾಗಿತ್ತಾದರೂ ಲಾಕ್​ಡೌನ್, ಕರೊನಾ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ಸರ್ಕಾರದಿಂದ ದಿನಾಂಕದ ಕುರಿತ ಅನಿಶ್ಚಿತತೆ ನಡುವೆಯೇ, ಸಪ್ತಪದಿಗೆ ಹೆಸರು ನೋಂದಾಯಿಸಿದ್ದವರ ಪೈಕಿ ಬಹುತೇಕರು ಮನೆ-ಮಠ, ದೇವಸ್ಥಾನಗಳಲ್ಲಿ ಸರಳ ಮದುವೆಯಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಮರು ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಾಂಕಗಳ ಕುರಿತೂ ಅನಿಶ್ಚಿತತೆ ಇರುವುದು ತಿಳಿದುಬಂದಿದೆ.

    ಯೋಜನೆ ವಿವರ : ಪ್ರತಿ ಜೋಡಿಗೆ 8 ಗ್ರಾಂ. ತಾಳಿ, ಬಟ್ಟೆಗೆಂದು ವಧು ಹಾಗೂ ವರನಿಗೆ 55 ಸಾವಿರ ರೂ. ನೀಡಿಕೆ

    ಜಿಲ್ಲಾವಾರು ಚಿತ್ರಣ :

    ಬೆಂಗಳೂರು- ಬನಶಂಕರಿ, ಕೋಟೆ ಆಂಜನೇಯ, ಹಲಸೂರು ಸೋಮೇಶ್ವರ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ 350 ರಿಂದ 450 ಜೋಡಿಗಳು ಹೆಸರು ನೋಂದಾಯಿಸಿದ್ದವು. ಯೋಜನೆ ವಿಳಂಬವಾದ ಕಾರಣಕ್ಕೆ ಅವರೆಲ್ಲ ಈಗಾಗಲೇ ವಿವಾಹ ಮಾಡಿಕೊಂಡಿದ್ದಾರೆ. ಈಗ ವಿವಾಹ ಆಗಲು ಯಾವೊಂದು ಜೋಡಿಯು ಇಲ್ಲ.

    ಚಿತ್ರದುರ್ಗ- ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ದೇವಾಲಯದಲ್ಲಿ ಸಪ್ತಪದಿ ಕಾರ್ಯಕ್ರಮ ನಡೆಯಬೇಕಿತ್ತು. ನೋಂದಾಯಿಸಿದ್ದ 14 ಜೋಡಿಗಳ ಪೈಕಿ 12 ಜೋಡಿಗಳ ವಿವಾಹ ಈಗಾಗಲೇ ನಡೆದಿವೆ.

    ದಾವಣಗೆರೆ- 21 ಜೋಡಿ ನೋಂದಣಿಯಾಗಿದ್ದು, ಅಷ್ಟೂ ಜೋಡಿಗಳ ವಿವಾಹ ನೆರವೇರಿದೆ.

    ಕೊಪ್ಪಳ- 235 ಜೋಡಿ ನೋಂದಣಿ ಮಾಡಿದ್ದವು. 178 ಮದುವೆ ಆಗಿದ್ದು, 40 ಬಾಕಿ ಉಳಿದಿವೆ. ಈ ಪೈಕಿ 27 ಜೋಡಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ.

    ರಾಯಚೂರು- 381 ಜೋಡಿಗಳ ನೋಂದಣಿ, 363 ಜೋಡಿ ಮದುವೆ ಆಗಿದೆ. ಬಾಕಿ ಇರುವ 18 ಅರ್ಜಿಗಳಲ್ಲೂ ಕೆಲವರು ಮದುವೆ ಆಗಿರುವ ಸಾಧ್ಯತೆಗಳಿವೆ.

    ಬಳ್ಳಾರಿ- 275 ಜೋಡಿ ಅರ್ಜಿ ಸಲ್ಲಿಸಿದ್ದವು. ಈಗಾಗಲೇ 270 ಜೋಡಿಗಳು ತಮ್ಮದೇ ಖರ್ಚಿನಲ್ಲಿ ಮದುವೆಯಾಗಿವೆ. ಐದು ಜೋಡಿಗಳಿಗೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹಕ್ಕೆ ಏರ್ಪಾಡು ಮಾಡಲಾಗಿದೆ.

    ಬೆಳಗಾವಿ-110 ವಿವಾಹ ನೋಂದಣಿಯಾಗಿದ್ದವು, 104 ಜೋಡಿಗಳ ಮದುವೆ ಆಗಿದೆ.

    ಚಿಕ್ಕಮಗಳೂರು- ನೋಂದಣಿಯಾಗಿದ್ದ ಎಲ್ಲ 17 ಜೋಡಿಗಳೂ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿವೆ.

    ಶಿವಮೊಗ್ಗ-ನೋಂದಣಿಯಾಗಿದ್ದ ಎಲ್ಲ 8 ಜೋಡಿಗಳ ಮದುವೆ ಆಗಿದೆ.

    ಮಂಡ್ಯ- ನೋಂದಣಿಯಾಗಿದ್ದ 45ರಲ್ಲಿ 6 ಜೋಡಿ ಹೊರತುಪಡಿಸಿ ಉಳಿದವರು ಮದುವೆ ಆಗಿದ್ದಾರೆ.

    ಹಾಸನ- ನೋಂದಣಿಯಾಗಿದ್ದ ಎಲ್ಲ 4 ಜೋಡಿಗಳ ಮದುವೆ ಆಗಿದೆ.

    ಗದಗ-35 ಜೋಡಿಗಳ ನೋಂದಣಿ ಆಗಿತ್ತು. ಮದುವೆ ಆಗಿರುವ ಅಥವಾ ಆಗದಿರುವ ಮಾಹಿತಿ ಇಲ್ಲ.

    ಮೈಸೂರು-ನೋಂದಣಿಯಾಗಿದ್ದ 80ರಲ್ಲಿ 62 ಜೋಡಿಗಳ ಮದುವೆ ಆಗಿದೆ.

    ಉಡುಪಿ- 259 ಅರ್ಜಿಗಳು ಬಂದಿದ್ದು, 166 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ 40 ಜೋಡಿಗಳು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದವು. ಈ ಪೈಕಿ 8 ಜೋಡಿ ವಿವಾಹವಾಗಿದ್ದು, 32 ಜೋಡಿ ಪುನಃ ನೋಂದಣಿ ಮಾಡಿವೆ.

    ದಕ್ಷಿಣ ಕನ್ನಡ-128 ಮಂದಿ ಅರ್ಜಿಗಳನ್ನು ಪಡೆದುಕೊಂಡಿದ್ದರೂ ನೋಂದಾಯಿಸಿಕೊಂಡವರು 36. ಇವರಲ್ಲಿ ಎಷ್ಟು ಜನರು ವಿವಾಹವಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.

    ಉತ್ತರ ಕನ್ನಡ-ಸರ್ಕಾರದ ಯೋಜನೆಯ ಪ್ರಕಾರ ಜಿಲ್ಲೆಯಲ್ಲಿ ಮೂರು ದೇವಸ್ಥಾನವನ್ನು ಆಯ್ದುಕೊಳ್ಳಲಾಗಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಎರಡು ದೇವಸ್ಥಾನದ ಆಡಳಿತ ಮಂಡಳಿಯು ಮದುವೆ ಮಾಡಿಕೊಡಲು ನಿರಾಕರಿಸಿತ್ತು. ಉಳಿದ ಒಂದು ಅಂದರೆ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಯಾರೂ ಹೆಸರು ನೋಂದಾಯಿಸಿಕೊಂಡಿಲ್ಲ.

    ಹಾವೇರಿ- 15 ಜೋಡಿಗಳ ಮದುವೆ ಆಗಿತ್ತು. ಬೇರೆ ಕಡೆ ವಿವಾಹ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ.

    ತುಮಕೂರು-ಎಡೆಯೂರು ದೇವಸ್ಥಾನದಲ್ಲಿ 40 ಅರ್ಜಿಗಳು ಸ್ವೀಕೃತವಾಗಿದ್ದವು. ಅದರಲ್ಲಿ 34 ಜೋಡಿ ವಿವಾಹವಾಗಿದ್ದು, 6 ಜೋಡಿಗಳು ಬಾಕಿ ಉಳಿದಿವೆ. ದೇವರಾಯನದುರ್ಗ ದೇವಸ್ಥಾನದಲ್ಲಿ 10 ಅರ್ಜಿ ಸ್ವೀಕೃತವಾಗಿದ್ದು, ಎಲ್ಲರೂ ವಿವಾಹವಾಗಿದ್ದಾರೆ.

    ಕೋಲಾರ- ಕರೊನಾಗೂ ಮುಂಚೆ 112 ಜನ ಸಪ್ತಪದಿ ಯೋಜನೆಯಡಿ ವಿವಾಹಕ್ಕೆ ನೋಂದಣಿ ಮಾಡಿಸಿ ವಿವಾಹವಾಗಿದ್ದಾರೆ. ಕರೊನಾ ನಂತರ ಯಾರೂ ನೋಂದಣಿ ಮಾಡಿಸಿಲ್ಲ.

    ರಾಮನಗರ-ನಾಲ್ಕು ದೇವಾಲಯಗಳಲ್ಲಿ ಸಪ್ತಪದಿ ಕಾರ್ಯಕ್ರಮದಡಿ ಒಟ್ಟು 54 ಅರ್ಜಿಗಳು ಸಲ್ಲಿಕೆ ಆಗಿದ್ದವು. ಎಲ್ಲರೂ ತಮ್ಮಷ್ಟಕ್ಕೆ ಮದುವೆ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರ- ನಂದಿಯ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯ, ಬಾಗೇಪಲ್ಲಿಯ ಗಡಿದಂ ದೇವಾಲಯ, ಗೌರಿಬಿದನೂರಿನ ವಿದುರಾಶ್ವತ್ಥ ದೇವಾಲಯದಲ್ಲಿ ಮದುವೆಯಾಗಲು 38 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲರೂ ಮದುವೆಯಾಗಿದ್ದಾರೆ

    ಬೆಂಗಳೂರು ಗ್ರಾಮಾಂತರ- ಶಿವಗಂಗೆ ಕ್ಷೇತ್ರದಲ್ಲಿ 8 ಅರ್ಜಿ ಸಲ್ಲಿಕೆಯಾಗಿದ್ದವು. ಆದರೆ ಎಲ್ಲರೂ ಬೇರೆ ಕಡೆಗಳಲ್ಲಿ ಮದುವೆ ಮಾಡಿಕೊಂಡಿದ್ದಾರೆ.

    ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ದೇವಾಲಯಗಳನ್ನು ಮುಚ್ಚಿದ್ದರಿಂದ ಹಾಗೂ ಭೇಟಿ ಕೊಡುವಂಥ ಭಕ್ತರು, ಪ್ರವಾಸಿಗರ ಸಂಖ್ಯೆ ಕುಸಿದಿದ್ದರಿಂದಾಗಿ, ದೇವಾಲಯಗಳ ಆದಾಯದಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ. 2021 ಫೆಬ್ರವರಿ ಮುನ್ನ ಮದುವೆ ದಿನಾಂಕಗಳ ನಿಗದಿ ಸಾಧ್ಯವಾಗದು.
    | ವಿ.ಪ್ರಸನ್ನ ಎಸಿ, ಚಿತ್ರದುರ್ಗ

    VIDEO|ಜಸ್ಟ್ ಮಿಸ್​.. ಇಲ್ಲಾಂದ್ರೆ 8 ಅಡಿ ಉದ್ದದ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬೀಳ್ತಾ ಇತ್ತು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts