More

    ಮಠಗಳ ಮಿತಿ ಮತ್ತು ರಾಜಕಾರಣ

    ಠಗಳು ಅಧ್ಯಾತ್ಮ ಮತ್ತು ಶ್ರದ್ಧಾ ಕೇಂದ್ರಗಳಾಗಬೇಕು. ಸಂಸಾರಿಗಳಿಗೆ, ಲೌಕಿಕರಿಗೆ ಮನಸಿಗೆ ಬೇಸರವಾದಾಗ ಕಾಲ ಕಳೆದು ನೆಮ್ಮದಿ ನೀಡುವ ಶಾಂತಿಧಾಮಗಳಾಗಬೇಕು. ಸಮಾಜದ ಪ್ರತಿಯೊಂದು ಜಾತಿ, ಧರ್ಮದ ಪೀಠಾಧಿಪತಿಗಳು ತಮ್ಮ ಪೀಠಗಳ ಅಧಿಕಾರವನ್ನು ತಮ್ಮದೇ ಸಮಾಜದ ರಾಜಕಾರಣಿಗಳಿಗೆ ಮೀಸಲಿಟ್ಟವರಂತೆ ಅಸೂಕ್ಷ್ಮವಾಗಿ ದಯವಿಟ್ಟು ವರ್ತಿಸಬಾರದು.

    ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಗಳು ಸಿದ್ಧಾಂತ ಮತ್ತು ಆಂತರಿಕ ಪರಿಸ್ಥಿತಿಗನುಗುಣವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತವೆ. ಪಕ್ಷದ ಶಾಸಕಾಂಗ ಸಭೆ ಮತ್ತು ಪದಾಧಿಕಾರಿಗಳು ತೆಗೆದುಕೊಳ್ಳಬಹುದಾದ ಆಂತರಿಕ ನಿರ್ಣಯಗಳ ಕುರಿತು ಮಠಗಳು ಬಹಿರಂಗ ಚರ್ಚೆ ಮಾಡುವುದು ಅಕ್ಷಮ್ಯ. ಯಾವುದೇ ಧರ್ಮ ಮತ್ತು ಸಿದ್ಧಾಂತ ಈ ರೀತಿ ಆದೇಶ ಮಾಡುವ ಅಧಿಕಾರ ನೀಡಿಲ್ಲ ಎಂಬುದನ್ನು ಮಠಾಧೀಶರು ಅರಿತು ಮಾತನಾಡಬೇಕು. ಇಲ್ಲವೇ ರಾಜಕೀಯ ನಾಯಕರು ಮಠಗಳಿಗೆ ಹೋಗುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡು ಎದುರಾಗುವ ಮುಜುಗರದಿಂದ ಪಾರಾಗಬೇಕು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಾಸಕ ಎಲ್ಲ ಧರ್ಮದವರಿಂದ ಚುನಾಯಿತರಾಗಿರುತ್ತಾರೆ. ಗೆದ್ದ ಮೇಲೆ ದಿಢೀರ್ ಎಂದು ಒಂದು ಕೋಮಿನ ಪ್ರತಿನಿಧಿಯಂತೆ ವರ್ತಿಸಿ ಮತದಾರರಿಗೆ ಅವಮಾನ ಮಾಡಬಾರದು. ಮಠಾಧೀಶರು ಅಷ್ಟೇ, ಅವರು ಸರ್ವ ಧರ್ಮಗಳ ರಕ್ಷಕರಂತೆ ನಡೆದುಕೊಳ್ಳಬೇಕು. ಭಕ್ತರ ಮನಃಶಾಂತಿ ಕಾಪಾಡುವ ಧ್ಯಾನ, ಅಧ್ಯಾತ್ಮ ಮತ್ತು ಯೋಗಸೂತ್ರಗಳನ್ನು ಬೋಧನೆ ಮಾಡಬೇಕಾದ ಮಠಗಳು ನೇರ ರಾಜಕೀಯ ಅಖಾಡಕ್ಕೆ ಇಳಿದರೆ ಸಾಮಾನ್ಯ ಭಕ್ತರು ನೆಮ್ಮದಿಗಾಗಿ ಇನ್ನೆಲ್ಲಿಗೆ ಹೋಗಬೇಕು? ಹಾಗಂತ ಮಠಾಧೀಶರು ರಾಜಕೀಯ ನಾಯಕರುಗಳಿಗೆ ಮಾರ್ಗದರ್ಶನ ಮಾಡಬಾರದು ಎಂದರ್ಥವಲ್ಲ. ಅವರ ಮಾರ್ಗದರ್ಶನ ಒಟ್ಟು ಸಮುದಾಯದ ಅಭಿವೃದ್ಧಿ ಪರ ಇರಬೇಕು. ಶಾಸಕರು ತಮ್ಮ ಸಮಾಜದ ಸ್ವಾಮಿಗಳ ಪ್ರಭಾವಕ್ಕಿಂತ, ವೈಯಕ್ತಿಕ ಸಾಧನೆ ಮೂಲಕ ಸ್ಥಾನಮಾನ ಪಡೆದುಕೊಂಡು ಪ್ರಜಾಪ್ರಭುತ್ವ ಮತ್ತು ನಾಡಿನ ಮತದಾರರ ಮಾನ ಕಾಪಾಡಲಿ.

    | ಸಿದ್ದು ಯಾಪಲಪರವಿ

    ಮಠಗಳ ಪಾವಿತ್ರ್ಯಕ್ಕೆ ಧಕ್ಕೆ ಬೇಡ

    ಕರ್ನಾಟಕ ರಾಜಕಾರಣವು ಸದಾ ಸುದ್ದಿಯಲ್ಲಿದೆ. ಹರಿಹರ ಪಂಚಮಸಾಲಿ ಪೀಠದ ಶ್ರೀಗಳು ಸಾರ್ವಜನಿಕ ಸಭೆಯೊಂದರಲ್ಲಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ನೀಡಿದ ಹೇಳಿಕೆಯ ಬಳಿಕ ರಾಜಕಾರಣದಲ್ಲಿ ಮಠಗಳ ಪಾತ್ರದ ಬಗ್ಗೆ ವಿವಿಧ ಹಂತದ ಚರ್ಚೆ, ಅಭಿಪ್ರಾಯಗಳು ಕೇಳಿಬರುತ್ತಿವೆ.

    ‘ಮಂತ್ರಿಗಿರಿ ನೀಡದಿದ್ದರೆ, ಸಮಾಜ ಮುಖ್ಯಮಂತ್ರಿಗಳ ಕೈಬಿಡುವುದು’ ಎಂಬ ಶ್ರೀಗಳ ಎಚ್ಚರಿಕೆ ಮಾತು ಮುಖ್ಯಮಂತ್ರಿಗಳನ್ನು ಕೋಪಗೊಳ್ಳುವಂತೆ ಮಾಡಿರುವುದು ಸಹಜವೇ. ಆದರೆ ಅವರು ಅದೇ ಸಭೆಯಲ್ಲಿ ಮಠಗಳು ಜನಪರ ವಿಚಾರಗಳನ್ನು ರ್ಚಚಿಸಿ ತಮಗೆ ಸಲಹೆ ರೂಪದಲ್ಲಿ ಸಹಕಾರ ನೀಡಲು ಕೋರಿದರು. ಅದು ಸ್ವಾಗತಾರ್ಹವಿಚಾರ. ಇಂತಹ ಘಟನೆಗಳಲ್ಲಿ ಮಠಗಳು ಪಾಲ್ಗೊಳ್ಳುವುದು ಉಚಿತವೆನಿಸುವುದಿಲ್ಲ. ಸ್ವಾಮೀಜಿಗಳ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತವೆ. ಇಲ್ಲಿ ಮುಖ್ಯವಾಗಿ ಜನ ನಿರೀಕ್ಷಿಸುವುದು ಯಾವುದೇ ಸರ್ಕಾರವಾಗಿರಲಿ ಅದು ಜನಪರವಾಗಿರಬೇಕು ಎಂದು. ಮಂತ್ರಿಮಂಡಲ ರಚನೆ ಆಯಾ ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಬೇಕು. ಒಂದುವೇಳೆ ಶಿಫಾರಸುಗಳು ಸರ್ವೆ ಸಾಮಾನ್ಯ ಎಂದಾದರೆ, ಅವು ಸೂಕ್ತ ವೇದಿಕೆಯಲ್ಲಿ ತಲುಪಬೇಕು. ಅನಗತ್ಯ ಚರ್ಚೆ ಹಾಗೂ ಹೇಳಿಕೆ-ಪ್ರತಿಹೇಳಿಕೆಗೆ ಆಸ್ಪದವಾಗಿ ವಾತಾವರಣ ಹದಗೆಡಿಸಬಾರದು.

    | ನ.ರಾ.ವೆಂಕಟೇಶ್, ಶಿವಮೊಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts