More

    ಯುದ್ಧೋನ್ಮಾದ ಹಾಗೂ ಅದರ ಪರಿಣಾಮ

    ಯುದ್ಧ ಅಧಿಕಾರ ಸ್ಥಾಪನೆಯ, ಸಾಹಸದ ಸಂಕೇತ. ಜಗತ್ತಿನ ಸಾಹಿತ್ಯದಲ್ಲಿ ಯುದ್ಧ, ಯುದ್ಧಕಾರಣ ಹಾಗೂ ಯುದ್ಧವೈಭವಗಳನ್ನು ವಿವರಿಸುವ ಅನೇಕ ಕೃತಿಗಳಿವೆ. ಆದರೆ ಯುದ್ಧ ಪರಿಣಾಮವನ್ನು ಚಿತ್ರಿಸಿರುವ ನಿದರ್ಶನ ತೀರ ವಿರಳ. ಸಂವೇದನಾಶೀಲ ಕನ್ನಡ ಮನಸ್ಸು ಆ ಬಗ್ಗೆ ಚಿಂತಿಸಿದೆ.

    ಯುದ್ಧ ಅಧಿಕಾರ ಸ್ಥಾಪನೆಯ, ಸಾಹಸದ ಕಥನ. ಹೀಗಾಗಿ ಯುದ್ಧಾಂತ್ಯದಲ್ಲಿ ಸೋತವರ ವಿಷಣ್ಣತೆ, ಗೆದ್ದವರ ವಿಜಯೋತ್ಸಾಹ ಸಾಮಾನ್ಯ ಚಿತ್ರ. ಆದರೆ ಸೋತವರು ಹಾಗೂ ಗೆದ್ದವರು ಎರಡೂ ಕಡೆ ಯುದ್ಧ ಪರಿಣಾಮವಾಗಿ, ಯುದ್ಧಾನಂತರದಲ್ಲಿ ಸಾಮಾನ್ಯ ಜನ ಅನುಭವಿಸುವ ಸಂಕಟಗಳನ್ನು ನಾವು ಅಷ್ಟಾಗಿ ಗಮನಿಸುವುದಿಲ್ಲ. ಯುದ್ಧವೆಂದರೆ ಮನುಷ್ಯನಲ್ಲಿ ಸುಪ್ತವಾಗಿರುವ ಹಿಂಸಾರಭಸಮತಿಗೆ ಗೌರವಯುತ ಅಭಿವ್ಯಕ್ತಿ ನೀಡುವ ಸಾಧನ. ಒಬ್ಬ ವ್ಯಕ್ತಿ ಸಮವಸ್ತ್ರ ಧರಿಸಿ ಮತ್ತೊಬ್ಬನನ್ನು ಕೊಂದರೆ ಆತ ಸಾಹಸಿ; ಆತನಿಗೆ ಪ್ರಶಸ್ತಿಯ ಪುರಸ್ಕಾರ; ಸಾಮಾಜಿಕ ಮನ್ನಣೆಯ ಗೌರವ. ಅದೇ ವ್ಯಕ್ತಿ ಸಾಮಾನ್ಯ ಉಡುಪಿನಲ್ಲಿ ಯಾವುದೋ ಕಾರಣಕ್ಕಾಗಿ ನೆರೆಮನೆಯವನನ್ನು ಕೊಂದರೆ ಅದು ಕೊಲೆ; ಅಪರಾಧ; ಆತನಿಗೆ ಶಿಕ್ಷೆ. ಮೂಲತಃ ಎರಡೂ ಕೊಲೆಗಳೇ! ಆದರೆ ಸಮವಸ್ತ್ರ ಧರಿಸಿ ಮಾಡುವ ಕೊಲೆಗೆ ರಕ್ಷಣೆಯ ಘನವಾದ ಉದಾತ್ತ ಉದ್ದೇಶ ಪ್ರಾಪ್ತವಾಗಿಬಿಡುತ್ತದೆ. ಇದೇ ಯುದ್ಧದ ಮಾಂತ್ರಿಕ ಶಕ್ತಿ.

    ಯುದ್ಧೋನ್ಮಾದ ಹಾಗೂ ಅದರ ಪರಿಣಾಮಚಿಂತಕ ಜಿಡ್ಡು ಕೃಷ್ಣಮೂರ್ತಿಯವರು ಹೇಳುವಂತೆ ‘ಯುದ್ಧದಲ್ಲಿ ತೊಡಗಿದ ಪ್ರತಿ ಗುಂಪೂ ತಾನು ಆತ್ಮರಕ್ಷಣೆಗಾಗಿಯೇ ಯುದ್ಧಕ್ಕಿಳಿಯಬೇಕಾಯಿತೆಂದು ಹೇಳುತ್ತದೆ. ರಕ್ಷಣಾತ್ಮಕ ಕಾರಣವಾಗಲೀ, ಆಕ್ರಮಣಕಾರೀ ಗುರಿಯಾಗಲೀ ಯುದ್ಧಗಳು ಸದಾ ನಡೆದೇ ಇವೆ. ಶತಮಾನಗಳ ಕಾಲದಿಂದ ಯುದ್ಧವೆಂಬ ರಾಕ್ಷಸ ಕ್ರೀಡೆ ನಡೆಯುತ್ತಲೇ ಬಂದಿದೆ. ದುರಾದೃಷ್ಟವೆಂದರೆ ನಾವು, ವಿದ್ಯಾವಂತರು, ಸಂಸ್ಕೃತಿ ಸಂಪನ್ನರು ಎಂದುಕೊಳ್ಳುವವರು ಅತ್ಯಂತ ಬರ್ಬರ ಕೊಲೆಗಡುಕತನದಲ್ಲಿ ಮೈಮರೆತಿದ್ದೇವೆ’. ಮನುಷ್ಯನ ಆಳದಲ್ಲಿರುವ ಆಕ್ರಮಣಶೀಲ ಮನೋಭಾವವೇ ಯುದ್ಧಕ್ಕೆ ಕಾರಣ. ಹಾಗೆ ನೋಡಿದರೆ ನಾನು, ನನ್ನದು ಎಂಬ ಅಹಂಕಾರ ಈ ಹಿಂಸಾತ್ಮಕ ಯುದ್ಧದ ಮೂಲದಲ್ಲಿದೆ. ಆದರೆ ಇದರ ಪರಿಣಾಮ ಮಾತ್ರ ಊಹಿಸಲೂ ಅಸಾಧ್ಯ. ಮನುಕುಲದ ಚರಿತ್ರೆಯಲ್ಲಿ ‘ಯುದ್ಧ’ದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ನೋವು, ಬರ್ಬರ ಕೃತ್ಯಗಳಿಂದ ನಾವಿನ್ನೂ ಚೇತರಿಸಿಕೊಂಡಿಲ್ಲ. ಈಗಲೂ ಅದರ ಫಲ ಅನುಭವಿಸುತ್ತಿದ್ದೇವೆ.

    ನಮ್ಮ ಆದಿಕವಿ ಪಂಪ ತನ್ನ ‘ಆದಿಪುರಾಣ’ದಲ್ಲಿ ಯುದ್ಧದ ಪರಿಣಾಮದ ಬಗ್ಗೆ ಚಿಂತಿಸಿದ್ದಾನೆ. ‘ಆದಿಪುರಾಣ’ ಆಶಯದಲ್ಲಿ ಧರ್ಮವನ್ನು ಪ್ರತಿಪಾದಿಸುವ ಕಾವ್ಯವಾದರೂ ಆಕೃತಿಯಲ್ಲಿ ಮನುಷ್ಯನ ಮೂಲಭೂತ ಪ್ರವೃತ್ತಿಗಳಲ್ಲಿ ಅತ್ಯಂತ ಪ್ರಬಲ ಶಕ್ತಿಗಳಾದ ಭೋಗ (ಠಛ್ಡಿ) ಮತ್ತು ಅಧಿಕಾರ (ಟಟಡಿಛ್ಟಿ)ಗಳ ಬಗ್ಗೆ ವಿಶ್ಲೇಷಿಸುತ್ತದೆ. ಇಲ್ಲಿ ಎರಡು ಕತೆಗಳಿವೆ. ಮೊದಲನೆಯ ಪುರುದೇವನ ಕತೆಯಲ್ಲಿ ಪಂಪ ಒಂದು ಜೀವ ಇಹದ ಬದುಕನ್ನು ಉತ್ಕಟವಾಗಿ ಅನುಭವಿಸಿ, ತುತ್ತತುದಿಯಲ್ಲಿ ಅದರ ನಶ್ವರತೆಯ ‘ಅರಿವು’ ಪಡೆಯುವ ವ್ಯಕ್ತಿತ್ವವಿಕಾಸವನ್ನು ವಿವರಿಸುತ್ತಾನೆ. ಮತ್ತೊಂದು ಭರತನ ದಿಗ್ವಿಜಯದ ಅಧಿಕಾರದ ಹಂಬಲದ ಕತೆ; ಇಲ್ಲಿ ಕವಿ ವೈಭವದ ತುತ್ತತುದಿಯಲ್ಲಿ ತ್ಯಾಗವನ್ನು ಪ್ರತಿಪಾದಿಸುತ್ತಾನೆ.

    ಭರತ ದಿಗ್ವಿಜಯ ಮುಗಿಸಿ ಬಂದಾಗ ಚಕ್ರರತ್ನ ಪುರ ಪ್ರವೇಶ ಮಾಡದೆ ಊರ ಬಾಗಿಲಿನಲ್ಲಿಯೇ ನಿಂತುಬಿಡುತ್ತದೆ. ತನ್ನ ತಮ್ಮಂದಿರು ಶರಣಾಗಿಲ್ಲ ಎಂಬುದನ್ನು ಅದು ಸೂಚಿಸುತ್ತದೆ ಎಂದು ತಿಳಿದ ಭರತ ಶರಣಾಗುವಂತೆ ತನ್ನ ತಮ್ಮಂದಿರಿಗೆಲ್ಲ ನಿರೂಪ ಕಳಿಸುತ್ತಾನೆ. ಬಾಹುಬಲಿಯನ್ನು ಹೊರತುಪಡಿಸಿ ಉಳಿದೆಲ್ಲರೂ ಶರಣಾಗುತ್ತಾರೆ. ಭರತ ಬಾಹುಬಲಿ ಇವರಿಬ್ಬರಿಗೆ ಯುದ್ಧ ಅನಿವಾರ್ಯವಾಗುತ್ತದೆ. ಆಗ ಎರಡೂ ಕಡೆಯ ಮಂತ್ರಿಗಳು ಪರ್ಯಾಲೋಚಿಸಿ- ‘ಇವರಿರ್ವರ್ ಅರಸುಮಕ್ಕಳಪ್ಪೊಡೆ ಚರಮದೇಹಧಾರಿಗಳ್, ಇವರ ಯುದ್ಧಮೆಂಬುದು ಅತಿಕ್ರೂರ ಯುದ್ಧದಂತೆ ಸಕಲ ಪ್ರಜಾ ವಿನಾಶಕರಮಲ್ಲದೆ ಪೆರತಲ್ತು, ಉಭಯ ಚತುರಂಗ ಬಲ ಯುದ್ಧದೊಳಲ್ಲದೆ ಸೋಲ ಗೆಲ್ಲಮೆಂಬುದಿಲ್ಲ. ಸಮಸ್ತ ಜನ ಸಂಹರಣ ಕಾರಣಮಪ್ಪ ರಣದೊಳ್ ಏವಂದಪು್ಪದು’ ಎಂಬ ನಿಲುವಿಗೆ ಬಂದು, ಸಮಸ್ತ ಸೈನ್ಯ ತಟಸ್ಥವಾಗಿದ್ದು ಭರತ-ಬಾಹುಬಲಿ ಇಬ್ಬರೇ ಧರ್ಮಯುದ್ಧ ಮಾಡುವಂತೆ ಸೂಚಿಸುತ್ತಾರೆ.

    ಯುದ್ಧ ಸಕಲ ಪ್ರಜಾ ವಿನಾಶಕರ, ಸಮಸ್ತ ಜನ ಸಂಹರಣ ಕಾರಣ ಎಂಬ ಮಾತುಗಳು ಇಲ್ಲಿ ಬಹಳ ಮುಖ್ಯವಾದಂಥವು. ರಾಜರಿಗೆ ಯುದ್ಧ ಬೇಕು, ತಮ್ಮ ಅಧಿಕಾರ ಸ್ಥಾಪಿಸಲು, ಅಹಂಕಾರವನ್ನು ಮೆರೆಯಿಸಲು; ಹೀಗಾಗಿ ಅಧಿಕಾರದಲ್ಲಿ ಇರುವವರು ಯುದ್ಧೋನ್ಮಾದದಲ್ಲಿ ಇರುತ್ತಾರೆ. ಯುದ್ಧ ನಿಲ್ಲಿಸುವುದು ಕಷ್ಟ. ಆದರೆ ಅದರ ಪರಿಣಾಮ ಸಮಸ್ತ ಜನ ಸಂಹರಣ, ಸಕಲ ಪ್ರಜಾ ವಿನಾಶ ಎಂಬ ಅರಿವು ಮೂಡಿದಾಗ ಯುದ್ಧದ ಸ್ವರೂಪ ಬದಲಾಗುತ್ತದೆ.

    ಕುವೆಂಪು ‘ಶ್ಮಶಾನ ಕುರುಕ್ಷೇತ್ರಂ’ ನಾಟಕದಲ್ಲಿ ಈ ಪ್ರಶ್ನೆಗೆ ಮತ್ತಷ್ಟು ಗಂಭೀರವಾಗಿ ಮುಖಾಮುಖಿಯಾಗುತ್ತಾರೆ.

    ಆ ರಾತ್ರಿ-ಮಹಾಭಾರತ ಸಂಗ್ರಾಮ ಕೊನೆಗೊಂಡ ಘೊರ ವಿಷಣ್ಣ ರಾತ್ರಿ- ಮಬ್ಬು ಬೆಳಕಿನಲ್ಲಿ ನೂರಾರು ಮಾನವರು ರಣರಂಗಕ್ಕೆ ಬಂದು ತಮ್ಮ ಅಕ್ಕರೆಯ ಬಂಧುಗಳ, ಆಪ್ತರ ಹೆಣಗಳನ್ನು ಹುಡುಕುತ್ತ ಅಲೆಯುತ್ತಿರುತ್ತಾರೆ. ಇಂಥವರ ನಡುವೆ ಹಣ್ಣು ಹಣ್ಣು ಮುದುಕಿಯೊಬ್ಬಳು ದೊಣ್ಣೆಯನ್ನೂರಿಕೊಂಡು ತನ್ನ ಮಗನ ಹೆಣವನ್ನು ಹುಡುಕುತ್ತ ಬರುತ್ತಾಳೆ. ಆಕೆಯ ಮಗ ಕೌರವ ಪಕ್ಷದಲ್ಲಿ ನಿಂತು ಕಾದಾಡಿ ಮಡಿದ ಕಾಲಾಳುಗಳಲ್ಲಿ ಒಬ್ಬ. ವಿಸ್ತಾರವಾದ ರಣರಂಗದಲ್ಲಿ ಹುಡುಕಿ ಹುಡುಕಿ ಮಗನ ಹೆಣವನ್ನು ಕಾಣದೆ ಕಂಗೆಟ್ಟಿದ್ದಾಳೆ. ‘ಇದೇನು ಕೊಲೆಯಾಟವೋ ಇಳೆಯ ಎನ್ನ ಕಂದರಿಗೆ ಕಾಣೆನ್’ ಎಂಬ ನಿಟ್ಟುಸಿರಿನ ಸ್ವಗತ ಎಲ್ಲ ತಾಯಂದಿರ ಅಳಲೂ ಹೌದು. ಮತ್ತೊಂದು ಕಡೆಯಿಂದ ಮಾತೆಯೊಬ್ಬಳು ತನ್ನ ಕಂದನೊಡನೆ ಗಂಡನನ್ನು ಹುಡುಕಿಕೊಂಡು ಬರುತ್ತಾಳೆ. ಮುದುಕಿಯನ್ನು ಕಂಡು ಹತ್ತಿರ ಹೋಗಿ ಅವಳನ್ನು ಮಾತನಾಡಿಸುತ್ತಾಳೆ. ಅವರಿಬ್ಬರ ಸಂಭಾಷಣೆ ಹೀಗಿದೆ:

    ಮಾತೆ: ಅಜ್ಜೀ, ಇದೇಕಿಲ್ಲಿ ಕುಳಿತಿರುವೆ?

    ಮುದುಕಿ: (ತಲೆಯೆತ್ತಿ ನೋಡಿ) ತಾಯಿ, ನನ್ನ ಮಗು ನಾರಾಯಣನನ್ ಹುಡುಕಿ ಹುಡುಕಿ ಸೋತು ಸುಣ್ಣವಾದೆ. ಅಯ್ಯೋ ಎಲ್ಲಿರ್ಪನೋ ಪೇಳಮ್ಮಾ! ಕಡೆಗಾಲದೊಳ್ ಕಲ್ಲೆಡವಿದಂತಾಯ್ತು. ತಾಯಿ, ಈ ಮಗುವನೇಕೆ ಇಲ್ಲಿಗೆಳೆತಂದಿರುವೆ? ಈ ರಾತ್ರಿಯ ರುದ್ರಭೂಮಿಗೆ?

    ಮಾತೆ: ಅಜ್ಜೀ, ಗುಡಿಸಲೊಳಾರುಮಿಲ್ಲ; ಇವನನ್ ಬಿಟ್ಟರೆನಗಿನ್ನಾರುಂ ಗತಿಯಿಲ್ಲ. ಕದನಕೈತಂದ ನನ್ನ ಪತಿಯನರಸಿ ಬಂದಿಹೆನು- ಈ ಹೆಬ್ಬಯಲಿನ ಹೆಣದ ಬಣಬೆಯೊಳು ಕಾಣಿಸದೇನುಂ!

    ಮುದುಕಿ: ನಿನ್ನ ಪತಿ ಆರ ಕಡೆಯವನ್

    ಮಾತೆ: ಪಾಂಡವರ ಪಕ್ಷದವನ್- ನಿನ್ನ ಪುತ್ರನ್?

    ಮುದುಕಿ: ಕೌರವನವನ್

    ಮಾತೆ: ನಿನ್ನ ಮಗನೆನ್ನ ಪತಿಗೆ ಹಗೆಯಾಗಿದ್ದನೇನ್?

    ಮುದುಕಿ: ಆರಿಗಾರು ಪಗೆ? ನಿನಗಾನ್ ಪಗೆಯೆ?

    ಮಾತೆ: ಉಂಟೇ?

    ಮುದುಕಿ: ನಮ್ಮವೋಲಿಹ ಬಡಜನಂಗಳೆಲ್ಲ ಮಂಕುಗಳಮ್ಮಾ. ಪಾಂಡವರ್ ಕೌರವರ್ ನೆಲಕೆ ಪೊಯ್ದಾಡಿದರೆ ನಮ್ಮ ಮಕ್ಕಳ್ ಅವರಿವರಂ ಕೆಳೆಗೊಂಡು ನಿಂತು ಹೆಮ್ಮೆಗೆ ಬಡಿದಾಡಿ ಮಡಿಯುವರ್- ನನ್ನ ಮಗನಿಗೆ ನಿನ್ನಾತನ ಮೇಲೆ ಪಗೆಯೇನ್? ನಾವಿರ್ವರುಂ ದುಃಖಾರ್ತರಮ್ಮಾ! ಬಾ ಹುಡುಕಿ ನೋಡುವಂ.

    ಇಬ್ಬರೂ ಹೆಣಗಳ ರಾಶಿಯ ನಡುವೆ ಕತ್ತಲಲ್ಲಿ ಅನತಿ ದೂರದಲ್ಲಿಯೇ ಹುಡುಕುತ್ತಿರುತ್ತಾರೆ. ಒಂದೆಡೆ ಮಾತೆ ನಿಂತು ಚೀರಿ ಮಗುವನ್ನು ಕೆಳಗಿಳಿಸಿ ರೋದಿಸುತ್ತಾಳೆ. ಅಲ್ಲಿ ಇಬ್ಬರು ಭಟರು ಒಬ್ಬರನ್ನೊಬ್ಬರು ಭರ್ಜಿಗಳಿಂದ ತಿವಿದು ಮಡಿದಿದ್ದಾರೆ. ಒಬ್ಬ ಮುದುಕಿಯ ಮಗ, ಮತ್ತೊಬ್ಬ ಮಾತೆಯ ಪತಿ. ಮುದುಕಿ ಮಾತೆಯ ರೋದನವನ್ನು ಆಲಿಸಿ ಓಡಿ ಬರುತ್ತಾಳೆ.

    ಮುದುಕಿ: ಏನಾಯ್ತು ಮಗಳೇ?

    ಮಾತೆ: ಅಯ್ಯೋ, ಅಜ್ಜೀ, ನೋಡಿಲ್ಲಿ: ನನ್ನ ಪತಿಯನ್ ಈ ಪಾಪಿ ತಿವಿದು ಕೊಂದಿಹನ್, ಅಯ್ಯೋ!

    ಮುದುಕಿ: ಅಯ್ಯೋ ಅಯ್ಯೋ ನನ್ನ ಮಗನನ್ ನಿನ್ನ ಪತಿ ತಿವಿದು ಕೊಂದಿಹನಲ್ಲಮ್ಮಾ! ಅಯ್ಯೋ ಪಾಂಡವರು ಹಾಳಾಗಲಿ!

    ಮಾತೆ: ಅಯ್ಯೋ ಕೌರವರು ಹಾಳಾಗಲಿ!

    ಇಬ್ಬರೂ ಹೆಣಗಳ ಮೇಲೆ ಬಿದ್ದು ಗೋಳಾಡುತ್ತಾರೆ.

    ಈ ಸನ್ನಿವೇಶಕ್ಕೆ ವಿವರಣೆಯ ಅಗತ್ಯವಿಲ್ಲ. ಮುದುಕಿ ಮಾತೆಯರ ಹಿನ್ನೆಲೆ, ಅವರಿಬ್ಬರೂ ಭೇಟಿಯಾಗುವ ಸಂದರ್ಭ, ಒಬ್ಬರನ್ನೊಬ್ಬರು ಸಾಂತ್ವನಗೊಳಿಸಿಕೊಳ್ಳುವ ಕ್ರಮ, ಕಡೆಗೆ ಅವರಿಬ್ಬರೂ ತಮ್ಮ ಮಗ, ಗಂಡನ ಹೆಣವನ್ನು ಕಾಣುವ ಸನ್ನಿವೇಶ- ಈ ಎಲ್ಲವನ್ನೂ ಕುವೆಂಪು ಸೃಷ್ಟಿಸಿರುವ ರೀತಿಯಲ್ಲಿಯೇ ಯುದ್ಧದ ಸ್ವರೂಪ, ಅದರ ಪರಿಣಾಮ, ಸಾಮಾನ್ಯರ ಬದುಕಿನಲ್ಲಿ ಅದರಿಂದುಂಟಾಗುವ ತಲ್ಲಣ ಎಲ್ಲವೂ ವ್ಯಕ್ತವಾಗುತ್ತದೆ.

    ಕುವೆಂಪು ಈ ನಾಟಕ ಬರೆದದ್ದು ಮೊದಲ ಮಹಾಯುದ್ಧದಿಂದ ಜಗತ್ತು ತಲ್ಲಣಿಸಿದ್ದ ಸಂದರ್ಭದಲ್ಲಿ. ಆರ್ಥಿಕ ವ್ಯವಸ್ಥೆ ಕುಸಿದುಬಿದ್ದು, ನೈತಿಕ ನೆಲೆಗಟ್ಟು ಸಡಿಲಗೊಂಡು, ಮಾನವ ಸಂಬಂಧ ಛಿದ್ರಗೊಂಡಿದ್ದ ಕಾಲ. ಈ ನಾಟಕ ರಚನೆಯ ಬಗ್ಗೆ ಕುವೆಂಪು ಹೀಗೆ ಹೇಳಿದ್ದಾರೆ: ‘ಇದೊಂದು ಪ್ರತಿಮಾಸೃಷ್ಟಿ. ಯುದ್ಧದ ದುರಂತತೆ, ಅನ್ಯಾಯ, ಕ್ರೌರ್ಯ, ವಿನಾಶ, ಅವಿವೇಕ, ಸಂಸ್ಕೃತಿಯ ಸಾವು- ಇದಕ್ಕೆ ಪ್ರತಿಮೆ. ಒಂದೊಂದು ಯುದ್ಧವೂ ಪ್ರಾರಂಭವಾಗುವಾಗ ಅದು ಯುದ್ಧವನ್ನೇ ಕೊನೆಗಾಣಿಸುವ ಜಗತ್ತಿನ ಕೊನೆಯ ಅನಿವಾರ್ಯ ಸಂಕಟವೆಂದು ಭಾವಿಸುತ್ತೇವೆ, ಕಲಿ ಹೋಗಿ ಕೃತಯುಗ ಪ್ರಾರಂಭವಾಗುತ್ತದೆಂದು. ಆದರೆ? ಮತ್ತೆ ವಿಶೇಷತೆಗಾಗಿ ಸಾಮಾನ್ಯರ ಆಹುತಿ. ಸಂಸ್ಕೃತಿ ನಾಗರಿಕತೆ ಪ್ರಗತಿ ಎಲ್ಲ ಶ್ಮಶಾನ ರುದ್ರನ ಮೈಗೆ ಭಸ್ಮಲೇಪನವಾಗುತ್ತದೆ’. ಇಲ್ಲಿ ಕುವೆಂಪು ಹೇಳುವ ಸಾಮಾನ್ಯರ ಆಹುತಿ, ಸಂಸ್ಕೃತಿ, ನಾಗರಿಕತೆಗಳ ನಾಶ, ಪ್ರಗತಿಗಾಗುವ ಹಿನ್ನಡೆ ಇವುಗಳನ್ನು ನಾವು ಗಮನಿಸಬೇಕು. ಆಧುನಿಕ ಸಂದರ್ಭದಲ್ಲಂತೂ ಈ ‘ರಾಕ್ಷಸಕ್ರೀಡೆ’ಯ ಕರಾಳಹಸ್ತ ಬಲು ಉದ್ದ.

    ನಮ್ಮ ಕಾಲದ ಶ್ರೇಷ್ಠ ವಿದ್ವಾಂಸರಲ್ಲೊಬ್ಬರಾದ ಸುಜನಾ ಮಹಾಭಾರತಕ್ಕೆ ಸಂಬಂಧಿಸಿ ಒಂದು ಪ್ರಶ್ನೆಯನ್ನೆತ್ತಿದ್ದಾರೆ. ನನಗೆ ಅವರ ಈ ಪ್ರಶ್ನೆ ಮುಖ್ಯವೆನ್ನಿಸುತ್ತದೆ: ‘ಮಹಾಭಾರತವನ್ನು ಮೊದಲ ಬಾರಿಗೆ ಶ್ರೇಷ್ಠವಾಗಿ ಸಂಗ್ರಹಿಸಿ ಪುನರ್​ಸೃಜಿಸಿದ ಪಂಪನಾಗಲೀ, ಅದರ ವಿಸ್ಮಯ ಅದ್ಭುತಗಳನ್ನೆಲ್ಲ ಕನ್ನಡಿಸಿದ ಕುಮಾರವ್ಯಾಸನಾಗಲೀ ಆ ಮಹರ್ಷಿ ಕಾವ್ಯವನ್ನು ಅಂದರೆ ವ್ಯಾಸಭಾರತವನ್ನು ಕುರುಕ್ಷೇತ್ರಾ ನಂತರದ ಪಾಂಡವ ಪಟ್ಟಾಭಿಷೇಕದಲ್ಲಿಯೇ ಮುಗಿಸಿ ಮಂಗಳಾರತಿ ಎತ್ತುತ್ತಾರೆ. ಆದರೆ ವ್ಯಾಸರ ವಿಪುಲಾಶ್ಚರ್ಯಕರವಾದ ಕಾಣ್ಕೆ ಅದೆಯೇ? ಒಂದು ಯುಗದ ಹೂ ಹಣ್ಣು ಕಾಯಿಗಳನ್ನೆಲ್ಲ ಸುಟ್ಟು ಹಾಕಿದ ಕುರುಕ್ಷೇತ್ರ ಯುದ್ಧಭೂಮಿ ಪಟ್ಟಾಭಿಷಿಕ್ತರ ಸಿಂಹಾಸನವಾಗುವುದಷ್ಟೇ ವ್ಯಾಸರ ಕಾಣ್ಕೆಯೇ? ಸಿಂಹಾಸನ ಪಡೆದದ್ದೂ ಎಷ್ಟು ಬೆಲೆ ತೆತ್ತು? ಕಡೆಗಾದರೂ ಯಾರು ಸುಖಪಟ್ಟರು? ತರುಣ ಅಭಿಮನ್ಯುವಿನಿಂದ ಹಿಡಿದು ವೃದ್ಧ ಭೀಷ್ಮರ ತನಕ, ಉತ್ತರನಿಂದ ಮೊದಲ್ಗೊಂಡು ದ್ರೋಣ ಕರ್ಣರ ತನಕ, ಕೌರವಾದಿಗಳಂತೆಯೇ ಯಾದವ ಸೈನ್ಯವೆಲ್ಲ ಕೆಡೆದುರುಳಿತಲ್ಲ? ಅಷ್ಟಕ್ಕೇ ನಿಂತಿತೇ ಆ ಬಲಿ? ಮಲಗಿದ್ದ ಎಳೆಯ ಪಂಚಪಾಂಡವರು, ಬಸಿರಿನಲ್ಲಿದ್ದ ಅಭಿಮನ್ಯು ಸತ್ವ ಎಲ್ಲವೂ ಹತವಾಯಿತಲ್ಲ! ಅಶ್ವತ್ಥಾಮನೂ ಶಪಿತನಾದ. ಕರ್ಣಾವಸಾನದ ನಿಜರಹಸ್ಯವನ್ನರಿತ ಧರ್ವದಿಗಳೂ ಗೋಳಿಗೆ ಬಿದ್ದರು. ಮಹಾಪುತ್ರನನ್ನು ಕಳೆದುಕೊಂಡ ಸುಭದ್ರೆ, ತಮ್ಮ ನೂರ್ವರು ಮಕ್ಕಳನ್ನೂ ಬಲಿಕೊಟ್ಟ ಧೃತರಾಷ್ಟ್ರ ಗಾಂಧಾರಿಯರು, ತನ್ನೈದು ಮಕ್ಕಳನ್ನು ಕಳೆದುಕೊಂಡ ದ್ರೌಪದಿ- ಈ ಯಾರಿಗೆ ಸುಖ? ಹೀಗೆ ಅತಿರಥ ಮಹಾರಥರ ಪಾಡೇ ಇದಾದ ಮೇಲೆ ಲಕ್ಷಾಂತರ ಸಾಮಾನ್ಯ ಸೈನಿಕರ ಕುಟುಂಬಕ್ಕಾದ ನೋವಿನ ಕತೆಯನ್ನು ಯಾರು ಕೇಳುತ್ತಾರೆ?’

    ನಿಜ, ಯುದ್ಧವೆಂದರೆ ರಣಕಲಿಗಳ ರೋಮಾಂಚಕಾರೀ ಕಥನ. ಉನ್ಮಾದವುಂಟು ಮಾಡುವ ಸಾಹಸದ ವೀರಗಾಥೆ. ವಿಜಯೋತ್ಸಾಹದ ಸಂಭ್ರಮಾಚರಣೆ. ಆದರೆ ಯುದ್ಧಾನಂತರದಲ್ಲಿ ಹುತಾತ್ಮರಾದ ಲಕ್ಷಾಂತರ ಕುಟುಂಬದ ನೋವಿನ ಕತೆಯೂ ಇದೆ ಎಂಬುದನ್ನು ನಾವು ಮರೆಯಬಾರದು. ನಮ್ಮೆಲ್ಲ ಇತಿಹಾಸವೂ ರಾಜರ ವಿಜಯೋತ್ಸಾಹದ ಕತೆಯನ್ನೇ ಹೇಳುತ್ತದೆ. ಆದರೆ ಯುದ್ಧಾನಂತರದಲ್ಲಿ ಅದರ ಪರಿಣಾಮದಿಂದುಂಟಾಗುವ ಸಾಮಾನ್ಯ ಜನರ ಸಂಕಟದ ಕತೆಯೂ ಇತಿಹಾಸದ ಭಾಗವೇ!

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts