ನಾಸ್ತಿಕರಿಗೆ ಸಾಂವಿಧಾನಿಕ ಹಕ್ಕುಗಳಿವೆಯೇ…

ನ್ಯಾಯಾಂಗ ನಿರ್ಣಯಗಳನ್ನು ಅವಲೋಕಿಸಿದಾಗ, ನಾಸ್ತಿಕತೆ ಧರ್ಮದ ಒಂದು ಮಗ್ಗುಲಾಗಿ ಪರಿಗಣಿತವಾಗಿರುವುದು ಅರಿವಾಗುತ್ತದೆ. ಸವೋಚ್ಚ ನ್ಯಾಯಾಲಯವು 1954ರಲ್ಲೇ ಪ್ರಕರಣವೊಂದರಲ್ಲಿ ‘ಧರ್ಮ ಎಂಬುದು ವ್ಯಕ್ತಿಗಳು ಅಥವಾ ಸಮುದಾಯಗಳ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ಈಶ್ವರವಾದಿಯಾಗಿರಬೇಕು ಎಂದೇನೂ ಇಲ್ಲ’ ಎಂದಿದೆ.

ಆಸ್ತಿಕ, ನಾಸ್ತಿಕ ಚರ್ಚೆಗಳು ನಮ್ಮಲ್ಲಿ ಹಿಂದಿನಿಂದಲೂ ಇವೆ. ‘ನಾಸ್ತಿಕರ’ ಅಥವಾ ‘ಧಾರ್ವಿುಕ ನಂಬಿಕೆಯಿಲ್ಲದವರ’ ಸಾಂವಿಧಾನಿಕ ಹಕ್ಕುಗಳು ತೀರಾ ಇತ್ತೀಚಿನವರೆಗೂ ಪರಿಗಣಿತವಾಗಿರಲಿಲ್ಲ ಹಾಗೂ ನಮ್ಮ ದೇಶದ ನ್ಯಾಯಾಲಯಗಳಿಂದ ಅವು ನಿರ್ಲಕ್ಷಿಸಲ್ಪಟ್ಟಿದ್ದವು. ಹಾಗೆನೋಡಿದರೆ ನಾಸ್ತಿಕತೆ ಅಥವಾ ನಿರೀಶ್ವರವಾದಕ್ಕೆ ಭಾರತದಲ್ಲಿ ಸುದೀರ್ಘ ಇತಿಹಾಸವಿದೆ; ಚಾರ್ವಾಕ, ಮೀಮಾಂಸ, ಸಾಂಖ್ಯ ಮತ್ತು ಬೌದ್ಧಮತದಂಥ ಭಾರತೀಯ ತತ್ತ್ವಶಾಸ್ತ್ರದ ಅನೇಕ ಪಂಥಗಳು ನಾಸ್ತಿಕ ವಿಚಾರಧಾರೆಗಳನ್ನು ಹರಿಸಿರುವುದು ಇದಕ್ಕೆ ಸಾಕ್ಷಿ. ಪೆರಿಯಾರ್ ರಾಮಸ್ವಾಮಿ, ರಾಮ ಮನೋಹರ ಲೋಹಿಯಾರಂಥ ಪ್ರಸಿದ್ಧ ನಾಯಕರು ಹಾಗೂ ಭಗತ್ ಸಿಂಗ್​ರಂಥ ಸ್ವಾತಂತ್ರ್ಯ ಹೋರಾಟಗಾರರು ನಿರೀಶ್ವರವಾದವನ್ನು ಒಂದು ಸಾಮಾಜಿಕ ಜೀವನಕ್ರಮ ಅಥವಾ ದರ್ಶನ ಪದ್ಧತಿಯಾಗಿ ಎತ್ತಿಹಿಡಿಯುವುದರೊಂದಿಗೆ ಈ ಸಂಪ್ರದಾಯವು ವರ್ತಮಾನದಲ್ಲೂ ಮುಂದುವರಿದಿದೆ ಎನ್ನಬೇಕು. 2012ರ ‘WIN-Gallup Global Index of Religion and Atheism’  ವರದಿಯ ಪ್ರಕಾರ, ಶೇ. 81ರಷ್ಟು ಭಾರತೀಯರು ಧರ್ಮಶ್ರದ್ಧೆಯುಳ್ಳವರಾದರೆ, ಶೇ. 13ರಷ್ಟು ಮಂದಿ ಇದಕ್ಕೆ ವ್ಯತಿರಿಕ್ತ ಚಿಂತನೆಯವರು, ಶೇ. 3ರಷ್ಟು ಮಂದಿ ನಾಸ್ತಿಕತೆಯಲ್ಲಿ ದೃಢನಂಬಿಕೆಯಿರುವವರಾಗಿದ್ದು, ಶೇ. 3ರಷ್ಟು ಮಂದಿ ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿಲ್ಲ ಇಲ್ಲವೇ ತಮ್ಮ ನಂಬುಗೆಯ ಕುರಿತು ಅವರಿಗೇ ಖಾತ್ರಿಯಿಲ್ಲ.

ನಾಸ್ತಿಕತೆ ಭಾರತದ ಸಾಮಾಜಿಕ ಸ್ತರಗಳಲ್ಲಿ ಹಾಸುಹೊಕ್ಕಾಗಿದ್ದರೂ, ನಾಸ್ತಿಕರಿಗಾಗಿ ಯಾವುದೇ ನಿರ್ದಿಷ್ಟ ಕಾನೂನುಗಳು ನಮ್ಮಲ್ಲಿಲ್ಲ ಹಾಗೂ ಜನ್ಮಜಾತ ಧರ್ಮಕ್ಕೆ ಸೇರಿದವರೆಂಬಂತೆ ಅವರನ್ನು ಪರಿಗಣಿಸಲಾಗಿದೆ. ಹೀಗಾಗಿ, ಧರ್ಮಶ್ರದ್ಧೆಯಿಲ್ಲದವರ (ಅಥವಾ ನಾಸ್ತಿಕರ) ಹಕ್ಕುಗಳನ್ನು ಭಾರತದ ಸಂವಿಧಾನವು ಗುರುತಿಸಿ ಸಂರಕ್ಷಿಸುತ್ತದೆಯೇ? ಎಂಬ ಪ್ರಶ್ನೆಯಿಲ್ಲಿ ಉದ್ಭವಿಸುತ್ತದೆ. ಈ ದಿಸೆಯಲ್ಲಿ, ಸಂವಿಧಾನ ರಚನಾ ಮಂಡಳಿಯ ಚರ್ಚೆಗಳ ಅಭಿಪ್ರಾಯವನ್ನೊಮ್ಮೆ ಅವಲೋಕಿಸಿದರೆ, ಭಾರತದ ಸಂವಿಧಾನದ ವಿಧಿ 25ರ ಅಡಿಯಲ್ಲಿ ನೀಡಲಾಗಿರುವ ಆತ್ಮಸಾಕ್ಷಿ ಸ್ವಾತಂತ್ರ್ಯದ ನಿಜವಾದ ದೃಷ್ಟಿಕೋನ ಮತ್ತು ಉದ್ದೇಶವನ್ನು ಅರ್ಥಮಾಡಿಕೊಳ್ಳಲು ನೆರವಾಗಬಹುದು.

ನಮ್ಮ ಸಂವಿಧಾನದ ಪೀಠಿಕಾಭಾಗದಲ್ಲಿ ಉಲ್ಲೇಖಿಸಲ್ಪಟ್ಟಿರುವ We, the people of India’’ ಎಂಬ ಪದಗುಚ್ಛಕ್ಕೆ ಪೂರ್ವಭಾವಿಯಾಗಿ “In the name of God’ ಎಂಬ ಪದಗುಚ್ಛವನ್ನು ಸೇರ್ಪಡೆ ಮಾಡಿ ತಿದ್ದುಪಡಿ ತರಬೇಕು ಎಂಬುದಾಗಿ ಎಚ್.ವಿ. ಕಾಮತ್ ಅವರು 1949ರ ಅಕ್ಟೋಬರ್ 17ರಂದು ಪ್ರಸ್ತಾಪಿಸಿದ್ದರು. ಆದರೆ ಈ ತಿದ್ದುಪಡಿ ಪ್ರಸ್ತಾವನೆಯನ್ನು ಸಂವಿಧಾನ ರಚನಾ ಮಂಡಳಿಯ ಸದಸ್ಯರು ಬಲವಾಗಿ ವಿರೋಧಿಸಿದ ಕಾರಣ, ಅದು ತಿರಸ್ಕೃತಗೊಂಡಿತು. ಈ ಸಂಬಂಧದ ಚರ್ಚೆಯ ವೇಳೆ ಪಟಾಮ್ ಎ. ಥಾನು ಪಿಳ್ಳೆ ೖ

ಎಂಬ ಸದಸ್ಯರು, ಸದರಿ ತಿದ್ದುಪಡಿ ಧಾರ್ವಿುಕ ನಂಬುಗೆ/ಧರ್ಮಶ್ರದ್ಧೆಯಂಥ ವಿಷಯಗಳಲ್ಲಿ ನಿರ್ಬಂಧ ಅಥವಾ ಬಲವಂತವನ್ನು ಹೇರುವಂತಾಗುವುದಕ್ಕೆ ಕಾರಣವಾಗುತ್ತದೆ ಎಂದರಲ್ಲದೆ, ‘ಧರ್ಮಶ್ರದ್ಧೆಯ ಸ್ವಾತಂತ್ರ್ಯದಂಥ ಮೂಲಭೂತ ಹಕ್ಕಿನ ಮೇಲೆ ಇದು ಪರಿಣಾಮ ಬೀರುತ್ತದೆ. ನಮ್ಮ ಸಂವಿಧಾನದ ಅನುಸಾರ, ಓರ್ವ ವ್ಯಕ್ತಿಗೆ ದೇವರನ್ನು ನಂಬುವ ಅಥವಾ ನಂಬದಿರುವ ಹಕ್ಕಿದೆ’ ಎಂದರು. ಮತ್ತೋರ್ವ ಸದಸ್ಯ ಪಂಡಿತ್ ಹೃದಯನಾಥ್ ಕುಂಜ್ರು, ‘ಸಂವಿಧಾನದ ಪೀಠಿಕಾಭಾಗದಲ್ಲಿ ದೇವರ ಹೆಸರನ್ನು ಸ್ಮರಿಸಿದರೆ ಅದು ಸಂಕುಚಿತ ಮನೋವೃತ್ತಿ ಅಥವಾ ಪಂಥಾಭಿಮಾನದ ಸೂಚಕವಾಗಿಬಿಡುತ್ತದೆ, ಇದು ಸಂವಿಧಾನದ ದೃಷ್ಟಿಕೋನಕ್ಕೆ ವ್ಯತಿರಿಕ್ತವಾದುದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಮತ್ ಪ್ರಸ್ತಾಪ ಹೀಗೆ ತಿರಸ್ಕೃತಗೊಂಡಿದ್ದು, ‘ಧರ್ಮಶ್ರದ್ಧೆಯಿಲ್ಲದವರ’ ಅಥವಾ ‘ನಾಸ್ತಿಕರ’ ಸಾಂವಿಧಾನಿಕ ಹಕ್ಕುಗಳನ್ನು ಸಂವಿಧಾನ ರಚನಾ ಮಂಡಳಿ ಗುರುತಿಸಿ ಮಾನ್ಯಮಾಡಿರುವುದನ್ನು ನಿದರ್ಶಿಸುತ್ತದೆಯಲ್ಲವೇ? ಹೀಗಾಗಿ, ನಾಸ್ತಿಕತೆ ಹಕ್ಕು ಎಂಬುದೊಂದು ಆಯ್ಕೆಯ ವಿಷಯವಾಗಿದ್ದು, ಆತ್ಮಸಾಕ್ಷಿಯ ಸ್ವಾತಂತ್ರ್ಯ ಸಾಮ್ರಾಜ್ಯದಲ್ಲಿ ಅದು ಸಂರಕ್ಷಿಸಲ್ಪಟ್ಟಿದೆ ಎನ್ನಲಡ್ಡಿಯಿಲ್ಲ.

ಅದೇನೇ ಇದ್ದರೂ, ಕೆಲ ನ್ಯಾಯಾಂಗ ನಿರ್ಣಯಗಳನ್ನು ಕೂಲಂಕಷ ಅವಲೋಕಿಸಿದಾಗ, ನ್ಯಾಯಾಲಯಗಳು ನಾಸ್ತಿಕತೆಯನ್ನು ಧರ್ಮದ ಒಂದು ಮುಖ ಅಥವಾ ಮಗ್ಗುಲಾಗಿ ಪರಿಗಣಿಸಿರುವುದು ಅರಿವಾಗುತ್ತದೆ. ಸವೋಚ್ಚ ನ್ಯಾಯಾಲಯವು 1954ರಷ್ಟು ಹಿಂದೆಯೇ ‘ಆಯುಕ್ತರು, ಹಿಂದೂ ಧಾರ್ವಿುಕ ದತ್ತಿಗಳು, ಮದ್ರಾಸ್ ವರ್ಸಸ್ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥ ಸ್ವಾಮಿಯರ್’ ಪ್ರಕರಣದಲ್ಲಿ ‘ಧರ್ಮ ಎಂಬುದು ವ್ಯಕ್ತಿಗಳು ಅಥವಾ ಸಮುದಾಯಗಳ ಪಾಲಿಗೆ ನಿಶ್ಚಿತವಾಗಿಯೂ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ಈಶ್ವರವಾದಿಯಾಗಿರಬೇಕು ಎಂದೇನೂ ಇಲ್ಲ’ ಎಂದು ನಿರ್ಣಯಿಸಿತು. ದೇವರಲ್ಲಿ ನಂಬುಗೆಯಿಲ್ಲದ ಭಾರತದಲ್ಲಿನ ಸುಪ್ರಸಿದ್ಧ ಧರ್ಮಗಳನ್ನು ಉಲ್ಲೇಖಿಸುತ್ತ ನ್ಯಾಯಾಲಯವು, ‘ಧರ್ಮವೆಂಬುದು ಒಂದು ನಂಬಿಕೆ ಅಥವಾ ಸಿದ್ಧಾಂತ ಎಂಬುದರ ಹೊರತಾಗಿ ಮತ್ತೇನೂ ಅಲ್ಲ ಎಂದರೆ ತಪ್ಪಾಗುತ್ತದೆ. ತನ್ನ ಅನುಯಾಯಿಗಳು ಸ್ವೀಕರಿಸಬೇಕು ಎಂಬ ಕಾರಣವಿಟ್ಟುಕೊಂಡು ಧರ್ಮವೊಂದು ನೀತಿಸೂತ್ರಗಳ ಸಂಹಿತೆಯೊಂದನ್ನು ಮಾತ್ರವೇ ರೂಪಿಸದಿರಬಹುದು’ ಎಂದು ಅಭಿಪ್ರಾಯಪಟ್ಟಿತು.

‘ರತಿಲಾಲ್ ಪನಾಚಂದ್ ಗಾಂಧಿ ವರ್ಸಸ್ ಬಾಂಬೆ ಸರ್ಕಾರ (1954)’ ಎಂಬ ಮತ್ತೊಂದು ಪ್ರಕರಣದಲ್ಲೂ ಈ ದೃಷ್ಟಿಕೋನವನ್ನು ಸಮರ್ಥಿಸಲಾಯಿತು ಹಾಗೂ ಪುನರುಚ್ಚರಿಸಲಾಯಿತು; ‘ಧರ್ಮವೆಂದರೆ ಏನು ಎಂಬುದರ ವ್ಯಾಖ್ಯಾನಕ್ಕೆ ಸಂವಿಧಾನ ನಿರ್ವತೃಗಳು ಯಾವುದೇ ಪ್ರಯತ್ನ ಮಾಡಿಲ್ಲವಾದ್ದರಿಂದ, ಎಲ್ಲ ವರ್ಗದ ಜನರಿಗೂ ಅನ್ವಯವಾಗಬಲ್ಲ ರೀತಿಯಲ್ಲಿ ‘ಧರ್ಮ’ ಎಂಬ ಶಬ್ದದ ವ್ಯಾಪಕ ವ್ಯಾಖ್ಯಾನವೊಂದನ್ನು ರೂಪಿಸಲು ಖಂಡಿತ ಸಾಧ್ಯವಿಲ್ಲ’ ಎಂಬುದಾಗಿ ಸವೋಚ್ಚ ನ್ಯಾಯಾಲಯ ಹೇಳಿತು. ‘ಏತೀಸ್ಟ್ ಸೊಸೈಟಿ ಆಫ್ ಇಂಡಿಯಾ ವರ್ಸಸ್ ಆಂಧ್ರಪ್ರದೇಶ ಸರ್ಕಾರ (1992)’ ಪ್ರಕರಣದಲ್ಲಿ ‘ಯಾವುದೇ ಧರ್ಮ ಮತ್ತು ದೇವರಲ್ಲಿ ನಂಬಿಕೆಯಿಲ್ಲದಿರುವುದನ್ನೇ ಒಂದು ‘ನಿರ್ದಿಷ್ಟ ಧರ್ಮ’ ಎಂದು ಕರೆಯಬಹುದು’ ಎಂಬುದಾಗಿ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಸ್ಪಷ್ಟವಾಗಿ ಹೇಳಿತು. ಅಷ್ಟೇ ಅಲ್ಲ, ‘ದೇವರೆಂಬ ಅಸ್ತಿತ್ವವೇ ಇಲ್ಲ ಎಂಬ ವ್ಯರ್ಥ ಸಮರ್ಥನೆಯಲ್ಲಿ ಅಥವಾ ಶುಷ್ಕ ಕಾರಣವಿಟ್ಟುಕೊಂಡು ಪೂಜಿಸುವ ನಾಸ್ತಿಕರ ನಂಬಿಕೆಗೆ ಯಾವುದೇ ಸಾಂವಿಧಾನಿಕ ಖಾತ್ರಿ ಅಥವಾ ಸಂರಕ್ಷಣೆಯಿಲ್ಲ’ ಎಂಬುದಾಗಿಯೂ ಅದು ಅಭಿಪ್ರಾಯಪಟ್ಟಿತು.

‘ರಂಜಿತ್ ಸೂರ್ಯಕಾಂತ್ ಮೋಹಿತೆ ವರ್ಸಸ್ ಕೇಂದ್ರ ಸರ್ಕಾರ (2014)’ ಪ್ರಕರಣದಲ್ಲಿ ನ್ಯಾಯಾಲಯಗಳು ತಳೆದ ನಿಲುವುಗಳಲ್ಲಿ ಭಿನ್ನತೆಯಿರುವುದು ನಮ್ಮರಿವಿಗೆ ಬರುತ್ತದೆ. ಈ ಪ್ರಕರಣದಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ‘ಆತ್ಮಸಾಕ್ಷಿ’ಯನ್ನು ‘ವ್ಯಕ್ತಿಯೋರ್ವನ ವೈಯಕ್ತಿಕ ತೀರ್ಮಾನ ಮತ್ತು ಕೃತ್ಯಗಳಿಗೆ ಅನ್ವಯವಾಗುವಂಥ ಸರಿ ಅಥವಾ ತಪು್ಪ ಎಂಬುದರ ಒಂದು ನೈತಿಕಪ್ರಜ್ಞೆಯಾಗಿ’ ವ್ಯಾಖ್ಯಾನಿಸುವಾಗ, ಭಾರತ ಸಂವಿಧಾನದ ವಿಧಿ 25ರ ಅಡಿಯಲ್ಲಿ ಉಲ್ಲೇಖಿಸಲಾಗಿರುವ ‘ಆತ್ಮಸಾಕ್ಷಿ ಸ್ವಾತಂತ್ರ್ಯ’ವು, ತಾನು ಯಾವ ಧರ್ಮಕ್ಕೂ ಸೇರಿದವನಲ್ಲವೆಂಬ ನಿಲುವು ತಳೆಯುವುದಕ್ಕೆ ವ್ಯಕ್ತಿಯೋರ್ವನಿಗೆ ನೀಡಲಾಗಿರುವ ಸ್ವಾತಂತ್ರ್ಯವನ್ನು ತನ್ನೊಳಗೆ ಇಟ್ಟುಕೊಂಡಿದೆ; ಯಾವುದೇ ಧರ್ಮದಲ್ಲಿನ ಶ್ರದ್ಧಾಭಕ್ತಿಯನ್ನು ದೃಢವಾಗಿ ಘೋಷಿಸಿಕೊಳ್ಳದಿರುವ, ಯಾವುದೇ ಧರ್ಮವನ್ನು ಅನುಸರಿಸದಿರುವ ಅಥವಾ ಪ್ರಸರಣ ಮಾಡದಿರುವ ಹಕ್ಕನ್ನು ಒಳಗೊಂಡಿದೆ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿತು. ಯಾವುದೇ ಧರ್ಮವನ್ನು ಅನುಸರಿಸುವಂತೆ ಯಾರನ್ನೇ ಆಗಲಿ ಒತ್ತಾಯಿಸಲಾಗದು/ನಿರ್ಬಂಧಿಸಲಾಗದು ಎಂಬುದನ್ನೂ ಈ ಪ್ರಕರಣ ಸಮರ್ಥಿಸಿತು.

‘ಪಿ.ಡಿ. ಸುಂದರೇಶನ್ ವರ್ಸಸ್ ಸರ್ಕಾರದ ಪ್ರಧಾನ ಕಾರ್ಯದರ್ಶಿ (2012)’- ಇಂಥದೇ ಮತ್ತೊಂದು ಸ್ವಾರಸ್ಯಕರ ಪ್ರಕರಣ; ಈ ಪ್ರಕರಣದಲ್ಲಿ, ನಾಸ್ತಿಕವಾದದ ಪ್ರಬಲ ಸಮರ್ಥಕರಾಗಿದ್ದ ಪೆರಿಯಾರ್ ಅವರ ಪ್ರತಿಮೆಯನ್ನು ಶಾಲೆಯೊಂದರ ಆವರಣದಲ್ಲಿ ಪ್ರತಿಷ್ಠಾಪಿಸುವುದಕ್ಕೆ ಅನುಮತಿಸುವ ಸರ್ಕಾರಿ ಆದೇಶವೊಂದರ ಕುರಿತಾಗಿ ಅಹವಾಲುದಾರರು ತಕರಾರೆತ್ತಿದ್ದರು. ಹೀಗೆ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದರಿಂದ ವಿದ್ಯಾರ್ಥಿಗಳ ಮನದಲ್ಲಿ ನಾಸ್ತಿಕವಾದ ಬೆಳೆಯುವುದಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂಬುದು ಅವರ ವಾದವಾಗಿತ್ತು. ಈ ಅಹವಾಲನ್ನು ತಳ್ಳಿಹಾಕಿದ ಮದ್ರಾಸ್ ಉಚ್ಚನ್ಯಾಯಾಲಯ, ಪೆರಿಯಾರ್ ಕುರಿತಾಗಿ ಶಾಲಾಮಕ್ಕಳು ಅರಿಯುವುದರ ಕುರಿತಂತೆ ಒತ್ತುನೀಡಿತು. ಅಷ್ಟೇ ಅಲ್ಲ, ಪೆರಿಯಾರ್ ಚಿಂತನಾಕ್ರಮ/ಜೀವನವಿಧಾನವನ್ನು ಅರ್ಥೈಸಿಕೊಳ್ಳುವುದರಿಂದಾಗಿ ವೈಜ್ಞಾನಿಕ ದೃಷ್ಟಿಕೋನ, ಮಾನವಹಿತಾಸಕ್ತಿ, ಪ್ರಶ್ನಿಸುವ ಮತ್ತು ಸುಧಾರಣೆಯ ಮನೋಭಾವಗಳನ್ನು ಮಕ್ಕಳು ಬೆಳೆಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ, ಇದು ಸಂವಿಧಾನದ ವಿಧಿ 51ಎ (ಎಚ್) ಅನುಸಾರ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಸಮರ್ಥಿಸಿತು.

ಇತ್ತೀಚೆಗೆ, 2017ರ ಖಾಸಗಿತನದ ಹಕ್ಕು ಪ್ರಕರಣದಲ್ಲಿ (ನ್ಯಾ. ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಕೇಂದ್ರ ಸರ್ಕಾರ) ಸವೋಚ್ಚ ನ್ಯಾಯಾಲಯದ 9 ಮಂದಿ ನ್ಯಾಯಮೂರ್ತಿಗಳ ಪೀಠವು ನೀಡಿದ ನಿರ್ಣಯವು, ನಾಸ್ತಿಕನಾಗಿರುವುದಕ್ಕೆ ವ್ಯಕ್ತಿಯೊಬ್ಬನಿಗಿರುವ ಹಕ್ಕನ್ನು ವಿಶೇಷವಾಗಿ ಗುರುತಿಸಿ ಮಾನ್ಯಮಾಡಿತು. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಖಾಸಗಿತನದ ಮೂಲಭೂತ ಹಕ್ಕಿದ್ದು, ಇದು ಧರ್ಮಶ್ರದ್ಧೆಯೊಂದನ್ನು ಆಯ್ದುಕೊಳ್ಳುವ ಹಾಗೂ ತನ್ನ ಇಂಥ ಆಯ್ಕೆಗಳನ್ನು ಪ್ರಪಂಚದ ಮುಂದೆ ವ್ಯಕ್ತಪಡಿಸುವ ಅಥವಾ ವ್ಯಕ್ತಪಡಿಸದಿರುವ ಸ್ವಾತಂತ್ರ್ಯವನ್ನೂ ಒಳಗೊಂಡಿದೆ ಎಂದು ನ್ಯಾಯಾಲಯ ಹೇಳಿತು.

ವ್ಯಕ್ತಿಯ ಹಕ್ಕುಗಳಿಗೆ ಸಾಂವಿಧಾನಿಕ ಖಾತ್ರಿಯಿರುತ್ತದೆ. ಮಾನವ ವ್ಯಕ್ತಿತ್ವದ ಸಾರಭೂತ ಅಂಶವೇ ಆಗಿರುವ ಖಾಸಗಿತನವು ಆಯ್ಕೆಗಳನ್ನು ಮಾಡುವುದಕ್ಕೆ ಮತ್ತು ತೀರಾ ಖಾಸಗಿಯೂ, ವೈಯಕ್ತಿಕವೂ ಆದ ಅಂಶಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಗಿರುವ ಸಾಮರ್ಥ್ಯವನ್ನು ಗುರುತಿಸುತ್ತದೆ ಎಂದು ನ್ಯಾಯಾಲಯವು ಸಮರ್ಥಿಸಿತು.

‘ಶಫಿನ್ ಜಹಾನ್ ವರ್ಸಸ್ ಅಶೋಕನ್ (2018)’ ಪ್ರಕರಣದಲ್ಲಿ, ‘ಧರ್ಮಶ್ರದ್ಧೆ ಮತ್ತು ನಂಬಿಕೆಯಂಥ ವಿಷಯಗಳಲ್ಲಿ ವ್ಯಕ್ತಿಯ ಇಚ್ಛಾಸ್ವಾತಂತ್ರ್ಯವೇ ಪರಮೋಚ್ಚವಾಗಿರುತ್ತದೆ’ ಎಂಬ ಅಭಿಪ್ರಾಯವನ್ನು ಸವೋಚ್ಚ ನ್ಯಾಯಾಲಯವು ಪುನರುಚ್ಚರಿಸಿತು. ಹೀಗಾಗಿ, ಇಂಥ ತೀರಾಖಾಸಗಿ ವಿಷಯಗಳ ಕುರಿತಾದ ವೈಯಕ್ತಿಕ ನಿರ್ಣಯಗಳಿಗಾಗಿನ ಸಾಮಾಜಿಕ ಅನುಮೋದನೆಯು ಓರ್ವ ನಾಸ್ತಿಕ ಅಥವಾ ಧರ್ಮಶ್ರದ್ಧೆಯಿಲ್ಲದವನ ಹಕ್ಕನ್ನು ನಿರಾಕರಿಸುವುದಕ್ಕೆ ಕಾರಣವಾಗಲಾರದು.

ಒಟ್ಟಾರೆ ಜನಸಮುದಾಯದಲ್ಲಿ ನಿರೀಶ್ವರವಾದಿಗಳದು ನಗಣ್ಯ ಭಾಗ. ಹಾಗಂತ ಅವರ ಸಾಂವಿಧಾನಿಕ ಹಕ್ಕುಗಳಿಗಿರುವ ಮಹತ್ವಕ್ಕೆ ತಡೆಗೋಡೆ ಅಥವಾ ನಿರ್ಬಂಧವೇನೂ ಒದಗಿಲ್ಲ. ಕೆ.ಎಸ್. ಪುಟ್ಟಸ್ವಾಮಿ ಪ್ರಕರಣದಲ್ಲಿ, ತೊಂದರೆಗೆ/ಪರಿಣಾಮಕ್ಕೆ ಒಳಗಾದ ಜನಸಮುದಾಯದ ಪ್ರಮಾಣವು ಸಮಾಜದಲ್ಲಿ ಸಣ್ಣದೇ ಆಗಿದ್ದರೂ, ಅದಕ್ಕೆ ಮೀಸಲಾದ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗದು ಎಂದು ಸವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ಕೂಡ, ಸಾಂವಿಧಾನಿಕ ಪೀಠದ ಇತ್ತೀಚಿನ ತೀರ್ವನವು ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದೆ; ಸಲಿಂಗಿ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ಅದು ಮಾನ್ಯಮಾಡಿದೆ ಮತ್ತು ಸಂರಕ್ಷಿಸಿದೆ ಎಂಬುದಿಲ್ಲಿ ಉಲ್ಲೇಖನೀಯ.

ಈ ಎಲ್ಲ ನಿದರ್ಶನಗಳನ್ನು ಅವಲೋಕಿಸಿದಾಗ, ಮತಧರ್ಮಶಾಸ್ತ್ರಕ್ಕೆ ಸಂಬಂಧಿಸಿದಂತೆ ಗೊಂದಲಮಯ ವ್ಯವಸ್ಥೆಗೆ ಮಡಿಲಾಗಿರುವ ಭಾರತದಲ್ಲಿ, ನಿರೀಶ್ವರವಾದ ಅಥವಾ ನಾಸ್ತಿಕತೆ ಎಂಬುದು ಜಾತ್ಯತೀತತೆಯ ಒಂದು ಪ್ರಮುಖ ಮುಖವಾಗಿದೆ ಎಂಬುದನ್ನು ಸವೋಚ್ಚ ನ್ಯಾಯಾಲಯವು ಪ್ರಾಯಶಃ ಅನುದ್ದಿಷ್ಟವಾಗಿ ಗುರುತಿಸಿದೆ ಎನ್ನಬಹುದೇನೋ?

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)