More

    ಸರಿ ಹಾದಿಯಲ್ಲೇ ಇರುವ ಪೌರತ್ವ ತಿದ್ದುಪಡಿ ಕಾನೂನು

    ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಸಂಸತ್ತಿನಲ್ಲಿ ಅಂಗೀಕಾರವಾದಾಗಿನಿಂದ ವಿವಾದದ ಅಲೆ ಎಬ್ಬಿಸಿದ್ದು ಇನ್ನೂ ಸರಿ ಹಾದಿಯಲ್ಲೇ ಇರುವ ಪೌರತ್ವ ತಿದ್ದುಪಡಿ ಕಾನೂನುಶಾಂತವಾಗಿಲ್ಲ. ಸಮಾಜದ ಬಹುತೇಕ ಎಲ್ಲ ವಿಭಾಗಗಳಿಂದ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ತಾರತಮ್ಯದ ನಿಯಮಗಳು, ಅದರಲ್ಲೂ ವಿಶೇಷವಾಗಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ವಿಧಿಗಳು ಈ ಕಾನೂನಿನಲ್ಲಿವೆ ಎನ್ನುವುದು ಪ್ರಮುಖ ಆರೋಪ. ಜನರು ಬಂದ ಮೂಲ ದೇಶ, ಅವರು ಭಾರತವನ್ನು ಪ್ರವೇಶಿಸಿದ ದಿನಾಂಕ ಮತ್ತು ಭಾರತದಲ್ಲಿ ವಾಸವಾಗಿರುವ ಪ್ರದೇಶಗಳ ಆಧಾರದಲ್ಲಿ ಭೇದಭಾವ ಎಸಗಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಒಟ್ಟು 59 ಅರ್ಜಿಗಳನ್ನು ಸಲ್ಲಿಸಲಾಗಿದೆ. ಅವುಗಳು ಇನ್ನೂ ಪರಿಶೀಲನೆಯಲ್ಲಿವೆ. ಏನಿದ್ದರೂ, ಸಿಎಎ-2019 ಕಾನೂನು ಯಾರದ್ದೇ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎನ್ನುವುದು ಈ ಎಲ್ಲ ವಿವಾದಗಳ ನಡುವೆ ಸ್ಪಷ್ಟವಾಗಿರುವ ಒಂದು ಅಂಶವಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಕಿರುಕುಳಕ್ಕೊಳಗಾಗಿ ವಲಸೆ ಬಂದ ಹಿಂದೂ, ಸಿಖ್, ಬೌದ್ಧ, ಪಾರ್ಸಿ, ಜೈನ ಮತ್ತು ಕ್ರೖೆಸ್ತ ಸಮುದಾಯದ ಜನರಿಗೆ ಪೌರತ್ವ ನೀಡುವುದು ಇದರ ಉದ್ದೇಶವಾಗಿದೆ. ಈ ಕಾನೂನು ಈಗಿರುವ ಭಾರತೀಯ ನಾಗರಿಕರಿಗೆ ಅನ್ವಯವಾಗುವುದಿಲ್ಲ. ತಿದ್ದುಪಡಿ ಕಾನೂನಿನಡಿ ಗುರುತಿಸಲಾಗುವ, ಧಾರ್ವಿುಕ ಕಿರುಕುಳಕ್ಕೆ ಒಳಗಾದ ಹಾಗೂ ಭಾರತೀಯ ಪೌರತ್ವ ಪಡೆಯುವ ಉದ್ದೇಶದಿಂದ ವಲಸೆ ಬಂದ ಜನರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಆದ್ದರಿಂದ ಚರ್ಚೆಯಲ್ಲಿರುವ ಈ ಕಾನೂನಿನ ಅಂಶಗಳನ್ನು ತಿಳಿದುಕೊಳ್ಳುವುದು ಅವಶ್ಯ.

    ಭಾರತದಲ್ಲಿ ಪೌರತ್ವಕ್ಕೆ ಸಂಬಂಧಿಸಿರುವ ಪ್ರಮುಖ ಕಾನೂನು 1955ರ ನಾಗರಿಕತ್ವ ಕಾನೂನು. ಜನ್ಮತಃ, ವಂಶ ಮೂಲವಾಗಿ, ನೋಂದಣಿ, ಸಹಜೀಕರಣ ಮತ್ತು ಪ್ರಾದೇಶಿಕ ವಿಲೀನೀಕರಣ- ಈ ಐದು ವಿಧಾನಗಳ ಮೂಲಕ ಭಾರತದಲ್ಲಿ ಪೌರತ್ವ ಹೊಂದಬಹುದು ಎಂದು 1955ರ ಈ ಕಾನೂನು ಹೇಳುತ್ತದೆ.

    ಅಕ್ರಮ ವಲಸಿಗರಿಗೆ ನಿಷಿದ್ಧ: ಅಕ್ರಮ ವಲಸಿಗರು ಭಾರತೀಯ ಪೌರತ್ವ ಹೊಂದುವುದನ್ನು ಅದು ನಿಷೇಧಿಸುತ್ತದೆ. ವೀಸಾ ಅಥವಾ ಪಾಸ್​ಪೋರ್ಟ್​ನಂಥ ಯಾವುದೇ ಕಾನೂನುಬದ್ಧ ಪ್ರಯಾಣ ದಾಖಲಾತಿ ಇಲ್ಲದೆ ಭಾರತ ಪ್ರವೇಶಿಸುವ ಅಥವಾ ಸಕ್ರಮ ದಾಖಲೆಗಳೊಂದಿಗೆ ಪ್ರವೇಶಿಸಿದರೂ ಅವುಗಳಲ್ಲಿ ನಮೂದಿಸುವ ಅವಧಿಗಿಂತ ಹೆಚ್ಚು ಅವಧಿ ಇಲ್ಲಿ ನೆಲೆಸುವವರನ್ನು ‘ಅಕ್ರಮ ವಲಸಿಗ’ ಎಂದು 1955ರ ಕಾನೂನು ವ್ಯಾಖ್ಯಾನಿಸಿದೆ. ಸಂವಿಧಾನದ 5ರಿಂದ 11ನೇ ವಿಧಿಗಳು ಕೂಡ ಪೌರತ್ವದ ಬಗ್ಗೆ ವಿವರಣೆ ನೀಡಿವೆ. 1946ರ ವಿದೇಶೀಯರ ಕಾನೂನು, ಪಾಸ್​ಪೋರ್ಟ್ (ಭಾರತದೊಳಗೆ ಪ್ರವೇಶ) ಕಾನೂನು-1920 ಮುಂತಾದ ಕಾಯಿದೆಗಳು ಕೂಡ ಅಕ್ರಮ ವಲಸಿಗರನ್ನು ಶಿಕ್ಷಿಸಲು ಹಾಗೂ ದೇಶದಿಂದ ಹೊರಗೆ ಕಳಿಸಲು ಅವಕಾಶ ಕಲ್ಪಿಸುತ್ತವೆ. ವಿದೇಶೀಯರು ಭಾರತ ಪ್ರವೇಶಿಸುವುದು, ಬಿಡುವುದು ಹಾಗೂ ಭಾರತದಲ್ಲಿ ನೆಲೆಸುವುದನ್ನು ನಿಯಂತ್ರಿಸುವ ಅಧಿಕಾರವನ್ನೂ ಕೇಂದ್ರ ಸರ್ಕಾರಕ್ಕೆ ಅವು ನೀಡಿವೆ. ಆದರೆ, 2015 ಮತ್ತು 2016ರಲ್ಲಿ ಕೇಂದ್ರ ಸರ್ಕಾರ ಎರಡು ಪ್ರಕಟಣೆ ಹೊರಡಿಸುವ ಮೂಲಕ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮುಂಚೆ ಭಾರತ ಪ್ರವೇಶಿಸಿದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೖೆಸ್ತರಿಗೆ ಈ ಕಾನೂನುಗಳ ವ್ಯಾಪ್ತಿಯಿಂದ ವಿನಾಯಿತಿ ನೀಡಿದೆ. ಮೇಲೆ ನಮೂದಿಸಿದ ಆರು ವಿಭಾಗಗಳ ಹಾಗೂ ಮೂರು ದೇಶಗಳ ಅಕ್ರಮ ವಲಸಿಗರನ್ನು ಭಾರತದ ಪೌರತ್ವಕ್ಕೆ ಅರ್ಹರನ್ನಾಗಿ ಮಾಡುವುದಕ್ಕೆ ಸಂಬಂಧಿಸಿ 2016ರಲ್ಲಿ 1955ರ ಪೌರತ್ವ ಕಾನೂನು ತಿದ್ದುಪಡಿ ಮಾಡಲು ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ಮಂಡಿಸಲಾಯಿತು.

    2019 ಜನವರಿ 8ರಂದು ಲೋಕಸಭೆ ಇದನ್ನು ಅಂಗೀಕರಿಸಿತು. ಆದರೆ 16ನೇ ಲೋಕಸಭೆ ವಿಸರ್ಜನೆಗೊಂಡಿದ್ದರಿಂದ ಅದು ಅಮಾನ್ಯ (ಲ್ಯಾಪ್ಸ್) ಆಯಿತು. ಅಂತಿಮವಾಗಿ ಸಿಎಬಿ 2019 ಡಿಸೆಂಬರ್ 9ರಂದು ಲೋಕಸಭೆಯಲ್ಲಿ ಮಂಡನೆಯಾಗಿ ಮರುದಿನ (ಡಿಸೆಂಬರ್ 10) ಭಾರಿ ಬಹುಮತದೊಂದಿಗೆ ಅಂಗೀಕಾರವಾಯಿತು. ರಾಜ್ಯಸಭೆ ಡಿಸೆಂಬರ್ 11ರಂದು ಅದನ್ನು ಪಾಸ್ ಮಾಡಿತು. ಈ ಮೂಲಕ ಕಾನೂನಿನ ರೂಪ ಪಡೆದ ಸಿಎಬಿ, ಮೇಲೆ ನಮೂದಿಸಿದ ದೇಶಗಳು ಹಾಗೂ ವಿಭಾಗಗಳ ಜನರನ್ನು ಭಾರತದ ಪೌರತ್ವಕ್ಕೆ ಅರ್ಹರನ್ನಾಗಿ ಮಾಡುತ್ತದೆ. ಈ ಕಾನೂನು ನಮೂದಿತ ಮೂರು ದೇಶಗಳ ಆರು ವಿಭಾಗಗಳ ಜನರನ್ನು ಅಕ್ರಮ ವಲಸಿಗರೆಂಬ ಪಟ್ಟಿಯಿಂದ ಹೊರತುಪಡಿಸಲು ಪೌರತ್ವ ಕಾನೂನಿನ 2 (1) (ಬಿ) ಸೆಕ್ಷನ್​ಗೆ ತಿದ್ದುಪಡಿ ತಂದಿದೆ. ಹಾಗೂ ಸಹಜೀಕರಣದ ಆಧಾರದಲ್ಲಿ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅವರನ್ನು ಅರ್ಹರನ್ನಾಗಿ ಮಾಡಿದೆ. ನಾಗರಿಕತ್ವ ಪಡೆದ ಈ ಅಕ್ರಮ ವಲಸಿಗರನ್ನು ಅವರು ಭಾರತ ಪ್ರವೇಶಿಸಿದ ದಿನಾಂಕದಿಂದ ಭಾರತೀಯ ಪೌರರು ಎಂದು ಪರಿಗಣಿಸಲಾಗುತ್ತದೆ. ಅವರು ಅಕ್ರಮ ವಲಸಿಗರು ಎಂಬ ನೆಲೆಯಲ್ಲಿ ಅವರ ವಿರುದ್ಧ ದಾಖಲಾದ ಎಲ್ಲ ಕಾನೂನು ಪ್ರಕ್ರಿಯೆಗಳು ರದ್ದಾಗುತ್ತವೆ.

    ಸಿಎಎ 2019ರ 3ನೇ ಸೆಕ್ಷನ್ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಬುಡಕಟ್ಟು ಪ್ರದೇಶಗಳ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಈ ನಾಲ್ಕು ರಾಜ್ಯಗಳ ಬುಡಕಟ್ಟು ಪ್ರದೇಶಗಳ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದನ್ನು ಅದು ನಿರ್ಬಂಧಿಸುತ್ತದೆ. ಅರುಣಾಚಲ ಪ್ರದೇಶ, ಮಿಜೋರಂ ಮತ್ತು ನಾಗಾಲ್ಯಾಂಡ್​ಗೆ ಭಾರತೀಯರು ಪ್ರವೇಶಿಸುವುದಕ್ಕೆ ಸಂಬಂಧಿಸಿದ ‘ಆಂತರಿಕ ರೇಖೆ’ಯ (ಇಂಟರ್ನಲ್ ಲೈನ್) ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ ಕೂಡ ಇದು ಅನ್ವಯವಾಗುವುದಿಲ್ಲ. ಯಾವುದೇ ವ್ಯಕ್ತಿ ನಿರ್ದಿಷ್ಟ ಅಂಶಗಳನ್ನು ಪೂರೈಸಿದರೆ ಅಂಥವರಿಗೆ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಈಗಿರುವ ಸಹಜೀಕರಣ ಪ್ರಕ್ರಿಯೆ ಕುರಿತ ಕಾನೂನಿಗೂ ಸಿಎಎ ತಿದ್ದುಪಡಿ ತಂದಿದೆ. ಈ ಮೇಲಿನ ಮೂರು ದೇಶಗಳ ಆರು ವಿಭಾಗಗಳು ಭಾರತದಲ್ಲಿ ನೆಲೆಸಿದ ಅವಧಿಯನ್ನು 11 ವರ್ಷದಿಂದ ಆರು ವರ್ಷಕ್ಕೆ ಇಳಿಸಲಾಗಿದೆ.

    ವ್ಯಾಪಕ ಟೀಕೆ: ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಹೊಸ ಕಾನೂನು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಜನರು ಬಂದ ಮೂಲ ದೇಶ, ಅವರು ಭಾರತವನ್ನು ಪ್ರವೇಶಿಸಿದ ದಿನಾಂಕ ಮತ್ತು ಅವರು ಭಾರತದಲ್ಲಿ ವಾಸವಾಗಿರುವ ಪ್ರದೇಶಗಳ ಆಧಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಹೀಗಾಗಿ ಇದು ಭಾರತೀಯ ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂಬುದು ಆರೋಪವಾಗಿದೆ. ಕಾನೂನಿನ ಮುಂದೆ ಎಲ್ಲರಿಗೂ ಸಮಾನ ಅವಕಾಶ ಮತ್ತು ಭಾರತೀಯ ಪ್ರದೇಶದೊಳಗೆ ಕಾನೂನಿನ ರಕ್ಷಣೆಯ ಸಮಾನ ಅವಕಾಶವನ್ನು 14ನೇ ವಿಧಿ ಖಾತರಿಪಡಿಸುತ್ತದೆ.

    ಅನಿರ್ಬಂಧಿತ ಹಕ್ಕಲ್ಲ: ಆದಾಗ್ಯೂ, ಇತರ ಎಲ್ಲ ಸಾಂವಿಧಾನಿಕ ಹಕ್ಕುಗಳಂತೆ ಸಮಾನತೆಯ ಹಕ್ಕು ಕೂಡ ಅನಿರ್ಬಂಧಿತವಲ್ಲ. ನಿರ್ಬಂಧ ಹೇರುವ, ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪನ್ನು ಪ್ರತ್ಯೇಕ ಹಾಗೂ ವಿಭಿನ್ನ ವರ್ಗವೆಂದು ಪರಿಗಣಿಸುವ ಅಧಿಕಾರ ಪ್ರಭುತ್ವಕೆ (ಸರ್ಕಾರಕ್ಕೆ) ಇರುತ್ತದೆ. ಆದರೆ ಈ ರೀತಿಯ ವರ್ಗೀಕರಣಕ್ಕೆ ಕೂಡ ಸೂಕ್ತ ಆಧಾರ ಹಾಗೂ ವೈಜ್ಞಾನಿಕ ನೆಲೆಗಟ್ಟಿರಬೇಕು. ಏಕಪಕ್ಷೀಯವಾಗಿರಬಾರದು. ಘೋಷಿತ ಉದ್ದೇಶ ಸಾಧನೆಗೆ ಸೂಕ್ತವಾದ ಕಾರಣವಿರಬೇಕು.

    ಅಫ್ಘಾನಿಸ್ತಾನದ ಅಲ್ಪಸಂಖ್ಯಾತರನ್ನು ತಿದ್ದುಪಡಿ ಕಾನೂನಿನ ವ್ಯಾಪ್ತಿಗೆ ತಂದಿರುವುದು ಮತ್ತೊಂದು ಪ್ರಮುಖ ಟೀಕೆಗೆ ಕಾರಣ. ಕಾನೂನಿನ ಉದ್ದೇಶ ಹಾಗೂ ಗುರಿಯ ಹೇಳಿಕೆಯಲ್ಲಿ ಅವಿಭಜಿತ ಭಾರತದ ಮಿಲಿಯಾಂತರ ಜನರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ನೆಲೆಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ಅಫ್ಘಾನಿಸ್ತಾನವನ್ನು ಸೇರಿಸಿರುವುದಕ್ಕೆ ಕಾರಣ ವಿವರಿಸಿಲ್ಲ ಎನ್ನುವುದು ಟೀಕಾಕಾರರ ವಾದವಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಧಾರ್ವಿುಕ ಕಾರಣಕ್ಕಾಗಿ ಕಿರುಕುಳಕ್ಕೊಳಗಾದ, ಒಂದು ರಾಷ್ಟ್ರೀಯ ಧರ್ಮವನ್ನು ಹೊಂದಿರುವ ಅಲ್ಪಸಂಖ್ಯಾತರನ್ನು ಗುರುತಿಸುವ ಸಿಎಎ, ಈ ದೇಶಗಳಿಂದ ಹಾಗೂ ಇತರ ನೆರೆಯ ರಾಷ್ಟ್ರಗಳಿಂದ ವಲಸೆ ಬರುವವರ ನಡುವೆ ಸ್ಪಷ್ಟವಾದ ವ್ಯತ್ಯಾಸ ಗುರುತಿಸಿದೆ. ಭಾರತವು ಗಡಿಯನ್ನು ಹಂಚಿಕೊಳ್ಳುವ ಇತರ ದೇಶಗಳ ಅಕ್ರಮ ವಲಸಿಗರನ್ನು ಹೊರತುಪಡಿಸಿರುವುದಕ್ಕೆ ಸಮರ್ಥನೆ ನೀಡಲು ತಿದ್ದುಪಡಿ ಕಾನೂನು ವಿಫಲವಾಗಿದೆ ಎನ್ನುವುದು ಕೂಡ ಟೀಕೆಯ ಅಂಶವಾಗಿದೆ. ಉದಾಹರಣೆಗೆ, ಶ್ರೀಲಂಕಾದ ಭಾಷಾ ಅಲ್ಪಸಂಖ್ಯಾಕ ತಮಿಳ್ ಈಲಂ, ಮ್ಯಾನ್ಮಾರ್​ನ ಧಾರ್ವಿುಕ ಅಲ್ಪಸಂಖ್ಯಾತರಾದ ರೋಹಿಂಗ್ಯಾ ಮುಸ್ಲಿಮರು ಇತ್ಯಾದಿ. ಪೌರತ್ವ ನೀಡಲು ಧಾರ್ವಿುಕ ನೆಲೆಯ ಕಿರುಕುಳವನ್ನು ಮಾತ್ರ ಆಧಾರವಾಗಿರಿಸಿರುವುದಕ್ಕೂ ತೀಕ್ಷ್ಣ ಟೀಕೆ ವ್ಯಕ್ತವಾಗಿದೆ. ಜನಾಂಗ, ರಾಷ್ಟ್ರೀಯತೆ, ರಾಜಕೀಯ ಅಭಿಪ್ರಾಯ, ಸಿದ್ಧಾಂತ ಮುಂತಾದ ಕಾರಣಗಳಿಗಾಗಿ ಕೂಡ ಕಿರುಕುಳಕ್ಕೊಳಗಾಗಿ ಅಕ್ರಮ ವಲಸಿಗರು ತಮ್ಮ ಮೂಲ ದೇಶಗಳಿಂದ ಓಡಿ ಬಂದಿರುತ್ತಾರೆ ಎಂಬುದನ್ನು ಪರಿಗಣಿಸದಿರುವುದು ಆಕ್ಷೇಪಕ್ಕೆ ಒಳಗಾಗಿದೆ. ಸಿಎಎಯ ಸಾಂವಿಧಾನಿಕ ಸಿಂಧುತ್ವವನ್ನು ಈಗಾಗಲೇ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ‘ಕಾರ್ಯಕಾರಣದ ಪರೀಕ್ಷೆಯ’ ಆಧಾರದಲ್ಲಿ ಸುಪ್ರೀಂ ಕೋರ್ಟ್ ಅದನ್ನು ಪರಿಶೀಲಿಸಲಿದೆ. ಆದರೆ ಅದುವರೆಗೆ ಸಿಎಎ 2019ರ ನಕಾರಾತ್ಮಕ ಅಥವಾ ಸಕಾರಾತ್ಮಕ ತಾರತಮ್ಯದ ಬಗ್ಗೆ ಚರ್ಚೆ ಖಂಡಿತವಾಗಿಯೂ ಮುಂದುವರಿಯಲಿದೆ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts