More

    ಬಳಲಿದ ಮನಸಿಗೆ ಬೇಕು ಶುದ್ಧಪ್ರೇಮ, ಅದುವೇ ಆನಂದ!

    ಪ್ರೇಮದ ಅರ್ಥ ಅರಿತು ಬಾಳಿದರೆ ಮನುಷ್ಯರೆಲ್ಲ ದೇವರಾಗಿ ಕಾಣುತ್ತಾರೆ!

    ಬಳಲಿದ ಮನಸಿಗೆ ಬೇಕು ಶುದ್ಧಪ್ರೇಮ, ಅದುವೇ ಆನಂದ!ಆದರೆ ಏಕೆ ಬದುಕಬೇಕು, ಹೇಗೆ ಬಾಳಬೇಕು ಎಂಬೆರಡು ಪ್ರಶ್ನೆಗಳು ತೀರಾ ಸಂದಿಗ್ಧವೂ ಹೌದು, ಅಷ್ಟೇ ಸರಳವೂ ಹೌದು. ಬೇರೆಯವರಿಗೆ ನೋವು ಕೊಡದೆ, ಬೇರೆಯವರ ಸಾಧನೆಗೆ ಅಡ್ಡಿಮಾಡದೆ ಬದುಕಿದರೂ ಅದು ದೊಡ್ಡ ಸಾಧನೆಯೇ! ಕರೊನಾ ಜಪದ ನಡುವೆ ತುಂಬ ಗಂಭೀರವಾದ ಸಂಗತಿಯನ್ನು ಈ ಸಮಾಜ ಎಷ್ಟು ಕೃತಕ ಮತ್ತು ಅಸಡ್ಡೆಯಿಂದ ನೋಡುತ್ತಿದೆಯೆಂದರೆ ಬಹುಶಃ ಮಾನವನು ಹೃದಯವನ್ನು ಎಲ್ಲೋ ತೆಗೆದಿಟ್ಟು ಬದುಕುತ್ತಿದ್ದಾನೇನೋ ಎಂದೆನಿಸುತ್ತದೆ. ಅದಕ್ಕೆಂದೆ ಘೋರ ನೈರಾಶ್ಯವೂ, ನೋವಿನ ತೀವ್ರತೆಯೂ ತಟ್ಟುತ್ತಿಲ್ಲ. ಸುತ್ತಮುತ್ತಲಿನವರಿಗೆ ಏನಾದರೇನು, ನಾನು ‘ಸುಖ’ವಾಗಿ ಬದುಕಬೇಕೆಂಬ ಭ್ರಮೆಯಲ್ಲಿ ವಾಸ್ತವ ಕಾಣುತ್ತಿಲ್ಲ. ಒಮ್ಮೆ ದಯವಿಟ್ಟು ಕಣ್ಣು ತೆರೆದು ನೋಡಿ! ಸಾಲುಸಾಲು ಆತ್ಮಹತ್ಯೆಗಳು! ನಮ್ಮ ಜತೆಗಿರುವವರ ಕಷ್ಟ, ನೋವಿಗೆ ಸಣ್ಣ ಸ್ಪಂದನೆ ನೀಡಲೂ ನಾವು ಸೋಲುತ್ತಿದ್ದೇವೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?

    ಯಶಸ್ಸಿನ ಸವಿಯುಂಡ, ಅವಮಾನದ ವಿಷವುಂಡ ಪ್ರತಿಭಾವಂತ ಯುವನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ಇದು ಸೆಲೆಬ್ರಿಟಿಗಳ ಕಥೆ ಎನ್ನಬೇಡಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನ ಚಿತೆ ತಾನೇ ಸಿದ್ಧಪಡಿಸಿಕೊಂಡು ಪ್ರಾಣಬಿಟ್ಟ ವೃದ್ಧ, ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ಪಡೆಯುತ್ತಿರುವಾಗಲೇ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವ ಪತ್ರಕರ್ತ, ಆರ್ಥಿಕ ಸಂಕಷ್ಟದಿಂದ ಬೇಸತ್ತು ನೇಣಿನ ಕುಣಿಕೆಗೆ ಕೊರಳೊಡ್ಡಿದ ಕನ್ನಡ ಕಿರುತೆರೆಯ ಸಹನಟ… ಹೀಗೆ ಹಳ್ಳಿಯಿಂದ ದಿಲ್ಲಿವರೆಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇವರೆಲ್ಲ ಜೀವನದ ಅನೇಕ ಹೋರಾಟಗಳಿಗೆ ಜಬರ್​ದಸ್ತ್ ಟಕ್ಕರ್ ಕೊಟ್ಟವರೇ! ಆದರೆ ಅದ್ಯಾವುದೋ ಒಂದು ಕ್ಷಣ ಅವರಿಗೆ ಬದುಕಿರುವುದಕ್ಕಿಂತ ಸಾಯುವುದೇ ‘ಸುಖ’ ಅಂತ ಅನ್ನಿಸಿದ್ದು ಯಾಕೆ? ಉತ್ತರಕ್ಕಾಗಿ ನಮ್ಮೆಲ್ಲರ ಆಂತರ್ಯದೊಂದಿಗೂ ಒಮ್ಮೆ ಕೂತು ಮಾತಾಡಬೇಕು.

    ಆತ್ಮಹತ್ಯೆಯಂಥ ಘಟನೆಗಳು ಆದಾಗ ‘ಅಯ್ಯೋ ತುಂಬ ಒಳ್ಳೆಯ ವ್ಯಕ್ತಿ, ಹೀಗೆ ಮಾಡಿಕೊಳ್ಳಬಾರದಿತ್ತು’ ಎಂಬ ಹುಸಿ ಅನುಕಂಪ ತೋರುವ ಜನ, ಬದುಕಿದ್ದಾಗ ‘ಈ ಕಷ್ಟವನ್ನು ಗೆದ್ದು ಬರ್ತೀರಿ’ ಎಂಬ ಸಣ್ಣ ಸಾಂತ್ವನವನ್ನೂ ಹೇಳುವುದಿಲ್ಲ. ಆತ್ಮಹತ್ಯೆ ಪ್ರಕರಣ ವರದಿಯಾದಾಗ ಸಾಮಾನ್ಯವಾಗಿ ಆ ವ್ಯಕ್ತಿಯನ್ನೋ, ಅಥವಾ ಆತ/ಆಕೆಯ ಸ್ಥಿತಿಯನ್ನೋ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರೇಮ, ಸಂವೇದನೆ, ಸಾಂತ್ವನ ಕೊಡಲಾಗದ ಸಮಾಜ ಯಾವುದೇ ವ್ಯಕ್ತಿಯ ನೆಮ್ಮದಿಯನ್ನು ಕಿತ್ತುಕೊಳ್ಳುವ ಅಧಿಕಾರ ಹೊಂದಿರುವುದಿಲ್ಲ. ನಮ್ಮ ಸುತ್ತಮುತ್ತಲೇ ದಿನವೂ ಕಾಣುವ ಕೆಲ ಮನಸ್ಥಿತಿಯ ವ್ಯಕ್ತಿಗಳು ಮತ್ತು ಅವರ ನಡವಳಿಕೆಗಳನ್ನು ಒಮ್ಮೆ ಗಮನಿಸಿ.

    ಉಡಾಫೆ ಮತ್ತು ಚುಚ್ಚುಮಾತು: ಕೆಲವರಿರುತ್ತಾರೆ. ಅವರು ಸ್ವಂತ ಜೀವನದಲ್ಲಿ ಎಳ್ಳಷ್ಟು ಸಾಧನೆ ಮಾಡಿರುವುದಿಲ್ಲ. ಆದರೇನಂತೆ, ಬೇರೆಯವರ ಬಗ್ಗೆ ಸದಾ ಉಡಾಫೆ, ಇಲ್ಲವೆ ಚುಚ್ಚುಮಾತು. ಜತೆಗಿರುವವರು, ಕುಟುಂಬ ಸದಸ್ಯರು, ಸ್ನೇಹಿತರು ಉತ್ಸಾಹದಿಂದ ಹೊಸದೇನೋ ಮಾಡಲು ಹೊರಟರೆ ಅವರ ಮನಸ್ಸಿಗೆ ಇರಿಯುವಂತೆ ಕೊಂಕು ಮಾತಾಡಿ, ನಿರಾಶಗೊಳಿಸುತ್ತಾರೆ. ಆಕಸ್ಮಾತ್, ಸಮೀಪದವರು ಸಾಧನೆ ಮಾಡಿದರೂ, ವಿಘ್ನಸಂತೋಷಿಗಳಾಗಿ-‘ಅದೇನು ಮಹಾ ದೊಡ್ಡ ಸಾಧನೆ’ ಎಂದು ಮನಸ್ಸಿನ ಕೊಳೆಯನ್ನು ಮಾತಿನಲ್ಲೇ ತೋರಿಸುತ್ತಾರೆ. ಒಂದು ವೇಳೆ ಇಂಥ ವ್ಯಕ್ತಿ ಅಪ್ಪನೋ, ಅಣ್ಣನೋ, ಬಾಸ್​ನೋ ಅಥವಾ ಪರಿಚಿತ ವಲಯದವರೋ ಆಗಿದ್ದರೆ…!

    ಬೆನ್ನಿಗೆ ಚೂರಿ ಹಾಕುವವರು: ಇನ್ನೊಂದು ವರ್ಗವಿದೆ. ನಾವು ಚೆನ್ನಾಗಿದ್ದಾಗ ನಮ್ಮ ಜತೆಗೆ ಇರುವಂತೆ ನಟಿಸಿ, ಹಿತೈಷಿಯಂತೆ ಮುಖವಾಡ ಹಾಕಿಕೊಂಡಿರುತ್ತಾರೆ. ನಮ್ಮಿಂದ ಭಿಡೆ ಇಲ್ಲದೆ ಸಹಾಯ ಪಡೆಯುತ್ತಾರೆ. ಆದರೆ ಯಾವಾಗ ಅಧಿಕಾರ/ಹಣ/ಪ್ರತಿಷ್ಠೆಯ ಪೈಕಿ ಯಾವುದೊಂದು ಕಡಿಮೆಯಾದಾಗ ನಿಮ್ಮ ಪರಿಚಯವೇ ಇಲ್ಲ ಎಂಬಂತೆ ನಡೆದು ಬಿಡುತ್ತಾರೆ. ಇಂಥವರ ಸ್ವಾರ್ಥಬುದ್ಧಿ ಇನ್ನೊಬ್ಬರ ನಂಬಿಕೆಯನ್ನು ಹಾಳುಮಾಡಿರುತ್ತದೆ.

    ತುಳಿಯಲೇಬೇಕು ಎಂಬ ಹಠ: ಸವಾಲು, ಕಷ್ಟ, ಸ್ಪರ್ಧೆ ಮತ್ತೊಂದು ಎಲ್ಲವನ್ನೂ ಎದುರಿಸಿ ಯಶಸ್ಸಿನ ಮೆಟ್ಟಿಲು ಏರಿದರೂ ನೆಮ್ಮದಿಯಿಂದ ಇರುವಂತಿಲ್ಲ. ಅಲ್ಲಿಂದ ಕೆಳಗೆ ಉರುಳಿಸಲೆಂದೆ, ಕೆಳಗೆ ಬಿದ್ದರೆ ತುಳಿಯಲೆಂದೇ ಒಂದಿಷ್ಟು ಜನ ಕಾದಿರುತ್ತಾರೆ. ಹಾಗಂತ ನೀವು ಅವರಿಗೆ ಯಾವುದೇ ಹಾನಿ ಮಾಡಿರುವುದಿಲ್ಲ. ಅವರ ಎದುರಿಗೇ ಬೆಳೆದು ನಿಂತದ್ದು ಸಹಿಸಲು ಆಗುವುದಿಲ್ಲ. ವ್ಯಕ್ತಿಯೊಬ್ಬನ ಸಾಧನೆಯಲ್ಲಿ ನಮ್ಮದು ಒಂದಿಷ್ಟು ಪಾತ್ರ ಇಲ್ಲ, ಅವನು/ಅವಳು ತನ್ನ ಶ್ರಮ, ಪ್ರತಿಭೆ, ಇಚ್ಛಾಶಕ್ತಿಗಳಿಂದ ಬದುಕು ಕಟ್ಟಿಕೊಂಡು ಯಾವುದೋ ಹಂತದಲ್ಲಿ ಕುಸಿದು ಬಿದ್ದಿದ್ದಾರೆ ಎಂದಾದಾಗ ಟೀಕಿಸುವ ಹಕ್ಕು ನಮಗಿರುವುದಿಲ್ಲ. ಆದರೆ ಕೆಲವರು ವ್ಯಕ್ತಿ ಗೆದ್ದಾಗ ಅಸೂಯೆಪಟ್ಟು, ಸೋತಾಗ ಮಾಡುವ ಅಪಮಾನವಿದೆಯಲ್ಲ ಅದು ತೀರಾ ಬಾಲಿಶ. ಇತರರ ಯಶಸ್ಸು/ಸಾಧನೆಯಿಂದ ತೀವ್ರ ಧೃತಿಗೆಟ್ಟವರಂತೆ ಆಡಿ ‘ಅವನಿಗೆ ಕಷ್ಟ ಕೊಡಬೇಕು’ ಎಂಬುದು ವಿಕೃತಿ. ಸುಶಾಂತ್ ಸಿಂಗ್ ಪ್ರಕರಣದಲ್ಲೂ ಹೀಗೆ. ಅವರ ಯಶಸ್ಸು, ಪ್ರತಿಭೆ ಸಹಿಸದವರು ತುಂಬ ಜನ ಇದ್ದರಂತೆ. ಆತ್ಮಹತ್ಯೆ ಮಾಡಿಕೊಳ್ಳಬಾರದು, ಧೈರ್ಯದಿಂದ ಜೀವನ ಎದುರಿಸಬೇಕು ಎಂಬುದೇನೋ ನಿಜ. ಆದರೆ, ಬರೀ ಉಪದೇಶಗಳು ನೋವನ್ನು ಕಡಿಮೆ ಮಾಡುವುದಿಲ್ಲ ಎಂಬ ವಾಸ್ತವವನ್ನೂ ಅರ್ಥ ಮಾಡಿಕೊಳ್ಳಬೇಕು.

    ಬೇರೆಯವರ ನೋವು ಕಡಿಮೆ ಮಾಡಲು ನಾವು ಇಷ್ಟಾದರೂ ಮಾಡಬಹುದಲ್ಲವೇ?

    • ಅನಗತ್ಯವಾಗಿ ಯಾರನ್ನೂ ಟೀಕಿಸಬೇಡಿ, ಅವಮಾನ ಮಾಡಬೇಡಿ. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. * ನೋವು ಕೊಡೋದು ದೊಡ್ಡ ಪಾಪ ಎಂದರಿತುಕೊಳ್ಳೋಣ. * ನಮ್ಮವರ ಅಥವಾ ಯಾರದೋ ಉತ್ಕರ್ಷಕ್ಕೆ ಸಹಕರಿಸಲಾಗದಿದ್ದರೂ ಸರಿ; ಅಡ್ಡಗಾಲು ಹಾಕುವುದು ಬೇಡ. * ಇತರರ ಯಶಸ್ಸನ್ನು ಸಂಭ್ರಮಿಸಲು ಆಗದಿದ್ದರೂ ಕರಬುವ ಕೆಟ್ಟತನವಾದರೂ ಬೇಡ. * ಸತ್ತ ಮೇಲೆ ಆ ವ್ಯಕ್ತಿಯನ್ನು ಹೊಗಳುವುದಕ್ಕಿಂತ ಬದುಕಿರುವಾಗಲೇ, ಅವರ ಸಮ್ಮುಖದಲ್ಲೇ ನಾಲ್ಕು ಒಳ್ಳೆಯ ಮಾತುಗಳನ್ನಾಡೋಣ.

    ***

    ಹೌದು, ಮನುಷ್ಯ ತನ್ನ ಜತೆಗಿರುವವರ ನೋವನ್ನು ಹಂಚಿಕೊಳ್ಳಲು, ಆಪ್ತವಾಗಿ ಒಂದಿಷ್ಟು ಮಾತನಾಡಲು ಸಾಧ್ಯವಾಗದೇ ತನ್ನದೇ ಆದ ಸ್ವಾರ್ಥಿ ದುನಿಯಾದಲ್ಲಿ ಮುಳುಗುತ್ತಿರುವುದಾದರೂ ಏಕೆ? ಈ ಪ್ರಶ್ನೆಗೆ ಸ್ವಲ್ಪ ಆಧ್ಯಾತ್ಮಿಕ ಆಯಾಮದಿಂದಲೂ ಉತ್ತರ ಶೋಧಿಸಬೇಕಾಗುತ್ತದೆ. ‘ಪ್ರೇಮ ಎಂಬುದು ಎಲ್ಲರಲ್ಲೂ ಸಹಜವಾಗಿ ಇರುವ ಗುಣ. ಅದು ಹರಿಯಲು, ವ್ಯಾಪಿಸಿಕೊಳ್ಳಲು ನೋಡುತ್ತದೆ. ವಾಸ್ತವವೆಂದರೆ, ಈ ಜಗತ್ತು ನಡೆಯುತ್ತಿರುವುದೇ ಶುದ್ಧ ಪ್ರೇಮದಿಂದ. ಆ ಪ್ರೇಮಭಾವವನ್ನೇ ಮರೆತರೆ ನೈರಾಶ್ಯ ಎದುರಾಗುತ್ತದೆ. ಮನುಷ್ಯನಿಗೆ ಪ್ರೇಮ ದೊರೆಯದಿದ್ದರೆ ಆತ ಉಗ್ರನಾಗುತ್ತಾನೆ, ವ್ಯಗ್ರನಾಗುತ್ತಾನೆ, ಕೊನೆಗೆ, ವ್ಯಾಘ್ರನಾಗುತ್ತಾನೆ. ಆದರೆ, ಸ್ವಲ್ಪ ಪ್ರೇಮ ತೋರಿಸಿಬಿಟ್ಟರೆ ಆನಂದದಿಂದ ಮಿನುಗುತ್ತಾನೆ’ ಎನ್ನುವ ಶ್ರೀರಾಮಕೃಷ್ಣ ಆಶ್ರಮದ ಹಿರಿಯ ಸ್ವಾಮೀಜಿ ಶ್ರೀ ಪುರುಷೋತ್ತಮಾನಂದಜೀ ತಮ್ಮ ಪ್ರವಚನಗಳ ಮೂಲಕ ಮಾನವ ಮನಸಿನ ಗೋಜಲುಗಳನ್ನು, ಆ ಸ್ಥಾನದಲ್ಲಿ ತುಂಬಬೇಕಾದ ಪ್ರೇಮವನ್ನು ತುಂಬ ಪ್ರಭಾವಿಯಾಗಿ ತೋರಿಸಿಕೊಟ್ಟಿದ್ದಾರೆ.

    ಮನುಷ್ಯ ಯಾಕೆ ಕೋಪಗೊಳ್ಳುತ್ತಾನೆ, ಜಗಳವಾಡುತ್ತಾನೆ ಎಂದರೆ ಪ್ರೇಮಭಾವದ ಕೊರತೆ. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಪ್ರೀತಿಸಿ, ಅವರಿಂದ ಪ್ರೀತಿಯನ್ನು ಮರುಅಪೇಕ್ಷಿಸುತ್ತಾನೆ. ಪ್ರೀತಿ ಕೊಡಬೇಕು, ಕೊಟ್ಟು ಪಡೆಯಬೇಕು ಇದು ಜಗದ ನಿಯಮ. ತಾಯಿ ಮಗುವಿಗೆ, ಗಂಡ ಹೆಂಡತಿಗೆ, ಮಕ್ಕಳು ಪಾಲಕರಿಗೆ ತೋರುವ ಪ್ರೀತಿ ಯಾವುದಕ್ಕಾಗಿ? ಮೇಲ್ನೋಟಕ್ಕೆ ಇದು, ತಾಯಿ ಮಗುವಿಗೆ ಕೊಡುವ, ಗಂಡ ಹೆಂಡತಿಗೆ ಕೊಡುವ ಪ್ರೇಮ ಎನಿಸುತ್ತದೆ. ಆದರೆ, ವಾಸ್ತವದಲ್ಲಿ ತಾಯಿ ಮಗುವಿಗಾಗಿ ಅಲ್ಲ ತನಗಾಗಿ ಅಂದರೆ ತನ್ನ ಆತ್ಮಕ್ಕಾಗಿ, ಅದರ ಸಂತೋಷಕ್ಕಾಗಿ ಪ್ರೀತಿ ನೀಡುತ್ತಾಳೆ. ಇದು ಮಾನುಷಪ್ರೀತಿಯಾದರೂ, ಇದನ್ನೇ ವಿಶೇಷ ಪ್ರೀತಿಯಾಗಿಸಿಕೊಂಡು ಸಾಗಿದರೆ ಅದನ್ನು ದೈವತ್ವದೆಡೆಗೆ ಹರಿಸಲು ಸಾಧ್ಯವಾಗುತ್ತದೆ ಎನ್ನುವ ಪುರುಷೋತ್ತಮಾನಂದಜೀ ಪ್ರೇಮದ ಸ್ವಭಾವವೇ ತ್ಯಾಗ. ಅದು ಸ್ವಾರ್ಥವನ್ನು ಮರೆಸುತ್ತದೆ. ಮತ್ತೊಬ್ಬರ ಬಗ್ಗೆ ಚಿಂತಿಸುವಂತೆ ಮಾಡುತ್ತದೆ ಎಂದಿದ್ದಾರೆ.

    ಸ್ವಾಮಿ ವಿವೇಕಾನಂದರು ಭಕ್ತಿಯೋಗದಲ್ಲಿ ‘ಎಲ್ಲಿ ತ್ಯಾಗ ಇರುತ್ತದೋ ಅಲ್ಲಿ ಪ್ರೇಮ, ಎಲ್ಲಿ ಮೋಹ ಇರುತ್ತದೋ ಅದುವೇ ಕಾಮ’ ಎಂದು ಸರಳವಾಗಿ ಹೇಳಿದ್ದಾರೆ. ಮನುಷ್ಯ ಪ್ರೇಮಿಸುವುದನ್ನು ಅಂದರೆ ತ್ಯಾಗದ ಗುಣವನ್ನು ಮರೆಯುತ್ತ ಸಾಗಿದಂತೆ ಹೆಚ್ಚೆಚ್ಚು ಸ್ವಾರ್ಥಿಯಾಗುತ್ತಿದ್ದಾನೆ. ಹಾಗಾದರೆ, ಬೇರೆಯವರನ್ನು ಪ್ರೇಮದಿಂದ ಕಾಣುವುದು ಹೇಗೆ? ಶಾರದಾ ಮಾತೆ ಹೇಳಿದ್ದಾರೆ-‘ಪ್ರತಿಯೊಬ್ಬ ಮನುಷ್ಯನನ್ನು ಮನುಷ್ಯನಾಗಿ ಅಲ್ಲ, ಭಗವದ್ ಅಂಶವಾಗಿ ಪ್ರೀತಿಸಬೇಕು. ಏಕೆಂದರೆ, ಪರಮಾತ್ಮನೇ ಸತ್ಯ, ಪರಮಾತ್ಮನೇ ನಿತ್ಯ’. ರಾಮಕೃಷ್ಣರು ಇದೇ ಸಂದೇಶ ನೀಡುತ್ತ-‘ಮನುಷ್ಯನಲ್ಲಿ ಯಾರಿದ್ದಾರೆ ಎಂದುಕೊಂಡಿದ್ದೀರಿ? ಬರೀ ಭೌತಿಕ ದೃಷ್ಟಿಯಿಂದ ನೋಡಿದರೆ ಮನುಷ್ಯ ಮನುಷ್ಯನಾಗಿ ಕಾಣುತ್ತಾನಷ್ಟೇ. ಜ್ಞಾನಬಲದಿಂದ ನೋಡಿದಾಗ ಭಗವದ್ ಅಂಶದ ಸಾಕ್ಷಾತ್ಕಾರವಾಗುತ್ತದೆ’ ಎಂದಿದ್ದಾರೆ.

    ಶುದ್ಧಪ್ರೇಮಕ್ಕೆ ಭಗವಂತನೂ ಸೋಲುತ್ತಾನೆ, ಧಾವಿಸಿ ಬರುತ್ತಾನೆ. ಭಕ್ತಿಪಂಥಕ್ಕೆ ಹೆಸರಾದ ಆಳ್ವರ ಪೈಕಿ ಒಬ್ಬರು ಮಳೆಯಿಂದ ರಕ್ಷಿಸಿಕೊಳ್ಳಲು ಒಂದು ಇಕ್ಕಟ್ಟಾದ ಓಣಿಯ ಸಂದಿಯಲ್ಲಿ ಆಶ್ರಯ ಪಡೆದರು. ಒಬ್ಬರಿಗೇ ನಿಲ್ಲಲು ಕಷ್ಟವಾಗುವ ಕಿರಿದಾದ ಜಾಗ. ಅಂಥದ್ದರಲ್ಲಿ ಇನ್ನೊಬ್ಬ ಆಳ್ವರು ಬಂದಾಗ ಮೊದಲಿನವರು ಪ್ರೇಮದಿಂದ ಬರಮಾಡಿಕೊಂಡು ನಿಂತುಕೊಳ್ಳಲು ಹೇಗೋ ಜಾಗ ಮಾಡಿಕೊಟ್ಟರು. ಮೂರನೆಯ ಆಳ್ವರು ಬಂದಾಗಲೂ, ‘ಜಾಗ ಇಲ್ಲ’ ಎಂದು ಹೇಳದೆ ತೀರಾ ಇಕ್ಕಟ್ಟಿನಲ್ಲೇ ನಿಂತುಕೊಂಡರು. ಮೂರೂ ಜನರು ನಿಂತುಕೊಂಡಿರುವಾಗ ಯಾರೋ ಒಬ್ಬರು ಆ ಕಿರಿದಾದ ಜಾಗದಲ್ಲಿ ಇವರ ಮಧ್ಯೆ ತಳ್ಳಿಕೊಂಡು ಜಾಗ ಮಾಡಿಕೊಳ್ಳುತ್ತಿರುವ ಅನುಭವವಾಗುತ್ತದೆ. ಯಾರು ಎಂದು ನೋಡಿದರೆ ಬರೀ ಕಣ್ಣಿಗೆ ಯಾರೂ ಕಾಣುವುದಿಲ್ಲ. ಮೊದಲನೆಯ ಆಳ್ವರು ದಿವ್ಯದೃಷ್ಟಿಯಿಂದ ನೋಡಿದರೆ ಸಾಕ್ಷಾತ್ ಶ್ರೀಹರಿಯೇ ಅಲ್ಲಿ ಧಾವಿಸಿ ಬಂದಿದ್ದಾನೆ! ಹೀಗೆ ನಮ್ಮ ಹೃದಯದಲ್ಲೂ ತುಂಬ ಜಾಗ ಇದೆ. ಎಲ್ಲರ ಕಷ್ಟ ಬಗೆಹರಿಸಲು ಸಾಧ್ಯವಾಗದಿದ್ದರೂ ತೀರಾ ನಮ್ಮವರ, ಆಪ್ತರ, ಪರಿಚಿತರ ಮಾತುಗಳನ್ನು ಕೇಳಿಸಿಕೊಳ್ಳೋಣ. ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯವಾಗದಿದ್ದರೂ ‘ನಾವು ನಿಮ್ಮ ಜತೆ ಇದ್ದೇವೆ, ಧೈರ್ಯಗುಂದಬೇಡಿ’ ಎಂಬ ಆತ್ಮಸ್ಥೈರ್ಯ ತುಂಬೋಣ. ಇಂಥ ಸರಳ, ಸಹಜ ಕಾಳಜಿಗೆ, ಮಿಡಿಯುವ ಅಂತಃಕರಣಕ್ಕೆ, ಶುದ್ಧ ಪ್ರೇಮಕ್ಕೆ ಭಗವಂತನೇ ಮೆಚ್ಚಿ, ಮನುಷ್ಯನ ಆತ್ಮಸ್ಥೈರ್ಯ ಹೆಚ್ಚಿಸುತ್ತಾನೆ. ಆಗ ನಿಜವಾದ ಆನಂದದ ದರ್ಶನವಾಗಿ, ಮನಸು, ಆತ್ಮ ನಿರಾಳವಾಗುತ್ತದೆ!

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts