More

    ಜಗದಗಲ ಅಂಕಣ: ವಿಶ್ವಸಂಸ್ಥೆ, ಅಮೆರಿಕ ಗುರುತಿಸಲು ಸೋತ ಕಟು ವಾಸ್ತವಗಳು

    ಇಂದಿರಾ ಗಾಂಧಿಯವರ ಎರಡನೆಯ ಅಧಿಕಾರಾವಧಿಯಲ್ಲಂತೂ ಸಿಂಧ್ ಮತ್ತು ಬಲೂಚಿಸ್ತಾನಗಳನ್ನು ಪಾಕಿಸ್ತಾನದಿಂದ ಪ್ರತ್ಯೇಕಿಸಿ ಭಾರತದೊಡನೆ ವಿಲೀನಗೊಳಿಸಬೇಕೆಂದು ಅಲ್ಲಿನ ಪ್ರತ್ಯೇಕತಾವಾದಿ ನಾಯಕರು ಹೇಳತೊಡಗಿದರು! ಇದನ್ನು ತಡೆಯಲೆಂದೇ ಪಾಕಿಸ್ತಾನಿ ನಾಯಕರು ಭಾರತ-ದ್ವೇಷವನ್ನು ಪಾಕಿಸ್ತಾನೀಯರ ಮನಸ್ಸಿನಲ್ಲಿ ಗಟ್ಟಿಯಾಗಿಸಲು ಹೆಣಗತೊಡಗಿದರು.

    ಜಗದಗಲ ಅಂಕಣ: ವಿಶ್ವಸಂಸ್ಥೆ, ಅಮೆರಿಕ ಗುರುತಿಸಲು ಸೋತ ಕಟು ವಾಸ್ತವಗಳುವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂತೋನಿಯೋ ಗುತೆರೆಸ್ ಈಗ ಪಾಕಿಸ್ತಾನದಲ್ಲಿದ್ದಾರೆ. ಆ ದೇಶಕ್ಕೆ ನಾಲ್ಕು ದಿನಗಳ ಭೇಟಿಯ ಮೊದಲ ದಿನವಾದ ಭಾನುವಾರದಂದೇ ಅವರು ಭಾರತಕ್ಕೆ ಸಮ್ಮತವೆನಿಸದ ವಿಷಯವೊಂದನ್ನು ಇಸ್ಲಾಮಾಬಾದ್​ನಲ್ಲಿ ಹೇಳಿದ್ದಾರೆ. ಪಾಕ್ ರಾಜಧಾನಿಯಲ್ಲಿ ಕಾಲಿಟ್ಟ ಕೆಲವೇ ತಾಸುಗಳಲ್ಲಿ ಗುತೆರೆಸ್ ಪತ್ರಿಕಾಗೋಷ್ಠಿಯೊಂದರಲ್ಲಿ ಕಾಶ್ಮೀರದ ಬಗ್ಗೆ ಪ್ರಸ್ತಾಪಿಸುತ್ತ, ‘ಭಾರತ ಮತ್ತು ಪಾಕಿಸ್ತಾನಗಳು ಸೇನಾ ಮತ್ತು ಮಾತಿನ ಚಕಮಕಿಯನ್ನು ಕುಗ್ಗಿಸಬೇಕಾಗಿರುವುದು ತುಂಬ ಮುಖ್ಯವಾದುದು ಮತ್ತು ಎರಡೂ ದೇಶಗಳು ಅತ್ಯುಚ್ಚ ಮಟ್ಟದ ಸಂಯಮವನ್ನು ಪಾಲಿಸಬೇಕು’ ಎಂದು ಹೇಳಿದ್ದಲ್ಲದೆ, ‘ನಾನು ಪ್ರಾರಂಭದಿಂದಲೂ ನನ್ನ ಮಧ್ಯಸ್ಥಿಕೆಯ ಪ್ರಸ್ತಾಪವನ್ನು ಮಾಡುತ್ತಲೇ ಬಂದಿದ್ದೇನೆ. ಮಧ್ಯಸ್ಥಿಕೆಗಾಗಿ ಎರಡೂ ದೇಶಗಳು ಸಮ್ಮತಿಸಿದರೆ ನಾನು ಸಹಾಯ ಮಾಡಲು ಸಿದ್ಧನಾಗಿದ್ದೇನೆ’ ಎಂದಿದ್ದಾರೆ.

    ಗುತೆರೆಸ್​ರ ಪ್ರಸ್ತಾಪಕ್ಕೆ ಭಾರತ ತಕ್ಷಣ ತನ್ನ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಮೂಲಕ ಖಡಕ್ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ರವೀಶ್ ಕುಮಾರ್ ಹೇಳಿದ್ದು ಇದು: ‘ಭಾರತದ ನಿಲುವು ಬದಲಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿತ್ತು, ಆಗಿಯೇ ಇದೆ ಮತ್ತು ಮುಂದೆಯೂ ಆಗಿಯೇ ಇರುತ್ತದೆ. ಪರಿಹಾರ ಹುಡುಕಬೇಕಾದ ವಿಷಯವೇನಾದರೂ ಇದ್ದರೆ ಅದು ಪಾಕಿಸ್ತಾನ ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳ ಕುರಿತಾದದ್ದು ಮಾತ್ರ. ಆ ನಂತರವೂ ಏನಾದರೂ ವಿಷಯ ಬಾಕಿ ಉಳಿದಿದ್ದರೆ ಅವುಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಲಾಗುವುದು. ಮೂರನೆಯ ಪಕ್ಷದ ಮಧ್ಯಸ್ಥಿಕೆಗೆ ಯಾವ ಅವಕಾಶವೂ ಇಲ್ಲ’.

    ಕಾಶ್ಮೀರದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಧ್ಯಸ್ತಿಕೆ ವಹಿಸಲು ತಾವು ಸಿದ್ಧ ಎಂದು ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಈಗ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಒಂದು ವಾರಕ್ಕೆ ಮೊದಲು ಗುತೆರೆಸ್ ಅಂತಹದೇ ಪ್ರಸ್ತಾಪವನ್ನು ಪಾಕ್ ನೆಲದಲ್ಲಿ ಮಾಡಿರುವುದು ಅಚ್ಚರಿಯನ್ನಷ್ಟೇ ಅಲ್ಲ, ಕುತೂಹಲಭರಿತ ಊಹಾಪೋಹಗಳಿಗೂ ಅವಕಾಶ ಮಾಡಿಕೊಡುತ್ತದೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ತನ್ನದೇ ನಿರ್ಣಯವನ್ನು ಮರೆತುಬಿಟ್ಟಿದೆಯೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಸಹಜವಾಗಿಯೇ ಏಳುತ್ತದೆ. ಜತೆಗೇ, ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಆಷಾಢಭೂತಿತನವನ್ನು, ಅಪ್ರಾಮಾಣಿಕತೆಯನ್ನು ಗುರುತಿಸುವಲ್ಲಿ ಅಂತಾರಾಷ್ಟ್ರೀಯ ರಂಗ ಇನ್ನೂ ಸೋಲುತ್ತಿದೆಯೇ ಎಂಬ ಪ್ರಶ್ನೆಯೂ ಕಾಡತೊಡಗುತ್ತದೆ. ಇದು ಮನದಟ್ಟಾಗಬೇಕಾದರೆ ಇತಿಹಾಸದತ್ತ ಒಂದು ಸೂಕ್ಷ್ಮ ನೋಟ ಅಗತ್ಯವಾಗುತ್ತದೆ.

    ಮೊದಲಿಗೆ, ವಿಶ್ವಸಂಸ್ಥೆಯೇ ತೆಗೆದುಕೊಂಡ ನಿರ್ಣಯವೊಂದು ಪಾಕಿಸ್ತಾನದ ಅಪ್ರಾಮಾಣಿಕತೆಯಿಂದ ನಿರರ್ಥಕವಾದದ್ದನ್ನು ನೋಡೋಣ. ಕೇವಲ ದ್ವಿಪಕ್ಷೀಯ ಪ್ರಶ್ನೆಯಾಗಷ್ಟೇ ಇದ್ದ ಕಾಶ್ಮೀರ ಸಮಸ್ಯೆಯನ್ನು 1948ರ ಜನವರಿ 1ರಂದು ವಿಶ್ವಸಂಸ್ಥೆಗೆ ಒಯ್ದು ಅಂತಾರಾಷ್ಟ್ರೀಕರಣಗೊಳಿಸಿದ್ದೇ ಭಾರತ. ಆಮೇಲೆ, ‘ಕಾಶ್ಮೀರ ಸಮಸ್ಯೆ ಉಲ್ಬಣಗೊಳ್ಳಲು ಹೊರಗಿನ ಶಕ್ತಿಗಳ ಹಸ್ತಕ್ಷೇಪವೇ ಕಾರಣ, ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳಿಗೇ ಬಿಟ್ಟುಬಿಡುವುದು ಸೂಕ್ತ’ ಎಂದು ‘ಯುನೈಟೆಡ್ ನೇಷನ್ಸ್ ಹೈಕಮೀಷನರ್ ಫಾರ್ ಇಂಡಿಯಾ ಆಂಡ್ ಪಾಕಿಸ್ತಾನ್’ (ಯುಎನ್​ಹೈಇಪಿ) ಫ್ರಾ್ಯಂಕ್ ಗ್ರಹಾಂ 1953ರಲ್ಲಿ ಸಲಹೆ ನೀಡಿದಾಗ ವಿಶ್ವಸಂಸ್ಥೆ ಅದನ್ನು ಮಾನ್ಯ ಮಾಡುವ ನಿರ್ಣಯವನ್ನು ಕೈಗೊಂಡಿತು ಮತ್ತು ಕಾಶ್ಮೀರದ ಬಗ್ಗೆ ರ್ಚಚಿಸುವುದನ್ನು ನಿಲ್ಲಿಸಿತು. ಆಗ ಭಾರತ ಮತ್ತು ಪಾಕಿಸ್ತಾನಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ಆರಂಭವಾದವು. ಅವು ಫಲಪ್ರದವಾಗುವ ಹಂತಕ್ಕೆ ಬಂದಾಗ ಪಾಕ್ ಪ್ರಧಾನಿ ಫಿರೋಜ್ ಖಾನ್

    ನೂನ್​ರ ಒಂದು ಮಾತು ಎಲ್ಲವನ್ನೂ ಹಾಳು ಮಾಡಿಬಿಟ್ಟಿತು. ‘ಅಮೆರಿಕದಿಂದ ಪಾಕಿಸ್ತಾನ ಅಗತ್ಯ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು ಸಶಕ್ತವಾಗಿದೆ ಮತ್ತು ಆ ಕಾರಣದಿಂದಲೇ ಕಾಶ್ಮೀರ ಸಮಸ್ಯೆಯನ್ನು ಯುದ್ಧದ ಮೂಲಕ ತನಗನುಕೂಲವಾಗುವಂತೆ ಪರಿಹರಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಂಡಿದೆ’ ಎನ್ನುವುದೇ ನೂನ್​ರ ಅನಗತ್ಯ ಮತ್ತು ನಕಾರಾತ್ಮಕ ಹೇಳಿಕೆಯಾಗಿತ್ತು. ಇದನ್ನು ಸಕಾರಣವಾಗಿಯೇ ಆಕ್ಷೇಪಿಸಿದ ಪ್ರಧಾನಿ ನೆಹರೂ ‘ಯುದ್ಧದ ಮಾತಾಡುವವರ ಜತೆ ಶಾಂತಿಯ ಮಾತುಕತೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿ ದ್ವಿಪಕ್ಷೀಯ ಮಾತುಕತೆಗಳನ್ನು ಅಂತ್ಯಗೊಳಿಸಿದರು. ಹೀಗೆ ತನ್ನದೇ ನಿರ್ಣಯವೊಂದನ್ನು ಪಾಕಿಸ್ತಾನ ಈ ಬಗೆಯಾಗಿ ನಿರರ್ಥಕಗೊಳಿಸಿದ್ದನ್ನು ವಿಶ್ವಸಂಸ್ಥೆ ಇನ್ನೂ ಅರ್ಥ ಮಾಡಿಕೊಂಡಿಲ್ಲದಿರುವುದರ ಬಗ್ಗೆ ವಿಷಾದವೆನಿಸುತ್ತದೆ.

    ಈಗ ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಆಷಾಢಭೂತಿತನವನ್ನು ಗುರುತಿಸುವಲ್ಲಿ ಅಂತಾರಾಷ್ಟ್ರೀಯ ರಂಗ ದಾರುಣವಾಗಿ ವಿಫಲವಾಗಿರುವ ದುರಂತವನ್ನು ನೋಡೋಣ. ಧಾರ್ವಿುಕ ಕಾರಣಗಳಿಂದಾಗಿ ವಿಶಾಲ ಲಡಾಖ್ ಮತ್ತು ಜನಭರಿತ ಜಮ್ಮು ಪ್ರದೇಶಗಳು ಎಂದೂ ತನ್ನವಾಗವೆಂದು ಪಾಕಿಸ್ತಾನಕ್ಕೆ ಲಾಗಾಯ್ತಿನಿಂದಲೂ ಗೊತ್ತೇ ಇತ್ತು. ಅದರ ಆಸೆಯಿದ್ದದ್ದು ಭೂಪ್ರದೇಶದ ದೃಷ್ಟಿಯಿಂದ ಪುಟ್ಟದಾದರೂ ತನ್ನ ಜನತೆಯಂತೇ ಸುನ್ನಿ ಮುಸ್ಲಿಮರಿಂದ ತುಂಬಿರುವ ಕಾಶ್ಮೀರ ಕಣಿವೆಯ ಬಗ್ಗೆ ಮಾತ್ರ. ಆದರೆ ಕಳೆದೆರಡು ದಶಕಗಳಲ್ಲಿ ಪಾಕಿಸ್ತಾನ ಆ ಆಸೆಯನ್ನೂ ತೊರೆದಿದೆ.

    ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್-ವಿರೋಧಿ ದಂಗೆಗಳು 1947ರಿಂದಲೂ ಆಗಾಗ ಜರುಗುತ್ತಲೇ ಇವೆ. ಹೀಗಾಗಿ ಅಲ್ಲಿ ಅಂದಿನಿಂದಲೂ ಅಘೊಷಿತ ಸೇನಾ ಶಾಸನ ಜಾರಿಯಲ್ಲಿದೆ. ಹೀಗೆ, ತನ್ನ ವಶದಲ್ಲಿರುವ ಕಾಶ್ಮೀರವೇ ಬಿಸಿತುಪ್ಪವಾಗಿರುವಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಭಾರತದ ಕಾಶ್ಮೀರವನ್ನು ತಾನು ಕೈವಶ ಮಾಡಿಕೊಂಡರೆ ಅದು ತನ್ನ ಹಿತಕ್ಕೇ ಮಾರಕವಾಗುತ್ತದೆಂದೂ, ಒಂದು ಬಗೆಯಲ್ಲಿ ಆತ್ಮಹತ್ಯೀಯ ಕೃತ್ಯವಾಗುತ್ತದೆಂದೂ ಪಾಕ್ ಆಳರಸರಿಗೆ ಎಂದೋ ಮನವರಿಕೆಯಾಗಿಹೋಗಿದೆ. ಮೊದಲಿಗೆ ಪಾಕಿಸ್ತಾನವೇ ಪ್ರೋತ್ಸಾಹಿಸಿ ಬೆಳೆಸಿದ, ಭಾರತದ ವಿರುದ್ಧ ಒಂದು ಅಸ್ತ್ರದಂತೆ ಬಳಸಿದ ‘ಕಾಶ್ಮೀರಿಯತ್’ ಎಂದು ಬಣ್ಣಿಸಲಾಗುವ ಉಗ್ರ ಕಾಶ್ಮೀರಿ ಅಸ್ಮಿತೆ ಈಗ ಪಾಕಿಸ್ತಾನಕ್ಕೇ ಮುಳುವಾಗಿದೆ. ‘ಕಾಶ್ಮೀರಿಯತ್’ ಅನ್ನು ಮೈಗೂಡಿಸಿಕೊಂಡಿರುವ ಕಣಿವೆಯ ಜನತೆ ಪಾಕ್ ಪಂಜಾಬಿಗಳ ದಬ್ಬಾಳಿಕೆಯನ್ನು ಎಂದೂ ಸಹಿಸಿಕೊಳ್ಳುವವರಲ್ಲ. ಜತೆಗೆ, ಕಣಿವೆಯ ಜನತೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆಯ ಬೆಂಬಲಕ್ಕೆ ನಿಂತು ಪಾಕಿಸ್ತಾನದ ವಿರುದ್ಧ ಅಶಾಂತಿಯೆಬ್ಬಿಸಬಹುದೆಂದೂ ಅಂದರೆ ಕಾಶ್ಮೀರದಲ್ಲಿ ಈಗ ಭಾರತ ಅನುಭವಿಸುತ್ತಿರುವ ದುಃಸ್ಥಿತಿಯನ್ನು ಅನುಭವಿಸುವುದು ಪಾಕಿಸ್ತಾನದ ಹಣೆಬರಹವಾಗುತ್ತದೆ ಎನ್ನುವುದು ಪಾಕ್ ರಾಜಕೀಯ ಹಾಗೂ ಸೇನಾ ವಲಯದಲ್ಲಿ ಈಗ ಎಲ್ಲರೂ ಅರಿತಿರುವ ಸತ್ಯ. ಅವರನ್ನು ಕಂಗೆಡಿಸಿರುವ ಇನ್ನೊಂದು ದುಃಸ್ವಪ್ನವೆಂದರೆ ಒಂದುವೇಳೆ ಕಾಶ್ಮೀರ ಕಣಿವೆ ಪಾಕಿಸ್ತಾನದ್ದಾಗಿ, ಅಲ್ಲಿ ಪಾಕ್-ವಿರೋಧಿ ದಂಗೆಗಳು ಅಥವಾ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭವಾದರೆ, ಮತ್ತು ಅದನ್ನು ಹತ್ತಿಕ್ಕಲು ಪಾಕಿಸ್ತಾನ ಪ್ರಯತ್ನಿಸಿದರೆ ಅಲ್ಲಿಗೆ ಈ ಏಳು ದಶಕಗಳಲ್ಲಿ ಅಂತಾರಾಷ್ಟ್ರೀಯ ರಂಗದಲ್ಲಿ ಪಾಕಿಸ್ತಾನ ರೂಪಿಸಿಕೊಂಡು ಬಂದ ಇಮೇಜ್ ಸಂಪೂರ್ಣವಾಗಿ ಹಾಳಾದಂತೆಯೇ ಸರಿ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವಯಾವ ಕಾರಣಗಳಿಗಾಗಿ ಭಾರತವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವಮಾನಿಸಲು, ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದೆಯೋ ಆ ಎಲ್ಲ ಅವಮಾನ, ಇಕ್ಕಟ್ಟುಗಳು ಪಾಕಿಸ್ತಾನದ್ದಾಗಿಬಿಡುತ್ತವೆ! ಈ ಎಲ್ಲ ಕಾರಣಗಳಿಂದಾಗಿ ಅಂಗೈಯಗಲದ ಕಾಶ್ಮೀರ ಕಣಿವೆಯನ್ನು ಭಾರತದಿಂದ ಕಿತ್ತು ತಮ್ಮ ದೇಶಕ್ಕೆ ಸೇರಿಸಿಕೊಂಡು ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆದುಕೊಳ್ಳಲು ತಲೆ ಸರಿಯಿರುವ ಯಾವ ಪಾಕ್ ನಾಯಕನೂ ತಯಾರಿಲ್ಲ. ಇದೂ ವಿಶ್ವಸಂಸ್ಥೆಗೆ ಇನ್ನೂ ಅರ್ಥವಾಗಿಲ್ಲ. ಅಥವಾ ಅರ್ಥ ಮಾಡಿಕೊಳ್ಳದಂತೆ ಅದರ ಮೇಲೇ ಏನಾದರೂ ಒತ್ತಡವಿದೆಯೇ?

    ಇರಲಿ, ಈಗ ಕಾಶ್ಮೀರದ ಬಗ್ಗೆ ಪಾಕಿಸ್ತಾನದ ನಿಜವಾದ ನಿಲುವೇನು ಎನ್ನುವುದನ್ನು ನೋಡೋಣ. ಪಾಕ್ ನಾಯಕರಿಗೆ ಆಗಿರುವ ಜ್ಞಾನೋದಯದ ಪ್ರಕಾರ ಕಾಶ್ಮೀರ ಕಣಿವೆಯನ್ನು ಭಾರತದಲ್ಲೇ ಉಳಿಸುವುದು ಪಾಕಿಸ್ತಾನಕ್ಕೆ ಅತ್ಯಂತ ಲಾಭಕರ. ಆ ಲಾಭಗಳನ್ನು ಹೀಗೆ ಪಟ್ಟಿ ಮಾಡಬಹುದು- 1. ಕಾಶ್ಮೀರ ಕಣಿವೆಯ ಜನರಿಗೆ ಹಣ, ಶಸ್ತ್ರಾಸ್ತ್ರಗಳನ್ನು ಒದಗಿಸುತ್ತ ಅವರು ಭಾರತದ ವಿರುದ್ಧ ಸದಾ ರಕ್ತಪಾತ ಎಸಗುತ್ತಿರುವಂತೆ ನೋಡಿಕೊಳ್ಳಬಹುದು ಮತ್ತು ಆ ಮೂಲಕ, ಕುಖ್ಯಾತ ಐಎಸ್​ಐನ ಮಾಜಿ ನಿರ್ದೇಶಕ ಹಮೀದ್ ಗುಲ್ ರೂಪಿಸಿದ ‘ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುತ್ತೇವೆ’ ಎಂಬ ದುಷ್ಟ ಯೋಜನೆ ಸದಾ ಜಾರಿಯಲ್ಲಿರುವಂತೆ ನೋಡಿಕೊಳ್ಳಬಹುದು. ಗುಲ್​ನ ಯೋಜನೆಯ ಪರಿಣಾಮವಾಗಿ ಕಾಶ್ಮೀರದಲ್ಲಿ ಪಾಕ್-ಪ್ರಾಯೋಜಿತ ರಕ್ತಪಾತ ಆರಂಭವಾಗಿ, ಕಾಶ್ಮೀರ ಕಣಿವೆ ಭಾರತದ ತಲೆಯಲ್ಲಿ ದೊಡ್ಡದೊಂದು ಗಾಯದಂತಾಯಿತು. ಕಾಶ್ಮೀರಿ ಕಣಿವೆಯನ್ನು ಪಾಕಿಸ್ತಾನವೇನಾದರೂ ಕೈವಶ ಮಾಡಿಕೊಂಡರೆ ಆಗ ಭಾರತದ ತಲೆಯಲ್ಲಿರುವ ಗಾಯ ಪಾಕಿಸ್ತಾನದ ಮೂತಿಗೆ ವರ್ಗಾಯಿಸಲ್ಪಡುತ್ತದೆ!

    2. ಎಲ್ಲಿಯವರೆಗೆ ಕಾಶ್ಮೀರ ಕಣಿವೆ ಭಾರತದ ಭಾಗವಾಗಿಯೇ ಇರುತ್ತದೆಯೋ ಅಲ್ಲಿಯವರೆಗೆ ಕಾಶ್ಮೀರಿಗಳ ‘ದುಃಸ್ಥಿತಿ’ಗೆ ಭಾರತವನ್ನು ದೂಷಿಸಿ ಅದನ್ನೊಂದು ಖಳನಾಯಕನಂತೆ ಅಂತಾರಾಷ್ಟ್ರೀಯ ರಂಗದಲ್ಲಿ ಅವಮಾನಿಸಬಹುದು, ಆ ನೆಪದಲ್ಲಿ ಮುಸ್ಲಿಂ ದೇಶಗಳಿಂದ ರಾಜತಾಂತ್ರಿಕ ಬೆಂಬಲ, ಆರ್ಥಿಕ ಸವಲತ್ತು ಪಡೆದುಕೊಳ್ಳಬಹುದು. ಆ ಮೂಲಕ, ಭಾರತವನ್ನು ಸದಾ ಚುಚ್ಚುತ್ತಲೇ ಇರಲು ಕಾಶ್ಮೀರ ಕಣಿವೆಯನ್ನೊಂದು ಭರ್ಜಿಯಂತೆ ಉಪಯೋಗಿಸಬಹುದು. ಇದು ಪಾಕ್ ನೇತಾರರ ರಹಸ್ಯ ಹಂಚಿಕೆ.

    3. ಆಂತರಿಕವಾಗಿ, ಭಾರತವು ಕಾಶ್ಮೀರಿಗಳ ರಕ್ತ ಹರಿಸುತ್ತಿದೆಯೆಂದು ಸದಾ ಪ್ರಚಾರ ಮಾಡುತ್ತ ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರದ ಜನತೆ ಭಾರತದತ್ತ ಪೂರ್ಣವಾಗಿ ವಾಲದಂತೆ ತಡೆಯಬಹುದು.

    4. ನಾಲ್ಕನೆಯ ಹಾಗೂ ಎಲ್ಲಕ್ಕಿಂತ ಮುಖ್ಯವಾದುದ್ದೆಂದರೆ, ಕಾಶ್ಮೀರ ವಿವಾದಿತವಾಗಿಯೇ ಇರುವುದು ಪಾಕಿಸ್ತಾನದ ಅಸ್ತಿತ್ವಕ್ಕೆ ಅತ್ಯಂತ ಅಗತ್ಯ. ಪಾಕಿಸ್ತಾನಕ್ಕೆ ತನ್ನದೇ ಆದ ಪ್ರತ್ಯೇಕ ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸವಿಲ್ಲ. ಅದರ ಇತಿಹಾಸವೇನಿದ್ದರೂ ಭಾರತೀಯ ಇತಿಹಾಸದೊಂದಿಗೆ ಬೇರ್ಪಡಿಸಲಾಗದಂತೆ ಸೇರಿಹೋಗಿರುವಂತಹದ್ದು. ಅಲ್ಲದೆ, ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ, ಭಾಷಿಕವಾಗಿ ಪಾಕಿಸ್ತಾನೀಯರು ಉತ್ತರ ಭಾರತೀಯರ ಪಡಿಯಚ್ಚು. ಊಟತಿಂಡಿ, ಉಡುಗೆತೊಡುಗೆ, ಹಾಡುಕುಣಿತ ಎಲ್ಲವೂ ಒಂದೇ. ಈ ಕಾರಣಗಳಿಂದಾಗಿ ದೇಶವಿಭಜನೆಯ ರಕ್ತಪಾತ ಮರೆಯಾಗತೊಡಗಿದಂತೇ ಸಾಂಸ್ಕೃತಿಕ ನೇತಾರರ ಪ್ರೇರಣೆಯಿಂದಾಗಿ ಸಾಮಾನ್ಯ ಪಾಕಿಸ್ತಾನೀಯರು ಭಾರತದತ್ತ ಮತ್ತೆ ಒಲವು ತೋರತೊಡಗಿದರು. ಅದು ಎಷ್ಟರಮಟ್ಟಿಗೆ ಹೋಯಿತೆಂದರೆ ಉಪಖಂಡವನ್ನು ಮತ್ತೆ ಒಗ್ಗೂಡಿಸಬೇಕೆಂಬ ಮಾತುಗಳು ಪಾಕಿಸ್ತಾನದಲ್ಲಿ ಆಗಾಗ ಕೇಳಿಬರತೊಡಗಿದವು! ಇಂದಿರಾ ಗಾಂಧಿಯವರ ಎರಡನೆಯ ಅಧಿಕಾರಾವಧಿಯಲ್ಲಂತೂ ಸಿಂಧ್ ಮತ್ತು ಬಲೂಚಿಸ್ತಾನಗಳನ್ನು ಪಾಕಿಸ್ತಾನದಿಂದ ಪ್ರತ್ಯೇಕಿಸಿ ಭಾರತದೊಡನೆ ವಿಲೀನಗೊಳಿಸಬೇಕೆಂದು ಅಲ್ಲಿನ ಪ್ರತ್ಯೇಕತಾವಾದಿ ನಾಯಕರು ಹೇಳತೊಡಗಿದರು! ಇಂತಹದೊಂದು ಭಯಾನಕ ಭವಿಷ್ಯವನ್ನು ತಡೆಯಲೆಂದೇ ಪಾಕಿಸ್ತಾನಿ ನಾಯಕರು ಭಾರತ-ದ್ವೇಷವನ್ನು ಪಾಕಿಸ್ತಾನೀಯರ ಮನಸ್ಸಿನಲ್ಲಿ ಗಟ್ಟಿಯಾಗಿಸಲು ಹೆಣಗತೊಡಗಿದರು. ಅದಕ್ಕಾಗಿ ಅವರಿಗೆ ಸಿಕ್ಕಿದ್ದು ಕಾಶ್ಮೀರ ಎಂಬ ರೆಡಿಮೇಡ್ ನೆಪ. ಇಷ್ಟೆಲ್ಲ ಕಾರಣಗಳಿಂದಾಗಿ ಕಾಶ್ಮೀರ ಕಣಿವೆ ಭಾರತದ ವಶದಲ್ಲೇ ಇರುವುದು ಪಾಕಿಸ್ತಾನಕ್ಕೆ ಅತ್ಯಂತ ಅನುಕೂಲಕರ.

    ಅಂತಾರಾಷ್ಟ್ರೀಯ ರಂಗ ಗುರುತಿಸಲು ವಿಫಲವಾಗಿರುವ ಇನ್ನೊಂದು ಸಂಗತಿಯೂ ಇದೆ. ಕಾಶ್ಮೀರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮುಂದಾದ ಪಾಕ್ ನೇತಾರರು ಅಧಿಕಾರ ಕಳೆದುಕೊಂಡಿದ್ದಾರೆ ಅಥವಾ ಜೀವಕ್ಕೇ ಎರವಾಗಿದ್ದಾರೆ. 1956-57ರಲ್ಲಿ ನಿಯಂತ್ರಣ ರೇಖೆಗೆ ಅಲ್ಪಸ್ವಲ್ಪ ಬದಲಾವಣೆ ಮಾಡಿ ಅದನ್ನು ಅಂತಾರಾಷ್ಟ್ರೀಯ ಗಡಿರೇಖೆಯನ್ನಾಗಿಸಿ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಯೋಜಿಸಿದ ಅಧ್ಯಕ್ಷ ಇಸ್ಕಂದರ್ ಮಿರ್ಜಾರನ್ನು ಸೇನಾ ಕ್ರಾಂತಿಯಲ್ಲಿ ಉಚ್ಚಾಟಿಸಿ ಲಂಡನ್​ಗೆ ಗಡಿಪಾರು ಮಾಡಲಾಯಿತು. 1988ರಲ್ಲಿ ಅಂತಹದೇ ಪ್ರಯತ್ನ ಮಾಡಿದ ಜಿಯಾ-ಉಲ್-ಹಖ್​ರನ್ನು ಒಂದು ವ್ಯವಸ್ಥಿತವಾಗಿ ಆಯೋಜಿಸಿದ ‘ವಿಮಾನಾಪಘಾತ’ದ ಮೂಲಕ ಕೊಲ್ಲಲಾಯಿತು. ಮತ್ತೆ ಅಂತಹದೇ ಪ್ರಯತ್ನವನ್ನು 2006ರಲ್ಲಿ ಮಾಡಹೊರಟ ಪರ್ವೆಜ್ ಮುಷರ್ರಫ್​ರಿಗೆ ಇನ್ನಿಲ್ಲದ ಕಾಟ ಕೊಟ್ಟು ಅತ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲಾಯಿತು. ಅಂದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುವುದು ಪಾಕಿಸ್ತಾನದಲ್ಲೇ ‘ಯಾರಿಗೋ’ ಬೇಕಾಗಿಲ್ಲ!

    ವಾಸ್ತವಗಳು ಹೀಗಿರುವಾಗ ಯಾರ ಮಧ್ಯಸ್ಥಿಕೆಯಿಂದ ಏನು ಉಪಯೋಗ? ಇದನ್ನು ವಿಶ್ವಸಂಸ್ಥೆಯಾಗಲೀ, ಅಮೆರಿಕ ಆಗಲೀ ಇನ್ನೂ ಅರಿಯದಿರಲು ಇರುವ ಕಾರಣಗಳಾದರೂ ಏನು?

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts