More

    ಆಂತರಿಕ, ಬಾಹ್ಯ ಇಕ್ಕಟ್ಟಿನ ಸುಳಿಯಲ್ಲಿ ಚೀನಾ

    1962ರ ಯುದ್ಧದಲ್ಲಿ ಪೂರ್ವ ವಲಯದ ಅರುಣಾಚಲ ಪ್ರದೇಶಲ್ಲಿ ಚೀನೀಯರು ಬಹುದೂರ ಒಳನುಗ್ಗಿ ಬಂದರೂ ಹಿಮಾಲಯದ ದಕ್ಷಿಣದ ಯಾವುದೇ ಪ್ರದೇಶವನ್ನು ಚಳಿಗಾಲದಲ್ಲಿ ತಮ್ಮ ಕೈಯಲ್ಲಿಟ್ಟುಕೊಳ್ಳುವುದು ಸಾಧ್ಯವಾಗಲಾರದು ಎಂದರಿವಾದ್ದರಿಂದ ಎಲ್ಲ ಆಕ್ರಮಿತ ಪ್ರದೇಶಗಳನ್ನೂ ತೊರೆದು ಓಡಿಹೋದರು.

    ಆಂತರಿಕ, ಬಾಹ್ಯ ಇಕ್ಕಟ್ಟಿನ ಸುಳಿಯಲ್ಲಿ ಚೀನಾಜೂನ್ 15ರ ಘರ್ಷಣೆ ಮತ್ತು ಅದರಿಂದಾಗಿ ಎರಡೂ ಕಡೆ ಘಟಿಸಿದ ಪ್ರಾಣಹಾನಿ ಯಿಂದಾಗಿ ಉಂಟಾದ ವಿಷಮ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಭಾರತೀಯ ಮತ್ತು ಚೀನೀ ಸೇನೆಗಳ ನಡುವೆ ಜೂನ್ 22ರಂದು ಲೆಫ್ಟಿನೆಂಟ್ ಜನರಲ್ ಮಟ್ಟದ ದೀರ್ಘ ಮಾತುಕತೆಗಳು ನಡೆದು, ಹತೋಟಿ ರೇಖೆಯಲ್ಲಿ ಮುಖ್ಯವಾಗಿ ಗಲ್ವಾನ್ ಕಣಿವೆಯಲ್ಲಿ ಶಾಂತಿ ಕಾಪಾಡಲು ಎರಡೂ ಪಕ್ಷಗಳು ಒಮ್ಮತಕ್ಕೆ ಬಂದವು. ಜೂನ್ 6ರ ಒಪ್ಪಂದವನ್ನು ಚೀನಾ ಉಲ್ಲಂಘಿಸಿ ಘರ್ಷಣೆಗಳಿಗೆ ಕಾರಣವಾಗಿದ್ದರ ಹಿನ್ನೆಲೆಯಲ್ಲಿ ಈ ಹೊಸ ಒಪ್ಪಂದದ ಬಾಳಿಕೆಯ ಬಗ್ಗೆ ಪ್ರಶ್ನೆಗಳೆದ್ದರೂ ಈ ಬಾರಿ ಚೀನಾದಿಂದ ಹಿಂದಿನ ವಿಶ್ವಾಸಘಾತಕತನ ಮರುಕಳಿಸಲಾರದು ಎಂಬ ಆಶಾಭಾವನೆಯನ್ನೂ ಮೂಡಿಸುವ ಕಾರಣಗಳು ನಮ್ಮೆದುರಿಗಿದ್ದವು.

    ವಸ್ತುಸ್ಥಿತಿಯನ್ನು ಹೊರಜಗತ್ತಿನಿಂದ ಮುಚ್ಚಿಡಲು ಚೀನಾ ಅದೆಷ್ಟೇ ಹೆಣಗಿದರೂ ಜೂನ್ ತಿಂಗಳಲ್ಲಿ ಆ ದೇಶದ ಆಂತರಿಕ ಸಂಕಷ್ಟಗಳು ವೃದ್ಧಿಯಾದ ಬಗೆಗಿನ ವಿವರಗಳು ನಮಗೆ ತಿಳಿಯತ್ತಲೇ ಇವೆ. ಜೂನ್ 11ರಂದು ಆರಂಭವಾದ ವಾರ್ಷಿಕ ಮಳೆ ದೇಶದ ಮೂರನೆಯ ಎರಡು ಭಾಗಗಳಲ್ಲಿ ಅಗಾಧ ಪ್ರಮಾಣದ ಪ್ರವಾಹ ಮತ್ತು ಭೂಕುಸಿತಗಳನ್ನು ಉಂಟುಮಾಡುತ್ತಿದೆ. ಈ ಬಗೆಯ ಮಳೆಯನ್ನು ಚೀನಾ 1940ರ ನಂತರ ಕಂಡಿರಲಿಲ್ಲವಂತೆ. ಈ ಪ್ರಾಕೃತಿಕ ವಿಕೋಪ ಬೆಳೆಗಳಿಗೆ ವ್ಯಾಪಕ ಹಾನಿ ಮಾಡುವುದರ ಜತೆಗೆ ಸಾರಿಗೆಸಂಪರ್ಕ ವ್ಯವಸ್ಥೆಯನ್ನೂ ಹಾಳುಗೆಡವಿದೆ. ಇದು ಈಗಾಗಲೇ ಕೆಟ್ಟಿರುವ ಆಹಾರಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಬಿಗಡಾಯಿಸಿದೆ.

    ಇದರ ಜತೆಗೆ ಕರೊನಾ ಸೋಂಕು ದೇಶದೆಲ್ಲೆಡೆ ಮತ್ತಷ್ಟು ಉಗ್ರವಾಗಿದೆ. ರಾಜಧಾನಿ ಬೀಜಿಂಗ್ ದೊಡ್ಡ ವೂಹಾನ್ ಆಗಿ ಬದಲಾಗಿಹೋಗಿದೆ. ದಿನೇದಿನೇ ಅಂಕೆಮೀರಿ ಹೆಚ್ಚುತ್ತಲೇ ಇರುವ ಸೋಂಕಿತರನ್ನು ಉಪಚರಿಸಲು ರಾಜಧಾನಿಯ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ನಗರದ ಶೇಕಡ 70 ಜನತೆಗೆ ಆಹಾರಪದಾರ್ಥಗಳು ಮತ್ತಿತರ ಅಗತ್ಯವಸ್ತುಗಳನ್ನು ಪೂರೈಸುವ ಮಾರುಕಟ್ಟೆಗಳು ಸೋಂಕಿನ ಪರಿಣಾಮವಾಗಿ ಜೂನ್ ಆರಂಭದಲ್ಲಿ ಮುಚ್ಚಲ್ಪಟ್ಟ ಕಾರಣ ಸಾಮಾನ್ಯ ಜನತೆ ಅತೀವ ಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಲಾಕ್​ಡೌನ್ ಜಾರಿಗೊಳಿಸುವ ಅತ್ಯುತ್ಸಾಹದಲ್ಲಿಯೋ ಅಥವಾ ಸರ್ಕಾರಿ ಆದೇಶದ ಪಾಲನೆಯ ಕ್ರಮವಾಗಿಯೋ ಪೊಲೀಸರು ನಗರದ ಕೆಲವೆಡೆ ಜನರನ್ನು ಮನೆಗಳೊಳಗೆ ಕೂಡಿಹಾಕಿ ಹೊರಗಿನಿಂದ ಬೀಗ ಹಾಕಿದ್ದರ ಹಾಗೂ ಅಪಾರ್ಟ್​ವೆುಂಟ್ ಕಟ್ಟಡಗಳ ಪ್ರವೇಶದ್ವಾರ ಗಳನ್ನು ಕಬ್ಬಿಣದ ಪಟ್ಟಿಗಳಿಂದ ಬಂದ್ ಮಾಡಿದ ಕಾರಣ ಜನರ ಸಂಕಷ್ಟಗಳು ಇನ್ನಷ್ಟು ಹೆಚ್ಚಿವೆ. ಈ ನಡುವೆ ಕಮ್ಯೂನಿಸ್ಟ್ ಪಾರ್ಟಿಯ ನೇತಾರರಿಗಷ್ಟೇ ಮೀಸಲಾದ ಮಿಲಿಟರಿ ಹಾಸ್ಪಿಟಲ್ 301ಗೆ ಕರೊನಾ ಸೋಂಕು ಹರಡಿದ ಸುದ್ದಿ ಬಂದಿದೆ.

    ಎಲ್ಲಕ್ಕಿಂತ ಹೆಚ್ಚು ಗಾಬರಿಗೊಳಿಸುವ ವಿಷಯವೆಂದರೆ ದೇಶದ ಆಡಳಿತವನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಂಡಿರುವ ಅಧ್ಯಕ್ಷ ಷಿ ಜಿನ್​ಪಿಂಗ್ ಮತ್ತು ಕಮ್ಯೂನಿಸ್ಟ್ ಪಾರ್ಟಿ ಪಾಲಿಟ್​ಬ್ಯೂರೋ ಸ್ಟಾ್ಯಂಡಿಂಗ್ ಕಮಿಟಿಯ ಏಳು ಜನ ಸದಸ್ಯರು ಎಲ್ಲಿದ್ದಾರೆಂಬುದು ಗೊತ್ತಿಲ್ಲ. ಅಧ್ಯಕ್ಷ ಷಿ ಅವರನ್ನೇ ತೆಗದುಕೊಳ್ಳುವುದಾದರೆ ಅವರು ರಾಜಧಾನಿಯಲ್ಲಿ ಕೊನೆಯ ಬಾರಿ ಕಾಣಸಿಕೊಂಡದ್ದು ಜೂನ್ 2ರಂದು, ವಿದ್ವಾಂಸರು ಮತ್ತು ಸಂಶೋಧಕರ ಸಿಂಪೋಸಿಯಂ ಒಂದರಲ್ಲಿ ಮಾತಾಡಿದಾಗ. ಆನಂತರ ಅವರು ದೇಶದಲ್ಲಿ ಸಾರ್ವಜನಿಕವಾಗಿ ಕೊನೆಯ ಬಾರಿ ಕಾಣಿಸಿಕೊಂಡದ್ದು ಜೂನ್ 8-10ರ ಅವಧಿಯಲ್ಲಿ, ಈಶಾನ್ಯದ ನಿಂಗ್​ಷಿಯಾದಲ್ಲಿ ವ್ಯವಸಾಯ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಕ್ರಮವೊಂದನ್ನು ಉದ್ಘಾಟಿಸಿದಾಗ. ಅದಾದ ಮೇಲೆ ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಎರಡು ಬಾರಿ ಆನ್​ಲೈನ್​ನಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ. ಒಮ್ಮೆ ಜೂನ್ 17ರಂದು, ‘ಚೀನಾ-ಆಫ್ರಿಕಾ ಆಂಟಿ-ಎಪಿಡೆಮಿಕ್ ವಿಡಿಯೋ ಸಮ್ಮಿಟ್’ನಲ್ಲಿ ಮತ್ತು ಐದು ದಿನಗಳ ನಂತರ ಜೂನ್ 22ರಂದು ‘ಚೀನಾ-ಯುರೋಪ್ ವಿಡಿಯೋ ಸಮ್ಮಿಟ್’ನಲ್ಲಿ. ಈ ಆನ್​ಲೈನ್ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರೂ, ಯಾವ ಸ್ಥಳದಿಂದ ಎಂದು ಕಮ್ಯೂನಿಸ್ಟ್ ಪಾರ್ಟಿಯಾಗಲೀ, ಸರ್ಕಾರವಾಗಲೀ, ಮಾಧ್ಯಮಗಳಾಗಲೀ ಹೇಳಿಲ್ಲ. ಹೀಗೆ ಅಧ್ಯಕ್ಷರು ಎಲ್ಲಿದ್ದಾರೆ ಎಂದು ಹೇಳಲಾಗದ ಸ್ಥಿತಿಯಲ್ಲಿ ಚೀನಾ ಇದೆ ಅಂದರೆ ಒಂದೋ ಅವರು ಕರೊನಾ ಸೋಂಕಿಗೊಳಗಾಗಿ ರಾಜಧಾನಿಯ ಮಿಲಿಟರಿ ಹಾಸ್ಪಿಟಲ್ 301ನಲ್ಲಿ ಚಿಕಿತ್ಸೆ ಪಡೆಯುತ್ತಿರಬಹುದು ಅಥವಾ ಕರೊನಾ ಸೋಂಕು ಬೀಜಿಂಗ್ ನಗರವನ್ನು ತೆಕ್ಕೆಗೆ ತೆಗೆದುಕೊಂಡಿರುವುದರಿಂದ ಅವರು ರಾಜಧಾನಿಯನ್ನೇ ತೊರೆದು ಪಾಲಿಟ್​ಬ್ಯೂರೋ ಸಹಚರರೊಂದಿಗೆ ಬೇರೊಂದು ಅಜ್ಞಾತ ಸ್ಥಳದಲ್ಲಿ ಸುರಕ್ಷಿತವಾಗಿ ಇರಬಹುದು.

    ಇಂತಹ ಸ್ಥಿತಿಯಲ್ಲಿ ಭಾರತದೊಡನೆ ಯುದ್ಧಕ್ಕಿಳಿಯುವುದು ಉಚಿತವಲ್ಲ ಎಂದು ಚೀನೀ ನಾಯಕತ್ವ ತಿಳಿಯುತ್ತದೆ ಮತ್ತು ಜೂನ್ 22ರ ಒಪ್ಪಂದಕ್ಕೆ ಬದ್ಧವಾಗಿ ಲಡಾಖ್​ನ ಹತೋಟಿ ರೇಖೆಯಲ್ಲಿ ಶಾಂತಿ ಕಾಪಾಡಲು ಚೀನೀ ಸೇನೆ ಮನಸ್ಸು ಮಾಡುತ್ತದೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಮೂರೇ ದಿನಗಳಲ್ಲಿ ಈ ಎಲ್ಲ ನಿರೀಕ್ಷೆಗಳು ಹುಸಿಯಾದವು.

    ಗಲ್ವಾನ್ ಕಣಿವೆಯಲ್ಲಿನ ಪೆಟ್ರೋಲ್ ಪಾಯಿಂಟ್ (ಪಹರೆ ಬಿಂದು) 14ರಲ್ಲಿ ಯಾವ ಚೀನೀ ಶಿಬಿರವನ್ನು ಭಾರತೀಯ ಸೇನೆ ನಾಶಮಾಡಿ ನಂತರ ಚೀನೀ ಸೇನೆಯನ್ನು ಎದುರಿಸಿತ್ತೋ ಆ ಶಿಬಿರ ಜೂನ್ 25ರಂದು ಮತ್ತೆ ತಲೆಯೆತ್ತಿತು ಮತ್ತು ಅದನ್ನು ‘ರಕ್ಷಿಸಲು’ ಸುಮಾರು ಹತ್ತು ಸಾವಿರ ಚೀನೀ ಸೈನಿಕರು ಅಲ್ಲಿ ಕಾಣಿಸಿಕೊಂಡರು! 1962ರ ಯುದ್ಧದ ನಂತರ ಹತೋಟಿ ರೇಖೆಯಲ್ಲಿ ಇಷ್ಟು ಭಾರಿ ಪ್ರಮಾಣದ ಸೇನಾ ಜಮಾವಣೆಯನ್ನು ಚೀನೀಯರು ಮಾಡಿದ್ದು ಇದೇ ಮೊದಲು. ಇನ್ನೂ ಆತಂಕಕಾರಿ ವಿಷಯವೆಂದರೆ ಚೀನೀ ಸೇನೆ ಉತ್ತರದ ದೆಪ್​ಸಂಗ್ ಪ್ರದೇಶದಲ್ಲಿ ಹೊಸದಾಗಿ ಅತಿಕ್ರಮಣಕ್ಕೆ ಮುಂದಾಯಿತು. ಅಂದರೆ ಚೀನೀ ಸೇನೆ ಮೂರೇ ದಿನಗಳ ಹಿಂದಿನ ಒಪ್ಪಂದವನ್ನು ಗಾಳಿಗೆ ತೂರಿ ಭಾರಿ ಪ್ರಮಾಣದ ಸೇನಾ ಕಾರ್ಯಾಚರಣೆಗೆ ತಯಾರಾಗಿದೆ ಎನ್ನುವುದು ಸಿದ್ಧವಾಯಿತು. ಆಂತರಿಕ ಪ್ರಾಕೃತಿಕ ವಿಕೋಪ ಹಾಗೂ ಉಲ್ಪಣಗೊಂಡ ಮಹಾಮಾರಿ, ಪೂರ್ವ ತೀರದಲ್ಲಿ ಸಜ್ಜಾಗಿ ನಿಂತಿರುವ ಶತ್ರುಗಳ ಸೇನೆ ಚೀನೀಯರನ್ನು ಧೃತಿಗೆಡಿಸಿಯೇ ಇಲ್ಲ!

    ಚೀನಾದ ಈ ಧೂರ್ತ ಹಾಗೂ ಹೊರನೋಟಕ್ಕೆ ಹುಚ್ಚು ಉತ್ಸಾಹದಂತೆ ಕಾಣುವ ನಡೆಗಳನ್ನೊಮ್ಮೆ ಸೂಕ್ಷ್ಮವಾಗಿ ವಿಶ್ಲೇಷಿಸೋಣ.

    1962ರ ಯುದ್ಧದಲ್ಲಿ ಪೂರ್ವ ವಲಯದ ಅರುಣಾಚಲ ಪ್ರದೇಶಲ್ಲಿ ಚೀನೀಯರು ಬಹುದೂರ ಒಳನುಗ್ಗಿ ಬಂದರೂ ಹಿಮಾಲಯದ ದಕ್ಷಿಣದ ಯಾವುದೇ ಪ್ರದೇಶವನ್ನು ಚಳಿಗಾಲದಲ್ಲಿ ತಮ್ಮ ಕೈಯಲ್ಲಿಟ್ಟುಕೊಳ್ಳುವುದು ಸಾಧ್ಯವಾಗಲಾರದು ಎಂದರಿವಾದ್ದರಿಂದ ಎಲ್ಲ ಆಕ್ರಮಿತ ಪ್ರದೇಶಗಳನ್ನೂ ತೊರೆದು ಓಡಿಹೋದರು. ನಂತರವೂ ಅವರ ಆಟಗಳು ನಡೆಯದೇ ಹೋದದ್ದು ಪೂರ್ವ ವಲಯದಲ್ಲೇ. 1967ರಲ್ಲಿ ಸಿಕ್ಕಿಂ ಗಡಿಯಲ್ಲಿ ಅವರು ದುಸ್ಸಾಹಸ ಪ್ರದರ್ಶಿಸಹೊರಟಾಗ ಭಾರತೀಯ ಸೇನೆಯಿಂದ ಭಾರಿ ಹೊಡೆತ ತಿಂದದ್ದಲ್ಲದೆ ಒಂದಷ್ಟು ಪ್ರದೇಶವನ್ನೂ ಕಳೆದುಕೊಂಡರು. 1986-87ರ ಚಳಿಗಾಲದಲ್ಲಿ ಅರುಣಾಚಲ-ಟಿಬೆಟ್ ಗಡಿಯಲ್ಲಿ ಘಟಿಸಿದ ಘರ್ಷಣೆಗಳಲ್ಲಿ ಚೀನೀಯರು ನೆಲವನ್ನು ಕಳೆದುಕೊಳ್ಳದಿದ್ದರೂ ಸೈನಿಕರ ಸಾವುನೋವನ್ನಂತೂ ಭಾರತೀಯ ಸೇನೆಗಿಂತಲೂ ಹೆಚ್ಚಾಗಿ ಅನುಭವಿಸಬೇಕಾಯಿತು. ಹೀಗೆ ಪೂರ್ವ ವಲಯದಲ್ಲಿ ಮತ್ತೆಮತ್ತೆ ಹಿನ್ನಡೆ ಅನುಭವಿಸಿದರೆ ಅವರೆಲ್ಲ ಯೋಜನೆಗಳು ಯಶಸ್ವಿಯಾದದ್ದು ಪಶ್ಚಿಮ ವಲಯದಲ್ಲಿ. 1962ರ ಯದ್ಧದಲ್ಲಿ ಚೀನೀ ಸೇನೆ ಬೇಕಾಬಿಟ್ಟಿಯಾಗಿ ಮೇಲುಗೈ ಸಾಧಿಸಿಕೊಂಡು ತಮಗೆ ಬೇಕಾದ ಪ್ರದೇಶಗಳಲ್ಲವನ್ನೂ ನಿರಾಯಾಸವಾಗಿ ಆಕ್ರಮಿಸಿಕೊಂಡದ್ದು ಪಶ್ಚಿಮ ವಲಯದ ಲಡಾಖ್​ನಲ್ಲಿ. ನಂತರವೂ 1999 (ಪಂಗೊಂಗ್ ತ್ಸೋ), 2008 (ಕೊಂಗ್​ಕಾ), 2013(ದೆಪ್​ಸಂಗ್) ಇಲ್ಲೆಲ್ಲ ಭಾರತೀಯ ಸೇನೆಯ ಮೇಲೆ ಅವರು ಮೇಲುಗೈ ಸಾಧಿಸಿದ್ದು ಲಡಾಖ್​ನಲ್ಲೇ. ಅವರ ಈ ಮೇಲುಗೈ ಮೊತ್ತಮೊದಲ ಬಾರಿಗೆ ಸಡಿಲವಾಗುತ್ತಿರುವುದು ಈಗ.

    ಪಶ್ಚಿಮ ವಲಯದಲ್ಲಿನ ಅಸಮತೋಲನವನ್ನು ಸರಿದೂಗಿಸಿಕೊಳ್ಳಲು ಭಾರತ 1962ರ ಯುದ್ಧದ ಮರುಕ್ಷಣವೇ ಪ್ರಯತ್ನಿಸಿತೇನೋ ನಿಜ. ಕಾರಾಕೊರಂ ಕಣಿವೆಗೆ ಹತ್ತಿರದ ದೌಲತ್ ಬೇಗ್ ಓಲ್ದಿ(ಡಿಬಿಓ)ಯಲ್ಲಿ ಭಾರತ ಸೇನಾ ಠಿಕಾಣೆಯ ಜತೆಗೆ ಯುದ್ಧವಿಮಾನಗಳಿಗೆ ಅನುಕೂಲವಾಗುವ ರನ್​ವೇಯನ್ನು 1964ರಲ್ಲಿ ನಿರ್ವಿುಸಿತು. ಅಂದು ಪಾಕಿಸ್ತಾನಿ ಹಿಡಿತದಲ್ಲಿದ್ದ ಸಿಯಾಚಿನ್ ಗ್ಲೇಷಿಯರ್ ಮತ್ತು ಚೀನೀ ಆಕ್ರಮಿತ ಅಕ್ಸಾಯ್ ಚಿನ್​ಗಳ ನಡುವಿರುವ ಡಿಬಿಓ ಸಾಮರಿಕವಾಗಿ ಭಾರತಕ್ಕೆ ಅನುಕೂಲಕರವಾದ ಆಯಕಟ್ಟಿನ ಸ್ಥಳವೇನೋ ನಿಜ. ಆದರೆ ಅಲ್ಲಿಗೆ ತಲುಪುವುದೇ ಭಾರತೀಯರಿಗಿದ್ದ ಬಹುದೊಡ್ಡ ತೊಡಕು. ರಸ್ತೆಯಂತೂ ಇರಲೇ ಇಲ್ಲ, ಪುಟ್ಟ ರನ್​ವೇ ಇದ್ದರೂ ಪ್ರತಿಕೂಲ ಹವಾಮಾನದಿಂದಾಗಿ ಅಲ್ಲಿ ವಿಮಾನಗಳು ಬೇಕೆಂದಾಗ ಇಳಿಯಲೂ ಅವಕಾಶವಿರಲಿಲ್ಲ. ಪರಿಣಾಮವಾಗಿ ನಾಲ್ಕೂವರೆ ದಶಕಗಳವರೆಗೆ ಡಿಬಿಓ ಠಿಕಾಣೆಯನ್ನು ಭಾರತೀಯ ಸೇನೆ ಸರಿಸುಮಾರು ಮರೆತೇಬಿಟ್ಟಿತು. ಹೀಗಾಗಿ ಹತೋಟಿ ರೇಖೆಯುದ್ಕಕ್ಕೂ ಚೀನೀಯರದೇ ನಿರಂತರ ಮೇಲುಗೈ.

    ಡಿಬಿಓನತ್ತ ಭಾರತ ಮತ್ತೆ ಹೊರಳಿದ್ದು 2007-08ರಲ್ಲಿ. ಲೆಹ್​ನಿಂದ ಅಲ್ಲಿಗೆ ರಸ್ತೆ ನಿರ್ವಿುಸಲು ಪ್ರಧಾನಿ ಮನಮೋಹನ್ ಸಿಂಗ್ ಮುಂದಾದರೂ ಅವರದೇ ಸಹೋದ್ಯೋಗಿಗಳು ಅವರ ಯೋಜನೆಗೆ ಅಡ್ಡಗಾಲು ಹಾಕಿದರು. ಕಾಂಗ್ರೆಸ್ ಮತ್ತು ಚೀನೀ ಕಮ್ಯೂನಿಸ್ಟ್ ಪಾರ್ಟಿಯ ನಡುವೆ 2008ರಲ್ಲಿ ನಡೆದ, ರಾಹುಲ್ ಗಾಂಧಿ ಸಹಿ ಹಾಕಿದ ರಹಸ್ಯ ಒಪ್ಪಂದ ಇದಕ್ಕೆ ಕಾರಣವಿರಬಹುದು. ಆದರೆ ಮೋದಿ ಸರ್ಕಾರ 2015ರಲ್ಲಿ ರಸ್ತೆ ನಿರ್ವಣವನ್ನು ಕೈಗೆತ್ತಿಕೊಂಡು ಇಂದು ಯಶಸ್ವಿ ಮುಕ್ತಾಯದ ಹಂತಕ್ಕೆ ತಂದು ನಿಲ್ಲಿಸಿದೆ. ನೂರಾರು ಕಲ್ವರ್ಟ್​ಗಳು ಮತ್ತು ಸೇತುವೆಗಳ ಮೇಲೆ ಸಾಗುವ 255 ಕಿಲೋಮೀಟರ್ ಉದ್ದದ ಈ ದರ್ಪಕ್-ಶೈಯೋಕ್-ದೌಲತ್ ಬೇಗ್ ಓಲ್ದಿ ರಸ್ತೆ (ಡಿಎಸ್​ಡಿಬಿಓ ರೋಡ್) ಒಂದು ಇಂಜಿನಿಯರಿಂಗ್ ಅದ್ಭುತ. ಹಿಂದೆ ಲೆಹ್​ನಿಂದ ಗಲ್ವಾನ್ ಕಣಿವೆಗೆ ತಲುಪಲು ನಮ್ಮ ಸೈನಿಕರಿಗೆ 15-16 ದಿನಗಳು ತಗುಲುತ್ತಿದ್ದವು ಮತ್ತು ಅವರು ಬಹಳಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗುತ್ತಿತ್ತು. ಇಂದು ಅದೇ ದೂರವನ್ನವರು ಮಿಲಿಟರಿ ವಾಹನದಲ್ಲಿ 2-3 ದಿನಗಳಲ್ಲಿ ಕ್ರಮಿಸಿಬಿಡಬಹುದು. ಹೀಗಾಗಿ ಪಶ್ಚಿಮ ವಲಯದ ಹತೋಟಿ ರೇಖೆಯ ಮೇಲೆ ತಮ್ಮ ಹಿಡಿತ ಕಳೆದುಹೋಗಬಹುದೆಂಬ ಭಯ ಚೀನೀಯರನ್ನೀಗ ಮೊದಲ ಬಾರಿಗೆ ಕಾಡತೊಡಗಿದೆ, ಅದೂ ಪಾಕ್ ಆಕ್ರಮಿತ ಕಾಶ್ಮೀರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಭಾರತ ಕಾರ್ಯಯೋಜನೆ ರೂಪಿಸುತ್ತಿರುವಾಗ!

    ಒಂದುವೇಳೆ ಪಿಓಕೆ ಭಾರತದ ವಶವಾಗಿ ಲಡಾಖಿನ ಭಾಗವಾದರೆ ಅಲ್ಲಿಗೆ ಚೀನಾ-ಪಾಕಿಸ್ತಾನ ಸಂಪರ್ಕ ಕತ್ತರಿಸಿಹೋಗುತ್ತದೆ, ಅದರೊಂದಿಗೆ ‘ಚೀನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್’ ಹಾಳುಬಿದ್ದು ಅದರ ಮೇಲೆ ತಾನು ಸುರಿದಿರುವ 60 ಬಿಲಿಯನ್ ಡಾಲರ್ ಅಗಾಧ ಮೊತ್ತವನ್ನು ಚೀನಾ ಮರೆತುಬಿಡಬೇಕಾಗುತ್ತದೆ! ಜತೆಗೆ ಭಾರತದ ಹೊಸ ರಸ್ತೆಯಿಂದಾಗಿ ಎಲ್​ಎಸಿಯಲ್ಲೂ ತನ್ನ ಮೇಲುಗೈಯನ್ನು ಚೀನಾ ಕಳೆದುಕೊಳ್ಳುತ್ತದೆ. ಕಾಸೂ ಕೇಡು, ತಲೆಯೂ ಬೋಳು ಎನ್ನುವಂತಹ ಪರಿಸ್ಥಿತಿ ಇದು.

    ಹೀಗಾಗಿಯೇ ಚೀನಾ ಡಿಎಸ್​ಡಿಬಿಓ ರಸ್ತೆಯನ್ನು ಹಾಳುಗೆಡವಲು, ಸಾಧ್ಯವಾದರೆ ಅದನ್ನು ತನ್ನ ನಿಯಂತ್ರಣಕ್ಕೇ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನ ಆರಂಭಿಸಿದೆ. ಗಲ್ವಾನ್ ಕಣಿವೆಯಲ್ಲಿ ಹತೋಟಿ ರೇಖೆಯಿಂದ ಶೈಯೋಕ್ ನದಿ-ಗಲ್ವಾನ್ ನದಿ ಸಂಗಮಕ್ಕೆ ಎಂಟು ಕಿಲೋಮೀಟರ್ ಅಷ್ಟೇ ಅಂತರ. ತಾನು ಅಲ್ಲಿಯವರೆಗೆ ತಲುಪಿದರೆ ಡಿಎಸ್​ಡಿಬಿಓ ರಸ್ತೆಯ ಕೊರಳು ತನ್ನ ಕೈಗೆ ಸಿಕ್ಕಿದಂತೆ ಎಂದು ಚೀನಾ ಸರಿಯಾಗಿಯೇ ಲೆಕ್ಕಹಾಕಿದೆ. ಅದಕ್ಕಾಗಿ ಪೂರ್ಣ ತಯಾರಿಯೊಂದಿಗೆ ಚೀನೀ ಸೇನೆ ಮೇ ಅಂತ್ಯದ ಹೊತ್ತಿಗೆ ಹತೋಟಿ ರೇಖೆ ದಾಟಿ ಐದು ಕಿಲೋಮೀಟರ್ ಒಳನುಗ್ಗಿ ಬಂದಿದೆ. ಶೈಯೋಕ್ ನದಿಗೆ ಇನ್ನು ಮೂರು ಕಿಲೋಮೀಟರ್ ಅಷ್ಟೇ! ಶೈಯೋಕ್ ಅಂದರೆ ಲಡಾಖಿ ಭಾಷೆಯಲ್ಲಿ ಸಾವು ಎಂದರ್ಥ. ಜೂನ್ ಮೊದಲವಾರದಲ್ಲಿ ಚೀನೀ ಸೇನೆಯನ್ನು ಹಿಂದಕ್ಕಟ್ಟಿದ ಭಾರತೀಯ ಸೇನೆ ಜೂನ್ 15ರಂದು ಅವರ ಎಲ್ಲೆಯೊಳಗೇ ನುಗ್ಗಿ ಚೀನೀಯರಿಗೆ 1987ರ ನಂತರ ಮೊಟ್ಟ ಮೊದಲ ಬಾರಿಗೆ ಸಾವಿನ ರುಚಿ ತೋರಿಸಿದೆ. ಯಾವುದೇ ಕಾರಣದಿಂದ ಇಂದು ತಾವು ಹಿಂತೆಗೆದರೆ ಅತಿಶೀಘ್ರದಲ್ಲಿ ಅಕ್ಸಾಯ್ ಚಿನ್ ಮೇಲಿನ ಹತೋಟಿಯಷ್ಟೇ ಅಲ್ಲ, ಪಾಕಿಸ್ತಾನದ ಜತೆಗಿನ ಸಂಪರ್ಕವೂ ಕಡಿದುಹೋಗಬಹುದು ಎಂಬ ಆತಂಕ ಚೀನೀ ಸರ್ಕಾರವನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಕರೊನಾ ಸಂಕಷ್ಟ, ಪ್ರಾಕೃತಿಕ ವಿಕೋಪ, ಅಮೆರಿಕದ ಬೆದರಿಕೆ ಎಲ್ಲವನ್ನೂ ನಿರ್ಲಕ್ಷಿಸಿ ಭಾರತದ ವಿರುದ್ಧ ಹಠ ತೊಟ್ಟು ನಿಂತಿದ್ದಾರೆ. ಅವರ ತಯಾರಿಗಳೇನು, ಅವುಗಳಿಗೆ ಭಾರತದ ಪ್ರತಿಕ್ರಿಯೆ ಹೇಗಿದೆ, ಹೇಗಿರಬೇಕು ಮತ್ತು ಭಾರತ-ಚೀನಾ ಘರ್ಷಣೆಯಿಂದಾಗಿ ಜಾಗತಿಕ ರಾಜಕಾರಣ ಹಿಡಿಯಬಹುದಾದ ದಿಕ್ಕು- ಇವುಗಳ ವಿಶ್ಲೇಷಣೆ ಮುಂದಿನವಾರ, ಲೇಖನದ ಮೂರನೆಯ ಹಾಗೂ ಕೊನೆಯ ಕಂತಿನಲ್ಲಿ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts