ಶಬ್ದ, ಮಂತ್ರಗಳ ಮಹಿಮೆ ಅರಿತರೆ ಆನಂದದ ಅನುಭೂತಿ

| ಸದ್ಗುರು

ಶಬ್ದವನ್ನು ಉಚ್ಚರಿಸಿದಾಗ, ಒಂದು ರೂಪವು ಸೃಷ್ಟಿಯಾಗುತ್ತದೆ. ಶಬ್ದಗಳನ್ನು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಉಪಯೋಗಿಸಿ, ಅದು ಸರಿಯಾದ ರೂಪವನ್ನು ತಳೆಯುವಂತೆ ಮಾಡಲು ಒಂದಿಡೀ ವಿಜ್ಞಾನವೇ ಇದೆ. ಕೆಲವೊಂದು ಜೋಡಣೆಗಳನ್ನು ಮಾಡಿ ಶಬ್ದಗಳನ್ನು ಉಚ್ಚರಿಸುವ ಮೂಲಕ ನಾವು ಶಕ್ತಿಶಾಲಿಯಾದ ರೂಪಗಳನ್ನು ಸೃಷ್ಟಿಸಬಹುದಾಗಿದೆ. ಇದನ್ನು ನಾದಯೋಗ ಎಂದು ಕರೆಯಲಾಗುತ್ತದೆ.

ಮಂತ್ರವೆಂದರೆ ಒಂದು ಶಬ್ದ, ಒಂದು ನಿರ್ದಿಷ್ಟ ಉಚ್ಚಾರಣೆ ಅಥವಾ ಒಂದು ಅಕ್ಷರ. ಇಂದು, ಆಧುನಿಕ ವಿಜ್ಞಾನವು ಇಡೀ ಅಸ್ತಿತ್ವವನ್ನು ಶಕ್ತಿಯ ಮಾರ್ದನಿಯಂತೆ, ವಿವಿಧ ಮಟ್ಟಗಳ ಕಂಪನಗಳಂತೆ ನೋಡುತ್ತದೆ. ಎಲ್ಲಿ ಕಂಪನವಿರುತ್ತದೆಯೋ, ಅಲ್ಲಿ ಶಬ್ದವಿರಲೇಬೇಕು. ಇದರರ್ಥ, ಸಂಪೂರ್ಣ ಅಸ್ತಿತ್ವವು ಒಂದು ರೀತಿಯಾದ ಶಬ್ದ ಅಥವಾ ಶಬ್ದದ ಸಂಕೀರ್ಣ ಸಂಯೋಜನೆಯಾಗಿದೆ ಎಂದು. ಇಡೀ ಅಸ್ತಿತ್ವವು ಅನೇಕ ಮಂತ್ರಗಳನ್ನೊಳಗೊಂಡ ಒಂದು ಸಮ್ಮಿಲನವಾಗಿದೆ. ಇವುಗಳ ಪೈಕಿ, ಕೀಲಿಕೈಗಳಂತೆ ಕೆಲಸ ಮಾಡಬಹುದಾದ ಕೆಲವು ಮಂತ್ರ ಅಥವಾ ಶಬ್ದಗಳನ್ನು ಗುರುತಿಸಲಾಗಿದೆ. ಅವುಗಳನ್ನು ನೀವು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಬಳಸಿದರೆ, ಆ ಮಂತ್ರಗಳು ನಿಮ್ಮೊಳಗೆ ಜೀವನದ ವಿಭಿನ್ನವಾದ ಆಯಾಮ ಮತ್ತು ಅನುಭವವನ್ನು ತೆರೆಯುವ ಕೀಲಿಕೈಯಾಗುತ್ತವೆ.

ಮಂತ್ರವೆಂದರೆ ಏನನ್ನೋ ಉಚ್ಚರಿಸುವುದು ಎಂದಲ್ಲ. ನೀವೇ ಮಂತ್ರವಾಗಲು ಪ್ರಯತ್ನಿಸುತ್ತಿದ್ದೀರಿ ಎಂದು. ಏಕೆಂದರೆ, ನೀವು ಕೀಲಿಕೈಯಾಗದ ಹೊರತು, ಅಸ್ತಿತ್ವವು ನಿಮಗೆ ತೆರೆದುಕೊಳ್ಳುವುದಿಲ್ಲ. ನೀವು ಕೀಲಿಕೈಯಾದರೆ ಮಾತ್ರ ನಿಮಗೆ ಬೀಗವನ್ನು ತೆರೆಯಲು ಸಾಧ್ಯವಾಗುತ್ತದೆ.

ಮಂತ್ರಗಳು ಅಸ್ತಿತ್ವವನ್ನು ಅರಿಯುವ ಕಡೆಗೆ ಅತ್ಯುತ್ತಮವಾದ ಪೂರ್ವಸಿದ್ಧತೆಯ ಹೆಜ್ಜೆಗಳಾಗಬಹುದು. ಒಂದು ಮಂತ್ರ ಜನರ ಮೇಲೆ ಅದ್ಭುತವಾದ ಪರಿಣಾಮಗಳನ್ನು ಬೀರಬಹುದು. ನಾದವಾಗಿರುವುದೆಲ್ಲದರ ಬಗ್ಗೆ ಸಂಪೂರ್ಣ ಅರಿವಿರುವಂತಹ ಮೂಲದಿಂದ ಮಂತ್ರಗಳು ಬಂದ್ದಿದ್ದರೆ ಮಾತ್ರ ಅವು ಏನನ್ನಾದರೂ ರಚಿಸುವಲ್ಲಿ ಪರಿಣಾಮಕಾರಿಯಾದ ಶಕ್ತಿಯಾಗಲು ಸಾಧ್ಯ. ನಾವು ‘ನಾದವಾಗಿರುವುದೆಲ್ಲ’ ಎಂದು ಹೇಳಿದಾಗ, ನಾವು ಸೃಷ್ಟಿಯ ಬಗ್ಗೆಯೇ ಮಾತನಾಡುತ್ತಿದ್ದೇವೆ. ಒಂದು ಮಂತ್ರವು ಅಂತಹ ಮೂಲದಿಂದ ಬಂದಿದ್ದೇ ಆದರೆ ಹಾಗೂ ಅದರ ತಿಳಿವಳಿಕೆಯ ಮಟ್ಟ ಮತ್ತು ಪ್ರಸಾರಣೆ ಪರಿಶುದ್ಧವಾಗಿದ್ದಾಗ, ಮಂತ್ರಗಳು ಪರಿಣಾಮಕಾರಿಯಾದ ಶಕ್ತಿಯಾಗಬಲ್ಲವು.

ಮಂತ್ರಗಳಲ್ಲಿ ವಿವಿಧ ಬಗೆಗಳಿವೆ. ಪ್ರತಿಯೊಂದು ಮಂತ್ರವು ದೇಹದ ಒಂದು ವಿಭಿನ್ನ ಭಾಗದಲ್ಲಿ ನಿರ್ದಿಷ್ಟ ರೀತಿಯ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಅವಶ್ಯಕವಾದ ಪ್ರಜ್ಞೆಯಿಲ್ಲದೆ, ಕೇವಲ ಶಬ್ದವನ್ನು ಮಾತ್ರ ಪುನರಾವರ್ತಿಸುವುದು ಮನಸ್ಸಿಗೆ ಬೇಸರವನ್ನು ತರಿಸುತ್ತದೆ. ಶಬ್ದದ ಪುನರಾವರ್ತನೆ ಯಾವಾಗಲೂ ಮನಸ್ಸನ್ನು ಮಂಕಾಗಿಸುತ್ತದೆ. ಆದರೆ ಅದೇನೆಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವ ಮೂಲಕ, ಸರಿಯಾದ ತಿಳಿವಳಿಕೆಯೊಂದಿಗೆ ಅದನ್ನು ಮಾಡಿದಾಗ, ಮಂತ್ರವು ಅತ್ಯಂತ ಶಕ್ತಿಯುತವಾದ ವಿಧಾನವಾಗಬಹುದು. ಇದು ಒಂದು ವಿಜ್ಞಾನವಾಗಿ, ಅತ್ಯಂತ ಶಕ್ತಿಯುತವಾದ ಆಯಾಮವಾಗಿದೆ. ಆದರೆ ಇದೊಂದು ವಸ್ತುನಿಷ್ಠ ವಿಜ್ಞಾನವಾಗಿರುವುದರಿಂದ, ಅವಶ್ಯಕವಾದ ಆಧಾರ ಮತ್ತು ಅಗತ್ಯ ಪರಿಸ್ಥಿತಿಗಳನ್ನು ರಚಿಸದೆಯೇ ಇದನ್ನು ಹೇಳಿಕೊಟ್ಟರೆ, ಇದು ಬಹಳಷ್ಟು ಹಾನಿಯನ್ನುಂಟುಮಾಡಬಹುದು. ಸರ್ವೆಸಾಮಾನ್ಯವಾದ ಗಾಯತ್ರಿ ಮಂತ್ರದ ತಪ್ಪಾದ ಉಚ್ಚಾರಣೆಯಿಂದಾಗಿ ತಮಗೆ ತಾವೇ ಅಪಾಯವನ್ನು ತಂದುಕೊಂಡಂತಹ ಜನರ ಬಗ್ಗೆ ನಮಗೆ ತಿಳಿದಿದೆ.

# ಮಂತ್ರ ಮತ್ತು ಸಂಸ್ಕೃತ- ಇವೆರಡರ ನಡುವಿನ ಸಂಬಂಧವೇನು?

-ಮಂತ್ರಗಳು ಯಾವಾಗಲೂ ಸಂಸ್ಕೃತದ ಆಧಾರದಿಂದ ಬರುತ್ತವೆ ಮತ್ತು ಸಂಸ್ಕೃತ ಭಾಷೆಯ ಮೂಲಭೂತ ಅಂಶಗಳು ಶಬ್ದಕ್ಕೆ ತುಂಬ ಸೂಕ್ತವಾಗಿರುವಂತವು. ಆದರೆ ಬೇರೆ ಬೇರೆ ಜನರು ಅದನ್ನು ಉಚ್ಚರಿಸಿದಾಗ, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಹೇಳುತ್ತಾರೆ. ಬಂಗಾಳಿಗಳು ಒಂದು ಮಂತ್ರವನ್ನು ಹೇಳಿದರೆ, ಅವರದನ್ನು ತಮ್ಮದೇ ರೀತಿಯಲ್ಲಿ ಹೇಳುತ್ತಾರೆ. ತಮಿಳರು ಅದನ್ನು ಮತ್ತೊಂದು ರೀತಿಯಲ್ಲಿ ಹೇಳುತ್ತಾರೆ. ಅಮೆರಿಕನ್ನರು ಅದನ್ನು ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಹೇಳುತ್ತಾರೆ. ಹೀಗೆ, ನಾನಾ ಭಾಷೆಗಳನ್ನು ಮಾತನಾಡುವ ಬೇರೆ ಬೇರೆ ಜನರು, ನಿಜವಾದ ತರಬೇತಿಯನ್ನು ನೀಡದ ಹೊರತು, ಅವರವರ ಭಾಷೆಗೆ ಅನುಗುಣವಾಗಿ ಮಂತ್ರಗಳನ್ನು ತಿರುಚಿ ಹೇಳಬಹುದು. ಅಂತಹ ತರಬೇತಿ ಬಹಳ ಸಮಗ್ರವಾಗಿದ್ದು, ಇದಕ್ಕೆ ದೀರ್ಘವಾದ ಸಮಯ ಮತ್ತು ತೊಡಗಿಕೊಳ್ಳುವಿಕೆಯ ಅಗತ್ಯವಿರುವ ಕಾರಣ ಇತ್ತೀಚಿನ ಜನರಿಗೆ ಆ ತರಬೇತಿಯನ್ನು ಮುಗಿಸುವ ತಾಳ್ಮೆ ಅಥವಾ ಸಮರ್ಪಣಾ ಮನೋಭಾವವಿಲ್ಲ.

# ನಾದಯೋಗ- ನಾದ ಮತ್ತು ರೂಪದ ನಡುವಿನ ಸಂಬಂಧ

ಸಂಸ್ಕೃತ ಭಾಷೆ ಅವಶ್ಯಕವಾಗಿ ಒಂದು ಸಂವಹನ ಮಾಧ್ಯಮವಲ್ಲ, ಅದೊಂದು ಸಾಧನ. ಬೇರೆಲ್ಲ ಭಾಷೆಗಳನ್ನು ನಾವು ಯಾವುದರ ಕುರಿತಾಗಿಯಾದರೂ ಹೇಳಬೇಕಾಗಿದ್ದ ಕಾರಣ ರಚಿಸಲಾಯಿತು. ಆರಂಭದಲ್ಲಿ, ಕೇವಲ ಕೈಬೆರಳೆಣಿಕೆಯಷ್ಟು ಪದಗಳೊಂದಿಗೆ ಪ್ರಾರಂಭಿಸಿ ನಂತರದಲ್ಲಿ ಅವುಗಳನ್ನು ಜೋಡಿಸಿ ಸಂಕೀರ್ಣವಾದ ಪದಗಳನ್ನು ರೂಪಿಸಲಾಯಿತು. ಆದರೆ ಸಂಸ್ಕೃತವು ಕಂಡುಹಿಡಿಯಲಾದ ಭಾಷೆ ಏಕೆಂದರೆ ಇಂದು ನೀವು ಯಾವುದೇ ಶಬ್ದವನ್ನು ಆಸಿಲೋಸ್ಕೋಪ್​ನ ಮೂಲಕ ಹರಿಸಿ ನೋಡಿದರೆ, ಪ್ರತಿ ಶಬ್ದಕ್ಕೂ ತನ್ನದೇ ಆದ ರೂಪವಿರುವುದನ್ನು ಗಮನಿಸುತ್ತೀರಿ. ಅಂತೆಯೇ, ಪ್ರತಿ ರೂಪಕ್ಕೂ ಅದರದ್ದೇ ಆದ ಶಬ್ದವು ಹೊಂದಿಕೊಂಡಿದೆ. ಅಸ್ತಿತ್ವದ ಪ್ರತಿಯೊಂದು ರೂಪವೂ ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರತಿಧ್ವನಿಸುತ್ತ ಒಂದು ನಿರ್ದಿಷ್ಟ ಶಬ್ದವನ್ನು ಸೃಷ್ಟಿಸುತ್ತದೆ.

ನೀವೊಂದು ಶಬ್ದವನ್ನು ಉಚ್ಚರಿಸಿದಾಗ, ಒಂದು ರೂಪವು ಸೃಷ್ಟಿಯಾಗುತ್ತದೆ. ಶಬ್ದಗಳನ್ನು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಉಪಯೋಗಿಸಿ, ಅದು ಸರಿಯಾದ ರೂಪವನ್ನು ತಳೆಯುವಂತೆ ಮಾಡಲು ಒಂದಿಡೀ ವಿಜ್ಞಾನವೇ ಇದೆ. ಕೆಲವೊಂದು ಜೋಡಣೆಗಳನ್ನು ಮಾಡಿ ಶಬ್ದಗಳನ್ನು ಉಚ್ಚರಿಸುವ ಮೂಲಕ ನಾವು ಶಕ್ತಿಶಾಲಿಯಾದ ರೂಪಗಳನ್ನು ಸೃಷ್ಟಿಸಬಹುದಾಗಿದೆ. ಇದನ್ನು ನಾದಯೋಗ ಎಂದು ಕರೆಯಲಾಗುತ್ತದೆ. ನಿಮಗೆ ನಾದದ ಮೇಲೆ ಪ್ರಾವೀಣ್ಯತೆಯಿದ್ದರೆ, ಅದಕ್ಕೆ ಹೊಂದಿಕೊಂಡಿರುವ ರೂಪದ ಮೇಲೆಯೂ ಸಹ ನೀವು ಪ್ರಾವೀಣ್ಯತೆಯನ್ನು ಪಡೆಯುತ್ತೀರಿ.

ನನ್ನ ಬಾಲ್ಯದಲ್ಲಿ ನಡೆದ ಘಟನೆಯಿದು, ಯಾರಾದರೂ ಮಾತನಾಡುತ್ತಿದ್ದಾಗ, ನಾನು ಅವರ ಮುಖವನ್ನೇ ನೋಡುತ್ತಿರುತ್ತಿದ್ದೆ. ಮೊದಮೊದಲು ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆ. ನಂತರ, ಶಬ್ದ ಮಾತ್ರ. ಸ್ವಲ್ಪ ಸಮಯದ ನಂತರ, ನಾನು ಅವರ ಸುತ್ತ ವಿಚಿತ್ರ ಚಿತ್ರಾಕೃತಿಗಳನ್ನು ನೋಡತೊಡಗಿದೆ. ಇವುಗಳು ಎಷ್ಟು ಮಂತ್ರಮುಗ್ಧ, ಅದ್ಭುತ ಹಾಗೂ ಆಶ್ಚರ್ಯಭರಿತವಾಗಿದ್ದವೆಂದರೆ, ಅವುಗಳ ಅರ್ಥ ತಿಳಿಯದೆಯೇ ನಾನವುಗಳನ್ನು ಸದಾ ನೋಡುತ್ತ ಕುಳಿತಿರಬಹುದಿತ್ತು. ನಾನು ಪದಗಳನ್ನು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ.

ರೂಪ ಮತ್ತು ಶಬ್ದಕ್ಕೆ ಸಂಬಂಧವಿರುವಂತಹ ಒಂದು ಭಾಷೆಯೆಂದರೆ ಸಂಸ್ಕೃತ. ಉದಾಹರಣೆಗೆ, ಇಂಗ್ಲಿಷ್ ಭಾಷೆಯಲ್ಲಿ ‘ಖ್ಠ್ಞ ಅಥವಾ ‘ಖಟ್ಞ’ ಎಂದರೆ, ಅದರ ಉಚ್ಚಾರಣೆ ಒಂದೇ, ಆದರೆ ಅದರಲ್ಲಿ ಬಳಸುವ ಅಕ್ಷರಗಳು ಬೇರೆ ಬೇರೆಯಷ್ಟೆ. ನೀವೇನು ಬರೆಯುತ್ತೀರೋ ಅದು ನಿರ್ಣಾಯಕ ಅಂಶವಲ್ಲ. ಅದು ಹೊರಹೊಮ್ಮಿಸುವ ನಾದವು ನಿರ್ಣಾಯಕ ಅಂಶ. ಒಂದು ನಿರ್ದಿಷ್ಟವಾದ ರೂಪಕ್ಕೆ ಯಾವ ನಾದ ಸಂಬಂಧ ಪಟ್ಟಿದೆಯೆಂದು ನಿಮಗೆ ತಿಳಿದಾಗ, ಆ ರೂಪಕ್ಕೆ ಆ ನಾದದ ಹೆಸರನ್ನಿಡುವಿರಿ. ಈಗ ನಾದ ಮತ್ತು ರೂಪ ಒಂದಕ್ಕೊಂದು ಹೊಂದಿಕೊಂಡಿದೆ. ನೀವು ಆ ಪದವನ್ನು ಉಚ್ಚರಿಸಿದಾಗ, ಆ ರೂಪದ ಜತೆ ಸಂಬಂಧ ಕಲ್ಪಿಸುತ್ತಿದ್ದೀರಿ- ಕೇವಲ ಮಾನಸಿಕವಾಗಲ್ಲ, ನಿಮ್ಮ ಇರುವಿಕೆಯ ದೃಷ್ಟಿಯಿಂದಲೂ ಸಹ ನೀವು ಆ ರೂಪದೊಂದಿಗೆ ಸೇರುತ್ತೀರಿ. ಸಂಸ್ಕೃತವು ಅಸ್ತಿತ್ವದ ಒಂದು ನೀಲಿನಕ್ಷೆಯ ಹಾಗೆ. ರೂಪದಲ್ಲಿ ಏನಿದೆಯೋ, ನಾವದನ್ನು ನಾದವಾಗಿ ಬದಲಿಸಿದ್ದೇವೆ. ಆದರೆ ಈಗ ಇವುಗಳು ಬಹಳವಾಗಿ ವಿರೂಪಗೊಂಡಿವೆ. ಅವಶ್ಯಕವಾದ ಜ್ಞಾನ, ತಿಳಿವಳಿಕೆ ಮತ್ತು ಅರಿವು ಇಲ್ಲವಾಗಿರುವುದರಿಂದಾಗಿ ಅದನ್ನು ಸರಿಯಾದ ರೂಪದಲ್ಲಿ ಹೇಗೆ ಸಂರಕ್ಷಿಸುವುದು ಎನ್ನುವುದು ಇಂದಿಗೂ ಒಂದು ದೊಡ್ಡ ಸವಾಲಾಗಿ ಉಳಿದಿದೆ.

ಅರ್ಥಕ್ಕಿಂತ ನಾದ ಹೆಚ್ಚು ಮುಖ್ಯ: ಈ ಕಾರಣಕ್ಕಾಗಿಯೇ, ಸಂಸ್ಕೃತವನ್ನು ಕಂಠಪಾಠ ಮಾಡಿ ಕಲಿತುಕೊಳ್ಳಬೇಕು. ಜನರು ಸಂಸ್ಕೃತ ಭಾಷೆಯನ್ನು ಕೊನೆಯಿಲ್ಲದಂತೆ ಉರು ಹೊಡೆಯುತ್ತಿರುತ್ತಾರೆ. ನಿಮಗದರ ಅರ್ಥ ತಿಳಿದಿದೆಯೋ ಇಲ್ಲವೋ ಎನ್ನುವುದು ಮುಖ್ಯವಾಗುವುದಿಲ್ಲ. ಅದರ ನಾದ ಮುಖ್ಯ, ಅರ್ಥವಲ್ಲ. ಅರ್ಥಗಳು ನಿಮ್ಮ ಮನಸ್ಸಿನಲ್ಲಿ ರೂಪುಗೊಳ್ಳುವಂಥವುಗಳು. ಆದರೆ ನಿಮ್ಮೊಂದಿಗೆ ಸಂಪರ್ಕವನ್ನು ಹೊಂದುವುದು ನಾದ ಮತ್ತು ರೂಪ. ನಿಮ್ಮ ಸಂಪರ್ಕ ಅದರೊಂದಿಗಾಗಿದೆಯೋ, ಇಲ್ಲವೋ ಎನ್ನುವುದೇ ಪ್ರಶ್ನೆ. ಇದರಿಂದಾಗಿಯೇ ಸಂಸ್ಕೃತವು ಬಹುತೇಕ ಎಲ್ಲ ಭಾರತೀಯ ಮತ್ತು ಯುರೋಪಿಯನ್ ಭಾಷೆಗಳ ತಾಯಿಯಾಗಿದೆ. ತಮಿಳು ಭಾಷೆ ಇದಕ್ಕೆ ಹೊರತಾಗಿದೆ. ತಮಿಳು ಸಂಸ್ಕೃತದಿಂದ ಬಂದಿದ್ದಲ್ಲ, ಅದು ಸ್ವತಂತ್ರವಾಗಿ ಬೆಳೆಯಿತು. ಬೇರೆಲ್ಲ ಭಾರತೀಯ ಭಾಷೆಗಳ ಮತ್ತು ಬಹುತೇಕ ಎಲ್ಲ ಯುರೋಪಿಯನ್ ಭಾಷೆಗಳ ಮೂಲ ಸಂಸ್ಕೃತದಲ್ಲಿದೆ.

ಮಂತ್ರಗಳಿಂದ ಪ್ರಯೋಜನ ಪಡೆಯುವುದು ಹೇಗೆ?: ಸಂಗೀತವು ಮಾಧುರ್ಯವನ್ನು ಸೃಷ್ಟಿಸುವ ಸಲುವಾಗಿರುವ ಶಬ್ದಗಳ ಜೋಡಣೆಯಾಗಿದೆ. ಸಂಗೀತವು ಉತ್ತಮವಾದ ವ್ಯವಸ್ಥೆಯಾದರೂ ಸಹ, ಅದು ಹರಿಯುತ್ತಿರುವ ನೀರಿನಂತೆ. ಮಂತ್ರ ಅಷ್ಟೇನೂ ಸುಂದರ ಹಾಗೂ ಆಕರ್ಷಕವಾಗಿಲ್ಲದಿದ್ದರೂ ಅದು ಹೆಚ್ಚು ಪರಿಣಾಮಕಾರಿಯಾಗಿದೆ. ಯಾವುದಾದರೂ ಮಂತ್ರವನ್ನು ಪದೇಪದೆ ಕೇಳುತ್ತಾ ಇರಿ. ಒಂದು ಮಂತ್ರ ನಿಮ್ಮನ್ನು ತನ್ನತ್ತ ಸೆಳೆಯುತ್ತಿದೆ ಎಂದೆನಿಸಿದರೆ, ಅದನ್ನು ಆಯ್ಕೆ ಮಾಡಿಕೊಳ್ಳಿ. ಆ ಮಂತ್ರವನ್ನು ಸದಾ ಕಾಲ ಕೇಳುತ್ತಾ ಇರಿ- ನಿಮ್ಮ ಕಾರಿನಲ್ಲಿ, ಮನೆಯಲ್ಲಿ, ಐಪ್ಯಾಡ್, ಫೋನ್ ಎಲ್ಲ ಕಡೆ ಅದೇ ಮಂತ್ರ ಸಾಗುತ್ತಿರಲಿ. ಸುಮ್ಮನೆ ಒಂದಷ್ಟು ಸಮಯದವರೆಗೆ ಆ ಮಂತ್ರವನ್ನು ಕೇಳುವುದನ್ನು ಮುಂದುವರಿಸಿ.

ಸ್ವಲ್ಪ ಸಮಯದ ನಂತರ ಅದು ನಿಮ್ಮ ವ್ಯವಸ್ಥೆಯ ಒಂದು ಭಾಗವೇ ಆಗಿಹೋಗುತ್ತದೆ ಮತ್ತು ನಿಮಗಾಗಿ ಒಂದು ನಿರ್ದಿಷ್ಟವಾದ ಪರಿಸರವನ್ನು ಸ್ಥಾಪಿಸುತ್ತದೆ. ಮಂತ್ರವೇ ಜಾಗೃತಾವಸ್ಥೆಯಲ್ಲ ಆದರೆ ಅದಕ್ಕೆ ಬೇಕಾದ ಸರಿಯಾದ ಸನ್ನಿವೇಶವನ್ನು ಮಂತ್ರವು ಸ್ಥಾಪಿಸುತ್ತದೆ. ಈ ದೈಹಿಕ ಮತ್ತು ಮಾನಸಿಕ ಚೌಕಟ್ಟಿನೊಳಗೆ ಹಾಗೂ ನಮ್ಮ ಸುತ್ತಲಿನ ವಾತಾವರಣದಲ್ಲಿ ನಾದವು ಸರಿಯಾದ ರೀತಿಯ ಪರಿಸರವನ್ನು ಸ್ಥಾಪಿಸುವುದರಿಂದಾಗಿ ನಾವದನ್ನು ನಮ್ಮ ಒಳಿತಿಗಾಗಿ ಬಳಸಿಕೊಳ್ಳಬಹುದು.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])