More

    ಸ್ವರ್ಣೋದ್ಯಮ ಕ್ಷೇತ್ರದ ಅಪ್ರತಿಮ ಸಾಧಕ ಬಲರಾಮ ಆಚಾರ್ಯರಿಗೆ ವಿಜಯರತ್ನ ಪ್ರಶಸ್ತಿ ಪ್ರದಾನ..

    ಮಂಗಳೂರು: ಕರಾವಳಿ ಜಿಲ್ಲೆಯ ಸ್ವರ್ಣೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಲರಾಮ ಆಚಾರ್ಯ ಅವರು ವಿಆರ್‌ಎಲ್ ಸಮೂಹ ಸಂಸ್ಥೆಯ ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್‌‘24*7 ನ್ಯೂಸ್ ಚಾನಲ್ ವತಿಯಿಂದ ನೀಡಲಾದ ಪ್ರತಿಷ್ಠಿತ ‘ವಿಜಯರತ್ನ-2022‘ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

    ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಗುಂಡಿಬೈಲು ಲಕ್ಷ್ಮೀ ನಾರಾಯಣ ಆಚಾರ್ಯ (ಜಿ.ಎಲ್.ಆಚಾರ್ಯ) ಅವರು 1957ರಲ್ಲಿ ಸ್ಥಾಪಿಸಿದ ಪುಟ್ಟ ಸಂಸ್ಥೆಯನ್ನು ಪುತ್ರ ಬಲರಾಮ ಆಚಾರ್ಯ ಅವರು ಯಶಸ್ವಿಯಾಗಿ ಮುನ್ನಡೆಸಿ ಪುತ್ತೂರಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆಸಿದ್ದಾರೆ. ವ್ಯವಹಾರ ಕ್ಷೇತ್ರದ ಜತೆಗೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ಬಲರಾಮ ಆಚಾರ್ಯ ಅವರು ಪುತ್ತೂರು ನಗರದ ಅಭಿವೃದ್ಧಿಗೆ ಅತ್ಯಪೂರ್ವ ಕೊಡುಗೆ ನೀಡಿದ್ದಾರೆ.

    ಪುತ್ತೂರಿನ ಅಭಿವೃದ್ಧಿಗೆ ಕೊಡುಗೆ: ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆ ಮಾತ್ರವಲ್ಲ ಆಭರಣ ಕ್ಷೇತ್ರದ ಬ್ರ್ಯಾಂಡೆಡ್​ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಸುಸಜ್ಜಿತ ವಿಶಾಲ ಶೋರೂಂ, ಸುಳ್ಯ, ಹಾಸನ, ಕುಶಾಲನಗರದಲ್ಲಿ ಹೊಸ ಮಳಿಗೆಗಳನ್ನು ಹೊಂದಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ಸಂಸ್ಥೆ ನೆರೆ ಜಿಲ್ಲೆಗೂ ವಿಸ್ತಾರಗೊಂಡಿದೆ. ಸ್ವರ್ಣೋದ್ಯಮದ ಜತೆಗೆ ನಿರ್ಮಾಣ ಕ್ಷೇತ್ರಕ್ಕೂ ಕಾಲಿರಿಸಿ ಜಿ.ಎಲ್.ಕಾಂಪ್ಲೆಕ್ಸ್, ಹೋಟೆಲ್ ರಾಮ, ರಾಧಾಕೃಷ್ಣ ಬಿಲ್ಡಿಂಗ್, ಜಿ.ಎಲ್.ಟ್ರೇಡ್ ಸೆಂಟರ್ ನಿರ್ಮಿಸುವ ಮೂಲಕ ಪುತ್ತೂರಿಗೆ ಮೆರುಗು ನೀಡಿದ್ದಾರೆ.

    ತಂದೆಯ ಉದ್ಯಮಕ್ಕೆ ಸಾಥ್: ಪದವಿ ಶಿಕ್ಷಣ ಪೂರೈಸಿದ ಬಳಿಕ ಬಲರಾಮ ಆಚಾರ್ಯ ಅವರು 1974ರಲ್ಲಿ ತಂದೆಯ ಉದ್ಯಮದಲ್ಲಿ ಕೈ ಜೋಡಿಸಿದರು. 1984ರಲ್ಲಿ ಕುಟುಂಬದ ಇತರ ಸದಸ್ಯರ ಜತೆ ಸೇರಿ ಮಂಗಳೂರಿನಲ್ಲಿ ಲಕ್ಷ್ಮೀದಾಸ್ ಜುವೆಲ್ಲರ್ಸ್ ಹೆಸರಿನ ಮಳಿಗೆ ತೆರೆದರು. 1989ರಲ್ಲಿ ಪುತ್ತೂರಿನ ಹೃದಯ ಭಾಗದಲ್ಲಿ ಜಿ.ಎಲ್.ಕಾಂಪ್ಲೆಕ್ಸ್ ಎಂಬ ಸುಸಜ್ಜಿತ ವಾಣಿಜ್ಯ ಮಳಿಗೆ ಸ್ಥಾಪಿಸಿದರು. ಆಧುನಿಕ ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ರೆಡಿಮೇಡ್ ಹಾಗೂ ಕರಕೌಶಲ್ಯದ ಕುಸುರಿಯ ಒಡವೆಗಳನ್ನು ಪೂರೈಸಿ ಯಶಸ್ಸು ಕಂಡರು.

    ವಿಶ್ವಾಸಾರ್ಹ ಸಂಸ್ಥೆ: ಬಲರಾಮ ಆಚಾರ್ಯರ ದೂರದೃಷ್ಟಿತ್ವ ಹಾಗೂ ಬದ್ಧತೆಯಿಂದ ‘ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ’ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆಯಿತು. ದಕ್ಷಿಣಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿ 916 ಹಾಲ್‌ಮಾರ್ಕ್ ಚಿನ್ನಾಭರಣವನ್ನು ಪ್ರಥಮವಾಗಿ ಪರಿಚಯಿಸಿದ ಕೀರ್ತಿಯನ್ನು ಸಂಸ್ಥೆ ಹೊಂದಿದೆ. ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿದ್ದ ‘ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ’ ಕಳೆದ ವರ್ಷ ಪುತ್ತೂರಿನ ಮುಖ್ಯ ರಸ್ತೆಯ 6 ಸಾವಿರ ಚದರ ಅಡಿ ವಿಸ್ತೀರ್ಣದ ನೂತನ ಮಳಿಗೆಗೆ ಸ್ಥಳಾಂತರಗೊಂಡಿದೆ.

    ಬೃಹತ್ ಮಾಲ್ ನಿರ್ಮಾಣ: ಪುತ್ತೂರು ನಗರ ಬೆಳೆದಿದ್ದರೂ ಬೃಹತ್ ಮಾಲ್, ಮಲ್ಟಿಪೆಕ್ಸ್‌ಗಳು ಇನ್ನೂ ಪ್ರವೇಶಿಸಿಲ್ಲ. ಈ ಕೊರತೆ ನೀಗಿಸಲು ಜಿ.ಎಲ್.ಆಚಾರ್ಯ ಸಂಸ್ಥೆ ಈಗ ನಗರದ ಮುಖ್ಯರಸ್ತೆಯಲ್ಲಿ ‘ಜಿ.ಎಲ್.ಮಾಲ್’ ನಿರ್ಮಾಣಕ್ಕೆ ಮುಂದಾಗಿದೆ. ಕಾಮಗಾರಿ ಭರದಿಂದ ನಡೆಯುತ್ತಿದ್ದು, ಪುತ್ತೂರಿನ ಪ್ರಥಮ ಮಾಲ್ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ.

    ಜಿ.ಎಲ್.ಆಚಾರ್ಯ ಫೌಂಡೇಷನ್: ದಿ.ಜಿ.ಎಲ್.ಆಚಾರ್ಯ ಅವರು ಕೇವಲ ಹಣ ಗಳಿಕೆಯ ವ್ಯಾಪಾರ ಕ್ಷೇತ್ರವೇ ಸರ್ವಸ್ವ ಎಂದು ಭಾವಿಸಿದವರಲ್ಲ. ಉದ್ಯಮದ ಜತೆಗೆ ಸಮಾಜ ಸೇವೆಗೂ ತಮ್ಮನ್ನು ಅರ್ಪಿಸಿಕೊಂಡಿದ್ದರು. ಬಲರಾಮ ಆಚಾರ್ಯರು ಕೂಡ ತಂದೆಯ ಹಾದಿಯಲ್ಲೇ ಸಾಗಿ ಬಂದರು. ಜಿ.ಎಲ್.ಆಚಾರ್ಯ ಫೌಂಡೇಷನ್ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಧನಸಹಾಯ, ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳಿಗೆ, ಸ್ವಯಂಸೇವಾ ಸಂಸ್ಥೆಗಳಿಗೆ ಸಹಾಯ ಹಸ್ತ ನೀಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

    ರೋಟರಿ ಬ್ಲಡ್ ಬ್ಯಾಂಕ್: ಬಲರಾಮ ಆಚಾರ್ಯ ಅವರು ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಮೂಲಕ ಸಮಾಜ ಸೇವೆಗೆ ಆರಂಭಿಕ ಹೆಜ್ಜೆ ಇರಿಸಿದ್ದರು. 1997-98ರಲ್ಲಿ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪದವಿಗೇರಿದರು. ಆಗ ಪುತ್ತೂರಿನ ರೋಗಿಗಳು ತುರ್ತು ಸಂದರ್ಭ ರಕ್ತ ಪಡೆಯಲು ಮಂಗಳೂರಿಗೆ ಬರಬೇಕಾದ ಸ್ಥಿತಿ ಇತ್ತು. ಇದನ್ನು ಮನಗಂಡು ಬಲರಾಮ ಆಚಾರ್ಯ ಪ್ರಥಮವಾಗಿ ರೋಟರಿ ಕ್ಲಬ್ ಮೂಲಕ ಪುತ್ತೂರಿನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸಿದರು. ರೋಟರಿ ಸಂಸ್ಥೆಗೆ ಜಿ.ಎಲ್.ಸಭಾಭವನ ನಿರ್ಮಿಸಲು ಸ್ಥಳದಾನ ಮಾಡುವ ಮೂಲಕ ಅಪೂರ್ವ ಕೊಡುಗೆ ನೀಡಿದರು.

    ಸ್ವರ್ಣೋದ್ಯಮ ಕ್ಷೇತ್ರದ ಅಪ್ರತಿಮ ಸಾಧಕ ಬಲರಾಮ ಆಚಾರ್ಯರಿಗೆ ವಿಜಯರತ್ನ ಪ್ರಶಸ್ತಿ ಪ್ರದಾನ..

    ನಮ್ಮ ಹಿರಿಯರಾದ ಜಿ.ಎಲ್. ಆಚಾರ್ಯ ಅವರ ಪರಿಶ್ರಮ, ಪ್ರಾಮಾಣಿಕತೆಯಿಂದಾಗಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದೆ. ಪುತ್ತೂರಿನ ಜನತೆ ಹಾಗೂ ಗ್ರಾಹಕರು ನಮ್ಮನ್ನು ಬೆಳೆಸಿದ್ದಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಜಿ.ಎಲ್. ಆಚಾರ್ಯ ಅವರು ದುಡಿಮೆಯ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತ ಬಂದವರು. ಅವರ ಆದರ್ಶದಲ್ಲಿ ಸಾಗುವುದು ನಮ್ಮ ಕರ್ತವ್ಯ. ಉದ್ಯಮದ ಜತೆಗೆ ಕಿಂಚಿತ್ ಸಮಾಜ ಸೇವೆಯನ್ನು ಮಾಡುತ್ತ ಬಂದಿದ್ದೇವೆ.‘ವಿಜಯವಾಣಿ ‘ನಮ್ಮ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ.

    | ಬಲರಾಮ ಆಚಾರ್ಯ, ವ್ಯವಸ್ಥಾಪಕ ನಿರ್ದೇಶಕರು, ಜಿ.ಎಲ್. ಸಮೂಹ ಸಂಸ್ಥೆ

    ಶೈಕ್ಷಣಿಕ ಸೇವೆ: ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷರಾಗಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷರಾಗಿ, ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ, ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿರುವ ಬಲರಾಮ ಆಚಾರ್ಯರು ಜುವೆಲ್ಲರಿ ಅಸೋಸಿಯೇಷನ್ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

    ಸಂತೃಪ್ತ ಕುಟುಂಬ: ಬಲರಾಮ ಆಚಾರ್ಯ ಅವರು ಪತ್ನಿ ರಾಜೀ (ರಾಜೇಶ್ವರಿ), ಪುತ್ರಿ ನಂದಿತಾ, ಪುತ್ರರಾದ ಲಕ್ಷ್ಮೀಕಾಂತ್ ಬಿ. ಆಚಾರ್ಯ ಮತ್ತು ಸುಧನ್ವ ಬಿ.ಆಚಾರ್ಯ ಅವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಪುತ್ರರಿಬ್ಬರು ಉದ್ಯಮ ಬೆಳೆಸಲು ಸಹಕಾರ ನೀಡುತ್ತಿದ್ದು, ಹಿರಿಯರ ಆದರ್ಶದ ಹಾದಿಯಲ್ಲಿ ಸಾಗುತ್ತಿದ್ದಾರೆ. ಪುತ್ರಿ ನಂದಿತಾ ಅವರು ಉದ್ಯಮಿ ವಿಜೇಶ್ ಅವರನ್ನು ವಿವಾಹವಾಗಿ ಮಂಗಳೂರಿನಲ್ಲಿ ನೆಲೆಸಿದ್ದಾರೆ.

    ಅಪ್ರತಿಮ ಸಾಧಕ ಯು.ಬಿ.ಶೆಟ್ಟಿಗೆ ವಿಜಯರತ್ನ ಗರಿ: ಉದ್ಯಮ, ಶೈಕ್ಷಣಿಕ, ಧಾರ್ವಿುಕ ಕ್ಷೇತ್ರದಲ್ಲಿ ಮಹಾನ್ ಸಾಧನೆ

    ಶ್ರಮದ ಸಾಧಕ ಡಾ. ದಯಾನಂದ್​ಗೆ ವಿಜಯರತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts