More

    ಮಾಹಿತಿ ಕಣಜ ಎಜುಕೇಷನ್ ಎಕ್ಸ್‌ಪೋ

    ವಿಜಯಪುರ: ಅಪರೂಪದ ಮಾಹಿತಿ ಕಣಜ, ಕಾಲೇಜ್ ಕಲಿಕೆಗೊಂದು ಕೈಗನ್ನಡಿ, ಹಳ್ಳಿ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್‌ಗಳ ಪರಿಚಯ, ಶೈಕ್ಷಣಿಕ ಆಯ್ಕೆಗಳ ಲೋಕದಲ್ಲೊಂದು ಹೊಸ ಭಾಷ್ಯ ಬರೆದ ಮಾಧ್ಯಮ.ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದ ವಿ.ಭ.ದರಬಾರ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಂಡ ಎಜುಕೇಷನ್ ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳಿವು.

    ಎರಡನೇ ದಿನವಾದ ಶನಿವಾರ ಎಕ್ಸ್‌ಪೋಗೆ ಬಂದ ಸಾವಿರಾರು ವಿದ್ಯಾರ್ಥಿಗಳು, ಪಾಲಕರು ಹಾಗೂ ಜನರು ವಿವಿಧ ಶಿಕ್ಷಣ ಸಂಸ್ಥೆಗಳ ಸ್ಟಾಲ್‌ಗಳತ್ತ ಹೆಜ್ಜೆ ಹಾಕಿ ಹೊಸ ಹೊಸ ಕೋರ್ಸ್‌ಗಳ ಬಗ್ಗೆ ಕುತೂಹಲದಿಂದ ಮಾಹಿತಿ ಪಡೆದರು. ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರಗಳಲ್ಲಿ ಭಾಗವಹಿಸಿ ಶಿಕ್ಷಣ ತಜ್ಞರ ಉಪನ್ಯಾಸ ಆಲಿಸಿದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭೆಗಳ ಪ್ರದರ್ಶನಕ್ಕೆ ಹೃದಯ ತುಂಬಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಾಗಾರಗಳ ನಡುವೆ ಸಮಯ ಸಿಕ್ಕಾಗ ಸ್ಟಾಲ್‌ಗಳಿಗೆ ಭೇಟಿ ನೀಡಿ ವಿವಿಧ ಕೋರ್ಸ್‌ಗಳ ಮಾಹಿತಿ ಪಡೆದರು.

    ಮೆರಗು ತಂದ ಗಣ್ಯರು
    ಎರಡನೇ ದಿನದ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಿದರು. ಸಂಸದ ರಮೇಶ ಜಿಗಜಿಣಗಿ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಎಲ್‌ಡಿಇ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮತ್ತಿತರರು ಎಕ್ಸ್‌ಪೋ ಹಮ್ಮಿಕೊಂಡ ಕಾರ್ಯವನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿಯಿಂದ ಇಂತಹ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

    ಈ ಹಿಂದೆ ಶಿಕ್ಷಣಕ್ಕೆ ಕೇವಲ ಸರ್ಕಾರಿ ಶಾಲೆ, ಕಾಲೇಜ್‌ಗಳನ್ನು ಅವಲಂಬಿಸಬೇಕಿತ್ತು. ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಶಿಕ್ಷಣ ಕ್ಷೇತ್ರ ವಿಸ್ತಾರಗೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಒದಗಿಸುತ್ತಿವೆ. ಕೆಲವು ವರ್ಷಗಳ ಹಿಂದೆ ಕಲಿಕೆ ತುಂಬ ಕಷ್ಟವಾಗಿತ್ತು. ತಂತ್ರಜ್ಞಾನದ ಬೆಳವಣಿಗೆಯಿಂದ ಇಂದಿನ ವಿದ್ಯಾರ್ಥಿಗಳಿಗೆ ಎಲ್ಲ ಮಾಹಿತಿ ಸುಲಭವಾಗಿ ಸಿಗುತ್ತಿದೆ. ಶಿಕ್ಷಣ ಕ್ಷೇತ್ರ ಸಮಾಜಮುಖಿ ಕಾರ್ಯಗಳಿಗೂ ಮುಂದಾಗಬೇಕು ಎಂಬುದಕ್ಕೆ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಈ ಕಾರ್ಯಕ್ರಮದ ಮೂಲಕ ಮುನ್ನುಡಿ ಬರೆದಿವೆ. ಜಿಲ್ಲೆಯ ಮಕ್ಕಳು ಈ ಮೇಳದ ಸದುಪಯೋಗ ಪಡೆಯಬೇಕು.
    – ರಮೇಶ ಜಿಗಜಿಣಗಿ, ಸಂಸದ ವಿಜಯಪುರ

    ಮಕ್ಕಳನ್ನು ಹುರಿದುಂಬಿಸಿ
    ತಮ್ಮ ಇಷ್ಟದ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಳ್ಳಲು ಪಾಲಕರು ಮಕ್ಕಳಿಗೆ ಸ್ವಾತಂತ್ರೃ ನೀಡಬೇಕು ಎಂದು ಬೆಂಗಳೂರಿನ ಎಕ್ಸೆಲ್ ಅಕಾಡೆಮಿಯ ಡಾ.ಜಿ.ಬಿ.ವಿ.ಸುಬ್ರಮಣ್ಯಂ ಹೇಳಿದರು. ಪಿಯುಸಿ ನಂತರ ಮುಂದೇನು ಎಂಬ ಕುರಿತು ನಡೆದ ಮೊದಲ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳ ಮುಂದಿರುವ ಹೊಸ ಹೊಸ ಅವಕಾಶಗಳ ಬಗ್ಗೆ ತಿಳಿಸಿದರು.

    ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲೇ ಕಲಿಯಲು ಪಾಲಕರು ಪ್ರೋತ್ಸಾಹಿಸಿದರೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆ ನೀಡಬಹುದು. ತಮ್ಮ ಆಯ್ಕೆ ವಿಷಯದ ಬಗ್ಗೆ ಚಿಂತನೆ, ವಿಶ್ಲೇಷಣೆ ನಡೆಸುವ, ನಿರ್ಧಾರ ಕೈಗೊಳ್ಳುವ ಆತ್ಮಸ್ಥೈರ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇತ್ರ ಆಯ್ದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಜೆಇಇ ಹಾಗೂ ನೀಟ್ ಪರೀಕ್ಷೆ ಎದುರಿಸುತ್ತಿದ್ದಾರೆ. ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಿ ಮುಂದೆ ಬರಬೇಕಾದ ಅನಿವಾರ್ಯವಿದೆ. ಗುರಿ ತಲುಪುವ ಜತೆಗೆ ಮಕ್ಕಳು ಸಾಮಾಜಿಕ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಮಯ ಪ್ರಜ್ಞೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಇಂಥ ಕಾರ್ಯಕ್ರಮಗಳು ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಕಲ್ಪಿಸಲು ದಾರಿದೀಪವಾಗಿವೆ ಎಂದರು.

    ಕಲಿಕೆಯನ್ನು ಪ್ರೀತಿಸಿ
    ನಮ್ಮ ಬದುಕಿನ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು. ನಾವು ಪ್ರೀತಿಸಿದ ಕಲಿಕೆಯನ್ನೇ ಆಯ್ದುಕೊಳ್ಳಬೇಕು. ಇಲ್ಲದಿದ್ದರೆ ಆಯ್ದುಕೊಂಡ ಕಲಿಕೆಯನ್ನು ಪ್ರೀತಿಸಬೇಕು ಎಂದು ವಿಜಯಪುರ ಆರ್‌ಕೆಎಂ ಆಯುರ್ವೇದ ಮೆಡಿಕಲ್ ಕಾಲೇಜ್, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಸಂಶೋಧನೆ ಕೇಂದ್ರದ ಡಾ.ಮೃಣಾಲ್ ರುದ್ರಗೌಡರ ಹೇಳಿದರು.
    ಪಿಯುಸಿ ನಂತರ ವೈದ್ಯಕೀಯ ಕ್ಷೇತ್ರದಲ್ಲಿರುವ ಆಯ್ಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು, ವೈದ್ಯರಾಗುವ ಅವಕಾಶ ಸಿಗಲಿಲ್ಲ ಎಂದು ಧೃತಿಗೆಡದೆ ವೈದ್ಯರಿಗೆ ಪೂರಕವಾದ ಕ್ಷೇತ್ರಗಳಲ್ಲೂ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

    ಮೈಕ್ರೊಬಯಾಲಾಜಿ, ಡೈಟೀಷನ್, ಫಿಜಿಯೋಥೆರಪಿಸ್ಟ್, ಸ್ಪೋರ್ಟ್ಸ್ ಮೆಡಿಸಿನ್, ಪಶು ವೈದ್ಯಕೀಯ, ಕಾಸ್ಮೆಟಾಲಾಜಿ, ಯೋಗಾ ಹೀಗೆ ಹಲವು ಆಯ್ಕೆಗಳು ಇಂದು ನಮ್ಮ ಮುಂದಿವೆ. ವೈದ್ಯರು ವೃಕ್ಷವಾದರೆ ನರ್ಸ್‌ಗಳು, ಪ್ರಯೋಗಾಲಯದ ಹಾಗೂ ಔಷಧಾಲಯದ ಸಿಬ್ಬಂದಿ ವೃಕ್ಷದ ಬೇರುಗಳಿದ್ದಂತೆ. ಈ ಕ್ಷೇತ್ರಗಳಲ್ಲೂ ವೈದ್ಯರಿಗೆ ಪೂರಕವಾಗಿ ಕೆಲಸ ಮಾಡಬಹುದು. ಇದಲ್ಲದೆ ವೈದ್ಯಕೀಯ ಕ್ಷೇತ್ರದ ಅನೇಕ ಕೋರ್ಸ್‌ಗಳನ್ನು ಕಲಿತವರು ಸ್ವಯಂ ಉದ್ಯೋಗ ಕೈಗೊಳ್ಳಲು ಕೂಡ ಅವಕಾಶವಿದೆ. ಸರ್ಕಾರಿ ಸೇವೆ, ಮಿಲಿಟರಿ ಹಾಗೂ ಖಾಸಗಿಯಾಗಿಯೂ ಸೇವೆ ಸಲ್ಲಿಸಲು ಅವಕಾಶವಿದೆ. ಈ ಕ್ಷೇತ್ರದಲ್ಲಿ ಕಲಿತವರು ಶಿಕ್ಷಕರಾಗಿಯೂ ಸೇವೆ ಸಲ್ಲಿಸಬಹುದು ಎಂಬುದನ್ನು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ವಿವರಿಸಿದರು.

    ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸಿಬ್ಬಂದಿ ಅಗತ್ಯವಿದೆ. ಚಾರಿಟೆಬಲ್ ಟ್ರಸ್ಟ್‌ಗಳ ಮೂಲಕವೂ ಸೇವೆ ಸಲ್ಲಿಸಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಆಯ್ದುಕೊಳ್ಳುವವರ ವೈಯಕ್ತಿಕ ಬದುಕಿನಲ್ಲಿ ತ್ಯಾಗ ಮಾಡಬೇಕಾದ ಅಗತ್ಯವೂ ಇರುತ್ತದೆ. ಎಲ್ಲ ತುರ್ತುಗಳಿಗೂ ಅವರು ತಯಾರಿರಬೇಕು. ನಮ್ಮ ಆಯ್ಕೆಗಳು ಮತ್ತು ಹವ್ಯಾಸಗಳ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಆಸಕ್ತಿ ಆಧರಿಸಿ ಭವಿಷ್ಯ ಆಯ್ದುಕೊಳ್ಳಬೇಕು ಎಂದರು.
    ಆರ್‌ಕೆಎಂ ಪಿಯು ವಿಜ್ಞಾನ ಕಾಲೇಜ್ ಪ್ರಾಚಾರ್ಯೆ ಮೇಧಾ ಕರ್ಪೂರಮಠ ಮಾತನಾಡಿದರು.

    ಅವಕಾಶಗಳ ಸದುಪಯೋಗ ಪಡೆಯಿರಿ
    ದೇಶದಲ್ಲಿ ಪ್ರತಿ ವರ್ಷ 35ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಆದರೆ ನಮ್ಮ ರಾಜ್ಯದಲ್ಲಿರುವ ವಿದ್ಯಾರ್ಥಿಗಳು ರಾಜ್ಯದಲ್ಲಿ ನಡೆಯುವ ಪರೀಕ್ಷೆಗಳನ್ನು ಮಾತ್ರ ಎದುರಿಸುತ್ತಾರೆ. ದೇಶಾದ್ಯಂತ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಮಾಹಿತಿ ಪಡೆಯಬೇಕು ಎಂದು ಧಾರವಾಡದ ಗುರುದೇವ ಐಎಎಸ್, ಕೆಎಎಸ್ ಅಕಾಡೆಮಿಯ ಶಂಕರ ಹಂಚಿ ಹೇಳಿದರು.

    ಕಲಿಕೆ ನಂತರ ಬದುಕು ರೂಪಿಸಿಕೊಳ್ಳಲು ಎದುರಿಸಬಹುದಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳು ಪದವಿ ಪಡೆಯಲು ಮೂರು ವರ್ಷ ಆರು ಸೆಮಿಸ್ಟರ್‌ಗಳಲ್ಲಿ 30ಕ್ಕೂ ಹೆಚ್ಚು ಪರೀಕ್ಷೆಗಳನ್ನು ಎದುರಿಸುತ್ತಾರೆ. ಕೇವಲ 5 ಪರೀಕ್ಷೆಗಳನ್ನು ಬರೆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬಹುದು ಎಂಬುದನ್ನು ಮರೆತುಬಿಡುತ್ತಾರೆ. ಯಾವ ಪದವಿ ಪಡೆದರೂ ಸರ್ಕಾರಿ ಪರೀಕ್ಷೆ ಎದುರಿಸುವ ಅರ್ಹತೆ ಪಡೆಯುತ್ತೇವೆ ಎಂಬುದನ್ನು ಮರೆಯಬಾರದು. ಗ್ರಾಮೀಣ ವಿದ್ಯಾರ್ಥಿಗಳು ಇಂಥ ಅವಕಾಶಗಳ ಸದ್ಬಳಕೆ ಮಾಡಿಕೊಂಡು ಸೂಕ್ತ ತರಬೇತಿ ಕೇಂದ್ರಗಳಿಂದ ಮಾಹಿತಿ ಪಡೆದು ಪರೀಕ್ಷೆ ಎದುರಿಸಬೇಕು. ಯಶಸ್ವಿ ವ್ಯಕ್ತಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕಿಂತ ಅವರು ನಡೆದು ಬಂದ ಸಾಧನೆ ದಾರಿ ಬಗ್ಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿ ಅವರಿಂದ ಮಾಹಿತಿ ಪಡೆಯಬೇಕು ಎಂದರು.

    ಸಾಮರ್ಥ್ಯ ಹೆಚ್ಚಿಸಲು ಮ್ಯಾನೇಜರ್ ಅಗತ್ಯ
    ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿಗೆ ಇಂದು ಅಪಾರ ಬೇಡಿಕೆ ಇದೆ ಎಂದು ಹುಬ್ಬಳ್ಳಿಯ ಐಬಿಎಂಆರ್ ಬಿಬಿಎ ಕಾಲೇಜ್ ಪ್ರಾಚಾರ್ಯ ಪ್ರೊ.ಕಿಶನ್ ಪಾಟೀಲ ಹೇಳಿದರು.
    ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಅವರು ಮಾತನಾಡಿ, ಹೊಸ ಶಿಕ್ಷಣ ನೀತಿಯಲ್ಲಿ ಕೌಶಲ ವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಅದಕ್ಕಾಗಿ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಪೂರಕವಾಗಿವೆ. ಜನಿಸಿದ ದಿನದಿಂದಲೇ ಪ್ರತಿ ವ್ಯಕ್ತಿಯಲ್ಲೂ ಮ್ಯಾನೇಜರಲ್ ಸ್ಕಿಲ್ ಇರುತ್ತವೆ. ಅವುಗಳನ್ನು ಬೆಳೆಸಿಕೊಳ್ಳುವ ಕೆಲಸ ನಮ್ಮದಾಗಬೇಕು. ಒಂದು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಎಂದರೆ ಒಂದು ಕುಟುಂಬದ ತಂದೆ ಇದ್ದಂತೆ. ಎಲ್ಲ ವಿಭಾಗಗಳನ್ನು ತಂದೆ ನಿಭಾಯಿಸಿದಂತೆ ಸಿಇಒ ಎಲ್ಲ ಕೆಲಸಗಾರರನ್ನು ನಿಭಾಯಿಸುತ್ತಾರೆ. ಭಾರತದಲ್ಲಿ ಲಕ್ಷಾಂತರ ಕಂಪನಿಗಳಿವೆ. ಅವುಗಳಲ್ಲಿ ಲಕ್ಷಾಂತರ ಜನ ಉದ್ಯೋಗ ಮಾಡುತ್ತಿದ್ದಾರೆ. ಇವರೆಲ್ಲರೂ ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ವ್ಯವಸ್ಥಾಪಕನ ಕೆಲಸವಾಗಿರುತ್ತದೆ. ಹೊಸ ಹೊಸ ವಿದೇಶಿ ಕಂಪನಿಗಳೂ ಭಾರತದತ್ತ ಮುಖ ಮಾಡುತ್ತಿರುವ ಇಂದಿನ ದಿನಗಳಲ್ಲಿ ಎಂಬಿಎ, ಬಿಬಿಎ ಕಲಿತವರಿಗೆ ಸಾಕಷ್ಟು ಅವಕಾಶಗಳಿವೆ.

    ಫೈನಾನ್ಶಿಯಲ್ ಟ್ಯಾಲಿ, ಇಆರ್‌ಪಿ 9, ಸ್ಯಾಪ್ ಕೋರ್ಸ್, ಎಸಿಸಿಎ, ಅಸೋಸಿಯೇಷನ್ ಆ್ ಚಾರಟೆಡ್ ಸರ್ಟಿಫೈಡ್ ಅಕೌಂಟ್, ಟ್ರಾವೆಲ್ ಮತ್ತು ಟೂರಿಸಮ್ ವಿಭಾಗ, ಡಿಜಿಟಲ್ ಮಾರ್ಕೆಟಿಂಗ್, ಸಮೂಹ ಸಂವಹನ, ಜನರ ನಿರ್ವಹಣೆ, ಲೆಕ್ಕಪತ್ರ ವಿಭಾಗ, ಫೈನಾನ್ಸ್, ಮಾರ್ಕೆಟ್, ಪ್ರೊಡಕ್ಷನ್ ಹೀಗೆ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಇಂದು ಹಲವು ಅವಕಾಶಗಳು ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿವೆ. ಉತ್ಪಾದನೆ, ನಿರ್ವಹಣೆ, ಮಾರಾಟ, ಬ್ರಾೃಂಡಿಂಗ್, ಬಿಸಿನೆಸ್ ಡೆವಲಪ್‌ಮೆಂಟ್, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಅವಕಾಶಗಳಿವೆ. ಫೈನಾನ್ಸ್ ವಿಭಾಗ ಆಯ್ಕೆ ಮಾಡಿಕೊಂಡವರಿಗೆ ಎ್ಕೆಸಿಸಿಐಯಿಂದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳಿವೆ. ಬಿಜಿನೆಸ್ ಎನಲಿಸಿಸ್ಟ್, ಆರ್ಟಿಫಿಷಿಯಲ್ ಇಂಟಲಿಜನ್ಸ್, ಮಷಿನ್ ಲರ್ನಿಂಗ್, ಎಚ್‌ಆರ್, ಸಮೂಹ ಶಿಕ್ಷಣ, ಕನ್ಸಲ್ಟನ್ಸಿ ಹೀಗೆ ಅನೇಕ ಕ್ಷೇತ್ರಗಳ ಅವಕಾಶಗಳು ಕೈಮಾಡಿ ಕರೆಯುತ್ತಿವೆ ಎಂದರು.

    23 ವರ್ಷಗಳಿಂದ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ನಮ್ಮ ಐಬಿಎಂಆರ್ ಸಂಸ್ಥೆ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ್, ಟ್ರಸ್ಟಿ ಸುಮಾ ಮಹೇಂದ್ರಕರ್, ವ್ಯವಸ್ಥಾಪಕ ನಿರ್ದೇಶಕ ರಿಯಾಜ್ ಬಸರಿ ಅವರ ಮಾರ್ಗದರ್ಶನದಲ್ಲಿ ಸಮರ್ಥವಾಗಿ ನಡೆಯುತ್ತಿದೆ.
    ನಿಯಮಗಳನ್ನು ಕಲಿತರೆ ತಪ್ಪು ಮಾಡಬಹುದು, ಸಿದ್ಧಾಂತಗಳನ್ನು ಕಲಿತರೆ ತಪ್ಪು ಮಾಡಲು ಸಾಧ್ಯವಿಲ್ಲ. ಇದನ್ನು ಮಕ್ಕಳು ಅರಿತುಕೊಳ್ಳಬೇಕು. ಇದನ್ನು ಮ್ಯಾನೇಜ್‌ಮೆಂಟ್ ಕಲಿಸುತ್ತದೆ ಎಂದರು. ಐದಾರು ದಶಕಗಳ ಇತಿಹಾಸವಿರುವ ಮ್ಯಾನೇಜ್‌ಮೆಂಟ್ ಶಿಕ್ಷಣ ಉಳಿದ ಎಲ್ಲ ಕ್ಷೇತ್ರಗಳನ್ನೂ ಇಂದು ಹಿಂದಿಕ್ಕಿದೆ. ಹೊಸ ಉದ್ಯಮ ಆರಂಭಿಸಬೇಕು ಎನ್ನುವವರು ಮ್ಯಾನೇಜಮೆಂಟ್ ಶಿಕ್ಷಣ ಪಡೆಯಬೇಕಾದ ಅಗತ್ಯವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts