More

    ಬಿಜೆಪಿಯಿಂದ ತಾರತಮ್ಯ ಧೋರಣೆ

    ವಿಜಯಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಜಯಪುರ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಅಭಿವೃದ್ಧಿಗೆ ಅನುದಾನ ನೀಡದೆ, ರಾಜಕೀಯ ಸ್ಥಾನ ಮಾನ ಕಲ್ಪಿಸದೆ ತಾರತಮ್ಯ ಧೋರಣೆ ಅನುಸರಿಸುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದರು.ಜಿಲ್ಲೆಯ ಹಿರಿಯ ರಾಜಕಾರಣಿ ರಮೇಶ ಜಿಗಜಿಣಗಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಯಿತು. ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ಕಲ್ಪಿಸದೆ ರಾಜ್ಯ ಸರ್ಕಾರ ಅನ್ಯಾಯ ಮಾಡಿತು. ಬಜೆಟ್‌ನಲ್ಲೂ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆ ನೀಡಲಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

    ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಶಿವಾನಂದ ಪಾಟೀಲ ಹಾಗೂ ಎಂ.ಬಿ. ಪಾಟೀಲ ಅವರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿತ್ತು. ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬಿಜೆಪಿಯಲ್ಲಿ ಅಂತಹ ಮಹತ್ವದ ಸ್ಥಾನಗಳು ಲಭಿಸಲಿಲ್ಲ ಎಂದು ಆಪಾದಿಸಿದರು.

    ನೀರಾವರಿ ನಿರ್ಲಕ್ಷೃ:
    ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗಾಗಿ 1.50 ಲಕ್ಷ ಕೋಟಿ ಅನುದಾನ ಮೀಸಲಿಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಈವರೆಗೂ ನೀರಾವರಿ ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ನೀಡದೆ ಮೋಸ ಮಾಡಿತು. ಪ್ರಸಕ್ತ ಬಜೆಟ್‌ನಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಕೇವಲ 5 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿರುವುದು ಖೇದಕರ. ಆಲಮಟ್ಟಿ ಹಿನ್ನೀರಿನಿಂದ ಬೇನಾಳ ಗ್ರಾಮ ಮುಳುಗಡೆಯಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಲ್ಲಿ ಶಾಲೆ, ಕಾಲೇಜ್ ವ್ಯವಸ್ಥೆ ಕಲ್ಪಿಸಿಲ್ಲ. ಇದು ನೋವಿನ ಸಂಗತಿ ಎಂದರು.

    ಆಲಮಟ್ಟಿ ಜಲಾಶಯ 524.256 ಮೀಟರ್ ಎತ್ತರಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರ ಈಗಾಗಲೇ 521 ಮೀಟರ್ ಎತ್ತರ ಹೆಚ್ಚಿಸಿದರೆ ಮುಳುಗಡೆಯಾಗುವ ಪ್ರದೇಶಕ್ಕೆ ಮಾತ್ರ ಸಮೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯವರೇ ನೀರಾವರಿ ಮಂತ್ರಿ ಇದ್ದರೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗುವ ಭರವಸೆ ಹುಸಿಯಾಗಿದೆ ಎಂದರು.

    ಕುಡಿಯುವ ನೀರು:
    ವಿಜಯಪುರ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನೀರಿನ ಹಾಹಾಕಾರ ಹೆಚ್ಚುತ್ತಿದೆ. ಸರ್ಕಾರದ 24/7 ಕುಡಿಯುವ ನೀರಿನ ಯೋಜನೆ ಈವರೆಗೂ ಅನುಷ್ಠಾನಗೊಂಡಿಲ್ಲ. ಪ್ರತಿ ಮನೆಗೆ ಕುಡಿಯುವ ನೀರು ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಶ್ನಿಸಲಾಗಿ ಸಚಿವ ಭೈರತಿ ಬಸವರಾಜ ಅವರು, 450 ಕೋಟಿ ರೂ.ವೆಚ್ಚದ ಯೋಜನೆಗೆ ಡಿಪಿಆರ್ ಸಿದ್ಧಪಡಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಅದು ಅನುಷ್ಠಾನಗೊಳ್ಳುವುದು ಯಾವಾಗ ಎಂದು ಪ್ರಶ್ನಿಸಿದರು.
    ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವುದು, ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಅಲ್ಲದೆ, ಸೈಕ್ಲಿಂಗ್ ವೆಲೊಡ್ರೋಮ್ ಈವರೆಗೂ ಪೂರ್ಣಗೊಂಡಿಲ್ಲ. ಈ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇನೆ. ಜಿಲ್ಲಾ ಕ್ರೀಡಾಂಗಣ ಸಹ ಕಳಪೆಯಾಗಿದ್ದು , ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ ಎಂದರು.

    ಬಸವ ಜಯಂತಿ:
    ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿಯೇ ರಾಜ್ಯ ಮಟ್ಟದ ಬಸವ ಜಯಂತಿ ಆಚರಿಸಬೇಕು ಎಂದು ಸದನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ತತ್ವ ಸಿದ್ಧಾಂತ ಅವಶ್ಯಕ. ಸರ್ಕಾರ ಬಸವ ಜಯಂತಿ ಆಚರಣೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಲಾಗಿ ಸರ್ಕಾರ ಸಹ ಜಿಲ್ಲಾಡಳಿತದಿಂದ ಪ್ರಸ್ತಾವನೆ ಬಂದಲ್ಲಿ ಒಪ್ಪಿಗೆ ಸೂಚಿಸುವುದಾಗಿ ತಿಳಿಸಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆದಿರುವುದಾಗಿ ರಾಠೋಡ ತಿಳಿಸಿದರು.
    ಮುಖಂಡರಾದ ಚಾಂದಸಾಬ ಗಡಗಲಾವ ಹಾಗೂ ಸಾಹೇಬಗೌಡ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts