More

    ಆಧಾರ ಹೆಸರಲ್ಲಿ ವಸೂಲಿ ದಂಧೆ..!

    ಯಾವುದೇ ಸರ್ಕಾರಿ ಯೋಜನೆಗಳ ಫಲಾನುಭವಿಯಾಗಲು ಈಗ ಆಧಾರ ಕಾರ್ಡ್ ಬೇಕೇಬೇಕು. ಸರ್ಕಾರ ಉಚಿತವಾಗಿ ಆಧಾರ ಕಾರ್ಡ್ ದೊರೆಯುತ್ತದೆ ಎಂದು ಹೇಳಿದರೂ ವಾಸ್ತವವೇ ಬೇರೆಯಿದೆ. ಆಧಾರ ಕೇಂದ್ರಗಳಲ್ಲಿ ಏಜೆಂಟರದ್ದೇ ಕಾರುಬಾರು. ಓದುಗರೊಬ್ಬರು ನೀಡಿದ ಮಾಹಿತಿ ಮೇರೆಗೆ ವಿಜಯವಾಣಿ-ದಿಗ್ವಿಜಯ ಚುಟುಕು ಕಾರ್ಯಾಚರಣೆ ನಡೆಸಿದಾಗ ಅಲ್ಲಿಯ ಏಜೆಂಟರ ಕರಾಮತ್ತು ಬೆಳಕಿಗೆ ಬಂದಿದೆ.

    ಶಶಿಕಾಂತ ಮೆಂಡೆಗಾರ, ವಿಜಯಪುರ

    ಇವತ್ತು ನಾವು ನಿಮಗೆ ಹೇಳಲು ಹೊರಟಿರೋದು ಎಲ್ಲೋ ಹಳ್ಳಿಯಲ್ಲಿ ನಡೆಯುತ್ತಿರುವ ವಸೂಲಿ ದಂಧೆಯಲ್ಲ. ಬದಲಾಗಿ ವಿಜಯಪುರ ಜಿಲ್ಲಾ ಕಚೇರಿ ಬಳಿ ಇರುವ ಹಳೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ‘ಆಧಾರ’ ಹೆಸರಲ್ಲಿ ನಡೆಯುತ್ತಿರುವ ವಸೂಲಿ ದಂಧೆ.
    ಆಧಾರ ಕಾರ್ಡ್ ಪಡೆಯಲು ಪಡುತ್ತಿರುವ ಬವಣೆಯನ್ನು ನಮ್ಮ ಓದುಗರೊಬ್ಬರು ಅವಲತ್ತುಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಹಲವು ಬಾರಿ ಚುಟುಕು ಕಾರ್ಯಾಚರಣೆ ನಡೆಸಿದ ವಿಜಯವಾಣಿ-ದಿಗ್ವಿಜಯ ನ್ಯೂಸ್ ಆಧಾರ ಕಾರ್ಡ್ ಮಾಡಿಸಿಕೊಡಲು ಹತ್ತಕ್ಕೂ ಹೆಚ್ಚು ಏಜೆಂಟರು ಹೇಗೆಲ್ಲಾ ವಸೂಲಿ ಮಾಡುತ್ತಿದ್ದಾರೆ ಎಂಬುದರ ಅಸಲಿಯತ್ತು ಬಟಾಬಯಲಾಯಿತು.
    ಎಲ್ಲರಿಗೂ ಆಧಾರ ಕಾರ್ಡ್ ಸಿಗಬೇಕು ಎಂದು ಸರ್ಕಾರ ಉಚಿತವಾಗಿ ಆಧಾರ ಕಾರ್ಡ್ ಕೊಡುವ ವ್ಯವಸ್ಥೆ ಮಾಡಿದೆ. ಇನ್ನು ಅದರಲ್ಲಿ ತಿದ್ದುಪಡಿ ಏನಾದರೂ ಇದ್ದರೇ ಅದಕ್ಕೆ 50 ರೂಪಾಯಿ ಶುಲ್ಕ ಪಡೆಯಬೇಕು. ಆದರೆ ಇಲ್ಲಿ ಮಾತ್ರ ಹೋಲ್‌ಸೇಲ್ ಆಗಿ ಸುಲಿಗೆ ನಡೆಯುತ್ತಿರುವುದು ವಿಪರ್ಯಾಸ.

    300 ರಿಂದ 600 ರೂ. ವಸೂಲಿ

    ಎಲ್ಲ ದಾಖಲೆಗಳು ಸರಿಯಾಗಿದ್ದರೆ ಒಂದೊಂದು ಆಧಾರ ಕಾರ್ಡ್ ಮಾಡಿಸಿ ಕೊಡಲು ಏಜೆಂಟರು 300 ರಿಂದ 500ರ ವರೆಗೂ ವಸೂಲಿ ಮಾಡುತ್ತಿದ್ದಾರೆ. ಇನ್ನು ದಾಖಲೆಗಳನ್ನು ಅವರೇ ಹೊಂದಿಸಿಕೊಂಡು ಆಧಾರ ಕಾರ್ಡ್ ಮಾಡಿಸಿ ಕೊಡಬೇಕಾದ್ರೆ 600 ರಿಂದ 800ರ ವರೆಗೂ ವಸೂಲಿ ಮಾಡುತ್ತಿದ್ದಾರೆ.

    ಹೆಸರು ಹಚ್ಚದಿದ್ದರೂ ಒಂದೇ ದಿನದಲ್ಲಿ ಕಾರ್ಡ್

    ಇನ್ನೊಂದು ವಿಚಿತ್ರವೆಂದರೆ ಆಧಾರ ಕಾರ್ಡ್ ಮಾಡಿಸಲು ನೇರವಾಗಿ ಹೋದವರಿಗೆ 2 ರಿಂದ 3 ತಿಂಗಳ ಮುಂದಿನ ದಿನಾಂಕ ಹಾಕಿಕೊಟ್ಟು, ಆವಾಗ ಕಾರ್ಡ್ ಮಾಡಿಸಿಕೊಳ್ಳಲು ಬನ್ನಿ ಎಂದು ಹೇಳಿ ಕಳಿಸಲಾಗುತ್ತದೆ. ಅದೇ ಏಜೆಂಟರ ಮೂಲಕ ಹೋದರೇ ಒಂದೇ ದಿನದಲ್ಲಿ ಆಧಾರ ಕಾರ್ಡ್ ಮಾಡಿಸಿ ಕಳುಹಿಸಲಾಗುತ್ತಿದೆ. ಇದೆಲ್ಲವನ್ನೂ ವಿಜಯವಾಣಿ-ದಿಗ್ವಿಜಯ ನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿದೆ.

    ಸಿಬ್ಬಂದಿಯ ಆವಾಜ್

    ಆಧಾರ ಕೇಂದ್ರದಲ್ಲಿ ಆಧಾರ ಕಾರ್ಡ್ ಮಾಡಿಕೊಡುವುದು ಉಚಿತವಾಗಿದೆಯೋ ಅಥವಾ ಯಾವ್ಯಾವುದಕ್ಕೆ ಎಷ್ಟೆಷ್ಟು ಶುಲ್ಕ ನಿಗದಿಪಡಿಸಲಾಗಿದೆ ಎಂಬ ಯಾವ ಫಲಕ ಅಳವಡಿಸಿಲ್ಲ. ಆಧಾರ ಕೇಂದ್ರದಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ ಎಂಬ ದೂರಿನ ಹಿನ್ನೆಲೆ ಪ್ರಶ್ನಿಸಲು ಹೋದ ವರದಿಗಾರನಿಗೆ ಅಲ್ಲಿಯ ಸಿಬ್ಬಂದಿಯೇ ‘ಆವಾಜ್’ ಹಾಕುತ್ತಾರೆ.
    ಆಧಾರ ಕಾರ್ಡ್ ಆಪರೇಟರ್‌ರೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ನಿನ್ನ ಸುಮ್ಮನೇ ಬಿಡೋಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದನ್ನು ಗಮನಿಸಿದರೇ, ಆಧಾರ ಕಾರ್ಡ್ ಮಾಡಿಕೊಡುವ ಗುರುತರ ಜವಾಬ್ದಾರಿ ಹೊತ್ತಿರುವ ಹೊರಗುತ್ತಿಗೆ ಸಿಬ್ಬಂದಿಯೇ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ ಎಂದರೂ ಈ ಮಟ್ಟಿಗೆ ಮಾತನಾಡುತ್ತಾರೆ ಎಂದರೆ ಇವರಿಗೆ ಅದೆಂಥಾ ಪ್ರಭಾವ, ಕುಮ್ಮಕ್ಕು ಇರಬೇಕು? ಎಂಬುದನ್ನು ಊಹಿಸಬಹುದು. ಅಲ್ಲದೇ ನಮ್ಮ ವರದಿಗಾರನ ಮೇಲೆಯೇ ‘ಇವರು ನಿನ್ನೆ ಕಾರ್ಡ್ ಮಾಡಿಸಲು ಬಂದಿದ್ದರು. ನಾಳೆ ಬನ್ನಿ ಎಂದಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ಸುಳ್ಳು ಆರೋಪನ್ನೂ ಮಾಡಿ, ಬಾಯಿಮುಚ್ಚಿಸಲು ಯತ್ನಿಸಿದ ಘಟನೆಯೂ ನಡೆಯಿತು.

    ಚುಟುಕು ಕಾರ್ಯಾಚರಣೆ ನಡೆಸಿದ್ದು ಹೀಗೆ

    ವಿಳಾಸ ಬದಲಾವಣೆ ನೆಪದಲ್ಲಿ ಅನಾಮಿಕರೊಬ್ಬರು ಆಧಾರ ಕೇಂದ್ರದಲ್ಲಿರುವ ಏಜೆಂಟರನ್ನು ಮಾತನಾಡಿಸಿದಾಗ ಅವರು ಅದಕ್ಕೆ ತಗಲುವ ವೆಚ್ಚವನ್ನು ತಾವೇ ಸ್ವತಃ ಬಾಯಿಬಿಟ್ಟಿದ್ದಾರೆ.
    ಕೇವಲ ಅರ್ಜಿ ತುಂಬಿಕೊಡಲು 20 ರೂ., ವಿಳಾಸ ಬದಲಾವಣೆ ಮಾಡಲು ರಹವಾಸಿ ಪತ್ರ ಮಾಡಿಸಬೇಕು ಅದಕ್ಕೆ 300 ರೂ. ಕೊಟ್ಟರೇ ಏಜೆಂಟರೇ ಗೆಜೆಟೆಡ್ ಆಫೀಸರ್ ಸಹಿ ಮಾಡಿಸುತ್ತಾರೆ. ಆಧಾರ ಕಾರ್ಡ್ ಬೇಕು ಎಂದರೆ ಒಟ್ಟು 500 ರೂ. ದಿಂದ 600 ರೂ. ಕೊಡಬೇಕು ಎಂದು ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಹೇಳುವುದು ಕೇಳಿದರೆ ವ್ಯವಸ್ಥೆ ಎಷ್ಟು ಕೆಟ್ಟಿದೆ ಎಂಬುದು ಮನದಟ್ಟಾಗುತ್ತದೆ.
    ಪಾಳಿಯಲ್ಲಿ ಆಧಾರ ಪಡೆಯಲು ಹೋದರೆ ಸಮಯ ಹಾಳು ಎಂದು ಬಹಳಷ್ಟು ಜನ ಈ ಏಜೆಂಟರ ಮೊರೆ ಹೋಗಿರುವುದು ಕಂಡು ಬಂತು. ಇನ್ನಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಸಮರ್ಪಕ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

    ಆಧಾರ ಕಾರ್ಡ್‌ಗೆ ಪಾಳಿ ಹಚ್ಚಿ ಒಂದು ತಿಂಗಳಾಯಿತು. ಎರಡು ದಿನದಿಂದ ಅಲೆದಾಡುತ್ತಿದ್ದರೂ ಇನ್ನು ಕಾರ್ಡ್ ಮಾಡಿಲ್ಲ. ಬೆಳಗ್ಗೆ 9 ಗಂಟೆಗೆ ಮಕ್ಕಳನ್ನು ಬಿಟ್ಟು ಕೇಂದ್ರಕ್ಕೆ ಬಂದಿದ್ದೇನೆ. ಸಂಜೆಯಾದರೂ ಪಾಳಿ ಬರದಿದ್ದರೇ ಸಮಯ ಹಾಳಾಗುತ್ತದೆ. ಮತ್ತೆ ನಾಳೆ ಬನ್ನಿ ಅನ್ನುತ್ತಾರೆ. ಇದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿ ಎಲ್ಲರಿಗೂ ಅನುಕೂಲ ಮಾಡಿಕೊಡಬೇಕು.
    ಭಾರತಿ, ಆಧಾರ ಕಾಡರ್ರ್ ಮಾಡಿಸಲು ಬಂದಿದ್ದವರು.

    ನಾನು ನನ್ನ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆ ಮಾಡಿಸಲು ಹೋದಾಗ ಅಲ್ಲಿಯ ಪರಿಸ್ಥಿತಿ ಕಂಡು ದಂಗಾದೆ. ಇಲ್ಲಿ ಏಜೆಂಟರದ್ದೇ ಕಾರುಬಾರು. ಕನಿಷ್ಠ 500 ರೂ. ಇದ್ದರೇ ಇವತ್ತೇ ಕಾರ್ಡ್‌ಮಾಡಿಕೊಡುತ್ತಾರೆ. ಇಲ್ಲದಿದ್ದರೇ ಪಾಳಿ ಪ್ರಕಾರ ತಿಂಗಳುಗಟ್ಟಲೆ ಅಲೆಯಬೇಕಾಗಿದೆ. ಏಜೆಂಟರು ಹಣ ಕೇಳಿದ್ದು ನೋಡಿ ಕಾರ್ಡ್ ಮಾಡಿಸದೆ ಹಿಂದಿರುಗಿದ್ದೇನೆ.
    ಭೀಮಾರಾವ್, ವಿಳಾಸ ಬದಲಾವಣೆಗೆ ಬಂದಿದ್ದವರು

    ಆಧಾರ ಕೇಂದ್ರದಲ್ಲಿ ಏಜೆಂಟರ ಮೂಲಕ ನಡೆಸಲಾಗುತ್ತಿರುವ ಅಕ್ರಮ ವಸೂಲಿ ದಂಧೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ. ನಿತ್ಯ ಕೇಂದ್ರಕ್ಕೆ ಬಂದು ಅಮಾಯಕರಿಂದ ಹಣ ವಸೂಲಿ ಮಾಡುವ ಏಜೆಂಟರ ವಿರುದ್ಧವೂ ಸೂಕ್ತಕ್ರಮ ತೆಗೆದುಕೊಳ್ಳುತ್ತೇನೆ. ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚನೆ ನೀಡುತ್ತೇನೆ.
    ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts