More

    ಹಾಳು ಕೊಂಪೆಯಾದ ಶಿವಣಗಿ ಬಸ್‌ನಿಲ್ದಾಣ..!

    ಪ್ರಭು ಕುಮುಟಗಿ, ಹಡಗಲಿ

    ಎಲ್ಲಿ ನೋಡಿದರೂ ಕಸವೋ ಕಸ, ಇದು ಬಸ್ ನಿಲ್ದಾಣವೋ ಕಸದ ತೊಟ್ಟಿಯೊ ತಿಳಿಯದಾಗಿದೆ. ಇದು ವಿಜಯಪುರದಿಂದ ಸಿಂದಗಿ ಮಾರ್ಗ ಮಧ್ಯೆ ಇರುವ ಶಿವಣಗಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ದುಸ್ಥಿತಿ.
    ಸುಮಾರು 17 ವರ್ಷಗಳ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ ಅವರು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ವಿಜೃಂಭಣೆಯಿಂದ ಉದ್ಘಾಟನೆಗೊಂಡ ಶಿವಣಗಿ ಬಸ್‌ನಿಲ್ದಾಣ ಇಂದು ಅತ್ಯಂತ ದುಸ್ಥಿತಿ ಕಾಣುತ್ತಿದೆ.
    ಇಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ, ಶೌಚಗೃಹ ಇಲ್ಲ, ಪ್ರಯಾಣಿಕರು ಕೂಡಲು ಸರಿಯಾದ ಆಸನಗಳಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಸ್ವಚ್ಛತೆಯ ಸಲುವಾಗಿ ಸ್ವಚ್ಛತಾ ಅಭಿಯಾನವನ್ನು ಎಷ್ಟೇ ಹಮ್ಮಿಕೊಂಡಿದ್ದರೂ ಈ ಬಸ್‌ನಿಲ್ದಾಣದಲ್ಲಿ ಸ್ವಚ್ಛತೆ ಅನ್ನುವುದು ಎಲ್ಲೂ ಕಾಣುತ್ತಿಲ್ಲ.

    ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ಬಸ್ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ತಗ್ಗು ದಿನ್ನೆಗಳೇ ಇರುವುದರಿಂದ ಬಸ್‌ಗಳು ನಿಲ್ದಾಣದ ಒಳಗಡೆ ಬರಲು ಆಗುತ್ತಿಲ್ಲ. ಬಸ್ ನಿಯಂತ್ರಣ ಮಾಡಲು ಎರಡು ಕಂಟ್ರೋಲ್ ರೂಂ ಗಳ ವ್ಯವಸ್ಥೆ ಇದೆ. ಆದರೆ, ಇಲ್ಲಿ ಯಾವುದೇ ನಿಯಂತ್ರಣಾಧಿಕಾರಿಗಳು ಇರುವುದಿಲ್ಲ. ಹೀಗಾಗಿ ಈ ಬಸ್‌ನಿಲ್ದಾಣ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
    ಇಲ್ಲಿ ಕನಿಷ್ಠ ಕಸ ಗುಡಿಸಲು ಕೂಡ ಯಾರು ಸಹಾಯಕ ಸಿಬ್ಬಂದಿ ವ್ಯವಸ್ಥೆ ಇಲ್ಲ. ವಿಶಾಲವಾದ ಪ್ರದೇಶದ ಹೊಂದಿರುವ ಈ ಶಿವಣಗಿ ಬಸ್‌ನಿಲ್ದಾಣ ಮದ್ಯ ವ್ಯಸನಿಗಳಿಗೆ ಹಾಗೂ ಜೂಜು ಆಡುವವರ ಅಡ್ಡೆಯಂತಾಗಿದೆ. ಈ ಬಸ್‌ನಿಲ್ದಾಣ ನಂಬಿಕೊಂಡು ವ್ಯಾಪಾರ ಮಾಡಲು ಬಸ್ ನಿಲ್ದಾಣದಲ್ಲಿ ಅಂಗಡಿಗಳನ್ನು ಬಾಡಿಗೆ ಹಿಡಿದಿರುವ ಬಾಡಿಗೆದಾರರು ಸುಮಾರು 12 ವರ್ಷಗಳಿಂದ ಬಾಡಿಗೆ ಪಾವತಿಸುತ್ತಿದ್ದಾರೆ. ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಮೇಲಾಧಿಕಾರಿಗಳಿಗೂ ಅರ್ಜಿಗಳನ್ನು ಪದೇ ಪದೇ ಸಲ್ಲಿಸಿ ಈ ನಿಲ್ದಾಣದಲ್ಲಿ ಸರಿಯಾಗಿ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರೂ ಕೂಡ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ದಯನೀಯ ಸ್ಥಿತಿ ತೋಡಿಕೊಳ್ಳುತ್ತಿದ್ದಾರೆ.

    ಈ ನಿಲ್ದಾಣದಲ್ಲಿ ಊರಿನ ಜಾನುವಾರುಗಳು, ಬೀದಿ ನಾಯಿಗಳು ಮತ್ತು ಹಂದಿಗಳು ವಿಶ್ರಮಿಸುವ ಪ್ರದೇಶವಾಗಿ ಮಾರ್ಪಟ್ಟಿದೆ. ಕೂಡಲೇ ಈ ಬಸ್‌ನಿಲ್ದಾಣಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಇಲ್ಲಿ ಯಾವಾಗಲೂ ಬಸ್ ನಿಲ್ದಾಣದ ಸಿಬ್ಬಂದಿ ಜತೆಗೆ ಸಹಾಯಕ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ವಿಜಯಪುರದಿಂದ ಸಿಂದಗಿ ಮತ್ತು ವಿಜಯಪುರದಿಂದ ಕಲಬುರಗಿಗೆ ಹೆಚ್ಚಾಗಿ ಪ್ರಯಾಣಿಕರು ಬರುತ್ತಾರೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಸ್‌ನಿಲ್ದಾಣದಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಬೇಕು. ಶೌಚಗೃಹ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಾರೆ.

    ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಬೋರ್‌ವೆಲ್ ದುರಸ್ತಿಗೊಳಿಸಲಾಗುತ್ತಿದೆ. ಶೌಚಗೃಹ ಇನ್ನಿತರ ಮೂಲ ಸೌಕರ್ಯ ಒದಗಿಸಲಾಗುವುದು. ಅದಕ್ಕಾಗಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
    ಎ.ಕೆ. ಗಡೇದ, ಸಾರಿಗೆ ನಿಯಂತ್ರಕ, ಶಿವಣಗಿ

    ಶಿವಣಗಿ ಬಸ್ ನಿಲ್ದಾಣದಲ್ಲಿ ಅನೇಕ ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ, ಪ್ರಯಾಣಿಕರ ಹಿತದೃಷ್ಠಿಯಿಂದ ಸೌಲಭ್ಯಗಳನ್ನು ಒದಗಿಸಬೇಕು.
    ರವಿ ಮಡಿಕೇಶ್ವರ, ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts