More

    ಕಸಾಪಗೆ ಹಾಸಿಂಪೀರ ವಾಲಿಕಾರ ಆಯ್ಕೆ

    ವಿಜಯಪುರ: ತೀವ್ರ ಕುತೂಹಲ ಮೂಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದ್ದು, ನೂತನ ಅಧ್ಯಕ್ಷರಾಗಿ ಹಾಸಿಂಪೀರ ವಾಲಿಕಾರ ಆಯ್ಕೆಯಾಗಿದ್ದಾರೆ.

    ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮೆರೆದಿದ್ದ ಮಲ್ಲಿಕಾರ್ಜುನ ಯಂಡಿಗೇರಿ ಪರಾಭವಗೊಂಡಿದ್ದು, ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಮಲ್ಲಿಕಾರ್ಜುನ ಭೃಂಗಿಮಠ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಕಲ್ಲಪ್ಪ ಶಿವಶರಣ ಹಾಗೂ ಶ್ರೀಶೈಲ ಸಿದ್ದಣ್ಣ ಆಳೂರ ಎರಡಂಕಿ ಮತ ಪಡೆದಿದ್ದಾರೆ.

    629 ಮತಗಳ ಅಂತರ
    ಒಟ್ಟು 9745 ಮತಗಳ ಪೈಕಿ 5620 ಮತಗಳು ಚಲಾವಣೆಗೊಂಡಿದ್ದು, ಹಾಸಿಂಪೀರ ವಾಲಿಕಾರ 2490 ಮತ ಪಡೆದು 629 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಮಲ್ಲಿಕಾರ್ಜುನ ಯಂಡಿಗೇರಿ 1861, ಮಲ್ಲಿಕಾರ್ಜುನ ಭೃಂಗಿಮಠ 1176, ಕಲ್ಲಪ್ಪ ಶಿವಶರಣ 30 ಹಾಗೂ ಶ್ರೀಶೈಲ ಸಿದ್ದಣ್ಣ ಆಳೂರ 15 ಮತಗಳನ್ನು ಪಡೆದಿದ್ದು, 48 ಮತಗಳು ತಿರಸ್ಕೃತಗೊಂಡಿವೆ.

    ಭಾವೈಕ್ಯತೆಗೆ ಜಯ
    ಮಹಾಮಾನವತಾವಾದಿ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲಿಕಾರ ಗೆಲುವಿಗೆ ಭಾವೈಕ್ಯತಾ ಭಾವವೇ ಕಾರಣ. ಇವರು ರಾಷ್ಟ್ರೀಯ ಬಸವದಳದಲ್ಲಿ, ಶರಣ ಸಾಹಿತ್ಯ ಪ್ರಚಾರದಲ್ಲಿ, ಮಠಾಧೀಶರ ಒಡನಾಟದಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಯಿಂದ ಮಠಾಧೀಶರು ಸಾಕಷ್ಟು ದೂರವೇ ಇದ್ದರು. ಇದನ್ನು ಮನಗಂಡ ವಾಲಿಕಾರ ಜಿಲ್ಲೆಯ ಎಲ್ಲ ಮಠಾಧೀಶರನ್ನು ಭೇಟಿ ಮಾಡಿ ಸಾಹಿತ್ಯ ವಲಯದಲ್ಲಿ ಮಠಾಧೀಶರ ಪಾತ್ರ ಅನನ್ಯ. ಹೀಗಾಗಿ ನಾನು ಆಯ್ಕೆಯಾದರೆ ಎಲ್ಲ ಮಠಾಧೀಶರ ಸಹಭಾಗಿತ್ವದಲ್ಲಿ ಕನ್ನಡ ತೇರು ಎಳೆಯುವ ಭರವಸೆ ನೀಡಿದರು. ಅನೇಕ ಮಠಾಧೀಶರು ಹಾಸಿಂಪೀರ ವಾಲಿಕಾರಗೆ ಬೆಂಬಲಿಸುವಂತೆ ಲಿಖಿತವಾಗಿ ಸಂದೇಶ ನೀಡಿದ್ದು ಗೆಲುವಿಗೆ ಸಹಕಾರಿಯಾಯಿತು.

    ಬದಲಾವಣೆ ಬಯಸಿದ ಮತದಾರ
    ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡುತ್ತಾರೆಂಬ ನಿರೀಕ್ಷೆ ಸಾಕಷ್ಟಿತ್ತು. ಹಿರಿಯ ಸಾಹಿತಿಗಳು ಸಹ ಹೊಸಬರಿಗೆ ಅವಕಾಶ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಸತತ ಮೂರು ಬಾರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಯಂಡಿಗೇರಿ ನಾಲ್ಕನೇ ಬಾರಿಗೆ ಸ್ಪರ್ಧಿಸಲು ಮುಂದಾದಾಗ ಕೆಲವರಲ್ಲಿ ಅಸಮಾಧಾನ ಹೆಚ್ಚಿತು. ಇನ್ನು ಅವಕಾಶ ವಂಚಿತರು, ಉದಯೋನ್ಮುಖ ಪ್ರತಿಭೆಗಳು ಯಂಡಿಗೇರಿ ಬದಲಾವಣೆಗೆ ಸಾಕಷ್ಟು ಪ್ರಯತ್ನ ಮಾಡಿದ ಫಲ ವಾಲಿಕಾರ ಗೆಲುವಿಗೆ ಸಹಕಾರಿಯಾಯಿತು. ಅಲ್ಲದೆ, ಯಂಡಿಗೇರಿ ಅವಧಿಯಲ್ಲಿ ಸೀಮಿತ ವರ್ಗದವರಿಗೆ ಮಾತ್ರ ಅವಕಾಶಗಳು ಸಿಗುತ್ತಿದ್ದವು ಎಂಬ ಅಪವಾದವೂ ಇತ್ತು.

    ಕೈ ಹಿಡಿಯದ ಅನುಕಂಪ
    ಕಳೆದ ಬಾರಿ ಪರಾಭವಗೊಂಡಿದ್ದ ಮಲ್ಲಿಕಾರ್ಜುನ ಭೃಂಗಿಮಠಗೆ ಈ ಬಾರಿ ಅನುಕಂಪ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರವೂ ತಲೆ ಕೆಳಗಾಗಿದೆ. ಹೊಸ ಹೊಸ ಆಲೋಚನೆಗಳೊಂದಿಗೆ, ವಿಭಿನ್ನ ಪ್ರಚಾರದೊಂದಿಗೆ ಮತದಾರರನ್ನು ತಲುಪಲೆತ್ನಿಸಿದ್ದ ಭೃಂಗಿಮಠಗೆ ಮತದಾರ ಮನ್ನಣೆ ನೀಡಲಿಲ್ಲ. ಅಲ್ಲದೆ, ಭೃಂಗಿಮಠ ಅವರ ಸ್ಪರ್ಧೆ ಯಂಡಿಗೇರಿ ಸೋಲಿಗೆ ಕಾರಣವಾಯಿತು. ಇಲ್ಲವಾದಲ್ಲಿ ಯಂಡಿಗೇರಿ ಆಯ್ಕೆಯಾಗುತ್ತಿದ್ದರೆಂಬ ವಿಶ್ಲೇಷಣೆಯೂ ಇದೆ.

    ನನ್ನ ಕನ್ನಡ ಪಾಂಡಿತ್ಯ, ಶ್ರೀಗಳ ಆಶೀರ್ವಾದ ಮತ್ತು ಕನ್ನಡ ಸಾಹಿತ್ಯಾಸಕ್ತರ ಬೆಂಬಲವೇ ಗೆಲುವಿಗೆ ಕಾರಣ. ಸಾಹಿತಿಗಳು, ಪ್ರತಿಭಾವಂತರನ್ನು ಗುರುತಿಸುವ ಉದ್ದೇಶ ಮೆಚ್ಚುಗೆಯಾಯಿತು. ಮತದಾರರಿಗೆ ನಾಲ್ಕು ಸುತ್ತು ಪತ್ರ ಬರೆದಿದ್ದೇನೆ. ಪ್ರತಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಆತ್ಮವಿಶ್ವಾಸ ತುಂಬಿದ್ದೇನೆ. ನನ್ನ ಮೇಲೆ ನಂಬಿಕೆ ಇರಿಸಿ ಕನ್ನಡ ತಾಯಿ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಬೇಡಿಕೊಂಡಿದ್ದೇನೆ. ಅದೇ ರೀತಿ ವಿಶ್ವಾಸ ಇರಿಸಿ ಗೆಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಗೌರವ ತರುವ ಕೆಲಸ ಮಾಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ. ಪೂಜ್ಯರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ರೂಪಿಸುತ್ತೇನೆ. ಕನ್ನಡಪರ, ಶರಣ ಸಂಸ್ಕೃತಿ ಪರ ವಾತಾವರಣ ರೂಪಿಸುವೆ. ನಾಡಿನ ಗಮನ ಸೆಳೆಯುವ ನಿಟ್ಟಿನಲ್ಲಿ ಕನ್ನಡಪರ ಕಾರ್ಯಕ್ರಮ ರೂಪಿಸುವ ಸಂಕಲ್ಪ ಹೊಂದಿದ್ದೇನೆ.
    ಹಾಸಿಂಪೀರ ವಾಲಿಕಾರ, ವಿಜೇತ ಅಭ್ಯರ್ಥಿ

    ಆಕಸ್ಮಿಕವಾಗಿ ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದೆ. ನನ್ನ ಸೇವೆ ಗುರುತಿಸಿ ಸತತ ಮೂರು ಬಾರಿ ಗೆಲ್ಲಿಸಿದರು. ಸುದೀರ್ಘ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪರಿಷತ್‌ಗೆ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಮಾಡಿಟ್ಟೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಜೀವನದ ಅವಿಸ್ಮರಣೀಯವಾದದ್ದು. ನಾಲ್ಕನೇ ಬಾರಿ ಕಣದಿಂದ ಹಿಂದೆ ಸರಿಯಬೇಕೆಂದಿದ್ದೆ. ಸ್ನೇಹಿತರೆಲ್ಲರೂ ಸೇರಿ ನಿಲ್ಲಿಸಿದರು. ಈ ಬಾರಿ ಮತದಾರರು ಕೈ ಹಿಡಿಯಲಿಲ್ಲ. ಕನ್ನಡ ಪರ ಚಟುವಟಿಕೆ ನಿರಂತರವಾಗಿ ನಡೆಯಲಿ ಎಂಬುದೇ ನನ್ನ ಆಶಯ. ಅದಕ್ಕೆ ನನ್ನ ಸಹಕಾರ ಇದ್ದೇ ಇರುತ್ತದೆ.
    ಮಲ್ಲಿಕಾರ್ಜುನ ಯಂಡಿಗೇರಿ, ಪರಾಜಿತ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts