More

    ಮಾಧ್ಯಮ ವಿಜ್ಞಾನದ ಬೆಳವಣಿಗೆ ಬಿಂಬಿಸಲಿ

    ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳಿಂದ ಪ್ರತಿದಿನವೂ ವಿಜ್ಞಾನದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಇದು ಜ್ಞಾನವನ್ನು ಪಸರಿಸಲು ಸಹಾಯಕವಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಹೇಳಿದರು.ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ವಿಜ್ಞಾನ ಪ್ರಸಾರ, ನವದೆಹಲಿ) ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಇಂದು ಯುವಜನತೆಯಲ್ಲಿ ಜ್ಞಾನ ಬೆಳೆಯುತ್ತಿದೆ, ಬುದ್ಧಿವಂತಿಕೆ ಬೆಳೆಯುತ್ತಿಲ್ಲ. ಜ್ಞಾನದ ಜೊತೆ ಬುದ್ಧಿವಂತಿಕೆ ಬೆಳೆಸಿಕೊಂಡಾಗ ಮಾತ್ರ ಹೊಸ ಆವಿಷ್ಕಾರ ಮಾಡಲು ಸಾಧ್ಯ ಎಂದರು.

    ಪ್ರಪಂಚದಾದ್ಯಂತ ವಿಜ್ಞಾನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಮಾಧ್ಯಮದ ಮೂಲಕ ಬಿಂಬಿಸಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಜನಸಾಮಾನ್ಯರನ್ನು ತಲುಪುತ್ತದೆ ಎಂದು ಹೇಳಿದರು.

    ಹಿರಿಯ ವಿಜ್ಞಾನಿ ಹಾಗೂ ನವದೆಹಲಿಯ ವಿಜ್ಞಾನ ಪ್ರಸಾರದ ವಿಜ್ಞಾನ ಸಂವಹನ ವಿಭಾಗದ ಮುಖ್ಯಸ್ಥ ಡಾ.ಟಿ.ವಿ.ವೆಂಕಂಟೇಶ್ವರನ್ ಮಾತನಾಡಿ, ಭಾರತ ಸಂವಿಧಾನದ 51 ಎಎಚ್ ಪ್ರಕಾರ ನಾಗರಿಕರು ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಪರಿಶೀಲನೆ ಗುಣ ಹೊಂದಿರಬೇಕು ಎಂದು ತಿಳಿಸಿದೆ. ಸಾರ್ವಜನಿಕ ಸ್ಥಳದಲ್ಲಿನ ಸೂಕ್ತ ನಡವಳಿಕೆಯನ್ನು ವಿಜ್ಞಾನ ನಿರ್ಧರಿಸುತ್ತದೆ ಎಂದರು.

    ವಿಜ್ಞಾನವು ಮಾನವತಾವಾದದ ಆಧಾರವಾಗಿರಬೇಕು. ಆಗ ಮಾತ್ರ ವಿಜ್ಞಾನದ ಜೊತೆಗೆ ಮಾನವೀಯತೆಯನ್ನು ಬೆಳೆಸಲು ಸಾಧ್ಯ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಎಂ.ಎನ್.ಚೋರಗಸ್ತಿ ಮಾತನಾಡಿ, ಮಾಧ್ಯಮಗಳು ನಮ್ಮ ನಿತ್ಯ ಜೀವನದ ಭಾಗವಾಗಿವೆ. ಪತ್ರಿಕೋದ್ಯಮದಲ್ಲಿ ಹೊಸ ಹೊಸ ವಿಷಯಗಳ ಬಗ್ಗೆ ಬಿಂಬಿಸಿದಾಗ ಮಾತ್ರ ಅದು ಓದುಗರನ್ನು, ಕೇಳುಗರನ್ನು ಹಾಗೂ ವೀಕ್ಷಕರನ್ನು ತನ್ನತ್ತ ಸೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನದ ಕುರಿತ ಬರವಣಿಗೆಗಳು ಜಗತ್ತಿಗೆ ಬೆಳಕು ನೀಡುತ್ತವೆ ಎಂದರು.

    ಮೈಸೂರಿನ ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಹಾಗೂ ಕುತೂಹಲಿ ನಿಯತಕಾಲಿಕೆಯ ಸಂಪಾದಕ ಎಎಸ್‌ಕೆ, ವಿ.ಶರ್ಮಾ ಹಾಗೂ ತಾಂತ್ರಿಕ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ, ಈ-ಜ್ಞಾನ ವೆಬ್ ನಿಯತಕಾಲಿಕೆಯ ಸಂಪಾದಕ ಟಿ.ಜಿ.ಶ್ರೀನಿಧಿ ಮಾತನಾಡಿದರು.

    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಗೌಡ ಕಾಕಡೆ ಅತಿಥಿಗಳನ್ನು ಸ್ವಾಗತಿಸಿದರು. ದೀಪಾ ತಟ್ಟಿಮನಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts