More

    ಫುಲೆ ದಂಪತಿಗಳ ಕೊಡುಗೆ ಅಪಾರ

    ವಿಜಯಪುರ : ದೇಶದ ಶೈಕ್ಷಣಿಕ ಪ್ರಗತಿಯಲ್ಲಿ ಫುಲೆ ದಂಪತಿ ಅವರ ಕೊಡುಗೆ ಅಪಾರ. ಭಾರತೀಯರು ಗುಲಾಮಗಿರಿಯಿಂದ ಮುಕ್ತರಾಗಬೇಕೆಂದು ಅವರು ಬಯಸಿದ್ದರು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ ಪ್ರೊ.ವಿ.ಎ.ಪಾಟೀಲ ಹೇಳಿದರು.

    ನಗರದಲ್ಲಿ ಶಿಕ್ಷಣ ಉಳಿಸಿ ಸಮಿತಿವತಿಯಿಂದ ಭಾನುವಾರ ನಡೆದ ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಮ್ಮ ದೇಶವು ಒಂದೆಡೆ ಬ್ರಿಟಿಷರ ವಸಾಹತುಶಾಹಿಗಳ ಕಪಿಮುಷ್ಠಿಯಲ್ಲಿ ಇನ್ನೊಂದೆಡೆ ಪುರೋಹಿತಶಾಹಿಗಳ ದೌರ್ಜನ್ಯದಿಂದ ನರಳುತ್ತಿತ್ತು. ಇಂಥ ದುರ್ಬರವಾಗಿದ್ದ ಗಳಿಗೆಯಲ್ಲಿ ಮೂಡಿಬಂದ ನವೋದಯದ ಚಿಂತನೆಗಳು ಫುಲೆ ದಂಪತಿಗಳಿಗೆ ಹೊಸ ದಿಶೆಯನ್ನು ತೋರಿಸಿದವು. ಹಾಗಾಗಿ ನಮ್ಮ ದೇಶದ ಜನತೆ ಶಿಕ್ಷಣ ಪಡೆದು ಎಲ್ಲಾ ರೀತಿಯ ಗುಲಾಮಗಿರಿಯಿಂದ ವಿಮುಕ್ತಿ ಪಡೆಯಬೇಕೆಂದು ಬಯಸಿದ್ದರು ಎಂದರು.

    ಸಮಾಜದ ಅರ್ಧ ಭಾಗವಾದ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿರುವುದು ಜ್ಯೋತಿಬಾ ಫುಲೆ ಅವರ ಮನದಲ್ಲಿ ತಲ್ಲಣ ಮೂಡಿಸಿತು. ಹೀಗಾಗಿ ಮಹಿಳಾ ಶಿಕ್ಷಣದ ಮೊದಲ ಹೆಜ್ಜೆ ತಮ್ಮಿಂದಲೇ ಆರಂಭಿಸಿ ಸ್ವತಃ ತಮ್ಮ ಪತ್ನಿಗೆ ಶಿಕ್ಷಣ ಕೊಟ್ಟರಷ್ಟೇ ಅಲ್ಲ ಅವರನ್ನೇ ಶಿಕ್ಷಕಿಯಾಗಿ ಮಾಡಿದರು. ಜ್ಯೋತಿಬಾ ಫುಲೆ ಅವರ ನಿಧನದ ನಂತರವೂ ಸಾವಿತ್ರಿ ಬಾಯಿ ಫುಲೆ ಅವರು ಎಲ್ಲಿಯೂ ಅಳುಕದೆ ಶೈಕ್ಷಣಿಕ ಚಟುವಟಿಕೆಗಳನ್ನು ಇನ್ನಷ್ಟು ಸ್ಫ್ಪೂರ್ತಿಯಿಂದ ಮುಂದುವರೆಸಿದರು ಎಂದು ಸ್ಮರಿಸಿದರು.

    ಮಹಿಳಾ ಶಿಕ್ಷಣಕ್ಕೆ, ವಿಧವಾ ವಿವಾಹಕ್ಕೆ ಪ್ರಾಧಾನ್ಯತೆ ಕೊಟ್ಟು ಸಮಾಜದಲ್ಲೊಂದು ಹೊಸ ಭರವಸೆ ಮೂಡಿಸಿದ್ದರು. ಅಪ್ಪಟ ನಿಷ್ಕಲ್ಮಶ ಮಾನವೀಯತೆಯನ್ನು ಸಮಾಜದ ಮೇಲೆ ಧಾರೆ ಎರೆದು ಮನುಕುಲದ ಏಳ್ಗೆಗೆ ಶ್ರಮಿಸಿದರು ಎಂದರು.

    ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸದಸ್ಯರಾದ ಚ್.ಟಿ.ಭರತಕುಮಾರ, ಕಾಶಿಬಾಯಿ ತಳವಾರ, ಲಲಿತಾ ಬಿಜ್ಜರಗಿ, ಯಲ್ಲಪ್ಪ ಭಾವಿಮನಿ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts