More

    ಸರ್ವರ್ ಸಮಸ್ಯೆ ಪರಿಹರಿಸಿ

    ವಿಜಯಪುರ: ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ಪಡಿತರ ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಈ ಕುರಿತು ಮುಖ್ಯಮಂತ್ರಿಗಳು ಗಮನ ಹರಿಸಬೇಕೆಂದು ಪಡಿತರ ವಿತರಕರ ಸಂಘದ ರಾಜ್ಯ ಅಧ್ಯಕ್ಷ ಟಿ. ಕೃಷ್ಣಪ್ಪ ಹೇಳಿದರು.
    ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಪಡಿತರ ವಿತರಕರ ಸಂಘದವರು ಏರ್ಪಡಿಸಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
    ಪ್ರಸ್ತುತ ರಾಜ್ಯಾದ್ಯಂತ ನಾಲ್ಕು ಕೋಟಿ ಎಂಭತ್ತು ಲಕ್ಷ ಜನರಿಗೆ ಪಡಿತರ ವಿತರಿಸಲಾಗುತ್ತಿದೆ. ಆದರೆ, ಬಯೋಮೆಟ್ರಿಕ್ ನೀಡುವಲ್ಲಿ ಸರ್ಕಾರದ ಸರ್ವರ್ ಬಿಜಿ ಇರುವುದರಿಂದ ಗ್ರಾಹಕರಿಗೆ ಧಾನ್ಯ ಪೂರೈಸುವಲ್ಲಿ ವಿಪರಿತ ತೊಂದರೆಯಾಗುತ್ತಿದೆ. ಇದರಿಂದ ಗ್ರಾಹಕರು ಪಡಿತರ ಅಂಗಡಿಯವರೊಂದಿಗೆ ಜಗಳ ಕಾಯುತ್ತಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಸರ್ವರ್ ಸುಲಭವಾಗಿ ಸಿಗುವಂತೆ ಮಾಡಬೇಕು. ಇಲ್ಲವಾದರೆ ಚೆಕ್‌ಲಿಸ್ಟ್ ಮೂಲಕ ಪಡಿತರ ನೀಡುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
    ಮುಖ್ಯಮಂತ್ರಿಗಳು ಈ ಸಮಸ್ಯೆಗೆ ನಮ್ಮನ್ನು ಕರೆದು ಸಭೆ ನಡೆಸಿದರೆ ನಾವು ವರ್ತಮಾನದಲ್ಲಿ ಆಗುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರುತ್ತೇವೆ. ಗ್ರಾಹಕರು ಪಡಿತರ ತೆಗೆದುಕೊಂಡು ಹೋಗಬೇಕಾದರೆ ಬಯೋಮೆಟ್ರಿಕ್ ಪದ್ದತಿ ಇದೆ. ಅದೇ ಸಗಟು ವ್ಯಾಪಾರಸ್ಥರು ಸರ್ಕಾರದಿಂದ ಪಡಿತರ ತರುವಾಗ ಬಯೋಮೆಟ್ರಿಕ್ ಪದ್ದತಿ ಇಲ್ಲ. ಇದರಿಂದ ನಮಗೆ ತುಂಬ ತೊಂದರೆಯಾಗುತ್ತದೆ. ಸರ್ಕಾರ ಹಾಗೂ ಸಮಾಜ ನಮ್ಮನ್ನು ಸಂಶಯದಿಂದ ನೋಡುತ್ತಿರುವುದು ಬೇಸರ ಉಂಟು ಮಾಡಿದೆ ಎಂದರು.
    ಪಡಿತರ ವಿತರಕರಿಗೆ 100 ರೂ.ಯಿಂದ 150 ರೂ.ಕಮೀಷನ್ ಹೆಚ್ಚಳ ಮಾಡಬೇಕು. ಪ್ರತಿ ತಿಂಗಳು 1ನೇ ತಾರೀಖಿಗೆ ಪಡಿತರ ಅಂಗಡಿ ಮಾಲೀಕರಿಗೆ ಕಮಿಷನ್ ಜಮಾ ಆಗುವಂತೆ ವ್ಯವಸ್ಥೆ ಮಾಡಬೇಕೆಂದು ಎಂದು ಅವರು ಒತ್ತಾಯಿಸಿದರು.
    ಕೆಲ ರಾಜಕಾರಣಿಗಳ ಒತ್ತಡ ಪಡಿತರ ಅಂಗಡಿಯವರಿಗೆ ಇರುವುದರಿಂದ ಅದನ್ನು ಮುಖ್ಯಮಂತ್ರಿಗಳು ತಡೆಗಟ್ಟುವಲ್ಲಿ ಕ್ರಮ ಜರುಗಿಸಬೇಕು. ಪಡಿತರ ಅಂಗಡಿಗಳಲ್ಲಿ ಕೇವಲ ಅಕ್ಕಿ ನೀಡುತ್ತಾರೆ ಜತೆಗೆ ನಿತ್ಯ ಬಳಕೆಯ ಅಡುಗೆ ವಸ್ತುಗಳನ್ನು ಮಾರಲು ಸರ್ಕಾರ ವ್ಯವಸ್ಥೆ ಮಾಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡಿ ಪಡಿತರ ವಿತರಕರ ಸಮಸ್ಯೆ ಆಲಿಸಿ ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಎಲ್ಲೆಡೆಗೂ ಸರ್ವರ್ ಸಮಸ್ಯೆ ಇರುವುದರಿಂದ ಅದನ್ನು ಕರ್ನಾಟಕ ಸರ್ಕಾರ ಆಹಾರ ಪೂರೈಕೆ ಇಲಾಖೆ ಪರಿಹರಿಸಬೇಕೆಂದು ವಿನಂತಿಸುವುದಾಗಿ ಅವರು ಹೇಳಿದರು.
    ನಗರ ಪಡಿತರ ವಿತರಕ ಸಂಘದ ಅಧ್ಯಕ್ಷ ಜ್ಯೋತಿರಾಮ ಪವಾರ, ಸಂಘಟನಾ ಕಾರ್ಯದರ್ಶಿ ಎನ್. ಓಮಣ್ಣ, ಎಂ.ಡಿ. ಪಂಡಗವಾಲೆ, ಬಿ.ಎಸ್. ಬಿಜ್ಜರಗಿ, ಸಂತೋಷ ಕಿರಸೂರ, ಅನೀಲ ರಾಂಪುರ, ನಜೀರ್‌ಅಹ್ಮದ್ ಮಣಿಯಾರ್, ಅಬ್ದುಲ್‌ಹಕ್ ಇನಾಮದಾರ್, ನಾಗರಾಜ ಕಬಾಡೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts