More

    ಟೇಕ್ ಆಫ್ ಆಗದ ಅಪರ ನಿರ್ದೇಶಕರ ಕಚೇರಿ !

    ಪರಶುರಾಮ ಭಾಸಗಿ
    ವಿಜಯಪುರ: ಆರೋಗ್ಯ ಸೇವೆಯಿಂದ ವಂಚಿತಗೊಳ್ಳುತ್ತಿರುವ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಮಂಜೂರಾದ ಉತ್ತರ ಕರ್ನಾಟಕ ಅಪರ ನಿರ್ದೇಶಕರ ಕಚೇರಿ ಎರಡು ವರ್ಷಗಳಿಂದ ಪಾಳು ಬಿದ್ದಿದೆ !

    ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿಗೆ ಭಾಜನವಾದ ಜಿಲ್ಲಾಸ್ಪತ್ರೆ ಆವರಣದಲ್ಲಿ ತಾತ್ಕಾಲಿಕವಾಗಿ ಚಾಲನೆ ಪಡೆದುಕೊಂಡಿರುವ ಕಚೇರಿ ಅನುದಾನದ ಅಭಾವ, ಸಿಬ್ಬಂದಿ ಕೊರತೆ, ಸ್ವಂತ ಕಟ್ಟಡವಿಲ್ಲದೆ ಬಳಲುತ್ತಿದೆ. 2019ರಲ್ಲಿ ಶಿವಾನಂದ ಪಾಟೀಲ ಆರೋಗ್ಯ ಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಕಚೇರಿ ಪ್ರಸ್ತುತ ಆಳುವ ಸರ್ಕಾರದ ದಿವ್ಯ ನಿರ್ಲಕ್ಷೃಕ್ಕೆ ತುತ್ತಾಗಿದೆ. ಕಾಟಾಚಾರಕ್ಕೆ ಇಬ್ಬರು ಅಧಿಕಾರಿಗಳನ್ನು ನೇಮಿಸಿದ್ದು ಬಿಟ್ಟರೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ತಗಡಿನ ನಾಮಫಲಕವೊಂದು ನೇತಾಡುತ್ತಿದ್ದು, ಕಚೇರಿ ಕಳೆಬರದಂತೆ ಕಂಗೊಳಿಸುತ್ತಿದೆ.

    ಏನಿದು ಅಪರ ನಿರ್ದೇಶಕರ ಕಚೇರಿ?
    ಹೈದರಾಬಾದ್ ಕರ್ನಾಟಕ (ಕಲಬುರಗಿ ವಿಭಾಗ) ಹಾಗೂ ಬೆಳಗಾವಿ ವಿಭಾಗದ ಜಿಲ್ಲೆಗಳು ಆರೋಗ್ಯ ಸೇವೆಯಿಂದ ಸಾಕಷ್ಟು ವಂಚಿತಗೊಂಡಿವೆ. 2016-17ರ ಆರೋಗ್ಯ ಇಲಾಖೆ ಪ್ರೊಫೈಲ್‌ನಲ್ಲಿ ನಮೂದಿಸಿದ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಜನತೆ ಆರೋಗ್ಯ ಸೇವೆಯಿಂದ ಸಾಕಷ್ಟು ವಂಚಿತರಾಗಿದ್ದು ಗಮನಕ್ಕೆ ಬಂದಿತ್ತು. ಅಂದಿನ ಆರೋಗ್ಯ ಸಚಿವ ಶಿವಾನಂದ ಪಾಟೀಲ ಆರೋಗ್ಯ ಮಾನದಂಡಗಳ ಅನ್ವಯ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ಉತ್ತಮ ಪಡಿಸಲು ಮತ್ತು ಎಲ್ಲ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ಹಾಗೂ ಆರೋಗ್ಯ ಸೇವೆಗಳನ್ನು ಖಾತ್ರಿಗೊಳಿಸಿ ಭೌಗೋಳಿಕ ಸಮಾನತೆ ಹೊಂದಲು ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಕಚೇರಿ ಸ್ಥಾಪಿಸಲಾಗಿತ್ತು. ಈ ಎರಡು ವಿಭಾಗಗಳ ಮೇಲುಸ್ತುವಾರಿ ನೋಡಿಕೊಳ್ಳಲು ವಿಜಯಪುರದಲ್ಲಿ ಅಪರ ನಿರ್ದೇಶಕರ ಕಚೇರಿ ಸ್ಥಾಪಿಸಲಾಗಿತ್ತು.

    ಪ್ರಸ್ತುತ ಕಚೇರಿಯ ಸ್ಥಿತಿ:
    ಆರೋಗ್ಯ ಸಚಿವ ಶಿವಾನಂದ ಪಾಟೀಲರ ವಿಶೇಷ ಕಾಳಜಿಯಿಂದಾಗಿ ಆರೋಗ್ಯ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಹಾಗೂ ಉಸ್ತುವಾರಿಗಾಗಿ 5 ಜಂಟಿ ನಿರ್ದೇಶಕರ ಹುದ್ದೆಗಳನ್ನು ವಿಭಾಗೀಯ ಸಹ ನಿರ್ದೇಶಕ ಹುದ್ದೆಗಳೆಂದು ಮರು ಪದನಾಮದೊಂದಿಗೆ ಮಂಜೂರಾತಿ ನೀಡಲಾಗಿತ್ತು. ಆ ಪ್ರಕಾರ ವಿಜಯಪುರ ಜಿಲ್ಲಾಸ್ಪತ್ರೆ ಕ್ಷಯರೋಗ ಘಟಕದ ಕಟ್ಟಡದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 10 ಹುದ್ದೆಗಳನ್ನು ಸೃಜಿಸಲಾಗಿದ್ದು, ಆ ಪೈಕಿ ಅಪರ ನಿರ್ದೇಶಕ ಹಾಗೂ ಸಹಾಯಕ ಉಪ ನಿರ್ದೇಶಕ ಮಾತ್ರ ಸೇವೆಗೆ ಹಾಜರಾಗಿದ್ದಾರೆ. ಇನ್ನುಳಿದಂತೆ 8 ಸಿಬ್ಬಂದಿಯನ್ನು ಧಾರವಾಡದಿಂದ ವಿಜಯಪುರ ಕಚೇರಿಗೆ ಸ್ಥಳಾಂತರಿಸಲಾಗಿತ್ತು. ಆ ಸಿಬ್ಬಂದಿ ನಿಯೋಜನೆಗೊಳ್ಳದ ಕಾರಣ ಪರ್ಯಾಯ ವ್ಯವಸ್ಥೆಗೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಸದರಿ ಅಧಿಕಾರಿಗಳಿಗೆ ವಾಹನ ಸೌಲಭ್ಯವೂ ಇಲ್ಲ. ಈವರೆಗೆ ನಯಾ ಪೈಸೆ ಅನುದಾನವೂ ಬಂದಿಲ್ಲ. ತಗಡಿನ ನಾಮಫಲಕ ಹಾಗೂ ಕುರ್ಚಿ, ಮೇಜು ಬಿಟ್ಟರೆ ಮತ್ತೇನಿಲ್ಲ. ಈ ಬಗ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಹ ಸರ್ಕಾರಕ್ಕೆ ಪತ್ರ ಬರೆದಿದ್ದು, ಈವರೆಗೂ ಕ್ರಮ ಕೈಗೊಂಡಿಲ್ಲ.
    ಹೀಗಾಗಿ ಉತ್ತರ ಕರ್ನಾಟಕದ ಜನರ ಆರೋಗ್ಯ ದೃಷ್ಟಿಯಿಂದ ಜಾರಿಯಾದ ಯೋಜನೆಯೊಂದು ನನೆಗುದಿಗೆ ಬಿದ್ದಿದ್ದು, ಪ್ರಸ್ತುತ ಅಧಿವೇಶನದಲ್ಲಾದರೂ ಸರ್ಕಾರ ಅದಕ್ಕೊಂದು ಕಾಯಕಲ್ಪ ಒದಗಿಸುವುದೇ ಕಾದುನೋಡಬೇಕು.

    ಎತ್ತಂಗಡಿಗೆ ಸಿದ್ಧತೆ
    ಆರೋಗ್ಯ ಸೇವೆಗಳನ್ನು ಉತ್ತರ ಕರ್ನಾಟಕಕ್ಕೆ ವಿಸ್ತರಿಸಬೇಕೆಂದು ಹಿಂದಿನ ಸರ್ಕಾರ ಬೆಳಗಾವಿ ಮತ್ತು ಕಲಬುರಗಿ ಕೇಂದ್ರವಾಗಿಟ್ಟುಕೊಂಡು ವಿಜಯಪುರಕ್ಕೆ ಅಪರ ನಿರ್ದೇಶಕರ ಕಚೇರಿ ಮಂಜೂರು ಮಾಡಿತ್ತು. ಆದರೆ, ನಂತರದ ಸರ್ಕಾರ ಯಾವುದೇ ಸೌಲಭ್ಯ ನೀಡದೆ ಉ-ಕ ಜನತೆಗೆ ಅನ್ಯಾಯ ಮಾಡಿದೆ ಎಂದು ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಖೇದ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸದರಿ ಅಪರ ನಿರ್ದೇಶಕರ ಕಚೇರಿಯನ್ನು ಮೂಲ ಸೌಕರ್ಯ ಇಲ್ಲವೆಂಬ ನೆಪವೊಡ್ಡಿ ಧಾರವಾಡಕ್ಕೆ ಸ್ಥಳಾಂತರಿಸುವ ಹುನ್ನಾರವೂ ನಡೆದಿದೆ.

    ಶಿವಾನಂದ ಪಾಟೀಲ ಅವರು ಆರೋಗ್ಯ ಸಚಿವರಾಗಿದ್ದಾಗ ಕಚೇರಿ ಮಂಜೂರಾಗಿತ್ತು. ಅನುದಾನ ಹಾಗೂ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ಎರಡು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಕ್ರಮಕ್ಕಾಗಿ ಕಾಯುತ್ತಿದ್ದೇವೆ.
    ಅಪ್ಪಾಸಾಹೇಬ ನರಟ್ಟಿ, ಅಪರ ನಿರ್ದೇಶಕ, ಉತ್ತರ ಕರ್ನಾಟಕ ಅಪರ ನಿರ್ದೇಶಕರ ಕಚೇರಿ, ವಿಜಯಪುರ

    ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಸದನದ ಮೊದಲ ದಿನವೇ ಪ್ರತಿಭಟನೆ ನಡೆಸಿದ್ದೇವೆ. ಈಗಿನ ಆರೋಗ್ಯ ಸಚಿವರಿಗೆ ಒಳ್ಳೆಯ ಅವಕಾಶ ಇದೆ. ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಸೌಲಭ್ಯ ಒದಗಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಬೇಕೆ? ಕೇವಲ ಕರೊನಾ ಒಂದೇ ಸಮಸ್ಯೆಯಲ್ಲ. ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಬೇಕು.
    ಶಿವಾನಂದ ಪಾಟೀಲ, ಮಾಜಿ ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts